ಶಿಕ್ಷಣದ ಆಶಯಕ್ಕೆ ಮಾರಕವಾಗುವ ಪಠ್ಯಪುಸ್ತಕ ತಿದ್ದುಪಡಿ: ಎಐಡಿಎಸ್‌ಓ ಖಂಡನೆ

ಬೆಂಗಳೂರು: ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಪಠ್ಯಪುಸ್ತಕಗಳಲ್ಲಿ ಕೆಲವು ಪಾಠಗಳನ್ನು ಕಡಿತಗೊಳಿಸಲು ಪರಿಶೀಲನಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮವನ್ನು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ(ಎಐಡಿಎಸ್‌ಓ) ಖಂಡಿಸಿದೆ.

ರಾಜ್ಯ ಸರ್ಕಾರದ ಸುತ್ತೋಲೆ (17 ಫೆಬ್ರವರಿ 2021) ಅನ್ವಯ, 6ನೇ ತರಗತಿ ಸಮಾಜ ವಿಜ್ಞಾನ ವಿಭಾಗ 1ರಲ್ಲಿನ ಪಾಠ 7 ‘ಹೊಸ ಧರ್ಮಗಳ ಉದಯ’ ದ ಪುಟ 82, 83ರನ್ನು ಕೈಬಿಡಲು ಸೂಚಿಸಲಾಗಿದೆ. ವೈದಿಕ ಧರ್ಮಗಳಲ್ಲಿದ್ದ ದೋಷಗಳಿಂದಾಗಿಯೇ ಹೊಸ ಧರ್ಮಗಳು ಉದಯವಾದವು ಎಂಬ ಸಾರಾಂಶವಿದ್ದ ಈ ಪಾಠವನ್ನು ಸಂಪೂರ್ಣ ಕಿತ್ತು ಹಾಕಲು ಆದೇಶ ನೀಡಿರುವುದು ರಾಜ್ಯ ಸರ್ಕಾರದ ಅತ್ಯಂತ ಅಪ್ರಜಾತಾಂತ್ರಿಕ ಮತ್ತು ಅವೈಜ್ಞಾನಿಕ ಧೋರಣೆಯೆಂದು ಎಐಡಿಎಸ್‌ಓ ತಿಳಿಸಿದೆ.

ಇದನ್ನು ಓದಿ: ಸಮಗ್ರವಾಗಿ ಚರ್ಚಿಸದೆ ತರಾತುರಿಯಲ್ಲಿ ನೂತನ ಶಿಕ್ಷಣ ನೀತಿ

ಇಂತಹುದೇ ಪ್ರಸ್ತಾವನೆಗಳು ಹಿಂದಿನ ಮಂತ್ರಿಮಂಡಲ ಇದ್ದಾಗಿಯೂ ಬಂದಿತ್ತು. ಆದರೆ, ಜನಸಾಮಾನ್ಯರು, ಇತಿಹಾಸಕಾರರು, ವಿಜ್ಞಾನಿಗಳ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಅದನ್ನು ಜಾರಿಗೊಳಿಸದೆ ಹಿಂಪಡೆದಿದ್ದರು. ಈಗ ನೂತನ ಮಂತ್ರಿಮಂಡಲ ರಚನೆಯಾಗುತ್ತಿದ್ದಂತೆಯೇ, ಯಾವ ಗಣ್ಯರ ಅಭಿಪ್ರಾಯಕ್ಕೂ ಗೌರವ ಕೊಡದೇ ಪಠ್ಯಪುಸ್ತಕ ಪರಿಶೀಲನೆಗೆ ಮುಂದಾಗಿರುವುದು ಅತ್ಯಂತ ಹೇಯ ಕೃತ್ಯ ಎಂದು ಸಂಘಟನೆಯು ಆರೋಪಿಸಿದೆ.

ಸರಕಾರದ ಕ್ರಮದ ವಿರುದ್ಧ ಹೇಳಿಕೆ ನೀಡಿರುವ ಎಐಡಿಎಸ್‌ಓ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು ಒಂದು ಸಮಗ್ರ ಪಠ್ಯದಲ್ಲಿ ಹಲವು ಐತಿಹಾಸಿಕ ಸತ್ಯಗಳು, ವೈಜ್ಞಾನಿಕ ಸತ್ಯಗಳು ಇರಲೇಬೇಕು. ಸತ್ಯವನ್ನು ಮಕ್ಕಳಿಗೆ ಹೇಳಬೇಕು ಮತ್ತು ಇದು ದಶಕಗಳಿಂದಲೂ ನಡೆದು ಬಂದಿರುವ ಪರಿಪಾಠ. ವೇದಗಳಲ್ಲಿ ಕೆಲವು ಧನಾತ್ಮಕ ಅಂಶಗಳೊಂದಿಗೆ, ನ್ಯೂನತೆಗಳು ಸಹ ಇದ್ದವು ಎಂಬುದು ಒಂದು ಐತಿಹಾಸಿಕ ಸತ್ಯ. ಈ ನ್ಯೂನತೆಗಳನ್ನು ಹಲವು ವಿಜ್ಞಾನಿಗಳು, ಬರಹಗಾರರು, ಇತಿಹಾಸಕಾರರು, ಅಷ್ಟೇ ಏಕೆ ಮಹಾನ್ ಹಿಂದೂ ಧಾರ್ಮಿಕ ವ್ಯಕ್ತಿಯಾಗಿದ್ದ ಸ್ವಾಮಿ ವಿವೇಕಾನಂದರು ತೋರಿಸಿದ್ದಾರೆ. ಪಠ್ಯಪುಸ್ತಕದಲ್ಲಿ ಹೇಳಲಾಗಿರುವ ಸತ್ಯ ಆಳುವ ವರ್ಗಕ್ಕೆ ಅಥವಾ ಸಂಘಪರಿವಾರದ ವಿಚಾರಗಳಿಗೆ ವಿರುದ್ಧವಾಗಿದೆ ಅಥವಾ ಕೆಲವರ ಭಾವನೆಗೆ ನೋವುಂಟಾಗುತ್ತದೆ ಎಂಬ ನೆಪವೊಡ್ಡಿ, ಪಠ್ಯಪುಸ್ತಕವನ್ನು ತಿರುಚುವ ಹುನ್ನಾರ ಇದಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಕೋಮುವಾದಿ ವಿಚಾರಕ್ಕೆ ಅನುಗುಣವಾಗಿ ಪಠ್ಯಪುಸ್ತಕವನ್ನು ತಿರುಚಿ, ಕೋಮುವಾದಿ ವಿಷಬೀಜ ಬಿತ್ತಿ, ವಿದ್ಯಾರ್ಥಿಗಳಲ್ಲಿ ಕುರುಡು ನಂಬಿಕೆ, ಅಂಧಶ್ರದ್ಧೆ ಬೆಳೆಸಿ, ಜನಗಳ ಐಕ್ಯತೆ, ಸಾಮರಸ್ಯ ಹಾಗು ಬಹುಮುಖ್ಯವಾಗಿ ವೈಜ್ಞಾನಿಕ ಚಿಂತನೆಯ ಮೇಲೆ ಗಧಾಪ್ರಹಾರ ಮಾಡುತ್ತಿದೆ.

ಇದನ್ನು ಓದಿ: ಹಿಂದಿ ದಿವಸ್ ಆಚರಣೆ ನಮಗೆ ಬೇಡ

ನಮ್ಮ ದೇಶದ ನವೋದಯ ಚಿಂತಕರಾದ ಈಶ್ವರಚಂದ್ರ ವಿದ್ಯಾಸಾಗರರು, ರಾಜಾರಾಮ್ ಮೋಹನ್‌ರಾಯ್, ಸಮಾಜ ಸುಧಾರಕರಾದ ಜ್ಯೋತಿಬಾ ಫುಲೆ, ಸಾವಿತ್ರಿಬಾ ಫುಲೆ ಮುಂತಾದವರು ಹಾಗು ಕರ್ನಾಟಕದಲ್ಲಿ ಕುವೆಂಪು, ಎ.ಎನ್.ಮೂರ್ತಿರಾಯರು, ಜಿ.ಎಸ್.ಶಿವರುದ್ರಪ್ಪ, ಗೋಪಾಲಕೃಷ್ಣ ಅಡಿಗರು, ಕುದ್ಮಲ್ ರಂಗರಾಯರು ಮುಂತಾದವರು ವೈಜ್ಞಾನಿಕ-ಧರ್ಮನಿರಪೇಕ್ಷ-ಪ್ರಜಾತಾಂತ್ರಿಕ ಶಿಕ್ಷಣದ ಆಶಯವನ್ನು ಎತ್ತಿ ಹಿಡಿದಿದ್ದರು. ಈಗಿನ ರಾಜ್ಯ ಸರ್ಕಾರವು ಇಂತಹ ಮಹಾನ್ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿದೆ. ಇದು ಫ್ಯಾಸೀವಾದಿ, ಅಪ್ರಜಾತಾಂತ್ರಿಕ ನಿಲುವು ಮಾತ್ರವಲ್ಲದೆ, ವೈಜ್ಞಾನಿಕ, ಧರ್ಮನಿರಪೇಕ್ಷವಾಗಿದ್ದು, ಶಿಕ್ಷಣಕ್ಕೆ ಮಾರಕವಾಗಿದೆ.

ಈ ಕೂಡಲೇ ರಾಜ್ಯ ಸರ್ಕಾರ ಬೇಷರತ್ತಾಗಿ ತನ್ನ ನಿರ್ಧಾರವನ್ನು ಹಿಂಪಡೆಯಬೇಕು. ಇಂತಹ ನಿರ್ಧಾರವನ್ನು ಶಿಕ್ಷಣ ಪ್ರೇಮಿ ಜನತೆ, ವಿದ್ಯಾರ್ಥಿಗಳು, ಜನಸಾಮಾನ್ಯರು ಅತ್ಯಂತ ಉಗ್ರವಾಗಿ ಖಂಡಿಸಬೇಕು ಹಾಗು ಐತಿಹಾಸಿಕ-ವೈಜ್ಞಾನಿಕ ಸತ್ಯಗಳನ್ನು ಅನಾವರಣಗೊಳಿಸುವ ಪಠ್ಯಪುಸ್ತಕಗಳನ್ನು ಕೋಮುವಾದಿಕರಣಗೊಳಿಸಲು ಬಿಡಬಾರದು ಎಂದು ಎಐಡಿಎಸ್‌ಓ ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *