ನವದೆಹಲಿ: ನ್ಯಾಷನಲ್ ಡಿಫೆನ್ಸ್ ಅಕಾಡೆಮಿ(ಎನ್ಡಿಎ)ಯ ಪರೀಕ್ಷೆಯನ್ನು ಬರೆಯಲು ಬಯಸಿರುವ ಮಹಿಳೆಯರಿಗೆ ಕೂಡಲೇ ಅವಕಾಶವನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಮುಂದಿನ ವರ್ಷದವರೆಗೂ ಕಾಯುವಂತಿಲ್ಲ ಎಂದು ಪುನರುಚ್ಚರಿಸಿರುವ ನ್ಯಾಯಪೀಠವು ಕೂಡಲೇ ಪ್ರಕ್ರಿಯೆಗಳನ್ನು ಆರಂಭಿಸಬೇಕೆಂದು ಸೂಚನೆ ನೀಡಿದೆ.
ಮುಂದಿನ ವರ್ಷದಿಂದ ಮಹಿಳಾ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ. ಪರೀಕ್ಷೆ ಸಂಬಂಧ ಕುಶ್ ಕಲ್ರಾ ಎಂಬುವವರು ಅರ್ಜಿ ಸಲ್ಲಿಸಿದ್ದು, ಅವರ ಪರವಾಗಿ ಹಿರಿಯ ವಕೀಲ ಚಿನ್ಮಯ್ ಪ್ರದೀಪ್ ಶರ್ಮಾ ಅವರು ನ್ಯಾಯಾಲಯದಲ್ಲಿ ಹಾಜರಿದ್ದರು.
ಇದನ್ನು ಓದಿ: ಪೂರ್ವಗ್ರಹ ಮನಸ್ಥಿತಿಯಿಂದ ಹೊರಬನ್ನಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ
ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಸ್ ಕೆ ಕೌಲ್ ನೇತೃತ್ವದ ಪೀಠವು, ಮೇ 2022 ರಲ್ಲಿ ಪರೀಕ್ಷೆಗೆ ಹಾಜರಾದರೆ ಜೂನ್ 2023 ರಲ್ಲಿ ಪ್ರವೇಶಾತಿ ನಡೆಯುತ್ತದೆ. ನಾವು ಒಂದು ವರ್ಷದವರೆಗೆ ವಿಳಂಬ ಮಾಡಲು ಸಾಧ್ಯವಿಲ್ಲ. ನಾವು ಹುಡುಗಿಯರಿಗೆ ಭರವಸೆ ನೀಡಿದ್ದೇವೆ. ನಾವು ಈಗ ಆ ಭರವಸೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೆ, ಈ ವರ್ಷವೇ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ಡಿಎ) ಪರೀಕ್ಷೆ ಬರೆಯಲು ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಆದೇಶಿಸಿದೆ.
ಎನ್ಡಿಎ ಪರೀಕ್ಷೆಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಲು ಸುಪ್ರೀಂಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಆದರೆ ಮಹಿಳೆಯರಿಗೆ ಅವಕಾಶ ನೀಡುವ ಕಾರಣ ಪಠ್ಯವೂ ಸೇರಿ ಪರೀಕ್ಷೆ ಮತ್ತು ತರಬೇತಿ ಮಾದರಿಯಲ್ಲಿ ಹಲವು ಬದಲಾವಣೆ ಮಾಡಿಕೊಳ್ಳಬೇಕಿದ್ದು ಇದಕ್ಕೆ ಕಾಲಾವಕಾಶ ಬೇಕಿದ್ದು ಮಹಿಳಾ ಅಭ್ಯರ್ಥಿಗಳು ಮುಂದಿನ ವರ್ಷದ ಮೇ ನಿಂದ ಪರೀಕ್ಷೆ ಬರೆಯಲು ಸರ್ಕಾರ ಸೂಚಿಸಿತ್ತು. ಇದನ್ನು ಪ್ರಶ್ನೆ ಮಾಡಿ ಹಲವು ಮಂದಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿ: ಮಹಿಳಾ ಲೋಕದೃಷ್ಟಿಯನ್ನು ಒಟ್ಟು ಸಮಾಜದ ಲೋಕದೃಷ್ಟಿಯಾಗಿಸಬೇಕು
ಸಮಸ್ಯೆಗಳು ಅರ್ಥವಾಗುತ್ತದೆ. ಆದರೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ನಿಮಗಿದೆ. ಫಲಿತಾಂಶಗಳನ್ನು ನೋಡಿ, ಯೋಜನೆ ಮುಂದುವರೆಸುವ ಕುರಿತು ನಿರ್ಧಾರ ಕೈಗೊಳ್ಳಬಹುದು. ಆಕಾಂಕ್ಷಿಗಳೇ ಪರೀಕ್ಷೆ ಬರೆಯಲು ಮುಂದೆ ಬರುತ್ತಿರುವಾಗ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಈ ಮನವಿಯನ್ನು ಪರಿಗಣಿಸುವುದು ಕಷ್ಟವಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಪರೀಕ್ಷಾರ್ಥಿಗಳ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡರೇ ಕೇಂದ್ರ ಸರ್ಕಾರದ ಮನವಿ ಒಪ್ಪಲು ಸಾಧ್ಯವಿಲ್ಲ, ಹೀಗಾಗಿ ಸುಪ್ರೀಂಕೋರ್ಟ್ ತನ್ನ ಆದೇಶವನ್ನು ಹಿಂದೆ ಪಡೆಯಲು ಸಾಧ್ಯವಿಲ್ಲ. ಎನ್ಡಿಎ ತನ್ನ ಪ್ರಯತ್ನಗಳನ್ನು ಆರಂಭಿಸಲು ಎಷ್ಟು ಮಹಿಳೆಯರು ಪ್ರವೇಶ ಪಡೆದುಕೊಳ್ಳುತ್ತಾರೆ ಎಂದು ನೋಡೋಣ, ಅವಶ್ಯಕತೆ ಬಿದ್ದರೇ ಮತ್ತೊಮ್ಮೆ ವಿಚಾರಣೆ ನಡೆಸಿ ಸೂಕ್ತ ದಾರಿ ಕಂಡುಕೊಳ್ಳೊಣ ಎಂದು ಪೀಠ ನಿರ್ದೇಶನ ನೀಡಿದೆ.