ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾದ ಹೊಣೆಯನ್ನು ಯಾರು ಹೊತ್ತುಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಏರ್ ಇಂಡಿಯಾ ಕೊಳ್ಳಲು ಬಿಡ್ ಸಲ್ಲಿಸಿದ್ದ ಸಂಸ್ಥೆಗಳ ಪೈಕಿ ಟಾಟಾ ಸನ್ಸ್ ಹಾಗೂ ಸ್ಪೈಸ್ ಜೆಟ್ ಪ್ರಮುಖ ಸಂಸ್ಥೆಗಳಾಗಿವೆ. ಈ ಪೈಕಿ ಅಂತಿಮ ಬಿಡ್ ಸಲ್ಲಿಸಿದ ಟಾಟಾ ಸಮೂಹ ಸಂಸ್ಥೆಯ ಪಾಲಾಗಲಿದೆ ಏರ್ ಇಂಡಿಯಾ ಎಂಬ ಸುದ್ದಿಮೂಲಗಳು ತಿಳಿಸುತ್ತಿವೆ.
ಸುಮಾರು 60,000 ಕೋಟಿ ರುಪಾಯಿಗೂ ಅಧಿಕ ಸಾಲದಲ್ಲಿ ಮುಳಿಗಿರುವ ಏರ್ ಇಂಡಿಯಾ ಪುನಶ್ಚೇತನಕ್ಕೆ ಸರ್ಕಾರ ಸರಿಯಾಗಿ ಕ್ರಮವಹಿಸಲಿಲ್ಲ. ಬದಲಾಗಿ ಅದನ್ನು ಸಂಪೂರ್ಣವಾಗಿ ಮಾರಾಟ ಮಾಡುವ ನಿಲುವಿಗೆ ಸರ್ಕಾರ ಮುಂದಾಯಿತು.
ಇದರೊಂದಿಗೆ ತನ್ನ ಪಾಲಿನ ಶೇಕಡಾ 76ರಷ್ಟು ಷೇರು ಮಾರಾಟಕ್ಕಿಟ್ಟರೂ ಖರೀದಿದಾರರು ಇಲ್ಲದ್ದಂತಾಗಿದೆ. ಏರ್ ಇಂಡಿಯಾ ಬದಲಿಗೆ ಜೆಟ್ ಏರ್ ಲೈನ್ಸ್ ಖರೀದಿಯತ್ತ ಟಾಟಾ ಸಮೂಹ ಸಂಸ್ಥೆ ಹೆಚ್ಚಿನ ಆಸಕ್ತಿ ವಹಿಸಿತ್ತು. ಆದರೆ ಈಗ ಟಾಟಾ ಸನ್ಸ್ ಚೇರ್ಮನ್ ಎನ್ ಚಂದ್ರಶೇಖರನ್ ಅವರು ಏರ್ ಇಂಡಿಯಾ ಖರೀದಿ ಪ್ರಕ್ರಿಯೆ ಬಗ್ಗೆ ಸುಳಿವು ನೀಡಿದ್ದಾರೆ.
60 ಸಾವಿರ ಸಾಲ ಹೊರೆ ಇರುವ ವಿಮಾನಯಾನ ಸಂಸ್ಥೆ ಖರೀದಿಸುವ ಸಂಸ್ಥೆ 23,286.5 ಕೋಟಿ ರು ಪಾವತಿಸಿ ಹಕ್ಕು ಪಡೆದುಕೊಳ್ಳಬಹುದು. ಮಿಕ್ಕ ಮೊತ್ತವನ್ನು ಏರ್ ಇಂಡಿಯಾ ಆಸ್ತಿ ಹೋಲ್ಡಿಂಗ್ ಲಿಮಿಟೆಡ್(ಎಐಎಹೆಚ್ಎಲ್)ಗೆ ವರ್ಗಾವಣೆಯಾಗಲಿದೆ. ಆದರೆ, ಖರೀದಿ ಮೊತ್ತ ಇನ್ನೂ ಬಹಿರಂಗವಾಗಿಲ್ಲ.
‘ಏರ್ ಇಂಡಿಯಾ’ ವಿಮಾನಯಾನ ಸಂಸ್ಥೆಯ ಹರಾಜು ಪ್ರಕ್ರಿಯೆಯಲ್ಲಿ ‘ಟಾಟಾ ಸನ್ಸ್’ ಸಲ್ಲಿಸಿರುವ ಬಿಡ್ಗೆ ಅನುಮೋದನೆ ದೊರೆತಿದೆ ಎನ್ನಲಾಗಿದೆ. ‘ಟಾಟಾ ಸನ್ಸ್’ ಸಲ್ಲಿಸಿರುವ ಬಿಡ್ ಅನ್ನು ಶಿಫಾರಸು ಮಾಡಿ ಸಲ್ಲಿಸಲಾಗಿರುವ ಪ್ರಸ್ತಾಪವನ್ನು ಸಚಿವರ ಸಮಿತಿ ಅಂಗೀಕರಿಸಿದೆ ಎಂದು ‘ಬ್ಲೂಮ್ಬರ್ಗ್ ಕ್ವಿಂಟ್’ ವರದಿ ಮಾಡಿದೆ.
