ಚುನಾವಣಾ ರಾಜ್ಯಗಳಲ್ಲಿ……. ಥ್ಯಾಂಕ್ಯು ಬರ್ತ್ ಡೇ

ವೇದರಾಜ ಎನ್‌ ಕೆ

ಸೆಪ್ಟೆಂಬರ್ 5 ರ ಮುಝಪ್ಪರ್ ನಗರ ‍ಮಹಾಪಂಚಾಯ್ತ್ ಮತ್ತು ಅದಾದ ಒಂದು ವಾರದಲ್ಲಿ ಇನ್ನೊಂದು ಸದ್ಯದಲೇ ಚುನಾವಣೆಗೆ ಹೋಗಲಿರುವ ರಾಜ್ಯದಲ್ಲಿ, ಮುಖ್ಯಮಂತ್ರಿಯ ಬದಲಾವಣೆ ‘ಮಾದರಿ’, ಇವೆರಡರ ನಡುವೆ ಮೂರು ವಾರಗಳ ಪ್ರಧಾನಿ ಜನ್ಮದಿನ ಅಭಿಯಾನದ ನಿರ್ಧಾರ ಈ ವಾರ ವ್ಯಂಗ್ಯಚಿತ್ರಕಾರರ ಗಮನ ಸೆಳೆದ ಮುಖ್ಯಸಂಗತಿಗಳು… ಆದರೆ ಎರಡು ವೆಬ್‍ ಪತ್ರಿಕೆಗಳ ಮೇಲೆ ಆದಾಯ ತೆರಿಗೆ ‘ಸರ್ವೆ’(!) ಮತ್ತು ತ್ರಿಪುರಾದಲ್ಲಿ ಐದು ಮಾಧ್ಯಮ ಸಂಸ್ಥೆಗಳ ಮೇಲೆ ಹಿಂಸಾಚಾರ ಕೆಲವೇ ವ್ಯಂಗ್ಯಚಿತ್ರಕಾರರ ಗಮನ ಸೆಳೆದಂತೆ ಕಾಣುತ್ತದೆ.

ಮಿಕಾ ಅಝೀಝ್, ಫೇಸ್‍ ಬುಕ್

ಉತ್ತರಪ್ರದೇಶದ ಮುಝಫ್ಫರ್ ನಗರದ ಕಿಸಾನ್‍-ಮಜ್ದೂರ್ ಮಹಾಪಂಚಾಯತ್‍ನಲ್ಲಿ 10ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ಅಲ್ಲಿ ಕೇಳಬಂದ ಭಾಷಣಗಳು, 9ತಿಂಗಳಿಂದ ನಡೆಯುತ್ತಿರುವ ಆಂದೋಲನ ಈಗ ಕೇವಲ ರೈತರ ಆಂದೋಲನವಷ್ಟೇ ಆಗಿ ಉಳಿದಿಲ್ಲ, ವ್ಯಾಪಕ ಸ್ವರೂಪ ಪಡೆಯುತ್ತಿದೆ ಎಂದು ಪ್ರಜಾಪ್ರಭುತ್ವವಾದಿಗಳಿಗೆ ಹರ್ಷ ತಂದಿದ್ದರೆ, ಇನ್ನು ಕೆಲವರಿಗೆ ಇದರಲ್ಲಿ ಚುನಾವಣಾ ರಾಜಕೀಯದ ವಾಸನೆ ಹೊಡೆದಿದೆ. ಮೂರು ಕೃಷಿ ಕಾಯ್ದೆಗಳನ್ನು ತಂದಿರುವುದೇ ಒಂದು ರಾಜಕೀಯ ಕೃತ್ಯವಾಗಿರುವಾಗ ಅದರ ವಿರುದ್ದ ಹೋರಾಟವೂ ರಾಜಕೀಯವಾದರೆ, ಅದರಲ್ಲೂ ಚುನಾವಣಾ ರಾಜಕೀಯ ಬಣ್ಣ ಪಡೆದರೆ ತಪ್ಪೇನು ಎಂದು ಮತ್ತೆ ಕೆಲವರು ಕೇಳುತ್ತಿದ್ದಾರೆ, ಇದರಲ್ಲಿ ರೈತರೂ, ಕಾರ್ಮಿಕರೂ ಸೇರಿದ್ದಾರೆ.

ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ “ಮಿಷನ್ ಉತ್ತರಪ್ರದೇಶ-ಉತ್ತರಾಖಂಡ” ಆರಂಭಿಸುವುದಾಗಿ ಹೇಳಿದ್ದಾರೆ.

