ಉತ್ತರ ಪ್ರದೇಶ: ಉತ್ತರ ಪ್ರದೇಶದ ಲೆಖಿಂಪುರ್ ಖೆರಿ ಬಳಿ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಕಾರ್ ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಅವರ ಕಾರಿಗೆ ಕಪ್ಪು ಬಾವುಟ ಪ್ರದರ್ಶನ ನಡೆಸಿ ರೈತರು ಪ್ರತಿಭಟನೆ ನಡೆಸಲು ಮುಂದಾದಗ ಸಚಿವರ ಪುತ್ರ ಆಶಿಷ್ ಮಿಶ್ರಾ ರೈತರ ಮೇಲೆ ಕಾರ್ ಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಗಳನ್ನು ವಿಪಕ್ಷಗಳು ಖಂಡಿಸಿದ್ದು, ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರಿಗೆ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿವೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಹಾಗೂ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಭೇಟಿ ವಿರೋಧಿಸಿ ಭಾನುವಾರ ಬೆಳಗ್ಗೆ ಕೃಷಿ ಕಾನೂನು ರದ್ಧತಿಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪೊಂದು ನಿಘಾಸನ್ ಪ್ರದೇಶದ ಟಿಕುನಿಯಾ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಹಿಂಸಾಚಾರ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೇಂದ್ರ ಸಚಿವರ ಬೆಂಗಾವಲು ವಾಹನವೊಂದು ಇಬ್ಬರು ಪ್ರತಿಭಟನಾಕಾರರ ಮೇಲೆ ಹರಿದಿದೆ. ಈ ವಾಹನ ಮಿಶ್ರಾ ಅವರ ಮಗನಿಗೆ ಸೇರಿದ್ದು ಎಂದು ರೈತ ಸಂಘಟನೆಗಳು ಆರೋಪಿಸಿವೆ. ಇದರಿಂದ ಉದ್ರಿಕ್ತಗೊಂಡ ರೈತರು ಮೂರು ಜೀಪ್ ಗಳಿಗೆ ಬೆಂಕಿ ಹಚ್ಚಿದ್ದಾರೆ.
ಈ ಘಟನೆಯನ್ನು ಖಂಡಿಸಿ ಇಂದು ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಭಾಗವಾಗಿ ಕರ್ನಾಟಕದಲ್ಲೂ ಪ್ರತಿಭಟನೆಗೆ ಕರೆ ನೀಡಲಾಗಿದೆ. ಬೆಂಗಳೂರಿನಲ್ಲಿ ಮೈಸೂರು ಬ್ಯಾಂಕ್ ವೃತ್ತದ ಬಳಿ ಬೆಳಗ್ಗೆ 10:30 ಕ್ಕೆ ಪ್ರತಿಭಟನೆ ನಡೆಸುವುದಾಗಿ ಸಂಯುಕ್ತ ಕರ್ನಾಟಕ ಹೋರಾಟ ಸಮಿತಿಯ ಮುಖಂಡರು ತಿಳಿಸಿದ್ದಾರೆ.