ರಾಣೇಬೆನ್ನೂರ: ಬಾಲಕಿಯರ ವಸತಿ ನಿಲಯದಲ್ಲಿ ಸರಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿನಿಯರನ್ನು ವಂಚಿಸುತ್ತಿರುವುದನ್ನು ವಿರೋಧಿಸಿ, ವಾರ್ಡನ್ ಬದಲಾವಣೆಗಾಗಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಪ್ರತಿಭಟನಾ ಧರಣಿ ನಡೆಸಿತು.
ಶ್ರೀರಾಮ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಪಕ್ಕದಲ್ಲಿರುವ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದ ಮುಂದೆ ಎಸ್ಎಫ್ಐ ರಾಣೇಬೆನ್ನೂರ ತಾಲ್ಲೂಕು ಸಮಿತಿಯು ಸೋಮವಾರ ಸಂಜೆಯಿಂದ ತಡರಾತ್ರಿವರೆಗೂ ವಿದ್ಯಾರ್ಥಿನಿಯರು ಪ್ರತಿಭಟನಾ ಧರಣಿ ನಡೆಸಿದರು.
ಬಾಲಕಿಯರ ವಸತಿ ನಿಲಯದಲ್ಲಿ ಊಟದ ವ್ಯವಸ್ಥೆ ಸರಿಪಡಿಸಬೇಕು. ಗುಣಮಟ್ಟದ ಆಹಾರ ನೀಡಬೇಕು. ಸರಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿನಿಯರನ್ನು ವಂಚಿಸುತ್ತಿರುವುದನ್ನು ಕೈಬಿಡಬೇಕೆಂದು ಹಾಗೂ ವಾರ್ಡನ್ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದರು. ಅಲ್ಲದೆ, ಮೂಲಭೂತ ಸೌಕರ್ಯಗಳನ್ನು ನೀಡಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಂತೆ ವಾರ್ಡನ್ ಬದಲಾವಣೆ ಮಾಡಿ ಅನುಭವುಳ್ಳ ವಾರ್ಡನ್ ಅವರನ್ನು ನೇಮಿಸಬೇಕು. ನಿಗದಪಡಿಸಲಾಗಿರುವ ಆಹಾರ ಕ್ರಮಗಳಂತೆ ವಿದ್ಯಾರ್ಥಿಗಳಿಗೆ ರಸ್ಕ್, ಜಿಲೇಬಿ, ಜಾಮುನ್, ಸೇರಿದಂತೆ ಸಿಹಿ ಪದಾರ್ಥಗಳನ್ನು ಕೊಡಬೇಕು ಎಂದು ತಿಳಿಸಲಾಗಿದೆ.
ವಿದ್ಯಾರ್ಥಿನಿಯರ ಗುಪ್ತ ಸಮಸ್ಯೆಗಳಿಗೆ ಕಡಾಯವಾಗಿ ಬಿಸಿನೀರು ಒದಗಿಸಿ ಶುಚಿ ಕಿಟ್ ಕೊಡಬೇಕು ಅಲ್ಲದೆ, ಶೌಚಾಲಯ ಸ್ವಚ್ಚತೆ ಕಾಪಾಡಬೇಕು. ನೀರಿನ ಟ್ಯಾಂಕ್ ಅನ್ನು ತಿಂಗಳಿಗೆ ಒಂದು ಸಾರಿ ಸ್ವಚ್ಛಗೊಳಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಅದೇ ರೀತಿಯಲ್ಲಿ ಹಾಸ್ಟೆಲ್ ಒಳಗಡೆ ಹಂದಿ, ನಾಯಿ ಬಾರದ ರೀತಿ ನಿಗವಹಿಸಬೇಕು ಮತ್ತು ತಿಂಗಳು ಮತ್ತು ವಾರ ಸ್ಪರ್ಧಾ ವಿಜೇತ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ವಿದ್ಯಾರ್ಥಿಗಳಿಗೆ ಮನರಂಜನೆಗೆ ನಿರ್ಬಂಧ ಹೇರಬಾರದು ಮತ್ತು ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿನ ಊಟ ಹಾಗೂ ವಸತಿ ಹಣವನ್ನು ಕೊಡಬೇಕೆಂದು ಸಂಘಟನೆಯು ಆಗ್ರಹಿಸಿದೆ.