ಚನ್ನರಾಯಪಟ್ಟಣ : ಕೆಲ ತಿಂಗಳ ಹಿಂದೆ ದಲಿತರು ಎಂಬ ಕಾರಣಕ್ಕೆ ಹೊಟೇಲ್, ಹಾಗೂ ದೇವಸ್ಥಾನದ ಒಳಗೆ ಪ್ರವೇಶ ನಿರಾಕರಿಸಿದ್ದ ಚನ್ನರಾಯಪಟ್ಟಣ ತಾಲೂಕಿನ ದಿಂಡಗೂರಿನ ಗ್ರಾಮದಲ್ಲಿ ಇದೀಗ ಜಿಲ್ಲಾಡಳಿತದ ನೆರವಿನಿಂದ ದಲಿತರು ದೇವಾಲಯ ಪ್ರವೇಶಿಸಿದ್ದಾರೆ.
ಮೇಲ್ಜಾತಿ ಮತ್ತು ದಲಿತರ ಜೊತೆಗೆ ತಹಶೀಲ್ದಾರ್ ಮಾರುತಿ ರವರು, ಗ್ರಾಮದಲ್ಲಿ ಸಭೆ ನಡೆಸಿದ ಬಳಿಕ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಭೀಮ್ ಆರ್ಮಿ ಸಂಘಟನೆ, ಮುಜರಾಯಿ ಇಲಾಖೆ ಸಮ್ಮುಖದಲ್ಲಿ ದಿಂಡಗೂರು ಗ್ರಾಮದ ದಲಿತರು ಗ್ರಾಮದ ದೇವಾಲಯಕ್ಕೆ ಪ್ರವೇಶ ಮಾಡಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಲಕ್ಷ್ಮಣಗೌಡ, ಸರ್ಕಲ್ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ವೀಣಾ, ಭೀಮಾರ್ಮಿ ತಾಲೂಕು ಅಧ್ಯಕ್ಷ ರಾಮಚಂದ್ರ ,ತಾಲೂಕು ಸಂಚಾಲಕ ಜಯಪ್ರಕಾಶ್, ತೀರ್ಥ, ಸಂತೋಷ ನಟರಾಜ್, ದಲಿತ ಮುಖಂಡರಾದ ಗೋವಿಂದರಾಜು ತಿಮ್ಮಯ್ಯ ಮುಂತಾದವರಿದ್ದರು.
ಘಟನೆಯ ಹಿನ್ನಲೆ : ಕೆಲ ತಿಂಗಳ ಹಿಂದೆ ದೇವಸ್ಥಾನ ಹಾಗೂ ಹೊಟೇಲ್ ಪ್ರವೇಶಕ್ಕೆ ದಲಿತರಿಗೆ ನಿರಾಕರಣೆ ಮಾಡಲಾಗಿದೆ ಎಂದು ಗ್ರಾಮದ ದಲಿತ ಮುಖಂಡ ಸಂತೋಷ ಎನ್ನುವವರು ದೂರನ್ನು ನೀಡಿದ್ದರು. ದೂರಿಗೆ ಸ್ಪಂದಿಸಿದ ತಾಲ್ಲೂಕಾಡಳಿತ ದಲಿತರಿಗೆ ಹೊಟೇಲ್ ಪ್ರವೇಶಕ್ಕೆ ಅವಕಾಶ ನೀಡಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ. ದಲಿತರು ತಹಶೀಲ್ದಾರ್ ಸಮ್ಮುಖದಲ್ಲೆ ದೇವಸ್ಥಾನವನ್ನು ಪ್ರವೇಶಿಸಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಆದರೆ ಊರಿನ ಜನ ಸಭೆ ಸೇರೆ ಮುಂದೆ ಏನೂ ಮಾಡಬೇಕು ಎಂದು ಯೋಚಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಈ ಘಟನೆ ಬೂದಿ ಮುಚ್ಚಿದ ಕೆಂಡದಂತಿದೆ.