“ಅವರು ನಮಗೆ ಕಿವಿಗೊಡದಿದ್ದರೆ,
ನೀವು  ಬೀಳುವಂತೆ ಮಾಡ್ತೇವೆ!”

ಅಲೋಕ್ ನಿರಂತರ್, ಸಕಾಳ್‍ ಮಾಧ್ಯಮ ಗುಂಪು

***

ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಮುಖ್ಯಮಂತ್ರಿಗಳೂ ಸೇರಿದಂತೆ ಆಳುವ ಮುಖಂಡರ ಬಾಯಿಂದ ಕೇಳಬರುತ್ತಿರುವ ಮಾತುಗಳಿಗೆ ತದ್ವಿರುದ್ಧವಾಗಿ,  8 ವರ್ಷಗಳ ಹಿಂದೆ ನಡೆದ ಭೀಕರ ಕೋಮು ಹಿಂಸಾಚಾರ ನಡೆದ  ಜಾಗದಲ್ಲೇ  ಅಲ್ಲಾಹು ಅಕ್ಬರ್ , ಹರಹರ ಮಹಾದೇವ್ ಮತ್ತು ಸತ್‍ಶ್ರೀ ಅಕಾಲ್‍ ಘೋಷಣೆಗಳು ಏಕಕಂಠದಲ್ಲಿ  ಕೇಳಬಂದದ್ದು, ಜತೆಗೆ ರೈತರು ಇನ್ನು ಮುಂದೆ ಕೋಮುವಾದಕ್ಕೆ ಬಲಿಯಾಗುವುದಿಲ್ಲ ಎಂಬ ಮಾತೂ ಮತ್ತೆ-ಮತ್ತೆ ಕೇಳಬಂದದ್ದು ಕೂಡ ಪ್ರಜಾಪ್ರಭುತ್ವವಾದಿಗಳಿಗೆ ಹರ್ಷ ತಂದಿದೆ,

ಪಿ.ಮಹಮ್ಮದ್, ವಾರ್ತಾಭಾರತಿ

***

ಈ ನಡುವೆ ಕಾರ್ಪೊರೇಟ್‍ ಮಾಧ್ಯಮಗಳ ‘ಒಪೀನಿಯನ್ ‍ಪೋಲ್‍’ ಗಳು ಕಳೆದ ಬಾರಿಯಂತೆ ಈ ಬಾರಿಯೂ ಭಾರೀ ಕೇಸರಿಗೆ ಬಹುಮತದ ಕಣಿ ಹೇಳುತ್ತಿವೆ. 2019ರಲ್ಲಿ ಅಚ್ಛೇದಿನ್‍ ಗಳ ಕತೆ-ವ್ಯಥೆಯ ಬಗ್ಗೆ ಏನೇ ಟೀಕೆ ಮಾಡಿದರೂ ‘ಆಯೇಗಾ ತೋ ಮೋದೀ ಹೀ’ ಎಂಬುದು ನಿಜವಾಗಲಿಲ್ಲವೇ?

ಆಯೇಗಾ ತೊ ಯೋಗೀ ಹೀ”
ಸತೀಶ ಆಚಾರ್ಯ, ಫೇಸ್‍ಬುಕ್

ಆದರೆ  ರೈತರ ಈ ಮಿಷನ್‍, ಬಾಬ್ರಿ ಮಸೀದಿಯ ಮೇಲೆ ಹತ್ತಿ ಅದನ್ನು ನೆಲಸಮಗೊಳಿಸಿದ ಪ್ರದೇಶದಲ್ಲಿ ಈ ಬಾರಿ  ಕೇಸರಿ ಚುನಾವಣಾ ವಿಜಯ ಸ್ತಂಭವನ್ನು ಒಡೆದು ಹಾಕಬಹುದೇ? ಬಹುಶಃ ಇಷ್ಟು ಬೇಗನೇ ಹೇಳಲು ಸಾಧ್ಯವಿಲ್ಲ.

***

ಆದರೂ  ಅಂತಹ ಭಯ ಆಳುವವರಿಗೆ ಇಲ್ಲವೆಂದೇನಲ್ಲ. ಆದ್ದರಿಂದ ಅದಕ್ಕೆ ಪ್ರತಿ ಕಾರ್ಯತಂತ್ರ ಹೆಣೆಯಲಾಗುತ್ತಿದೆ ಎನ್ನುತ್ತಾರೆ ವಿಶ್ಲೇಷಕರು. ನಿಜ, ಅದರಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಆಪ್ಶನ್ ಸದ್ಯಕ್ಕಂತೂ ಇಲ್ಲ. ಈ ವ್ಯಂಗ್ಯಚಿತ್ರಕಾರರು ಹಿಂದಿನ ಅನುಭವಗಳಿಂದ ಬೇರೊಂದು ಉಪಾಯ ಸೂಚಿಸಿದ್ದಾರೆ.

