ಮೈಸೂರು: ಜನರಲ್ಲಿ ಆತ್ಮವಿಶ್ವಾಸ ತುಂಬಲು ಪೊಲೀಸರಿಗೆ ಹೃದಯವಂತಿಕೆ ಬೇಕು, ಕಠಿಣ ನಿರ್ಧಾರಗಳಲ್ಲ. ಪೊಲೀಸರು ಅಂದ ತಕ್ಷಣ ಪುರುಷರು ಅನ್ನುವ ಪರಿಕಲ್ಪನೆ ನಿರ್ಮಾಣವಾಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮಹಿಳಾ ಸಿಬ್ಬಂದಿಯನ್ನು ಪೊಲೀಸ್ ಪಡೆಯಲ್ಲಿ ನೇಮಕಗೊಳ್ಳುವವರು ಹೆಚ್ಚುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ತಿಳಿಸಿದರು.
ಪೊಲೀಸ್ ತರಬೇತಿ ಶಾಲೆ ಜ್ಯೋತಿ ನಗರ ಇಲ್ಲಿ 6ನೇ ತಂಡದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಇದನ್ನು ಓದಿ: ದೆಹಲಿ ಹಿಂಸಾಚಾರ ಆಕಸ್ಮಿಕವಲ್ಲ-ಅದೊಂದು ಪೂರ್ವಯೋಜಿತ ಕೃತ್ಯ: ಹೈಕೋರ್ಟ್
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಮುಂಬರುವ ವರ್ಷಗಳಲ್ಲಿ ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆ ತೆರೆಯಲು ಕ್ರಮಕೈಗೊಳ್ಳಲಾಗುವುದು. ಪ್ರತಿ ಪೊಲೀಸ್ ಠಾಣೆಯಲ್ಲೂ ಮೂವರು ಮಹಿಳಾ ಪೇದೆಯರು ಇರುವಂತೆ ನೋಡಿಕೊಳ್ಳಲಾಗುವುದು ಎಂದರು.
ಮಹಿಳೆ ಅಬಲೆ ಅಂತ ಹೇಳಿದರು, ಯಾಕಾಗಿ ಹೇಳಿದರು ಅಂತ ಈ ಪರೇಡ್ ಸಂದರ್ಭದಲ್ಲಿ ಪ್ರಶ್ನಾರ್ಥಕ ಚಿಹ್ನೆ ನನ್ನಲ್ಲಿ ಮೂಡಿತು. ನಾನು ಅಬಲೆಯಲ್ಲ, ಸಬಲೆ ನನ್ನನ್ನು ನಾನು ರಕ್ಷಣೆ ಮಾಡಿಕೊಂಡು ಸಮಾಜವನ್ನು, ಸಮುದಾಯವನ್ನು ರಕ್ಷಣೆ ಮಾಡುವ ಯೋಗ್ಯತೆ ಪಡೆದಿದ್ದೇನೆಂದು ಎದೆ ತಟ್ಟಿ ಹೇಳುವ ವಾತಾವರಣ ಈ ಪರೇಡ್ ನಿಂದ ತಿಳಿದಯ ಬಂದಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.
ಪೊಲೀಸ್ ಎಂದರೆ ಭಯ ಇರಬಾರದು. ಸಾಮಾನ್ಯ ಜನರಿಗೆ ಪೊಲೀಸ್ ಎಂದರೆ ನಮ್ಮ ರಕ್ಷಕರು ಸ್ನೇಹಿತರು ಎನ್ನುವ ಭಾವನೆ ಇರಬೇಕು. ಅಪರಾಧಿಗಳಿಗೆ, ದರೋಡೆಕೋರರಿಗೆ, ಕಳ್ಳರಿಗೆ ಭಯ ಇರಬೇಕೇ ಹೊರತು ಸಾಮಾನ್ಯರಿಗಲ್ಲ. ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸಿಬ್ಬಂದಿ ಗೌರವಯುತವಾಗಿ ನಡೆದುಕೊಳ್ಳಬೇಕು, ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರಾಜ್ಯದಲ್ಲಿ ಶೀಘ್ರವೇ ಜಾರಿಗೆ ತರಲಾಗುವುದು. ಸಮನ್ಸ್ ಜಾರಿಯ ನಿಯಮವನ್ನು ಬದಲಾವಣೆಗೆ ಮಾಡಲು ಚಿಂತನೆ ನಡೆಸಲಾಗಿದ್ದು, ಖಾಸಗಿಯವರಿಗೆ ಅಥವಾ ಅಂಚೆ ಕಚೇರಿ ಮೂಲಕ ನೀಡಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇದನ್ನು ಓದಿ: ಬಜರಂಗದಳದ ಹಲ್ಲೆಕೋರರ ಮೇಲೆ ಕಠಿಣ ಮೊಕದ್ದಮೆ ಹೂಡಿ ಬಂಧಿಸಿ: ಮುನೀರ್ ಕಾಟಿಪಳ್ಳ
ಮೈಸೂರಿನಲ್ಲಿ ಹೆಚ್ಚಾಗಿ ಗಸ್ತು ತಿರುಗುವ ಕೆಲಸ ಆಗಬೇಕು. ಹಿರಿಯ ಅಧಿಕಾರಿಗಳು ಕೂಡ ರಾತ್ರಿ ಗಸ್ತು ಮಾಡಬೇಕು. ಬೆಳಗ್ಗೆ ಬೇಕಾದರೆ ಎರಡು ಗಂಟೆ ವಿಶ್ರಾಂತಿ ಪಡೆಯಿರಿ. ಇಲ್ಲವಾದರೆ ಅಪರಾಧಗಳನ್ನು ತಡೆಯಲು ಸಾಧ್ಯವಿಲ್ಲ ಮಾದಕ ವಸ್ತುಗಳ ಜಾಲ ಮೈಸೂರು ನಗರದಲ್ಲಿಯೂ ಇದೆ. ಮೈಸೂರು ನಗರದಲ್ಲಿ 104 ಜನರನ್ನು ಬಂಧಿಸಲಾಗಿದೆ. ಮೂರು ವರ್ಷಗಳಲ್ಲಿ 61 ಪ್ರಕರಣಗಳು ದಾಖಲಾಗಿದೆ. ಮೈಸೂರು ನಗರದಲ್ಲಿ ಹುಕ್ಕಾ ಬಾರ್ಗಳು ಹೆಚ್ಚಾಗಿವೆ. ಎಫ್ಐಆರ್ ಮಾಡಿ ಚಾರ್ಜ್ಶೀಟ್ ಹಾಕಿದರೆ ಆಗುವುದಿಲ್ಲ. ಶಿಕ್ಷೆಯ ಪ್ರಮಾಣ ಶೇಕಡಾವಾರು ಕಡಿಮೆಯಿದೆ. ಇದನ್ನು ಹೆಚ್ಚು ಮಾಡುವ ಕಡೆ ಗಮನ ಕೊಡಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.
ಪೊಲೀಸರ ಕಡೆಯಿಂದಲೂ ಇತ್ತೀಚೆಗೆ ಅಪರಾಧ ಹೆಚ್ಚುತ್ತಿವೆ. ಹೀಗಾಗಿ ಪೊಲೀಸರ ವಿರುದ್ಧವೂ ಎಸ್ಪಿ, ಡಿಜಿ ಕಚೇರಿಗಳಲ್ಲಿ ದೂರು ನೀಡಲು ವ್ಯವಸ್ಥೆ ಮಾಡಲಾಗಿದೆ. ಪೊಲೀಸರಿಂದ ಅಪರಾಧಕ್ಕೊಳಗಾದವರು ದೂರು ನೀಡಬೇಕು. ಅದಕ್ಕಾಗಿ ಅಗತ್ಯ ವಾತಾವರಣ ನಿರ್ಮಾಣ ಮಾಡಲು ವ್ಯವಸ್ಥೆ ಮಾಡಿದ್ದೇವೆ. ಅಲ್ಲದೆ, ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇಂದು ನಡೆದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ 242 ಅಭ್ಯರ್ಥಿಗಳಲ್ಲಿ 21 ಅಭ್ಯರ್ಥಿಗಳು ಪಿಯುಸಿ ಮತ್ತು ಉಳಿದ ಎಲ್ಲರೂ ಪದವಿ ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಪೂರೈಸಿದವರಾಗಿದ್ದಾರೆ. ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.