ಕಾಟಾಚಾರದ ಬ್ಯಾರಿಕೇಡ್ : ರಸ್ತೆ ಗುಂಡಿಗೆ ಬಿದ್ದು ಕಾರ್ಮಿಕ ಸಾವು

ಬೆಂಗಳೂರು : ರಸ್ತೆ ಗುಂಡಿಗೆ ಬಿದ್ದು ಜೀವ ಕಳೆದುಕೊಳ್ಳುವ ಪ್ರಕರಣಗಳಿಗೆ ನಗರದಲ್ಲಿ ಕೊನೆಯೇ ಇಲ್ಲದಾಗಿದೆ. ಹೆಸರುಘಟ್ಟ ಮುಖ್ಯ ರಸ್ತೆಯಲ್ಲಿ ಬೆಂಗಳೂರು ಜಲಮಂಡಳಿಯ ಹೊಣೆಗೇಡಿತನದಿಂದ ಶುಕ್ರವಾರ ರಾತ್ರಿ ಸ್ಕೂಟರ್‌ ಸವಾರನೊಬ್ಬ ಪ್ರಾಣ ಬಿಟ್ಟಿದ್ದಾರೆ.

ದಾಸರಹಳ್ಳಿಯ ಮಲ್ಲಸಂದ್ರ ನಿವಾಸಿ ಆನಂದಪ್ಪ(47) ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ರಸ್ತೆ ಬದಿ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಬೈಕ್ ಸವಾರ ಗುಂಡಿಗೆ ಬೀಳುವ ದೃಶ್ಯ ಸೆರೆಯಾಗಿದೆ.

ಆನಂದಪ್ಪ ಗೌರಿಬಿದನೂರು ಮೂದವರಾಗಿದ್ದು, ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮಲ್ಲಸಂದ್ರ ನಗರದಲ್ಲಿ ವಾಸವಾಗಿದ್ದರು. ಪೀಣ್ಯಾದ ಎಲಿಕಾ ಚಿಮಣಿ ಕಂಪನಿಯಲ್ಲಿ ಮೆಕಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.  ಶುಕ್ರವಾರ ರಾತ್ರಿ ನೈಟ್ ಶಿಫ್ಟ್ ಮುಗಿಸಿಕೊಂಡು ಮನೆಗೆ ವಾಪಾಸ್ ಆಗುವಾಗ ಬೈಕ್ ಸಮೇತ ಗುಂಡಿಗೆ ಬಿದ್ದಿದ್ದು, ಪರಿಣಾಮ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಹೆಸರಘಟ್ಟ ರಸ್ತೆಯ ಭುವನೇಶ್ವರಿ ನಗರದಲ್ಲಿ ಶುಕ್ರವಾರದ ತಡ ರಾತ್ರಿ 11:30ಕ್ಕೆ ಈ ಘಟನೆ ನಡೆದಿದೆ. ಸ್ಥಳದಲ್ಲಿ ಸುರಕ್ಷಿತ ಕ್ರಮ ಅನುಸರಿಸದೆ ನೆಪ ಮಾತ್ರಕ್ಕೆ ಚಿಕ್ಕ ಬ್ಯಾರಿಕೇಡ್ ಹಾಕಿ ನಿರ್ಲಕ್ಷ್ಯ ವಹಿಸಿದ್ದಾರೆ. ಸದ್ಯ ಗುತ್ತಿಗೆದಾರರ ನಿರ್ಲಕ್ಷ್ಯ ಅರೋಪದಡಿ ಪೀಣ್ಯಾ ಸಂಚಾರಿ ಹಾಗೂ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮಗಾರಿ ನಡೆಯುವ ಸ್ಥಳದಿಂದ ಕನಿಷ್ಠ 50 ಮೀಟರ್ ದೂರಕ್ಕೆ ಸೂಚನಾ ಫಲಕ ಅಳವಡಿಸಬೇಕು. ಅಲ್ಲದೆ ರಿಫ್ಲೆಕ್ಟರ್‌ಗಳೊಂದಿಗೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಆದರೆ ಇಲ್ಲಿ ಯಾವುದೇ ರಿಫ್ಲೆಕ್ಟರ್‌ಗಳಿಲ್ಲದಿರುವುದು ಅಪಘಾತಕ್ಕೆ ಆಹ್ವಾನಿಸಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಸಿರುವುದು ಬಿಟ್ಟರೆ ಬೇರೆ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿರುವ ಜಲಮಂಡಳಿ ಗುತ್ತಿಗೆದಾರ ಸಂಸ್ಥೆ ಮೆಗಾ ಎಂಜಿನಿಯರಿಂಗ್‌ ವಿರುದ್ಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಾಲ್ಟ್ ಅಳವಡಿಕೆಗೆ ರಸ್ತೆ ಮಧ್ಯೆಯೇ ದೊಡ್ಡ ಹೊಂಡ ತೆಗೆದಿದ್ದರೂ ಬ್ಯಾರಿಕೇಡ್‌ ಅಳವಡಿಸದ ಕಾರಣ ಈ ಅನಾಹುತ ಸಂಭವಿಸಿದೆ. ಜಲಮಂಡಳಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ನಲವತ್ತೇಳು ವರ್ಷದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಈ ರೀತಿ ರಸ್ತೆಗಳು ಸಾಕಷ್ಟು ಇವೆ. ಬಹಳಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಪ್ರಾಣ ಹೋಗುತ್ತಿದೆ ಎಂದು ಪೀಣ್ಯ ನಿವಾಸಿ ಹುಳ್ಳಿ ಉಮೇಶ್, ಸರಕಾರ ಮತ್ತು ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *