ನ.21ಕ್ಕೆ ಕಸಾಪ ಚುನಾವಣೆ: 3 ಲಕ್ಷಕ್ಕೂ ಅಧಿಕ ಮಂದಿ ಮತದಾರರು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ(ಕಸಾಪ) ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ನವೆಂಬರ್ 21ರಂದು ಚುನಾವಣೆ ನಡೆಯಲಿದೆ.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಪರಿಷತ್ತಿನ ಚುನಾವಣೆ ಕಳೆದ ಮೇ 9ರಂದು ಈ ಹಿಂದೆ ನಿಗದಿಯಾಗಿತ್ತು. ನಾಮಪತ್ರ ಪರಿಶೀಲನೆ ಸೇರಿದಂತೆ ವಿವಿಧ ಪ್ರಕ್ರಿಯೆಗಳು ಪೂರ್ಣಗೊಂಡು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಂತಿಮವಾಗಿ 21 ಮಂದಿ ಸ್ಪರ್ಧೆಯಲ್ಲಿದ್ದರು. ಮಾರ್ಚ್‌ ಮೂರನೇ‌ ವಾರದಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಾಗಿದ್ದರಿಂದ ಏಪ್ರಿಲ್ ತಿಂಗಳಲ್ಲಿ ಗರಿಷ್ಠ ಸಂಖ್ಯೆಗೆ ತಲುಪಿದ ಕಾರಣ ಚುನಾವಣೆಯನ್ನು ಸರ್ಕಾರ ಮುಂದೂಡಿತ್ತು.

ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಿದ ಹಂತದಿಂದ ಯಥಾವತ್ತಾಗಿ ಮುಂದುವರಿಸಲಾಗುವುದು ಎಂದು ಕಳೆದ ಏಪ್ರಿಲ್ 26ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿತ್ತು. ಈಗ ಸರ್ಕಾರವು ಚುನಾವಣೆ ನಡೆಸಲು ಅನುಮತಿ ನೀಡಿದೆ. ಹೀಗಾಗಿ, ಸ್ಥಗಿತಗೊಂಡ ಚುನಾವಣೆ ಪ್ರಕ್ರಿಯೆಯನ್ನು ಯಥಾವತ್ತಾಗಿ ನಡೆಸಲು ಕೇಂದ್ರ ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಕ್ರಮಕೈಗೊಂಡಿದ್ದಾರೆ.

ನವೆಂಬರ್‌ 24ಕ್ಕೆ ಫಲಿತಾಂಶ: ಈ ಬಾರಿ ಚುನಾವಣೆಯಲ್ಲಿ 3,10,109 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ನ.21ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ 27 ವಿಧಾನಸಭೆ ಕ್ಷೇತ್ರಗಳ ಗುರುತಿಸಲಾದ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಜಿಲ್ಲಾ ಘಟಕಗಳ ಅಧ್ಯಕ್ಷರ ಫಲಿತಾಂಶ ಅದೇ ದಿನ ಘೋಷಣೆಯಾಗಲಿದೆ ಎಂದು ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.

‘ನ.24 ರಂದು ಪರಿಷತ್ತಿನ ಚುನಾವಣಾಧಿಕಾರಿಯ ಕೇಂದ್ರ ಕಚೇರಿಯಲ್ಲಿ ಗಡಿನಾಡ ಘಟಕಗಳ ಅಧ್ಯಕ್ಷರ ಚುನಾವಣೆಗೆ ಸಂಬಂಧಪಟ್ಟ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಿ, ಫಲಿತಾಂಶ ಘೋಷಿಸಲಾಗುತ್ತದೆ. ರಾಜ್ಯಾಧ್ಯಕ್ಷರ ಆಯ್ಕೆಗೆ ಎಲ್ಲ ಜಿಲ್ಲೆಗಳಿಂದ ಬಂದ ಮತಗಳು ಹಾಗೂ ಅಂಚೆ ಮತಗಳನ್ನು ಕ್ರೋಢೀಕರಿಸಿ, ಅದೇ ದಿನ ಫಲಿತಾಂಶವನ್ನು ಘೋಷಿಸಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರು

ಮ.ಚಿ. ಕೃಷ್ಣ, ವ.ಚ. ಚನ್ನೇಗೌಡ, ಮಹೇಶ್ ಜೋಶಿ, ಸಂಗಮೇಶ ಬಾದವಾಡಗಿ, ಸಿ.ಕೆ. ರಾಮೇಗೌಡ, ರಾಜಶೇಖರ ಮುಲಾಲಿ, ಬಸವರಾಜ ಶಿ. ಹಳ್ಳೂರ, ಬಾಡದ ಭದ್ರಿನಾಥ್, ಶಿವರಾಜ ಪಾಟೀಲ, ಸರಸ್ವತಿ ಶಿವಪ್ಪ ಚಿಮ್ಮಲಗಿ, ವೈ. ರೇಣುಕಾ, ಶೇಖರಗೌಡ ಮಾಲಿ ಪಾಟೀಲ, ಕೆ. ರತ್ನಾಕರ ಶೆಟ್ಟಿ, ವಾಲ್ಮೀಕಪ್ಪ ಹ. ಯಕ್ಕರನಾಳ, ಮಾಯಣ್ಣ, ಪ್ರಮೋದ್ ಹಳಕಟ್ಟಿ, ಶಿವಪ್ಪ ಮಲ್ಲಪ್ಪ ಬಾಗಲ, ಕೆ. ರವಿ ಅಂಬೇಕರ, ನ.ಶ್ರೀ. ಸುಧೀಂದ್ರರಾವ್, ಶರಣಬಸಪ್ಪ ಕಲ್ಲಪ್ಪ ದಾನಕೈ ಹಾಗೂ ಶಿವರುದ್ರಸ್ವಾಮಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *