ಬೆಂಗಳೂರು : ಒಕ್ಕೂಟ ಸರ್ಕಾರವು ಕೊರೊನಾದಿ೦ದಾಗಿ ಮೃತಪಟ್ಟ ವ್ಯಕ್ತಿಗಳ ವಾರಸುದಾರರಿಗೆ 50 ಸಾವಿರ ರೂ.ಗಳು ನೀಡಬೇಕು ಎಂದು ಸೂಚನೆ ನೀಡಿದ್ದರಿಂದ, ರಾಜ್ಯ ಸರ್ಕಾರ ನೀಡುವುದಾಗಿ ಘೋಷಿಸಿದ್ದ 1 ಲಕ್ಷ ರೂ. ಪರಿಹಾರದ ಆದೇಶವನ್ನು ವಾಪಾಸು ಪಡೆದಿದ್ದು, ಪರಿಷ್ಕೃತ ಆದೇಶ ಹೊರಡಿಸಿದೆ.
ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಎಂ. ಎಸ್ ಆದೇಶ ಹೊರಡಿಸಿದ್ದು, ಕೊರೋನಾ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಸಾವಿರಾರು ಜನ ಮೃತಪಟ್ಟಿದ್ದರು. ಈ ವೇಳೆ ಅಂದಿನ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊರೋನಾ ಸೋಂಕಿನಿಂದ ಮೃತರಾದವರ ವಾರಸುದಾರರಿಗೆ 1 ಲಕ್ಷ ರೂ.ಗಳನ್ನು ಪರಿಹಾರ ಧನ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಈ ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ಪರಿಹಾರ ಹಣದ ಆದೇಶವನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹಿಂಪಡೆದಿದ್ದು, ಪರಿಷ್ಕೃತ ಆದೇಶವನ್ನು ಮಂಗಳವಾರ ಹೊರಡಿಸಿದೆ. ರಾಜ್ಯ ಸರ್ಕಾರವು ಜುಲೈ ತಿಂಗಳಲ್ಲಿ, ಕೊರೊನಾದಿಂದಾಗಿ ದುಡಿಯುವ ಸದಸ್ಯರನ್ನು ಕಳೆದುಕೊ೦ಡ೦ತಹ, ಬಡತನ ರೇಖೆಗಿ೦ತ ಕೆಳಗಿರುವ ಕುಟುಂಬಕ್ಕೆ 1 ಲಕ್ಷ ರೂ.ಗಳನ್ನು ಪರಿಹಾರ ನೀಡುವುದಾಗಿ ಘೋಷಿಸಿತ್ತು. ಅದರಂತೆ, ಈ ಹಣವನ್ನು ಅರ್ಹ ಸ೦ತ್ರಸ್ತ ಕುಟುಂಬದ ಕಾನೂನುಬದ್ದ ವಾರಸುದಾರರಿಗೆ ನೀಡುವುದಾಗಿ ಹೇಳಿತ್ತು.
ಆದರೆ, ಒಕ್ಕೂಟ ಸರ್ಕಾರವು ಕೊರೊನಾದಿ೦ದಾಗಿ ಮೃತಪಟ್ಟ ವ್ಯಕ್ತಿಗಳ ವಾರಸುದಾರರಿಗೆ 50 ಸಾವಿರ ರೂ.ಗಳು ನೀಡಬೇಕು ಎಂದು ಸೂಚನೆ ನೀಡಿದ್ದರಿಂದ, ರಾಜ್ಯ ಸರ್ಕಾರ ನೀಡುವುದಾಗಿ ಘೋಷಿಸಿದ್ದ 1 ಲಕ್ಷ ರೂ. ಪರಿಹಾರದ ಆದೇಶವನ್ನು ವಾಪಾಸು ಪಡೆದಿದೆ.
“ಒಕ್ಕೂಟ ಸರ್ಕಾರದ ಗೃಹ ಸಚಿವಾಲಯ ನೀಡಿರುವ ಸೆಪ್ಟೆಂಬರ್ 25 ರ ನಿರ್ದೇಶನದ೦ತೆ, ಕೊರೊನಾದಿಂದಾಗಿ ಮೃತಪಟ್ಟ ವ್ಯಕ್ತಿಯ ಕಾನೂನು ಬದ್ಧ ವಾರಸುದಾರರಿಗೆ 50 ಸಾವಿರ ರೂ. ಪರಿಹಾರ ನೀಡಬೇಕಾಗಿದೆ. ಹೀಗಾಗಿ ರಾಜ್ಯ ಸರ್ಕಾರದಿ೦ದ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿದ್ದು, ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿ ಸೆಪ್ಟೆಂಬರ್ 23 ರಂದು ಹೊರಡಿಸಲಾಗಿದ್ದ ಆದೇಶವನ್ನು ಯಥಾವತ್ತಾಗಿ ಹಿಂಪಡೆಯಲಾಗಿದೆ” ಎಂದು ಮಂಗಳವಾರದ ಆದೇಶದಲ್ಲಿ ತಿಳಿಸಲಾಗಿದೆ.