ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಕಂದಾಯ ವಿಭಾಗಕ್ಕೆ ದಿಢೀರ್ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಕಂದಾಯ ವಿಭಾಗದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಸಾರ್ವಜನಿಕರಿಂದ ಎಸಿಬಿಗೆ ದೂರು : ಕಂದಾಯ ವಿಭಾಗದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಅರ್ಜಿಗಳನ್ನು ಹಿರಿತನದ ಆಧಾರಲ್ಲಿ ಪರಿಗಣಿಸುತ್ತಿಲ್ಲ. ಹಣ ಕೊಟ್ಟವರ ಕೆಲಸ ತ್ವರಿತವಾಗಿ ಆಗುತ್ತದೆ. ಪೌತಿಖಾತೆ, ನಿವೇಶಗಳು, ವಾಣಿಜ್ಯ ಆಸ್ತಿಗಳ ಕಂದಾಯ ನಿಗದಿ, ಹೊಸ ಲೇೌಟ್‌ಗಳಿಗೆ ಅನುಮತಿ, ಕಟ್ಟಡ ಪರವಾನಗಿ ಸೇರಿದಂತೆ ವಿವಿಧ ಕೆಲಸಗಳಿಗೆ ನಿತ್ಯವೂ ಅಲೆಯಬೇಕಿದೆ ಎಂದು ಹಲವರು ಎಸಿಬಿಗೆ ದೂರು ನೀಡಿದ್ದರು.
ಸಾರ್ವಜನಿಕರ ನಿರಂತರ ದೂರುಗಳನ್ನು ಆಧರಿಸಿ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ಎಸಿಬಿ ಅಧಿಕಾರಿಗಳನ್ನು ಒಳಗೊಂಡ 50 ಸಿಬ್ಬಂದಿಯ ತಂಡ ಪಾಲಿಕೆ ಮೇಲೆ ದಾಳಿಸಿ ನಡೆಸಿದೆ. ದಾಖಲೆಗಳನ್ನು ನಿರಂತರವಾಗಿ ಪರಿಶೀಲಿಸಿತು. ಪಾಲಿಕೆಯ 25ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ, 10ಕ್ಕೂ ಹೆಚ್ಚು ಮಧ್ಯರ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಡಿವೈಎಸ್‌ಪಿ ಜಯಪ್ರಕಾಶ್, ಜೆ.ಲೋಕೇಶ್, ಇನ್‌ಸ್ಪೆಕ್ಟರ್ ವಸಂತಕುಮಾರ್ ಮತ್ತಿತರ ಅಧಿಕಾರಿಗಳು ದಾಳಿಯ ನೇತೃತ್ವ ವಹಿಸಿದ್ದರು.
ಸಿಬ್ಬಂದಿ ಒಳಗೆ ಲಾಕ್: ಮಧ್ಯಾಹ್ನ 12.30ರ ಸುಮಾರಿಗೆ ಏಕಾಏಕಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಕಂದಾಯ ವಿಭಾಗದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಚೇರಿಯೊಳಗೆ ಲಾಕ್ ಮಾಡಿಕೊಂಡರು. ಅಲ್ಲಿ ಕೆಲ ಸಾರ್ವಜನಿಕರೂ ಇದ್ದರಾದರೂ ಅವರನ್ನೂ ಹೊರಗೆ ಬಿಡದೆ ಬಾಗಿಲು ಬಂದ್ ಮಾಡಿಕೊಳ್ಳಲಾಗಿತ್ತು. ಎಲ್ಲರಿಗೂ ಮಾಧ್ಯಾಹ್ನದ ಊಟವನ್ನು ಅಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು. ಸಂಜೆವರೆಗೆ ಕಡತಗಳ ಪರಿಶೀಲನೆ ಮುಂದುವರಿದಿತ್ತು. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.