ಬೀಡಿ ಕಾರ್ಮಿಕರ ಬದುಕಿನ ಆಶಾಕಿರಣ; ಜನಚಳುವಳಿ ನಾಯಕ ನಿಸಾರ್‌ ಅಹಮ್ಮದ್

ತುಮಕೂರು: ದಾನಿಗಳು ಒಂದೊತ್ತು ಊಟ ಕೊಟ್ಟು ಜನರನ್ನು ಸಂತೈಸಬಹುದು, ಆದರೆ ಬಡತನದಲ್ಲಿ ಹುಟ್ಟಿ ಕಾರ್ಮಿಕ ಸಂಘಟನೆ ಮತ್ತು ಕಮ್ಯೂನಿಸ್ಟ್‌ ಪಕ್ಷದಲ್ಲಿದ್ದುಕೊಂಡು ನಿಷ್ಟೆ, ಪ್ರಾಮಾಣಿಕತೆಯಿಂದ ಕಾರ್ಮಿಕರ ಹಾಗೂ ಸಮಾಜದ ಬಡ ಕುಟುಂಬಗಳ ಬದುಕನ್ನು ಹಸನುಗೊಳಿಸಲು ಮುಂದಾಗಿದ್ದ ಸಂಗಾತಿ ನಿಸಾರ್ ಅಹಮದ್ ಅವರ ಕಾರ್ಯವೈಖರಿ ಮೆಚ್ಚುವಂತದ್ದು ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಮುಖಂಡ ಮೀನಾಕ್ಷಿ ಸುಂದರಂ ಎಂದು ಹೇಳಿದರು.

ತುಮಕೂರು ಜಿಲ್ಲೆ ಶಿರಾ ನಗರದ ಜಾಮಿಯಾ ಶಾದಿಮಹಲ್‌ನಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಮತ್ತು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಜಿಲ್ಲಾ ಸಮಿತಿಗಳು ನಿಸಾರ್‌ ಅಹಮದ್‌ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಿದ್ದರು.

ಶಿರಾ ತಾಲೂಕು ಸಿಐಟಿಯು ಅಧ್ಯಕ್ಷರಾಗಿದ್ದ ನಿಸಾರ್ ಅಹಮದ್‌ ಅವರ ಬದುಕನ್ನು ನೋಡಿದಾಗ ಅವರು ತಮ್ಮ ಬಡ ಕುಟುಂಬದಿಂದ ಹೊರಬಂದು ದುಡಿಯುವ ವರ್ಗದ ಸಮಾಜವನ್ನು ಕಟ್ಟುವ ಸಲುವಾಗಿ ತಮ್ಮನ್ನು ಅರ್ಪಿಸಿಕೊಂಡಂತಹ ಸರಳ ವ್ಯಕ್ತಿಯಾಗಿದ್ದರು. ನನ್ನ ಮತ್ತು ಅವರೊಂದಿಗೆ ಧೀರ್ಘ ಒಡನಾಟವಿತ್ತು. ನಿಸಾರ್ ಅವರು ಸಾಮಾನ್ಯ ಜನರ ನಡುವೆ ಎಲೆಮರೆ ಕಾಯಿಯಾಗಿ ಕಾರ್ಮಿಕರಿಗಾಗಿ ದುಡಿದಂತವರು. ಸಾಮಾಜಿಕವಾಗಿ ತುಳಿತಕ್ಕೊಳಗಾದ, ಆರ್ಥಿಕವಾಗಿ ದುರ್ಬಲವಾಗಿರುವ ಜನರ ಜೊತೆಗೆ ಬದುಕಿಗಾಗಿ ದುಡಿದಂತಹ ವ್ಯಕ್ತಿ ಎಂದು ಮೀನಾಕ್ಷಿ ಸುಂದರಂ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾಧ್ಯಕ್ಷ ಸಯ್ಯಿದ್ ಮುಜೀಬ್ ಮಾತನಾಡಿ ಶಿರಾ ವಿಶಿಷ್ಟವಾದಂತಹ ನಗರವಾಗಿದ್ದು ಇಲ್ಲಿ ಸುಮಾರು 400ಕ್ಕೂ ಹೆಚ್ಚು ಬ್ರಾಂಡ್‌ಗಳ ಬೀಡಿಗಳಿವೆ. ಇಡೀ ಏಷ್ಯಾ ಖಂಡದಲ್ಲೇ ಇಷ್ಟೊಂದು ಬ್ರಾಂಡ್‌ಗಳ ಬೀಡಿ ಇರುವಂತಹ ಇನ್ನೊಂದು ಊರು ಇಲ್ಲ. ಇದನ್ನು ಬಿಟ್ಟರೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಎಂಬ ಜಿಲ್ಲೆಯಲ್ಲಿ ಇಂತಹ ಕೆಲವು ಮಾತ್ರ ಬೀಡಿ ಬ್ರಾಂಡ್‌ಗಳನ್ನು ಕಾಣಬಹುದಾಗಿದೆ. ನಿಸಾರ್ ಅಹಮದ್ ಜೊತೆ ಸುಮಾರು 30‌ ವರ್ಷಗಳ ಒಡನಾಟವಿದ್ದು ಬೀಡಿ ಕಾರ್ಮಿಕರ ಚಳಿವಳಿಯಲ್ಲಿ ಜೊತೆಯಾಗಿ ಭಾಗವಹಿಸಿದ್ದೇವು. ಅವರು ಶಿರಾ ತಾಲೂಕಿನಾದ್ಯಂತ ಹಳ್ಳಿಹಳ್ಳಿಗೂ ಸಂಚರಿಸಿ ಬೀಡಿ ಕಾರ್ಮಿಕರನ್ನು ಗುರುತಿಸಿ ಅವರ ಬದುಕನ್ನು ಹಸನುಗೊಳಿಸಿದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್ ಮಾತನಾಡಿ ಶಿರಾ ತಾಲೂಕಿನಲ್ಲಿ ಯಾವುದೇ ಸಭೆ ಸಮಾರಂಭಗಳಾಗಲೀ, ಚಳುವಳಿ, ಹೋರಾಟಗಳಾಗಲೀ ಜನರನ್ನು ಸಂಘಟಿಸಿ ಅವರಿಗೆ ಸಲ್ಲಬೇಕಾದ ಸೌಲಭ್ಯಗಳ ಬಗ್ಗೆ ಅವಿರತ ಹೋರಾಟ ಮಾಡಿದ ಉತ್ತಮ ವ್ಯಕ್ತಿ ನಿಸಾರ್‌ ಅಹಮದ್‌ ಅವರದು ಎಂದು ಹೇಳಿದರು.

ಶಿರಾ ನಗರ ಸಭೆ ಮಾಜಿ ಅಧ್ಯಕ್ಷ ಚಾಂದ್ ಪಾಷ್, ಮುಷೀರ್‌ ಅಹಮ್ಮದ್, ರಹಮತ್ ಖಾನ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸುಬ್ರಮಣ್ಯ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್‌ಬಾನ್, ಜಿಲ್ಲಾ ಖಜಾಂಚಿ ಲೋಕೇಶ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಮಲಮ್ಮ ಪಾರ್ವತಮ್ಮ, ತಿಪಟೂರು ಅನುಸೂಯ, ನಿಸಾರ್ ಅಹಮದ್ ಸಹೋದರಿ ಯಾಸ್ಮಿನ್ ತಾಜ್, ನಾಗೇಶ್, ತಾಲೂಕು ಸಂಘಟನೆಯ ಕಮಲಮ್ಮ ಇತರರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *