ಮಡಿಕೇರಿ: ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಚಾಲನೆ ನೀಡುವ ಮೂಲಕ ಮಡಿಕೇರಿ ದಸರಾಕ್ಕೆ ವಿದ್ಯುಕ್ತ ಚಾಲನೆ ದೊರೆತ್ತಿದೆ. ಮಡಿಕೇರಿ ನಗರದ ಪಂಪಿನ ಕೆರೆ ಬಳಿಯಿಂದ ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಹ್ಮಣಿ ಮತ್ತು ವೀಣಾ ಅಚ್ಚಯ್ಯ ಅವರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ನಗರದ ಶಕ್ತಿ ದೇವತೆಗಳಾದ ದಂಡಿನ ಮಾರಿಯಮ್ಮ, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ ಮತ್ತು ಕಂಚಿಕಾಮಾಕ್ಷಿ, ದೇವತೆಗಳ ಕರಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಬನ್ನಿ ಮಂಟಪ ಮಾರ್ಗದ ಮೂಲಕ ಹೊರಟ ಕರಗ ಉತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಗಳಿಗೆ ತೆರಳಿತು.
ಇದನ್ನು ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಎಸ್. ಎಂ. ಕೃಷ್ಣ ಅವರಿಂದ ವಿದ್ಯುಕ್ತ ಚಾಲನೆ
ಕೋವಿಡ್ ಹಿನ್ನೆಲೆಯಲ್ಲಿ ಪ್ರತೀ ಕರಗದ ಜೊತೆಗೆ ಕೇವಲ 25 ಜನರು ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿತು. ಆದರೆ ಜನರು ಮಾತ್ರ ಅದನ್ನು ಪಾಲಿಸದೆ ನೂರಾರು ಸಂಖ್ಯೆಯಲ್ಲಿ ಸೇರಿದ್ದು ವಿಪರ್ಯಾಸ. ಇನ್ನು ನಾಳೆಯಿಂದ ನಾಲ್ಕು ಶಕ್ತಿ ದೇವತೆಗಳ ಕರಗಗಳು ಮಡಿಕೇರಿ ನಗರವನ್ನು ಪ್ರದಕ್ಷಿಣೆ ಹಾಕಲಿವೆ. ಕರಗಗಳು ಪ್ರತೀ ಮನೆ ಮನೆಗೂ ತೆರಳಲಿವೆ. ಈ ವೇಳೆ ಪ್ರತೀ ದೇವತೆಗಳ ಕರಗದ ಜೊತೆಗೆ ಕೇವಲ 10 ಜನರು ಮಾತ್ರವೇ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ.
ಇಂದು ಪಂಪಿನ ಕೆರೆಯಿಂದ ಕರಗ ಉತ್ಸವದ ವೇಳೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮತ್ತು ಮಡಿಕೇರಿ ನಗರಸಭೆ ಆಯುಕ್ತ ರಾಮದಾಸ್ ಭಾಗಿಯಾಗಿದ್ದರು.
ಮಡಿಕೇರಿ ರಾಜರ ಆಳ್ವಿಕೆ ಕಾಲದಿಂದಲೂ ಮಡಿಕೇರಿ ಕರಗ ಉತ್ಸವ ನಡೆಯುತ್ತಿದ್ದು, ಎಂದೆಂದಿಗೂ ಉತ್ಸವ ನಿಂತಿರಲಿಲ್ಲ. ಹಿಂದೆ ಪ್ಲೇಗ್ ಮತ್ತು ಕಾಲರಾ ಸೋಂಕುಗಳು ಬಂದಾಗಲೂ ಕರಗ ಉತ್ಸವವನ್ನು ನಡೆಸುವ ಮೂಲಕ ಮಹಾಮಾರಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿತ್ತು ಎನ್ನೋ ನಂಬಿಕೆ ಜನರಲ್ಲಿ ಇಂದಿಗೂ ಇದೆ.
ಆದರೆ ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕರಗ ಉತ್ಸವ ಮನೆ ಮನೆಗಳಿಗೆ ಹೋಗಲು ಅವಕಾಶ ಇರಲಿಲ್ಲ. ಈ ಬಾರಿ ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡಿದೆ. ಇದರಿಂದ ಕೊಡಗಿನಲ್ಲಿ ಸೋಂಕಿನ ನಿಯಂತ್ರವಾಗಲಿದೆ ಎನ್ನೋ ನಂಬಿಕೆ ಇದೆ ಎಂದಿದ್ದಾರೆ ಕರಗ ಹೊರುವ ಉಮೇಶ್. ಈ ಬಾರಿಯಾದರೂ ಸಂತಸದಿಂದ ಕರಗ ಮತ್ತು ದಸರಾ ಆಚರಿಸುತ್ತಿರುವ ನೆಮ್ಮದಿ ಇದೆ ಎಂದು ಭಕ್ತರು ಸಮಾಧಾನ ವ್ಯಕ್ತಪಡಿಸಿದ್ದಾರೆ.