– ವಸಂತರಾಜ ಎನ್.ಕೆ.
ಫ್ರಾನ್ಸ್ ಈ ಘೋಷಣೆಯಿಂದ ಕುಪಿತಗೊಂಡಿದ್ದು, ವಿದೇಶ ಸಚಿವ ಸೇರಿದಂತೆ ಅದರ ವಕ್ತಾರರು ಸಾಮಾನ್ಯವಾಗಿ ರಾಜತಾಂತ್ರಿಕ ಹೇಳಿಕೆಗಳಲ್ಲಿ ಬಳಸದ ಅತ್ಯಂತ ಕಟುವಾದ ಭಾಷೆಯಲ್ಲಿ ಟೀಕಿಸಿದ್ದಾರೆ. ಇದರ ವಿರುದ್ಧ ಪ್ರತಿಭಟನೆಯ ಕ್ರಮವಾಗಿ ಫ್ರಾನ್ಸ್ ಯು.ಎಸ್ ಮತ್ತು ಆಸ್ಟ್ರೇಲಿಯಾ ಗಳಿಂದ ತನ್ನ ರಾಯಭಾರಿಗಳನ್ನು ವಾಪಸು ಕರೆಸಿಕೊಂಡಿದೆ. ಈ ಬೆಳವಣಿಗೆ ಯುರೋ ಕೂಟದ ದೇಶಗಳು ಮಾತ್ರವಲ್ಲದೆ ಭಾರತ, ಜಪಾನ್ ಗಳಿಗೂ ಆಶ್ವರ್ಯ ತಂದಿದೆ. ಅದರಲ್ಲೂ ಇಂಡೋ-ಪೆಸಿಫಿಕ್ ಭದ್ರತೆಗೆಂದೇ (ಅಥವಾ ಚಿನಾ-ವಿರೋಧೀ ಕೂಟ) ಕಟ್ಟಲಾದ ಭಾರೀ ಪ್ರಚಾರ ಪಡೆದ “ಕ್ವಾಡ್” (ಭಾರತ, ಯು.ಎಸ್, ಆಸ್ಟ್ರೇಲಿಯ, ಜಪಾನ್) ಗಳಿರುವ ಯು.ಎಸ್ ನಲ್ಲಿ ಮೊದಲ ಬಾರಿಗೆ ನಡೆಯಲಿರುವ ದೈಹಿಕ ಶೃಂಗಸಭೆಯ ಕೆಲವು ದಿನಗಳ ಮೊದಲು ಈ ಘೋಷಣೆ, ”ಕ್ವಾಡ್” ನಲ್ಲಿ ಯು.ಎಸ್ ಗೆ ವಿಶ್ವಾಸವಿಲ್ಲವೆಂದು ಹೇಳಿದಂತಾಗಿದೆ. ಭಾರತದಲ್ಲಿ ಭಾರೀ ಪ್ರಚಾರ ಪಡೆದಿದ್ದ “ಕ್ವಾಡ್” ಬಹಳ ಮಟ್ಟಿಗೆ ಅರ್ಥ ಕಳೆದುಕೊಂಡಂತಾಗಿದೆ. ಮೋದಿ ಸರಕಾರ ಮತ್ತು ಬಿಜೆಪಿ ಕೊಚ್ಚಿಕೊಳ್ಳುತ್ತಿದ್ದ ಯು.ಎಸ್ ಜತೆಗಿನ “ಘನಿಷ್ಠ ವ್ಯೂಹಾತ್ಮಕ ಸಂಬಂಧ” ಟೊಳ್ಳು ಎಂದು ಸಾಬೀತಾಗಿದೆ.
