ಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಮುಕ್ತ ಅವಕಾಶ: ಕೆ ಜಿ ಬೋಪಯ್ಯ

ಮಡಿಕೇರಿ: ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳುವುದಕ್ಕೆ ಎದುರಾಗಿದ್ದ ಕೆಲವು ಅನುಮಾನಗಳು ಸಂಪೂರ್ಣ ದೂರವಾದಂತಾಗಿದೆ. ಕಾವೇರಿ ತೀರ್ಥೋದ್ಭವ ಮತ್ತು ತುಲಾ ಸಂಕ್ರಮಣ ಸಿದ್ಧತೆಗೆ ಸಂಬಂಧಿಸಿದಂತೆ ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ನೇತೃತ್ವದಲ್ಲಿ ಭಾಗಮಂಡಲದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಅನುಮಾನಗಳಿಗೆ ತೆರೆ ಎಳೆಯಲಾಗಿದೆ.

ಕೋವಿಡ್ ನಿಯಮಗಳನ್ನು ಬಹುತೇಕ ಸಡಿಲಗೊಳಿಸಿ ಜಿಲ್ಲಾ ಮತ್ತು ಹೊರ ಜಿಲ್ಲೆ ಸೇರಿದಂತೆ ಎಲ್ಲಾ ಭಕ್ತರಿಗೂ ಮುಕ್ತ ಅವಕಾಶ ನೀಡಲಾಗಿದೆ. ಆದರೆ ಜೀವನಕ್ಕಿಂತ ಜೀವ ಮುಖ್ಯವಾಗಿದ್ದು, ಅವರವರ ಜೀವ ಅವರ ಕೈಯಲ್ಲಿಯೇ ಇದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ತೀರ್ಥೋದ್ಭವದಲ್ಲಿ ಭಾಗವಹಿಸುವುದು ಒಳಿತು ಎನ್ನುವ ನಿರ್ಧಾರಕ್ಕೆ ಬರಲಾಗಿದೆ.

ಇದನ್ನು ಓದಿ: ಕೊಡವರ ಆಕ್ರೋಶಕ್ಕೆ ಮಣಿದ ಸರ್ಕಾರ: ಕಾವೇರಿ ತೀರ್ಥೋದ್ಬವಕ್ಕೆ ಮುಕ್ತ ಅವಕಾಶ

ಅಕ್ಟೋಬರ್ 17 ರಂದು ಮಧ್ಯಾಹ್ನ 01 ಗಂಟೆ 11 ನಿಮಿಷಕ್ಕೆ ಸರಿಯಾಗಿ ಮಕರ ಲಗ್ನದಲ್ಲಿ ಕಾವೇರಿ ತೀರ್ಥರೂಪಿಣಿಯಾಗುವುದರಿಂದ 17 ಮತ್ತು 18ನೇ ತಾರೀಖು ಎರಡು ದಿನಗಳೂ ತೀರ್ಥ ವಿತರಣೆ ಮಾಡಲಾಗುವುದು. ಸಂಪ್ರದಾಯದಂತೆ ಸಂಜೆ 6 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಿದೆ.

ಅಲ್ಲದೆ 17 ರಂದು ತೀರ್ಥೋದ್ಭವದಂದು ವಾಹನಗಳಲ್ಲಿ ತೀರ್ಥ ಕೊಂಡೋಗುವವರ ಮಧ್ಯಾಹ್ನ ಎರಡುವರೆ ಬಳಿಕ ಅವಕಾಶ ನೀಡಲು ನಿರ್ಧರಿಸಲಾಗಿದೆ. ಇನ್ನು ಕೋವಿಡ್ ನಿಯಮ ಇರುವುದರಿಂದ ಕೊಳದಲ್ಲಿ ಪುಣ್ಯ ಸ್ನಾನಕ್ಕೆ ಅವಕಾಶವಿಲ್ಲ. ಆದರೆ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಭಕ್ತರು ಸ್ನಾನ ಮಾಡಲು ಅವಕಾಶ ನೀಡಲಾಗಿದೆ. ಪ್ರತೀ ವರ್ಷ ಇರುತಿದ್ದಂತೆ ಈ ವರ್ಷ ಅನ್ನದಾನದ ವ್ಯವಸ್ಥೆ ಇರುವುದಿಲ್ಲ. ಆದರೆ ದೇವಾಲಯದಲ್ಲಿ ಕೆಲಸ ನಿರ್ವಹಿಸುವ, ಸ್ವಯಂ ಸೇವಕರು, ಪೊಲೀಸ್ ಸೇರಿದಂತೆ ತುಲಾ ಸಂಕ್ರಮಣ ಜಾತ್ರೆಯ ಕರ್ತವ್ಯ ನಿರ್ವಹಿಸುವವರಿಗೆ ಊಟದ ವ್ಯವಸ್ಥೆ ಇರಲಿದೆ. ಅಲ್ಲದೆ ಶುಗರ್ ಸೇರಿದಂತೆ ಇನ್ನಿತರ ಆರೋಗ್ಯದ ಸಮಸ್ಯೆ ಇರುವವರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಲು ಕೊಡಗು ಏಕೀಕರಣ ರಂಗ ಸಿದ್ಧವಿದೆ ಎಂದು ಶಾಸಕ ಕೆ.ಜಿ ಬೋಪಯ್ಯ ಹೇಳಿದ್ದಾರೆ.

ಕೊಡಗಿನ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಪ್ರವಾಸಿಗರು ವಸ್ತ್ರ ಸಂಹಿತೆ ನಿಯಮ ಪಾಲಿಸಬೇಕು. ಜಿಲ್ಲೆಯಲ್ಲಿರುವ ಹೋಮ್ ಸ್ಟೇ ಹೋಟೆಲ್ ರೇಸಾರ್ಟ್ ಮಾಲೀಕರು. ಬರುವ ಪ್ರವಾಸಿಗರಿಗೆ ಸರಿಯಾಗಿ ಮನವರಿಕೆ ಮಾಡಿ ಧಾರ್ಮಿಕ ಕ್ಷೇತ್ರಗಳಿಗೆ ಕಳುಹಿಸಬೇಕು. ಕೊಡಗಿನ ತಲಕಾವೇರಿ, ಭಂಗಡೇಶ್ವರ, ಇರ್ಪು ರಾಮೇಶ್ವರ, ಪಾಡಿ ಇಗ್ಗುತಪ್ಪ, ಮಡಿಕೇರಿ ಓಂಕಾರೇಶ್ವರ ದೇವಾಲಯಗಳಿಗೆ ಹೋಗಬೇಕಾದರೆ ಸರಿಯಾದ ರೀತಿಯಲ್ಲಿ ವಸ್ತ್ರಗಳನ್ನು ಧರಿಸಿಕೊಂಡು ಹೋಗಬೇಕು.

ಇದನ್ನು ಓದಿ: ಸಚಿವರು ಬರುವಿಕೆಗಾಗಿ ಕಾದುಕಾದು ಸುಸ್ತಾದ ಅಧಿಕಾರಿಗಳು

ಮದ್ಯಪಾನ ಮಾಡಿ ತಲಕಾವೇರಿಗೆ ಬಂದರೆ ಅಂತವರಿಗೆ ದಂಡ ಹಾಕಲು ಸಭೆಯಲ್ಲಿ ನಿರ್ಧರಿಸಲಾಗಿದೆ. ತೀರ್ಥೋದ್ಭವ ಇರುವ ಹಿನ್ನೆಲೆಯಲ್ಲಿ ಭಾಗಮಂಡಲದಲ್ಲಿ ಎರಡು ದಿನಗಳ ಕಾಲ ಮೀನು ಮಾಂಸ ಮತ್ತು ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ತೀರ್ಥೋದ್ಭವ ಎಂಬ ಕಾರಣಕ್ಕೆ ವಿಶೇಷ ಬಸ್ಸುಗಳ ವ್ಯವಸ್ಥೆಯನ್ನೇನು ಮಾಡಿಲ್ಲ. ಎಂದಿನಂತೆ ಮಾರ್ಗದಲ್ಲಿ ಓಡಾಡುವ ಬಸ್ಸುಗಳು ಮಾತ್ರವೇ ನಿಗಧಿತ ಸಮಯದಲ್ಲಿ ಓಡಾಡಲಿವೆ.

ತೀರ್ಥ ವಿತರಣೆಗೂ ಭಾಗಮಂಡಲ ಪಂಚಾಯಿತಿಗೆ ಜವಾಬ್ದಾರಿ ವಹಿಸಲಾಗಿದ್ದು, ಕಳೆದ ವರ್ಷದ ತಂಡದೊಂದಿಗೆ ಸುಸೂತ್ರವಾಗಿ ತೀರ್ಥ ವಿತರಣೆ ನಡೆಯಲಿದೆ ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ದೇವಾಲಯದ ತಕ್ಕಮುಖ್ಯಸ್ಥರಾದ ಮೋಟಯ್ಯ ಅವರು ಕೋವಿಡ್ ನಿಯಮದಂತೆ ಎಲ್ಲವನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಭಕ್ತರು ಕೂಡ ನಿಯಮಗಳನ್ನು ಪಾಲಿಸಿಕೊಂಡೇ ತೀರ್ಥೋದ್ಭವದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *