ಲಖನೌ: ಉತ್ತರ ಪ್ರದೇಶ ರಾಜ್ಯದ ಲಖಿಂಪುರ ಜಿಲ್ಲೆಯ ಖೇರಿ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಮೃತರಾದ ರೈತರ ಅಂತಿಮ ಪ್ರಾರ್ಥನೆಯಲ್ಲಿ ಭಾಗವಹಿಸುವುದಕ್ಕಾಗಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ನಾಯಕ ರಾಕೇಶ್ ಟಿಕಾಯತ್ ಸೇರಿದಂತೆ ಹಲವು ಭಾಗಿಯಾಗಿದ್ದಾರೆ.
ರೈತರ ಅಂತಿಮ ಪ್ರಾರ್ಥನೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಭಾಗಿಯಾಗಿದ್ದರು.
ಲಖಿಂಪುರ ಜಿಲ್ಲೆ ಕೆಹ್ರಿಯ ಟಿಕೊನಿಯಾ ಗ್ರಾಮದ ಹಿಂಸಾಚಾರ ನಡೆದ ಸ್ಥಳದಿಂದ ದೂರದಲ್ಲಿರುವ ಮೈದಾನದಲ್ಲಿ ಅಂತಿಮ ಪ್ರಾರ್ಥನೆಗೆ ಎಲ್ಲ ರೀತಿಯ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದೆ. ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಿಂದ ರೈತರು ಮತ್ತು ವಿವಿಧ ರೈತ ಸಂಘಟನೆ ನಾಯಕರು ಈ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಕ್ಟೋಬರ್ 3ರಂದು ನಡೆದ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ‘ಶಹೀದ್ ಕಿಸಾನ್ ದಿವಸ್’ಗೆ ಕರೆ ನೀಡಿದೆ. ಇಂದು (ಅಕ್ಟೋಬರ್ 12) ಭಾರತದಾದ್ಯಂತ ಶಹೀದ್ ಕಿಸಾನ್ ದಿವಸ್ ಆಚರಿಸಲಾಗುತ್ತಿದೆ.
ಪ್ರಿಯಾಂಕ ಗಾಂಧಿ ವಾದ್ರಾ ಭೇಟಿಯ ಹಿನ್ನೆಲೆಯಲ್ಲಿ ಲಕ್ನೋ-ಸೀತಾಪುರ-ಲಖಿಂಪುರ ಹೆದ್ದಾರಿಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆ ಕೈಗೊಂಡಿದ್ದರು. ಕೆಲವು ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ “ಗೋ ಬ್ಯಾಕ್ ರಾಹುಲ್ ಗಾಂಧಿ, ಗೋ ಬ್ಯಾಕ್ ಪ್ರಿಯಾಂಕಾ ಗಾಂಧಿ ವಾದ್ರಾ” ಎಂಬ ಬ್ಯಾನರ್ ಗಳನ್ನು ಪ್ರದರ್ಶಿಸಲಾಗಿದೆ. ತಮ್ಮ ಆಳುವ ಪರ ನೀತಿಯನ್ನು ಪ್ರದರ್ಶಿಸಿದ್ದಾರೆ.
ಕಳೆದ ವಾರ ಮೃತ ರೈತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ತೆರಳಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆ ನಡೆದು ಒಂದು ವಾರದ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತೊಮ್ಮೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ಹಿಂಸಾಚಾರದಲ್ಲಿ ಪ್ರಾಣ ಬಿಟ್ಟ ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಜನರ ಸ್ಮರಣಾರ್ಥ ಅಕ್ಟೋಬರ್ 12ರಂದು ‘ಶಹೀದ್ ಕಿಸಾನ್ ದಿವಸ್ʼ ನಡೆಸುವುದಕ್ಕೆ ರೈತ ಮುಖಂಡರಾದ ಬಲ್ಬೀರ್ ಸಿಂಗ್, ಯೋಗೇಂದ್ರ ಯಾದವ್ ಹಾಗೂ ರಾಕೇಶ್ ಟಿಕಾಯತ್ ಕರೆ ನೀಡಿದ್ದರು. ಅಕ್ಟೋಬರ್ 12ರಂದು ಲಖಿಂಪುರ್ ಖೇರಿ ಪ್ರದೇಶಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದರು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ನೀವಿರುವ ಸ್ಥಳಗಳಲ್ಲೇ ಮಂದಿರ, ಮಸೀದಿ ಹಾಗೂ ಚರ್ಚ್ ಗಳಲ್ಲಿ ಮೃತರಿಗಾಗಿ ಪ್ರಾರ್ಥಿಸೋಣ. ಅದೂ ಸಾಧ್ಯವಾಗದಿದ್ದರೆ ಮೃತರ ಸ್ಮರಣೆಯಲ್ಲಿ ಕನಿಷ್ಠ 5 ಮೇಣದಬತ್ತಿಗಳನ್ನು ಹಚ್ಚೋಣ ಎಂದು ಕರೆ ನೀಡಲಾಗಿತ್ತು.
ಮೃತ ರೈತರಿಗೆ ಗೌರವ ಸಲ್ಲಿಸಲು ಪಂಜಾಬ್ ಹರಿಯಾಣ ಉತ್ತರಾಖಂಡನಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು. ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗವಹಿಸಿದ್ದರು.
ಅಕ್ಟೋಬರ್ 03ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿಗೆ ಯುಪಿ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭೇಟಿ ನೀಡಬೇಕಿತ್ತು. ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಉಪ ಮುಖ್ಯಮಂತ್ರಿಗೆ ಕಪ್ಪು ಬಾವುಟಗಳನ್ನು ತೋರಿಸಲು ಯೋಜಿಸಿದ್ದರು.
ಈ ವೇಳೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಪ್ರತಿಭಟನಾನಿರತ ರೈತರ ಮೇಲೆ ತನ್ನ ಕಾರನ್ನು ನುಗ್ಗಿಸಿದರಿಂದ ಹಿಂಸಾಚಾರಕ್ಕೆ ತಿರುಗಿ ಘಟನನೆಯಿಂದ ನಾಲ್ವರು ರೈತರು ಸೇರಿದಂತೆ ಒಟ್ಟು 8 ಮಂದಿ ಸಾವನ್ನಪ್ಪಿದ್ದರು.
ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಶಿಶ್ ಮಿಶ್ರಾರನ್ನ ಬಂಧಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 14 ದಿನಗಳ ನ್ಯಾಯಂಗ ಬಂಧನಕ್ಕೆ ನೀಡಿರುವ ನಡುವೆಯೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಸುಪ್ರೀಂಕೋರ್ಟ್ ವಿಚಾರಣೆ ಬಳಿಕ ತೀವ್ರ ಗಂಭೀರತೆ ಪಡೆದುಕೊಂಡಿದೆ.