ಸೆಪ್ಟೆಂಬರ್ 15ರಂದು ಔಕಸ್ (AUKUS) ಎಂಬ ಹೊಸ ಭಧ್ರತಾ ಕೂಟದ ಘೋಷಣೆಯನ್ನು ಯು.ಎಸ್ ಅಧ್ಯಕ್ಷ ಬಿಡೆನ್, ಯು.ಕೆ ಪ್ರಧಾನಿ ಬೊರಿಸ್ ಜಾನ್ಸನ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೊರಿಸನ್ ಜಂಟಿಯಾಗಿ ಆಶ್ಚರ್ಯಕರ ಘೋಷಣೆಯನ್ನು ಮಾಡಿದರು. ಇದು “ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆ”ಯನ್ನು ಕಾಪಾಡಲು “ಹೊಸ ವರ್ಧಿಸಿದ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆ’ ಎಂದು ಅವರು ಹೇಳಿದ್ದಾರೆ. ಚೀನಾವನ್ನು ನಿರ್ದಿಷ್ಟವಾಗಿ ಉಲ್ಲೇಖಿಸದಿದ್ದರೂ ಅದರ ವಿರುದ್ಧ ಇದು ಇನ್ನೊಂದು ಮಿಲಿಟರಿ ಕೂಟವೆಂದು ವ್ಯಾಪಕವಾಗಿ ಭಾವಿಸಲಾಗಿದೆ. ಬಿಬಿಸಿ ಮತ್ತು ಹೆಚ್ಚಿನ ಮಾಧ್ಯಮಗಳು ಇದನ್ನು ಇನ್ನೊಂದು ಚೀನಾ-ವಿರೋಧಿ ಕೂಟವೆಂದು ಕರೆದಿವೆ. ಚೀನಾ ಸಹ ಇದನ್ನು ತನ್ನ ವಿರುದ್ಧ ಮಿಲಿಟರಿ ಒತ್ತಡ ಹಾಕುವ “ಹಳೆಯ ಸವಕಲಾದ ಶೀತಸಮರದ ಮನೋಭಾವ ಮತ್ತು ಸಂಕುಚಿತ ವಿಶ್ವ-ರಾಜಕೀಯ ಗ್ರಹಿಕೆ” ಎಂದು ಟೀಕಿಸಿದೆ.
ಫ್ರಾನ್ಸ್ ಪ್ರತಿಕ್ರಿಯೆ : “ಬೆನ್ನಿನಲ್ಲಿ ಚೂರಿ ಇರಿತ” “ಮಿತ್ರದ್ರೋಹ”
ಇದರ ಜತೆಗೆ ಆಸ್ಟ್ರೇಲಿಯಾಕ್ಕೆ ಯು.ಎಸ್ ಮತ್ತು ಯು.ಕೆ ತಂತ್ರಜ್ಞಾನದ ಮತ್ತು ಜಂಟಿಯಾಗಿ ತಯಾರಿಸಿದ ಅಣು-ಚಾಲಿತ ಸಬ್ ಮರೀನ್ ಗಳ ಒಂದು ಪಡೆಯನ್ನು ಪೂರೈಸುವ ಒಪ್ಪಂದದ ಘೋಷಣೆಯನ್ನೂ ಮಾಡಲಾಯಿತು.. ಇದು ಇನ್ನಷ್ಟು ಆಶ್ಚರ್ಯಕರ ಘೋಷಣೆಯೆಂದು ಭಾವಿಸಲಾಗಿದೆ. ಏಕೆಂದರೆ ಇದರ ಪರಿಣಾಮವಾಗಿ ಆಸ್ಟ್ರೇಲಿಯಾ 2016ರಲ್ಲಿ ಫ್ರಾನ್ಸ್ ಜೊತೆಗೆ ಡಿಸೆಲ್-ವಿದ್ಯುತ್ ಮಾಡಿಕೊಂಡಿದ್ದ ಸಬ್ ಮರೀನ್ ಗಳ ಪಡೆಯ ಖರೀದಿಯ ಒಪ್ಪಂದವನ್ನು ರದ್ದು ಮಾಡಿದೆ. ಈ ಸಬ್ ಮರೀನ್ ಗಳ ಪಡೆಯ ಬೆಲೆ 90 ಶತಕೋಟಿ ಡಾಲರುಗಳು ಎಂದು ಹೇಳಲಾಗಿದೆ. ಅಣು-ಚಾಲಿತವಾಗಿದ್ದು 33 ವರ್ಷಗಳ ಕಾಲ ಯಾವುದೇ ಇಂಧನ-ಪೂರೈಕೆಯಿಲ್ಲದೆ ಚಲಿಸಬಹುದಾದ ಯು.ಎಸ್-ಯುಕೆ ಸಬ್ ಮರೀನ್ ಇದಕ್ಕಿಂತ ಗಮನಾರ್ಹವಾಗಿ ಹೆಚ್ಚು ದುಬಾರಿಯಾಗಿರುತ್ತದೆ ಎನ್ನಲಾಗಿದೆ.
ಫ್ರಾನ್ಸ್ ಈ ಘೋಷಣೆಯಿಂದ ಕುಪಿತಗೊಂಡಿದ್ದು, ವಿದೇಶ ಸಚಿವ ಸೇರಿದಂತೆ ಅದರ ವಕ್ತಾರರು ಸಾಮಾನ್ಯವಾಗಿ ರಾಜತಾಂತ್ರಿಕ ಹೇಳಿಕೆಗಳಲ್ಲಿ ಬಳಸದ ಅತ್ಯಂತ ಕಟುವಾದ ಭಾಷೆಯಲ್ಲಿ ಟೀಕಿಸಿದ್ದಾರೆ. ಫ್ರೆಂಚ್ ಸಬ್ ಮರೀನ್ ಗಳ ಪಡೆಯ ಖರೀದಿಯ ಒಪ್ಪಂದವನ್ನು ರದ್ದು ಮಾಡಿದ್ದು “ಬೆನ್ನಿನಲ್ಲಿ ಚೂರಿ ಇರಿತ” “ಮಿತ್ರದ್ರೋಹ”, “ಸುಳ್ಳು, ಇಬ್ಬಗೆ ನಡವಳಿಕೆ, ಮಹಾ ವಿಶ್ವಾಸಘಾತ, ಮತ್ತು ತಿರಸ್ಕಾರ” ಎಂದು ಫ್ರೆಂಚ್ ವಕ್ತಾರರು ಟೀಕಿಸಿದ್ದಾರೆ. ಇದರ ವಿರುದ್ಧ ಪ್ರತಿಭಟನೆಯ ಕ್ರಮವಾಗಿ ಫ್ರಾನ್ಸ್ ಯು.ಎಸ್ ಮತ್ತು ಆಸ್ಟ್ರೇಲಿಯಾ ಗಳಿಂದ ತನ್ನ ರಾಯಭಾರಿಗಳನ್ನು ವಾಪಸು ಕರೆಸಿಕೊಂಡಿದೆ. ಫ್ರಾನ್ಸ್ ಮಾತ್ರವಲ್ಲದೆ, ಇಡೀ ಪ್ರಕ್ರಿಯೆಯಲ್ಲಿ ಯುರೋ ಕೂಟ ಮತ್ತು ಜಿ-7 ದೇಶಗಳೊಂದಿಗೆ ಪರಾಮರ್ಶೆ ಮಾಡದ್ದು ಆಶ್ವರ್ಯ, ಕೋಪ, ಆತಂಕ ಹುಟ್ಟಿಸಿದೆ. ಔಕಸ್ (AUKUS) ಒಪ್ಪಂದದ ಮಾತುಕತೆ ಜಿ-7 ಸಭೆಯ ತೆರೆಮರೆಯಲ್ಲಿಯೇ ನಡೆಯಿತು ಎಂಬ ವರದಿ ಇನ್ನಷ್ಟು ಕೋಪ ಹುಟ್ಟಿಸಿದೆ.
ಕ್ವಾಡ್, ಭಾರತ, ಜಪಾನ್ ಗೆ ಖೋಕ್?
ಈ ಬೆಳವಣಿಗೆ ಯುರೋ ಕೂಟದ ದೇಶಗಳು ಮಾತ್ರವಲ್ಲದೆ ಭಾರತ, ಜಪಾನ್ ಗಳಿಗೂ ಆಶ್ವರ್ಯ ತಂದಿದೆ. ಅದರಲ್ಲೂ ಇಂಡೋ-ಪೆಸಿಫಿಕ್ ಭದ್ರತೆಗೆಂದೇ (ಅಥವಾ ಚಿನಾ-ವಿರೋಧೀ ಕೂಟ) ಕಟ್ಟಲಾದ ಭಾರೀ ಪ್ರಚಾರ ಪಡೆದ “ಕ್ವಾಡ್” (ಭಾರತ, ಯು.ಎಸ್, ಆಸ್ಟ್ರೇಲಿಯ, ಜಪಾನ್) ಗಳಿರುವ ಯು.ಎಸ್ ನಲ್ಲಿ ಮೊದಲ ಬಾರಿಗೆ ನಡೆಯಲಿರುವ ದೈಹಿಕ ಶೃಂಗಸಭೆಯ ಕೆಲವು ದಿನಗಳ ಮೊದಲು ಈ ಘೋಷಣೆ, ”ಕ್ವಾಡ್” ನಲ್ಲಿ ಯು.ಎಸ್ ಗೆ ವಿಶ್ವಾಸವಿಲ್ಲವೆಂದು ಹೇಳಿದಂತಾಗಿದೆ. ಆ ಮೂಲಕ ಭಾರತ, ಜಪಾನ್ ಗಳನ್ನು ಯು.ಎಸ್ ಲೆಕ್ಕಿಸುವುದಿಲ್ಲವೆಂದು ಸೂಚಿಸಿ ಅವುಗಳಿಗೆ ಅವಮಾನ ಮಾಡಿದಂತಾಗಿದೆ. ಭಾರತದಲ್ಲಿ ಭಾರೀ ಪ್ರಚಾರ ಪಡೆದಿದ್ದ “ಕ್ವಾಡ್” ಬಹಳ ಮಟ್ಟಿಗೆ ಅರ್ಥ ಕಳೆದುಕೊಂಡಂತಾಗಿದೆ. ಮೋದಿ ಸರಕಾರ ಮತ್ತು ಬಿಜೆಪಿ ಕೊಚ್ಚಿಕೊಳ್ಳುತ್ತಿದ್ದ ಯು.ಎಸ್ ಜತೆಗಿನ “ಘನಿಷ್ಠ ವ್ಯೂಹಾತ್ಮಕ ಸಂಬಂಧ” ಟೊಳ್ಳು ಎಂದು ಸಾಬೀತಾಗಿದೆ. ಇದು ಸಾಲದೆಂಬಂತೆ ಯು.ಎಸ್ ನಲ್ಲಿ ಕ್ವಾಡ್ ಸಭೆಯ ಜತೆಗೆ ಇಟ್ಟುಕೊಂಡಿದ್ದ ಭಾರತ, ಆಸ್ಟ್ರೇಲಿಯಾ, ಫ್ರಾನ್ಸ್ “ಇಂಡೊ-ಪೆಸಿಫಿಕ್ ತ್ರಿಪಕ್ಷೀಯ ಸಭೆ”ಯನ್ನು ಫ್ರಾನ್ಸ್ ರದ್ದು ಮಾಡಿದೆ. ಭಾರತ ಈ ಮಾಜಿ-ಹಾಲಿ ಸಾಮ್ರಾಜ್ಯಶಾಹಿ ದೇಶಗಳ ತಿಕ್ಕಾಟದ ಮಧ್ಯ ಭಾರತ ಸಿಕ್ಕು ಬಡವಾಗಿದೆ.
ಬಿಡೆನ್ ಅಫ್ಘಾನಿಸ್ತಾನದಿಂದ ಯು.ಎಸ್ ಮಿಲಿಟರಿ ಹಿಂತೆಗೆತದ ನಂತರ, ಇದು ಭಾರತ ಉಪಖಂಡ ಮತ್ತು ಏಶ್ಯಾದಲ್ಲಿ ಶಾಂತಿ ಕದಡಬಲ್ಲ ಮತ್ತು ಅಭದ್ರತೆಯನ್ನು ಹೆಚ್ಚಿಸಬಲ್ಲ ಪ್ರಮುಖ ಬೆಳವಣಿಗೆ. ಈಗಾಗಲೇ ಬಿಡೆನ್ ಟ್ರಂಪ್ ಆರಂಭಿಸಿದ ಚೀನಾ-ವಿರೋಧೀ ಕ್ರಮಗಳನ್ನು ಇನ್ನಷ್ಟು ತೀವ್ರವಾಗಿ ಮುಂದೊಯ್ಯುವ, ಚೀನಾದ ವಿರುದ್ಧ ಆಕ್ರಾಮಕ ನೀತಿಗಳನ್ನು ಹರಿಯಬಿಡುವ ಮತ್ತು ಚೀನಾ ಈ ಕಾಲಘಟ್ಟದಲ್ಲಿ ಪ್ರಮುಖ ವೈರಿ ಎಂದು ಸ್ಪಷ್ಟ ಪಡಿಸುವ ಮೂಲಕ, ಶೀತಸಮರ 2.0 ನ್ನು ಹೆಚ್ಚು ಕಡಿಮೆ ಈಗಾಗಲೇ ಘೋಷಿಸಿದ್ದಾರೆ. ಈಗಾಗಲೇ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ “ಆಕ್ರಾಮಕ ಚೀನಾವನ್ನು ತಡೆ ಹಿಡಿಯುವ” ಯು.ಎಸ್ ಹೇಳುವ “ಭಧ್ರತೆ ಮತ್ತು ಸ್ಥಿರತೆ”ಯನ್ನು ಕಾಪಾಡಲು (ಈಗಾಗಲೇ ವಿವರಿಸಿರುವ) 4 ದೇಶಗಳ “ಕ್ವಾಡ್” ಭದ್ರತಾ ಕೂಟ ಇದೆ. ಇದಕ್ಕಿಂತ ಮೊದಲು ಸ್ತಾಪಿಸಿದ 5 ದೇಶಗಳ (ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲ್ಯಾಂಡ್, ಯು.ಕೆ, ಯು.ಎಸ್) “ಫೈವ್ ಐಸ್” (Five Eyes) ಜಾಗತಿಕವಾಗಿ ಬೇಹುಗಾರಿಕೆ ಮಾಹಿತಿಯ ಜಾಲವೂ ಇದೆ. ಹಾಗಾದರೆ ತರಾತುರಿಯಲ್ಲಿ ಔಕಸ್ (AUKUS) ಘೋಷಣೆ ಯಾಕೆ?
ಈಗಾಗಲೇ ಹೇಳಿದ ಹಾಗೆ “ಕ್ವಾಡ್” ಕೂಟ ಚೀನಾದ ವಿರುದ್ಧ ಪರಿಣಾಮಕಾರಿಯಾಗಲಿಕ್ಕಿಲ್ಲ ಎಂಬ ಸಂಶಯ ಯು.ಎಸ್ ಗೆ ಇದೆ. ಅಲ್ಲದೆ ಅದು ಪರಿಣಾಮಕಾರಿ ಆಗಬೇಕಾದರೆ ಚೀನಾದ ವಿರುದ್ಧ ಹರಿಯಬಿಡಬೇಕಾದ ಅತ್ಯಂತ ಉನ್ನತ ತಂತ್ರಜ್ಞಾನದ ಅಣ್ವಸ್ತ್ರ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಸಮುಚ್ಚಯಗಳನ್ನು ಭಾರತ ಮತ್ತು ಜಪಾನಿನ ಜತೆ ಹಂಚಿಕೊಳ್ಳಬೇಕು. ಇದನ್ನು ಹಂಚಿಕೊಳ್ಳುವಷ್ಟು ವಿಶ್ವಾಸ ಭಾರತ ಮತ್ತು ಜಪಾನಿನ ಮೇಲೆ ಯು.ಎಸ್ ಗೆ ಇಲ್ಲ. ಇವೆರಡೂ ದೇಶಗಳ ಹಿತಾಸಕ್ತಿ ಮತ್ತು ರಾಜಕೀಯ/ಸಾಮಾಜಿಕ ಪರಿಸ್ಥಿತಿಯಿಂದಾಗಿ ಇವು ಚೀನಾದ ವಿರುದ್ಧ ತನ್ನ ಆಕ್ರಾಮಕ ಕ್ರಮಗಳಲ್ಲಿ ಭಾಗವಹಿಸುವುದು ಮತ್ತು ತನ್ನ ಮಿಲಿಟರಿ-ರಾಜಕೀಯ ಕ್ರಮಗಳನ್ನು ಚಾಚೂ ತಪ್ಪದೆ ಬೆಂಬಲಿಸುವುದು ಸಾಧ್ಯವಾಗಲಿಕ್ಕಿಲ್ಲ ಎಂಬುದು ಯು.ಎಸ್ ನ ಗ್ರಹಿಕೆ, ಅಫ್ಘಾನಿಸ್ತಾನದ ರಾಜಕೀಯ ಭವಿಷ್ಯದ ಮಾತುಕತೆಗಳಲ್ಲಿ, ಮತ್ತು ಆ ದೇಶದಿಂದ ಮಿಲಿಟರಿ ಹಿಂತೆಗೆತದ ನಿರ್ಣಯದಲ್ಲಿ “ಘನಿಷ್ಠ ವ್ಯೂಹಾತ್ಮಕ ಸಂಬಂಧ” ಇರುವ ಭಾರತವನ್ನು ಯು.ಎಸ್ ಪೂರ್ಣವಾಗಿ ಕಡೆಗಣಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ನಾಟೋ, ಯುರೋಕೂಟಕ್ಕೂ ನಿರ್ಲಕ್ಷ
ಇವೆಲ್ಲದರ ಜತೆ ಯು.ಕೆ ಮತ್ತು ಯು.ಎಸ್ ಮಿಲಿಟರಿ ಉದ್ಯಮದ ವ್ಯಾವಹಾರಿಕ ಹಿತಾಸಕ್ತಿಗಳು ಸಹ ಇದರಲ್ಲಿ ದೊಡ್ಡ ಪಾತ್ರ ವಹಿಸಿವೆ ಎಂದು ಹೇಳಲಾಗಿದೆ. ಯು.ಕೆ ಮಿಲಿಟರಿ ಉದ್ಯಮಕ್ಕೆ ಇದು ದೊಡ್ಡ ವ್ಯವಹಾರ. ಯು.ಕೆ ಪ್ರಧಾನಿ ಈ ಘೋಷಣೆಯ ಟೀಕೆಗೆ ಉತ್ತರಿಸುತ್ತಾ, ದೇಶದಲ್ಲಿ ಇದು ಹಲವು ವರ್ಷಗಳ ಕಾಲ ಸಾವಿರಾರು ಜನರಿಗೆ ಉತ್ತಮ ಗುಣಮಟ್ಟದ ಉದ್ಯೋಗ ಕೊಡಲಿದೆ ಎಂದರು. ಅದೇ ರೀತಿಯಲ್ಲಿ ನಾಟೋ ಕೂಟವನ್ನು ಪೂರ್ವಕ್ಕೆ ಅದರ ಗಡಿಯವರೆಗೆ ವಿಸ್ತರಿಸಿ ರಶ್ಯಾವನ್ನು ಸುತ್ತುವರೆದು ಅದರ ಅಪಾಯ ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುದು ಯು.ಎಸ್ ಗ್ರಹಿಕೆ. ಆದ್ದರಿಂದ ನಾಟೋ ಕೂಟದ ಮೂಲಕ ರಶ್ಯಾ ಮತ್ತು ಕ್ವಾಡ್ ಇತ್ಯಾದಿ ಕೂಟದ ಮೂಲಕ ಚೀನಾದ ಮೇಲೆ ಎರಡೂ ಕಡೆ ಒಂದೇ ಸಮಯದಲ್ಲಿ ಮಿಲಿಟರಿ ಆಕ್ರಾಮಕತೆಯ ಸಾಧುವಲ್ಲ, ಅಗತ್ಯವೂ ಇಲ್ಲ. ಬಂಡವಾಳಶಾಹಿ ರಶ್ಯಾಕ್ಕಿಂತ ಸಮಾಜವಾದಿ ಚೀನಾ ದೊಡ್ಡ ಮತ್ತು ನಿಜವಾದ ವೈರಿ. ಆದ್ದರಿಂದ ಚೀನಾದ ಮೇಲೆ ಎಲ್ಲ ಮಿಲಿಟರಿ ಆಕ್ರಾಮಕತೆಯನ್ನು ಕೇಂದ್ರೀಕರಿಸಬೇಕು. ಇತ್ತೀಚಿನ ನಾಟೋ ಶೃಂಗಸಭೆಯಲ್ಲಿ ಸಹ ಬಿಡೆನ್ ಒತ್ತಡದ ಮೇರೆಗೆ ಮೊತ್ತ ಮೊದಲ ಬಾರಿಗೆ ಚೀನಾ ನಾಟೋ ಕೂಟದ ವೈರಿ ಎಂದು ಹೇಳಲಾಯಿತು ಎಂದು ಇಲ್ಲಿ ಗಮನಿಸಬೇಕು.
ಇದಲ್ಲದೆ ಬ್ರೆಕ್ಸಿಟ್ ನಂತರ ಯು.ಎಸ್-ಯುಕೆ ಇನ್ನಷ್ಟು ಹೆಚ್ಚು ಹತ್ತಿರ ಬಂದಿದ್ದು ಯು.ಎಸ್ ನ ಜಾಗತಿಕ ವ್ಯೂಹಾತ್ಮಕ ಲೆಕ್ಕಾಚಾರದಲ್ಲಿ ಮಹತ್ವ ಕಳೆದುಕೊಂಡಿರುವ ಯುರೋ ಕೂಟದ ದೇಶಗಳನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸುತ್ತಿವೆ. ಮಾತ್ರವಲ್ಲದೆ ಚೀನಾದ ಜತೆ ಸಂಘರ್ಷದ ಸಂಬಂಧ ಹೊಂದುವ ಕುರಿತು ಯುರೋ ಕೂಟಕ್ಕೆ ಯು.ಎಸ್ ಜತೆ ಗಂಭೀರ ಭಿನ್ನಾಭಿಪ್ರಾಯವಿದೆ. ಚೀನಾದ ಜತೆ ಸಹಕಾರದಿಂದ ಅದರ ‘ಆಕ್ರಾಮಕತೆ, ಸರ್ವಾಧಿಕಾರಿ ವ್ಯವಸ್ಥೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಸಹನೀಯ ಮಿತಿಯೊಳಗೆ ತರಬಹುದು, ಮತ್ತು ಅದರ ಜತೆ ಪೈಪೋಟಿ ಮಾಡಬೇಕೆ ವಿನಹ ಸಂಘರ್ಷವಲ್ಲ ಎಂಬುದು ಯುರೋ ಕೂಟದ ಸ್ತೂಲ ಅಭಿಪ್ರಾಯ. ಇದು ಯು.ಎಸ್ ಗೆ ಅಪಥ್ಯ. ಹಾಗಾಗಿ ಅದು ಔಕಸ್ (AUKUS) ರಚಿಸುವ ಕುರಿತು ಯುರೋ ಕೂಟದ ಜತೆಗಾಗಲಿ, ಸಬ್ ಮರೀನ್ ವ್ಯವಹಾರದ ಕುರಿತು ಫ್ರಾನ್ಸ್ ನ ಜತೆಗಾಗಲಿ ಪರಾಮರ್ಶೆ ಮಾಡಲಿಲ್ಲ. ಅವನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಯಿತು.
ಶೀತಸಮರ 2.0 ದ ಹೊಸ ರಂಪಕ್ಕೆ ಪ್ರತಿರೋಧದ ಸಾಧ್ಯತೆ
ಔಕಸ್ (AUKUS) ರಚಿಸುವ ಯು.ಎಸ್ ನ ಈ ಶೀತಸಮರ 2.0 ದ ಹೊಸ ರಂಪ ಅಥವಾ ಆಕ್ರಾಮಕ ಕ್ರಮ ಏಶ್ಯಾ ಮತ್ತು ಅಂತಿಮವಾಗಿ ಇಡೀ ವಿನಾಶಕಾರಿ ಯುದ್ಧದತ್ತ ಎಳೆಯುವ ಎಲ್ಲ ಸಾಧ್ಯತೆಗಳಿವೆ. ಫ್ರಾನ್ಸ್, ಯುರೋಕೂಟ, ಭಾರತ, ಜಪಾನ್ ಗಳನ್ನು ನೋಯಿಸುವ, ಕಡೆಗಣಿಸುವ, ಅವಮಾನಿಸುವ ಈ ಕ್ರಮ ಅದರಿಂದಾಗಿ ಗಂಭೀರ ವೈಫಲ್ಯ ಕಾಣುವ ಅಥವಾ ಯು.ಎಸ್ ಗೆ ಬ್ಯೂಮರಾಂಗ್ ಆಗುವ ಸಾಧ್ಯತೆ ಸಹ ಇದೆ. ಯುರೋ ಕೂಟ ತನ್ನ ಭದ್ರತೆಗೆ ತನ್ನದೇ ವ್ಯವಸ್ಥೆ ಹೊಂದಬೇಕೆಂದು ಫ್ರಾನ್ಸ್ ಈಗಾಗಲೇ ವಾದಿಸುತ್ತಿದೆ. ಚೀನಾ ಸಹ ಇದರ ವಿರುದ್ಧ ಪ್ರತಿತಂತ್ರಗಳನ್ನು ಹೂಡಬಹುದು.
ಕೊನೆಯದಾಗಿ ಈ ವಿನಾಶಕಾರಿ ಕ್ರಮದ ಪರಿಣಾಮಗಳು ಗೋಚರಿಸಲಾರಂಭಿಸಿದಾಗ ಅದರ ವಿರುದ್ಧ ಔಕಸ್ ದೇಶಗಳಲ್ಲೇ ಮತ್ತು ಜಾಗತಿಕವಾಗಿ ಶಾಂತಿ ಚಳುವಳಿಯಿಂದ ತೀವ್ರ ವಿರೋಧ-ಪ್ರತಿರೋಧ ಏಳಬಹುದು. ಆಸ್ಟ್ರೇಲಿಯ 1973ರಲ್ಲಿ ಅಣ್ವಸ್ತ್ರ ಪ್ರಸರಣ ನಿಷೇಧ ಮತ್ತು 1985ರಲ್ಲಿ ದಕ್ಷಿಣ ಪೆಸಿಫಿಕ್ ಅಣ್ವಸ್ತ್ರ-ಮುಕ್ತ ವಲಯ ಒಪ್ಪಂದಗಳಿಗೆ ಸಹಿ ಹಾಕಿದೆ. ಇವೆರಡರ ಪ್ರಕಾರ ಅಣ್ವಸ್ತ್ರಗಳನ್ನು ಅದಕ್ಕೆ ಸಂಬಂಧಿಸಿದ ಯಾವುದೇ ಸಾಮಗ್ರಿಗಳನ್ನು ಅದು ತನ್ನ ದೇಶದಲ್ಲಿ ಮತ್ತು ದಕ್ಷಿಣ ಪೆಸಿಫಿಕ್ ಪ್ರದೇಶಧಲ್ಲಿ ಹೊಂದುವಂತಿಲ್ಲ. ಅದು ಈಗ ಖರೀದಿಸುತ್ತಿರುವ ಅಣುಶಕ್ತಿ-ಚಾಲಿತ ಸಬ ಮೇರಿನ್ ಅಣ್ವಸ್ತ್ರ ಕ್ಷಿಪಣಿಗಳನ್ನು ಎಸೆಯುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ ಆಸ್ಟ್ರೇಲಿಯ ಎರಡನೇ ಅತಿ ದೊಡ್ಡ ಯುರೇನಿಯಂ ನಿಕ್ಷೇಪಗಳನ್ನು ಹೊಂದಿದ್ದು, ಅದನ್ನು ಅಣ್ವಸ್ತ್ರಗಳ ತಯಾರಿಯ ಹೊಸ್ತಿಲಲ್ಲಿ ಇರುವ ದೇಶವೆಂದು ಪರಿಗಣಿಸಲಾಗಿದೆ. ಅದು ಯುರೇನಿಯಂ ನ್ನು ಯು.ಎಸ್ ಮತ್ತು ಯು.ಕೆಗಳಿಗೆ ರಫ್ತು ಮಾಡುತ್ತದೆ. ಇವೆಲ್ಲ ಸೇರಿ ಔಕಸ್ (AUKUS) ಈ ಎರಡು ಒಪ್ಪಂದಗಳ ಉಲ್ಲಂಘನೆಯೆಂದೇ ಜಾಗತಿಕ ಶಾಂತಿ ಚಳುವಳಿ ಪರಿಗಣಿಸಲಾಗಿದೆ. ಆಗಲೇ ಯು.ಕೆ ಲೇಬರ್ ನಾಯಕ ಕೊರ್ಬಿನ್ , ಡೆಮೊಕ್ರಾಟಿಕ್ ಪಕ್ಷದ ಎಡಪಂಥೀಯರು ಈ ಕ್ರಮದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.