7 ಮಂದಿ ಹತ್ಯೆ ಹಿನ್ನೆಲೆ: ಕಾಶ್ಮೀರದಲ್ಲಿ ಕ್ಷಿಪ್ರ ಕಾರ್ಯಾಚರಣೆಯಿಂದ 900 ಮಂದಿ ವಶಕ್ಕೆ

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಹಿಂದೂ ಮತ್ತು ಸಿಕ್ಖ್ ಸಮುದಾಯದ ಏಳು ಮಂದಿಯ ಹತ್ಯೆ ಇತ್ತೀಚಗೆ ನಡೆದಿತ್ತು. ಈ ಕ್ರೂರ ಘಟನೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿವೆ. ಇದರ ನಡುವೆ ಭದ್ರತಾ ಸಂಸ್ಥೆಗಳು ಭಾನುವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ 900ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಶಕ್ಕೆ ಪಡೆದವರಲ್ಲಿ ಬಹುತೇಕರು ನಿಷೇಧಿತ ಜಮಾತೆ ಇಸ್ಲಾಮಿ ಉಗ್ರ ಸಂಘಟನೆ ಜತೆ ನಂಟು ಹೊಂದಿರುವವರು ಎನ್ನಲಾಗಿದೆ. ಶ್ರೀನಗರ, ಬದ್ಗಾಂ ಸೇರಿದಂತೆ ದಕ್ಷಿಣ ಕಾಶ್ಮೀರದಿಂದ ಬಂದಿರುವ ಶಂಕಿತ ಉಗ್ರರಾಗಿದ್ದು ಮತ್ತು ಹತ್ಯೆಯ ಸರಪಳಿಯನ್ನು ತುಂಡರಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಸೇನೆ–ಉಗ್ರರ ನಡುವೆ ಗುಂಡಿನ ಚಕಮಕಿ: ಐವರು ಯೋಧರು ಹುತಾತ್ಮ

ಕಲ್ಲೆಸೆತದಲ್ಲಿ ತೊಡಗುತ್ತಿದ್ದ ಯುವಕರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು 7 ಮಂದಿಯ ಹತ್ಯೆಯ ಹಿಂದೆ ಯಾರು ಇದ್ದಾರೆ ಎಂಬ ಅಂಶವನ್ನು ಪತ್ತೆ ಹಚ್ಚಲಾಗುತ್ತಿದೆ.

ಕಳೆದ ವಾರ ಶ್ರೀನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದರು. ಕಾಶ್ಮೀರಿ ಪಂಡಿತ್ ಫಾರ್ಮಸಿಸ್ಟ್, ಶಾಲೆಯ ಪ್ರಾಂಶುಪಾಲ, ಶಿಕ್ಷಕರು ಮತ್ತು ಇತರ ಇಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿದ್ದರು. ಉಗ್ರರು ಕಾಶ್ಮೀರಿ ಪಂಡಿತ್, ಸಿಖ್ ಮತ್ತು ಮುಸ್ಲಿಂ ಸಮುದಾಯಗಳ ಅಲ್ಪಸಂಖ್ಯಾತರು ಗುರಿಯಾಗಿಸಿಕೊಂಡಿದ್ದರು ಎನ್ನಲಾಗಿದೆ.

ಎನ್‌ಐಎ ದಾಳಿ

ಐಸಿಸ್‌ ಉಗ್ರ ಸಂಘಟನೆ ದೇಶದ ಯುವಕರನ್ನು ತನ್ನತ್ತ ಸೆಳೆಯಲು ʻಐಎಸ್‌ಐಎಸ್‌ ವಾಯ್ಸ್‌ ಆಫ್ ಹಿಂದ್‌’ ಎಂಬ ನಿಯತಕಾಲಿಕ ಹೊಂದಿದೆ. ಅದಕ್ಕೆ ಕೆಲಸ ಮಾಡಿ, ಯುವಕರನ್ನು ಉಗ್ರ ಸಂಘಟನೆ ಸೇರುವಂತೆ ಪುಸಲಾಯಿಸುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಎನ್‌ಐಎ ಜಮ್ಮು-ಕಾಶ್ಮೀರದ 16 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದೆ.

ಅಬು ಹಝೀರ್‌ ಅಲ್‌ ಬದ್ರಿ ಎಂಬ ಸೈಬರ್‌ ಸಂಸ್ಥೆ ಈ ನಿಯತಕಾಲಿಕವನ್ನು ಕರ್ನಾಟಕ ಸಹಿತ ವಿವಿಧ ರಾಜ್ಯ ಗಳ ಭಾಷೆಗಳಿಗೆ ತರ್ಜುಮೆ ಮಾಡುವ ಹೊಣೆ ಹೊತ್ತುಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು ಮತ್ತು ಕರ್ನಾಟಕ ಪೊಲೀಸರು ಆಕ್ಟೋಬರ್‌ 6ರಂದು ಭಟ್ಕಳದಲ್ಲಿ ದಾಳಿ ನಡೆಸಿದ್ದರು ಮತ್ತು ಜುಫ್ರಿ ಜ್ವಾಹರ್‌ ದಮುದಿ ಎಂಬಾತನನ್ನು ಬಂಧಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *