ರಾಜಕಾರಣಿ ಎಂದರೆ ರೈತರ ಮೇಲೆ ಫಾರ್ಚುನರ್ ಕಾರ್ ಹರಿಸುವುದಲ್ಲ – ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್

ವರುಣ್ ಗಾಂಧಿ ನಂತರ ಮತ್ತೊಬ್ಬ ಮುಖಂಡನಿಂದ ಬಿಜೆಪಿ ವಿರುದ್ಧ ವಾಗ್ದಾಳಿ

ಲಿಖೀಂಪುರ್ ಹಿಂಸಾಚರ ಮುಂಬರುವ ಚುನಾವಣೆ ವೇಳೆ ಬೀರುವ ಪರಿಣಾಮದ ಬಗ್ಗೆ ಸಭೆ ನಡೆಸಿದ ಬಿಜೆಪಿ

ಕೇಂದ್ರ ಸಚಿವ ಅಜಯ್ ಮಿಶ್ರಾಗೆ ಸಮನ್ಸ್ ನೀಡಿದ ಯುಪಿ ಬೆಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್

ಲಕ್ನೋ : ಸಚಿವನೋ, ಶಾಸಕನೋ ಇಲ್ಲವೆ ರಾಜಕಾರಣಿಯಾಗಿದ್ದೇನೆಂಬ ಕಾರಣಕ್ಕೆ ಫಾರ್ಚೂನರ್ ಕಾರನ್ನು ಯಾರ ಮೇಲೆ ಬೇಕಾದರೂ ಹರಿಸಬಹುದು ಎಂದು ಅರ್ಥವಲ್ಲ ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.

ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಒಬ್ಬರ ನಡವಳಿಕೆಯ ಆಧಾರದ ಮೇಲೆ ಚುನಾವಣೆ ಗೆಲ್ಲಬೇಕು.

ರಾಜಕೀಯ ಎಂದರೆ ನಿಮ್ಮ ಸಮಾಜ ಮತ್ತು ನಿಮ್ಮ ರಾಷ್ಟ್ರದ ಸೇವೆ. ಇದರಲ್ಲಿ ಯಾವುದೇ ಜಾತಿ ಮತ್ತು ಧರ್ಮದ ಸಂಬಂಧವಿಲ್ಲ. ರಾಜಕೀಯ ನಾಯಕರಾಗಿರುವುದು ಎಂದರೆ ಲೂಟಿ ಮಾಡುವುದಲ್ಲ. ಫಾರ್ಚುನರ್‌ ಅನ್ನು ಯಾರ ಮೇಲಾದರೂ ಹರಿಸುವುದಲ್ಲ. ಬಡವರ ಸೇವೆಗಾಗಿ ನಾವು ಈ ಪಕ್ಷದಲ್ಲಿದ್ದೇವೆ,’ ಎಂದು ಅವರು ಹೇಳಿದರು.

ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಳೆ ಕೇಂದ್ರ ಗೃಹ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ತೇಣಿ ಅವರ ಪುತ್ರ ಆಶಿಷ್ ಮಿಶ್ರಾ ತಮ್ಮ ಕಾರನ್ನು ಹರಿಸಿದ್ದಾರೆಂಬ ಆರೋಪಗಳ ನಡುವೆ ಸಿಂಗ್ ಅವರ ಹೇಳಿಕೆ ಬಂದಿರುವು ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ.

ಲಖೀಂಪುರ ಘಟನೆ ಖಂಡಿಸಿ ಬಿಜೆಪಿ ಲೋಕಸಭಾ ಸದಸ್ಯ ವರುಣ್ ಗಾಂಧಿ ರೈತರ ಪರ ನಿಲ್ಲುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಈಗ ಬಿಜೆಪಿ ಅಧ್ಯಕ್ಷರ ಈ ಮಾತುಗಳು ಲಿಂಖೀಪುರ ಘಟನೆಯ ಬಗ್ಗೆ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿವೆ.

ಬಿಜೆಪಿ ಮಹತ್ವದ ಸಭೆ : ಕಳೆದ ವಾರ ನಡೆದ ಲಿಖೀಂಪುರ್​ ಖೇರಿ ಹಿಂಸಾಚಾರ ಘಟನೆಯು ಇಡೀ ದೇಶಾದ್ಯಂತ ಬಹಳ ಚರ್ಚೆಯನ್ನು ಹುಟ್ಟುಹಾಕಿದ್ದು, ಉತ್ತರ ಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುದೀರ್ಘ ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಲಖೀಂಪುರ್​ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶಿಶ್​ ಮಿಶ್ರಾ, ಕಾರು ಹರಿಸಿ, ನಾಲ್ವರು ರೈತರನ್ನು ಬಲಿಪಡೆದಿರುವ ಆರೋಪ ಕೇಳಿಬಂದಿದ್ದು, ಉತ್ತರ ಪ್ರದೇಶದ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದಾರೆ. ಈ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್​ ಉತ್ತರ ಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಕೇಂದ್ರ ಸಚಿವ ಅಜಯ್​ ಮಿಶ್ರಾ ರಾಜೀನಾಮೆ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ನಿನ್ನೆ ನಡೆದ ಸಭೆಯಲ್ಲೂ ಬಿಜೆಪಿ ಸಚಿವರು ರಾಜೀನಾಮೆ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್​. ಸಂತೋಷ್​, ಉತ್ತರ ಪ್ರದೇಶದ ಉಸ್ತುವಾರಿ ರಾಧಾ ಮೋಹನ್​ ಸಿಂಗ್​, ಚುನಾವಣ ಉಸ್ತುವಾರಿ ಧರ್ಮೇಂದ್ರ ಪ್ರಧಾನ್​, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್​, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸುನೀಲ್​ ಬನ್ಸಾಲ್​ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಉಪಸ್ಥಿತರಿದ್ದರು.

 

Donate Janashakthi Media

Leave a Reply

Your email address will not be published. Required fields are marked *