ಬೆಂಗಳೂರು: ವಿಧಾನಸಭಾ ಅಧಿವೇಶನದಲ್ಲಿ ಬೆಲೆ ಏರಿಕೆ ವಿಚಾರದ ಬಗ್ಗೆ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಸಾಕಷ್ಟು ಜಟಾಪಟಿಗೆ ಸಾಕ್ಷಿಯಾಗಿತ್ತು.
ಆಯಿಲ್ ಬಾಂಡ್ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿತ್ತಿದ್ದಂತೆ ಆಡಳಿತ ಪಕ್ಷ ಬಿಜೆಪಿಯ ಸದಸ್ಯರು ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ನಮ್ಮನ್ನು ಕೇಳುತ್ತಾರೆ ಅದಕ್ಕಾಗಿ ನಾವು ಇಲ್ಲಿ ಕೇಳುತ್ತೇವೆ. ಆದರೆ ಸದನದಲ್ಲಿ ಬೆಲೆ ಏರಿಕೆಯ ಅಂಶವನ್ನು ಪ್ರಸ್ತಾಪಿಸಬಾರದೇ? ಎಂದು ಸಿದ್ದರಾಮಯ್ಯ ಈವೇಳೆ ಪ್ರಶ್ನಿಸಿದರು.
ಕನಿಷ್ಠ 20 ದಿನವಾದರೂ ಅಧಿವೇಶನ ನಡೆಸಬೇಕಾಗಿದೆ. ಇಲ್ಲದಿದ್ದರೆ ವಿಷಯ ಪ್ರಸ್ತಾಪ ಮಾಡುವುದಕ್ಕೆ ಸಮಯವೇ ಸಿಗುವುದಿಲ್ಲ. ನಿಮ್ಮ ನಿರ್ಲಕ್ಷ್ಯದಿಂದ ವಿಧಾನಸಭೆ ಮಹತ್ವ ಹೋಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಧರಣಿ ನಡೆಸಿದ ನಮ್ಮನ್ನು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಆದರೆ ವಾಜಪೇಯಿಯವರು ಪಾರ್ಲಿಮೆಂಟ್ಗೆ ಎತ್ತಿನಗಾಡಿಯಲ್ಲಿ ಬಂದಿದ್ದರು. ಆಗ ಪೆಟ್ರೋಲ್ ಬೆಲೆ 7 ಪೈಸೆ ಮಾತ್ರ ಏರಿಕೆಯಾಗಿತ್ತು. 7 ಪೈಸೆ ಹೆಚ್ಚಾಗಿದ್ದಕ್ಕೆ ಎತ್ತಿನಗಾಡಿಯಲ್ಲಿ ಬಂದಿದ್ದರು. ಆಗ ‘ಕ್ರಿಮಿನಲ್ ಲೂಟ್’ ಎಂದು ವಾಜಪೇಯಿ ಹೇಳಿದ್ದರು. ಈಗ ನಾನು ಯಾವ ಪದ ಬಳಸಬೇಕು ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಬಿಜೆಪಿಯನ್ನು ವ್ಯಂಗ್ಯ ಮಾಡಿದರು.
ಇದು ಪಾರ್ಲಿಮೆಂಟ್ ಅಲ್ಲ : ನಿಯಮ 69ರ ಅಡಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಡೀಸೆಲ್, ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸುತ್ತಾ ಯುಪಿಎ ಸರ್ಕಾರದಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವ ಅಬಕಾರಿ ಸೆಸ್ ವಿಚಾರವನ್ನು ಪ್ರಸ್ತಾಪಿಸುತ್ತಿದ್ದರು.
ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ ಅವರು, ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದೀರಿ. ನಮಗೇನೂ ಸಂಬಂಧವಿಲ್ಲ. ನೀವು ಪಾರ್ಲಿಮೆಂಟ್ಗೆ ಹೋಗಿದ್ದಿರೇನೋ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿ, ಡೀಸೆಲ್, ಪೆಟ್ರೋಲ್ ದರ ಏರಿಕೆ ವಿಚಾರ ಪ್ರಸ್ತಾಪಿಸುತ್ತಿರುವುದಕ್ಕೆ ಆಕ್ಷೇಪಿಸಿದರು.
ಕೇಂದ್ರ ಸರ್ಕಾರದ ನೀತಿ, ಧೋರಣೆ, ತೀರ್ಮಾನಗಳನ್ನು ಶಾಸನಸಭೆಯಲ್ಲಿ ಚಿರ್ಚಿಸಬಹುದೇ? ನಾವು ಹೇಗೆ ಉತ್ತರ ಹೇಳಬೇಕು ಎಂದು ಆಕ್ಷೇಪಿಸಿದರು. ಅಷ್ಟರಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಾತನಾಡಲು ಮುಂದಾದಾಗ ಆಡಳಿತ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಏರಿದ ದನಿಯಲ್ಲಿ ವಾಗ್ವಾದ ನಡೆಯಿತು. ಪರಸ್ಪರ ಮಾತನಾಡಲು ಹಲವು ಸದಸ್ಯರು ಎದ್ದುನಿಂತಿದ್ದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಗದ್ದಲದ ನಡುವೆಯೇ ಮಾತನಾಡಿದ ಸುಧಾಕರ್ ಅವರು, ಈ ವಿಚಾರವನ್ನು ನೀವು ಲೋಕಸಭೆಯಲ್ಲಿ ಪ್ರಸ್ತಾಪಿಸಬೇಕಿತ್ತು. ಇಲ್ಲಿ ಅಪ್ರಸ್ತುತ ಎಂದು ಕಾನೂನು ಸಚಿವರೇ ಹೇಳಿದ್ದಾರೆ. ನೀವು ಪ್ರಸ್ತಾಪಿಸಿದ ವಿಚಾರಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾರೆ. 1.44 ಲಕ್ಷ ಕೋಟಿ ರೂ. ಬಾಂಡ್ 2005-06ರಿಂದ ನೀಡಲಾಗಿದೆ. ವಾಸ್ತವಾಂಶಗಳನ್ನು ನಾವು ಹೇಳಬೇಕು. ಬೆಲೆ ಏರಿಕೆ ಪ್ರಕ್ರಿಯೆ ನಿರಂತರ ಪ್ರಕ್ರಿಯೆ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.
ಆಗ ಸಿದ್ದರಾಮಯ್ಯ ನಾವು ಕೇಂದ್ರ ಸರ್ಕಾರದ ಮೇಲೆ ಆರೋಪಿಸುತ್ತಿಲ್ಲ. ಬೆಲೆ ಏರಿಕೆ ಸಂಬಂಧಿಸಿದ ವಾಸ್ತಾವಾಂಶಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಸಿಮೆಂಟ್ ಬೆಲೆ ಏರಿಕೆಯಾಗಿದೆ. ಆ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸದಿದ್ದರೆ ಜನರು ನಮ್ಮನ್ನು ಪ್ರಶ್ನಿಸುತ್ತಾರೆ ಎಂದರು. ಅಷ್ಟರಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎರಡೂ ಕಡೆ ಎದ್ದು ನಿಂತು ಮಾತನಾಡುತ್ತಿದ್ದ ಸದಸ್ಯರನ್ನು ಸಮಾಧಾನಪಡಿಸಿ ಕೂರಿಸಿದರು. ಆದರೂ ಮತ್ತೆ ಮತ್ತೆ ಆಡಳಿತ ಮತ್ತು ಕಾಂಗ್ರೆಸ್ ಸದಸ್ಯರ ನಡುವಿನ ಮಾತಿನ ಚಕಮಕಿ ಮುಂದುವರದೇ ಇತ್ತು.