‘ಏರ್ ಇಂಡಿಯಾ’ ಕಂಪನಿಯ ಖರೀದಿಗೆ ಆಸಕ್ತಿ ತೋರಿಸಿ ಹಲವರು ಹಣಕಾಸಿನ ಸಂಸ್ಥೆಗಳು ಬಿಡ್ ಸಲ್ಲಿಸಿದ್ದಾರೆ ಎಂದು ಕೇಂದ್ರ ಸರ್ಕಾರವು ಇತ್ತೀಚೆಗೆ ಹೇಳಿತ್ತು. ‘ಏರ್ ಇಂಡಿಯಾ’ ಖಾಸಗೀಕರಣಕ್ಕೆ ಹಣಕಾಸಿನ ಬಿಡ್ಗಳನ್ನು ವಹಿವಾಟು ಸಲಹೆಗಾರರು ಸ್ವೀಕರಿಸಿದ್ದಾರೆ. ಈಗ ಪ್ರಕ್ರಿಯೆಯು ಅಂತಿಮ ಹಂತಕ್ಕೆ ಹೋಗಲಿದೆ’ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಕೆಲವು ದಿನಗಳ ಹಿಂದೆ ತಿಳಿಸಿದ್ದರು.
2020ರ ಜನವರಿಯಲ್ಲಿ ಆರಂಭವಾದ ಷೇರು ಮಾರಾಟ ಪ್ರಕ್ರಿಯೆಯು ಕೋವಿಡ್–19 ಕಾರಣದಿಂದಾಗಿ ವಿಳಂಬವಾಗಿತ್ತು. ‘ಏರ್ ಇಂಡಿಯಾ’ ಖರೀದಿಗೆ ಆರಂಭಿಕ ಹಂತದಲ್ಲಿ ಆಸಕ್ತಿ ತೋರಿಸಿದ್ದ ಕಂಪನಿಗಳ ಪೈಕಿ ಟಾಟಾ ಸಮೂಹ ಕೂಡ ಒಂದಾಗಿದೆ.
‘ಏರ್ ಇಂಡಿಯಾ’ವನ್ನು 2007ರಲ್ಲಿ ಇಂಡಿಯನ್ ಏರ್ಲೈನ್ಸ್ ಜೊತೆ ವಿಲೀನ ಮಾಡಲಾಗಿತ್ತು. ಅಂದಿನಿಂದಲೂ ಇದು ನಷ್ಟ ಅನುಭವಿಸುತ್ತಾ ಬಂದಿದೆ. 2019ರ ಮಾರ್ಚ್ 31ರ ಲೆಕ್ಕಾಚಾರದಂತೆ ‘ಏರ್ ಇಂಡಿಯಾ’ ಸಾಲ ₹ 60,074 ಕೋಟಿ ಆಗಿದೆ.
ಏರ್ ಇಂಡಿಯಾ ಖರೀದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ‘ಟಾಟಾ ಸನ್ಸ್’ ವಕ್ತಾರರು ನಿರಾಕರಿಸಿದ್ದಾರೆ ಎಂದು ಸುದ್ದಿಗಳಿದ್ದು, ಪ್ರತಿಕ್ರಿಯೆ ಕೋರಿ ಕಳುಹಿಸಿರುವ ಸಂದೇಶಕ್ಕೆ ಹಣಕಾಸು ಸಚಿವಾಲಯ, ‘ಏರ್ ಇಂಡಿಯಾ’ವೂ ಉತ್ತರಿಸಿಲ್ಲ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಏರ್ ಇಂಡಿಯಾ ಹಿನ್ನಲೆ
1932ರಲ್ಲಿ ಜೆಆರ್ಡಿ ಟಾಟಾ ಅವರು ಟಾಟಾ ಏರ್ಲೈನ್ಸ್ ಆರಂಭಿಸಿದರು. ಕರಾಚಿಯಿಂದ ಬಾಂಬೆಗೆ ಮೊದಲ ವಿಮಾನಯಾನಕ್ಕೆ ಟಾಟಾ ಪೈಲಟ್ ಆಗಿದ್ದರು. 1948ರಲ್ಲಿ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ (ಎಐಟಿಎ) ಸ್ಥಾಪಿಸಿದರು. 1978ರ ತನಕ ಟಾಟಾ ಒಡೆತನದಲ್ಲಿಯೇ ಏರ್ ಇಂಡಿಯಾ ಇತ್ತು.
1953ರಲ್ಲಿ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಏರ್ ಇಂಡಿಯಾವನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಘೋಷಿಸಲು ಮುಂದಾದರು. ಕೆಲವು ತಪ್ಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಟಾಟಾ ಅವರನ್ನು ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆಯುವಂತೆ ನೆಹರೂ ಒಪ್ಪಿಸಿದರು. 1977ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಟಾಟಾ ಅವರನ್ನು ಸಂಸ್ಥೆ ಚೇರ್ಮನ್ ಸ್ಥಾನದಿಂದ ಕೆಳಗಿಸಿದರು. 1946ರಲ್ಲಿ ಟಾಟಾ ಏರ್ ಲೈನ್ಸ್ ಸಾರ್ವಜನಿಕ ಸಂಸ್ಥೆಯಾಗಿ ನಂತರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಆಗಿದ್ದು ಈಗ ಇತಿಹಾಸ.
ಟಾಟಾ ಕಟ್ಟಿ ಬೆಳೆಸಿದ ಸಂಸ್ಥೆ ಸರ್ಕಾರಿ ಸ್ವಾಮ್ಯದ ಒಡೆತನಕ್ಕೆ ಮರಳಿ ಈಗ ಮತ್ತೆ ಟಾಟಾ ಸಮೂಹಕ್ಕೆ ಮರಳುವ ಸಾಧ್ಯಗಳು ಇವೆ.