ದಸರಾ ಆಚರಣೆ : ಮೈಸೂರು ಮತ್ತು ರಾಜ್ಯದ ಇತರ ಭಾಗಗಳಿಗೆ ಪ್ರತ್ಯೇಕ ಮಾರ್ಗಸೂಚಿ

ಬೆಂಗಳೂರು: ನಾಡಹಬ್ಬ ದಸರಾ ಆರಂಭಕ್ಕೆ ಇನ್ನು ಎರಡು ದಿನ ಬಾಕಿಯಿದ್ದು, ಸರ್ಕಾರದ ವತಿಯಿಂದ ಮೈಸೂರಿನಲ್ಲಿ ನಾಡಹಬ್ಬ ದಸರಾ ಆಚರಣೆ ನಡೆಸಲಿದೆ. ಸರಳವಾಗಿ ದಸರಾ ಆಚರಣೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಮೈಸೂರು ದಸರಾ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ದಸರಾ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಜನರು ಸೇರುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ದಸರಾ ಆಚರಣೆಗೆ ಅಕ್ಟೋಬರ್ 7ರಂದು ಸಾಯಂಕಾಲ ಅಧಿಕೃತವಾಗಿ ಚಾಲನೆ ದೊರೆಯಲಿದ್ದು, 15ರಂದು ವಿಜಯದಶಮಿ ದಿನದಂದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ದಸರಾ ಹಬ್ಬ ಆಚರಣೆಗೆ ಮೈಸೂರು ಮತ್ತು ರಾಜ್ಯದ ಬೇರೆ ಕಡೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಇದನ್ನು ಓದಿ: ಮೈಸೂರು ದಸರಾಕ್ಕೆ ಹೊರಟ ಗಜಪಡೆ

ಕೋವಿಡ್-19 ಸೋಂಕು ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗದ ಹಿನ್ನೆಲೆಯಲ್ಲಿ ಕೋವಿಡ್‌ ಸಂಬಂಧಿತ ವಿವಿಧ ಮಾರ್ಗಸೂಚಿಗಳು, ನಿರ್ಬಂಧಗಳು ಜಾರಿಯಲ್ಲಿವೆ. ಹಾಗಾಗಿ ಈ ವರ್ಷವೂ ಸಹ ದಸರಾವನ್ನು ಅತ್ಯಂತ ಎಚ್ಚರಿಕೆ ಮತ್ತು ನಿಮಯಗಳಂತೆ ಆಚರಣೆ ಮಾಡಬೇಕಾಗಿದೆ.

ಮೈಸೂರು ದಸರಾ ಆಚರಣೆ ಮಾರ್ಗಸೂಚಿ: ಅಕ್ಟೋಬರ್ 7ರಂದು ಸಂಜೆ ಚಾಮುಂಡಿ ಬೆಟ್ಟದಲ್ಲಿ ದಸರಾ ಹಬ್ಬಕ್ಕೆ ಚಾಲನೆ, ಮೈಸೂರು ದಸರಾ ಉದ್ಘಾಟನೆಗೆ 100 ಜನರಿಗೆ ಮಾತ್ರ ಅವಕಾಶ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 500 ಜನರ ಮಿತಿ ಮೀರುವಂತಿಲ್ಲ. ದಸರಾದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ 1 ಡೋಸ್​ ಲಸಿಕೆ ಪಡೆದಿರಬೇಕು, ಹೊರಗಿನಿಂದ ಬರುವವರಿಗೆ ಆರ್‌ಟಿ-ಪಿಸಿಆರ್‌ ಟೆಸ್ಟ್ ಕಡ್ಡಾಯ.

ಅರಮನೆ ಆವರಣದಲ್ಲಿ ದಸರಾ ನಡೆಯಲಿದ್ದು, ಜನರು ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು, ವರ್ಚುವಲ್ ಮೂಲಕ ಜಂಬೂ ಸವಾರಿಗೆ ವೀಕ್ಷಣೆ, ಕಾರ್ಯಕ್ರಮದಲ್ಲಿ 400ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ, ಅಕ್ಟೋಬರ್ 15ರಂದು ನಡೆಯುವ ಜಂಬೂ/ಪಂಜಿನ ಕವಾಯತಿಗೆ 500 ಜನರಿಗೆ ಮಾತ್ರ ಅವಕಾಶವಿದೆ. ದೈಹಿಕ ಅಂತರ ಇಲ್ಲದ ಕಾರ್ಯಕ್ರಮಗಳಿಗೆ ನಿಷೇಧ, ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ರಾಜ್ಯದ ಬೇರೆಡೆ 400ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ: ಈ ಬಾರಿಯೂ ಸರಳ ದಸರಾ ಆಚರಣೆಗೆ ಅವಕಾಶವಿದ್ದು, ರಾಜ್ಯದ ಬೇರೆ ಕಡೆಗಳಲ್ಲಿ 400ಕ್ಕಿಂತ ಹೆಚ್ಚು ಜನರು ಒಮ್ಮೆಗೇ ಸೇರುವಂತಿಲ್ಲ. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನು ಓದಿ: ದಸರಾ ಉದ್ಘಾಟಕರಾಗಿ ಮಾಜಿ ಸಿಎಂ ಎಸ್.ಎಂ ಕೃಷ್ಣ ಆಯ್ಕೆ

ಸರ್ಕಾರದ ಮಾರ್ಗಸೂಚಿಗಳನ್ನು ಮಹಾನಗರ ಪಾಲಿಕೆಗಳ ಆಯುಕ್ತರು, ಪೊಲೀಸ್ ಆಯುಕ್ತರು, ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಇತರೆ ಇಲಾಖೆ ಮುಖ್ಯಸ್ಥರುಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಲಾಗಿದೆ.

ಜಿಲ್ಲಾಡಳಿತವು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿ ಆಚರಣೆಗೆ ಮುನ್ನವೇ ನಿಷೇಧಗಳ ಕುರಿತು ವ್ಯಾಪಕವಾಗಿ ಪ್ರಚಾರ ಮಾಡಬೇಕೆಂದು ಸೂಚಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *