ಬೆಂಗಳೂರು: ಕೇಂದ್ರದ ಬಿಜೆಪಿ ಪಕ್ಷವು ಅಧಿಕಾರ ಹಿಡಿದ ನಂತರದ ದಿನಗಳಿಂದ ಜನಸಾಮಾನ್ಯರ ಎಲ್ಲಾ ಅಗತ್ಯ ವಸ್ತುಗಳು ಹಾಗೂ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಎಲ್ಲದರ ಬೆಲೆಗಳು ಸತತವಾಗಿ ಏರಿಕೆಯಾಗುತ್ತಿರುವುದನ್ನು ಖಂಡಿಸಿ ನಗರದ ಮಿನರ್ವ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ ʻʻಪ್ರಧಾನಿ ನರೇಂದ್ರ ಮೋದಿ ಪ್ರತಿ ಬಾರಿ ಮನ್ ಕೀ ಬಾತ್ ಹಾಗೂ ತಮ್ಮ ಭಾಷಣದಲ್ಲಿ ಅಚ್ಛೇ ದಿನವನ್ನು ಪ್ರಸ್ತಾಪಿಸಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರನ್ನು ನಡುರಸ್ತೆಯಲ್ಲಿ ತಂದು ನಿಲ್ಲಿಸುವ ಮತ್ತು ಅತ್ಯಂತ ಕಠೋರವಾದ ಸರ್ವಾಧಿಕಾರಿ ಆಡಳಿತವನ್ನು ಇಂದು ಕಾಣುತ್ತಿದ್ದೇವೆ. ಹಲವಾರು ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಿ ಜನರ ತೆರಿಗೆಯನ್ನು ಹೆಚ್ಚಿಸುವ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಜನತೆ ವಿರೋಧಿಯಾದ ಮೋದಿ ಸರ್ಕಾರ ತೊಲಗಬೇಕೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಜನತೆ ಜೀವನ ನಡೆಸುವುದೇ ಕಷ್ಟಕರವಾಗಿದೆ. ಪ್ರತಿದಿನ ಎಂಬಂತೆ ಬೆಲೆಏರಿಕೆಯಾಗುತ್ತಿದೆ. ಪೆಟ್ರೋಲ್ ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ದರಗಳು ಸಹ ಸತತವಾಗಿ ಏರಿಕೆಯಾಗುತ್ತಿದೆ. ಆಹಾರ ಪದಾರ್ಥಗಳನ್ನು ಬೆಲೆಯೂ ಏರಿಕೆಯಾಗುತ್ತಿದ್ದು, ದುಡಿಮೆಯ ಆದಾಯ ಮಾತ್ರ ಏರಿಕೆಯಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ಅಲ್ಲದೆ, ಕೋವಿಡ್ ಅವಧಿಯಲ್ಲಿ ಖಾಸಗಿ ಶಾಲಾ, ಕಾಲೇಜುಗಳ ದೌರ್ಜನ್ಯ ಮತ್ತು ಶುಲ್ಕ ವಸೂಲಾತಿಯನ್ನು ಖಂಡಿಸಲಾಯಿತು. ಮಹಿಳೆಯರ ಮೇಲೆ ಹೆಚ್ಚುತ್ತಿರುವ ಹತ್ಯಾಚಾರ ಹಾಗೂ ದೌರ್ಜನ್ಯ ಮತ್ತು ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ ದಬ್ಬಾಳಿಕೆಯನ್ನು ಪ್ರತಿಭಟನೆ ಮೂಲಕ ಖಂಡಿಸಲಾಯಿತು.
ಪ್ರತಿಭಟನೆಯಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ಸಮಿತಿಯ ಮಾವಳ್ಳಿ ಮುನಿಕೃಷ್ಣ, ಚಾಮರಾಜಪೇಟೆ ಸಿಐಟಿಯು ಸಮಿತಿಯ ಎ.ಎಂ.ರವಿಚಂದ್ರನ್, ಕೆಪಿಸಿಸಿ ಕಾರ್ಮಿಕ ವಿಭಾಗದ ಮಾವಳ್ಳಿ ಅರವಿಂದ್, ಸಿಡಬ್ಲ್ಯೂಎಫ್ ಶಾಂತಿನಗರ, ಚಿಕ್ಕಪೇಟೆ, ಬಿಟಿಎಂ ಸಮಿತಿಯ ಪಿ.ನಾಗರಾಜು, ಮನೆಕೆಲಸಗಾರರ ಸಂಘದ ಎನ್.ಶಶಿಕಲಾ, ಡಿವೈಎಫ್ಐ ಶಾಂತಿನಗರ ಸಮಿತಿ ಬಾಲು, ಪ್ರವೀಣ್ಕುಮಾರ್, ಸಿಡಬ್ಲ್ಯೂಎಫ್ಐ ಸಂಘದ ಮನೇವಾ, ಸುಂದರ್, ಸಿ.ಸಂತೋಷ್, ಪಳನಿಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.