ಕುಷ್ಠಗಿ: ನಗರದಲ್ಲಿ ಹಲವಾರು ಕಾಲೇಜುಗಳಿವೆ. ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದರೆ. ಅಲ್ಲದೆ ದೂರದ ಪ್ರದೇಶಗಳಿಂದಲೂ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಪ್ರತಿದಿನ ಆಗಮಿಸುತ್ತಾರೆ. ಹೀಗಿರುವಾಗ ಹಿಂದುಳಿದ ವರ್ಗದ ಇಲಾಖೆಯಿಂದ ಬಾಲಕರ ಮತ್ತು ಬಾಲಕಿಯರಿಗೆ ಒಂದೇ ವಸತಿ ನಿಲಯ ಇದೆ. ಇದೊಂದು ವಸತಿ ನಿಲಯ ವಿದ್ಯಾರ್ಥಿಗಳಿಗೆ ಸಾಕಾಗುತ್ತಿಲ್ಲ.
ದೂರದ ಹಳ್ಳಿಗಳಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕೆಂದರೆ ಬಸ್ಸಿಗಾಗಿ ಪರದಾಟವೂ ಇದೆ. ಕೆಲ ವಿದ್ಯಾರ್ಥಿಗಳು 4-6 ಕಿಲೋ ಮೀಟರ್ ನಡೆದುಕೊಂಡು ಬರುವ ಪರಿಸ್ಥಿತಿಯೂ ಇದೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಕಾಲೇಜು ವಿದ್ಯಾಭ್ಯಾಸವನ್ನು ಬಿಡದಂತೆ ಸರ್ಕಾರವು ಕ್ರಮವಹಿಸಬೇಕು. ಹಾಗಾಗಿ ಕೂಡಲೇ ಸರ್ಕಾರವು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿಗೆ ಒಂದು ಬಾಲಕಿಯರ ವಸತಿ ನಿಲಯ ಮತ್ತು ಇನ್ನೊಂದು ಬಾಲಕರ ವಸತಿ ನಿಲಯ ಹಾಗೂ ಒಂದು ವೃತ್ತಿಪರ ಹಾಸ್ಟೆಲನ್ನು ಮಂಜೂರು ಮಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆ ಪ್ರತಿಭಟನೆಯ ಮೂಲಕ ಸರ್ಕಾರವನ್ನು ಒತ್ತಾಯಿಸಿದೆ.
ಇದನ್ನು ಓದಿ: ಕಾಲೇಜು ಶುಲ್ಕ ಸ್ವಂತಕ್ಕೆ ಬಳಕೆ : ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಿಬ್ಬರ ವಿರುದ್ಧ ದೂರು ದಾಖಲು
ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ಬರುವ ಈ ತಾಲ್ಲೂಕು ಇದೇ ವರ್ಷದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಎಸ್ಎಫ್ಐ ಸಂಘಟನೆಯು ಆಗ್ರಹಿಸಿದೆ.
ಅಲ್ಲದೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020(ಎನ್ಇಪಿ) ಅನ್ನು ಜಾರಿಗೊಳಿಸಲು ಹೊರಟಿರುವುದು ಖಂಡನೀಯವಾಗಿದೆ. ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು, ಸಾರ್ವಜನಿಕರ ಅಭಿಪ್ರಾಯ ಪಡೆದು ನಂತರ ಜಾರಿಗೆ ತಂದರೆ ಸೂಕ್ತ ಎಂದು ಸಂಘಟನೆಯು ಇದೇ ಸಂದರ್ಭದಲ್ಲಿ ಆಗ್ರಹಿಸಿದೆ.
ಎನ್ಇಪಿ ಯೋಜನೆಯು ದಲಿತ ಹಾಗೂ ಹಿಂದುಳಿದ ವರ್ಗ ಮತ್ತು ಮಹಿಳಾ ವರ್ಗದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪಂಚಾಯತಿ ವ್ಯಾಪ್ತಿಗೆ ಒಂದು ಶಾಲೆ ನಾಲ್ಕು ವರ್ಷದ ಪದವಿ ನೀತಿಯು ಇದರಲ್ಲಿ ಒಳಗೊಂಡಿದ್ದು ಇದು ಅನೇಕ ದುಷ್ಪರಿಣಾಮ ಬೀರುತ್ತದೆ.
ಎನ್ಇಪಿ ಜಾರಿಗೆ ತರುವುದರಿಂದ ಅಂಗನವಾಡಿಗಳು ಮತ್ತು ಅನೇಕ ಶಾಲೆಗಳು ಮುಚ್ಚುತ್ತವೆ. ಇದು ಖಾಸಗಿ ವಿಶ್ವವಿದ್ಯಾಲಯಗಳಿಗೆ ಅತಿ ಹೆಚ್ಚಿನ ಆದ್ಯತೆ ನೀಡುತ್ತದೆ. ತಹಸೀಲ್ದಾರ್ ಕುಷ್ಟಗಿ ಇವರ ಮೂಲಕ ಆಟಾನಮಸ್ ಹೆಸರಿನಲ್ಲಿ ಪದವಿ ಕಾಲೇಜುಗಳ ಎಲ್ಲಾ ಖರ್ಚುವೆಚ್ಚ ಮತ್ತು ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕಾಲೇಜುಗಳಿಗೆ ವಹಿಸುವುದರ ಮೂಲಕ ಶಿಕ್ಷಣ ಕೊಡಿಸುವುದು ಸರಕಾರದ ಜವಾಬ್ದಾರಿಯಲ್ಲ ಎಂದು ಅಧಿಕೃತಗೊಳ್ಳುವಂತಹ ನೀತಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಡಗಿದೆ ಎಂದು ಎಸ್ಎಫ್ಐ ಸಂಘಟನೆಯು ನೀತಿಯನ್ನು ಖಂಡಿಸಿದೆ.
ಇದನ್ನು ಓದಿ: ಹೊಸ ಶಿಕ್ಷಣ ನೀತಿ ಜಾರಿಯ ಹುನ್ನಾರವನ್ನು ಅರಿಯಬೇಕಿದೆ – ದುರ್ಗಾದಾಸ್
ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮು ಗುಣಮಟ್ಟದ ಶಿಕ್ಷಣ ಕೊಡಿಸಿ ಎಂದು ಆಗ್ರಹಿಸಿರುವ ಎಸ್ಎಫ್ಐ ಸಂಘಟನೆಯು ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಹಳ್ಳಿಯಿಂದ ಶಿಕ್ಷಣಕ್ಕಾಗಿ ನಗರಗಳಿಗೆ ಆಗಮಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ರೈತ ಮುಖಂಡ ಆರ್ ಕೆ ದೇಸಾಯಿ, ಎಸ್ಎಫ್ಐ ತಾಲ್ಲೂಕು ಸಂಚಾಲಕರಾದ ಬಸವರಾಜ್ ಸಾರಥಿ, ಹುಸೇನ್ ಸಾಬ್ ಬಿ, ಹನುಮಂತ ವಾಲ್ಮೀಕಿ, ಮಂಜುನಾಥ್ ಯಾದವ್, ವಿಷ್ಣು ಸೇನಾ ಸಂಘಟನೆ ತಾಲೂಕ ಅಧ್ಯಕ್ಷ ರಮೇಶ್ ಬಿ ಎ, ಹನುಮೇಶ್ ಉಪ್ಪಾದ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.