“……ಸದ್ಯಕ್ಕೆ ಮುಝಫ್ಫರ್ ನಗರಕ್ಕೆ ಹೊಸ ಹೆಸರುಗಳ
ಸೂಚನೆಗಳನ್ನು ಆಹ್ವಾನಿಸೋಣವೇ?”

ಶೇಖರ್ ಗುರೇರ, ಕಾರ್ಟೂನಿಸ್ಟ್ಸ್ ಕ್ಲಬ್‍ ಆಫ್ ಇಂಡಿಯ

***

ಆರು ತಿಂಗಳಲ್ಲಿ ಐದು ಮುಖ್ಯಮಂತ್ರಿಗಳು

ಇದೇ ವೇಳೆಯಲ್ಲಿ, ವಿಧಾನಸಭಾ ಚುನಾವಣೆಗಳು ಸದ್ಯದಲ್ಲೇ ನಡೆಯಬೇಕಾಗಿರುವ ಗುಜರಾತಿನಲ್ಲಿ ಮುಖ್ಯಮಂತ್ರಿಗಳು “ರಾಜ್ಯದ ಹಿತದೃಷ್ಟಿʼʼಯಿಂದ ರಾಜೀನಾಮೆ ಕೊಟ್ಟ ಸುದ್ದಿ ಬಂದಿದೆ. ಇವರು ಕಳೆದ ಆರು ತಿಂಗಳಲ್ಲಿ ರಾಜೀನಾಮೆ ‘ನೀಡಿದ’ ಐದನೇ ಬಿಜೆಪಿ ಮುಖ್ಯಮಂತ್ರಿಗಳು ಎನ್ನಲಾಗಿದೆ. ಈ ಐವರಲ್ಲಿ ಒಬ್ಬರು ನಮ್ಮ ರಾಜ್ಯದವರು. ಇಬ್ಬರು ಉತ್ತರಾಖಂಡದವರು- ಸದ್ಯದಲ್ಲೇ ಚುನಾವಣೆ ನಡೆಯುವ ಮತ್ತೊಂದು ರಾಜ್ಯ.

ಇಲ್ಲಿಯೂ ಒಂದು ಪರ್ಯಾಯದ ಸೂಚನೆಯನ್ನು ಈ ವ್ಯಂಗ್ಯಚಿತ್ರಕಾರರು ಮುಂದಿಟ್ಟಿದ್ದಾರೆ:

ಮತ್ತೆ-ಮತ್ತೆ ಮುಖ್ಯಮಂತ್ರಿಗಳನ್ನು ಬದಲಿಸುವ ಬದಲು
ಅವರ ಮರುನಾಮಕರಣ ಮಾಡಿ ಮುಂದುವರೆಯಬಹುದಲ್ಲವೇ?

ಆರ್.ಪ್ರಸಾದ್, ಇಕನಾಮಿಕ್‍ ಟೈಮ್ಸ್

***

ಆದರೆ ಇದು ಅಷ್ಟು ಸರಳವಲ್ಲ…

ಕಳೆದ ವಾರವಷ್ಟೇ ಸ್ಥಳೀಯ ಗುಜರಾತಿ ಪತ್ರಿಕೆಯಲ್ಲಿ ರಾಜ್ಯದಲ್ಲಿ 5 ಕೋಟಿ ಲಸಿಕೆಗಳನ್ನು ಕೊಡಲಾಗಿದೆ ಎಂದು ಮುಖ್ಯಮಂತ್ರಿಗಳ ಸಾಧನೆಯ ಬಗ್ಗೆ ಎಂಟು ಕಾಲಂ ಶಿರೋನಾಮೆಯ ಸುದ್ದಿ ಪ್ರಕಟವಾಗಿದ್ದರೂ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಬಹಳಷ್ಟು ಟೀಕೆಗಳು ಬಂದಿರುವ  ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗಳಲ್ಲಿ ಇದೊಂದು ಚರ್ಚಾವಿಷಯವಾಗದಂತೆ ತಡೆಯಲು ಈ ಬದಲಾವಣೆ ಎನ್ನಲಾಗಿದೆ. ಇಲ್ಲಿ ‘ಹಿತದೃಷ್ಟಿ’ ಯಾರದ್ದು ಎಂದು ಪ್ರಶ್ನೆ ಕೇಳುವ ಅಗತ್ಯವೇನೂ ಇಲ್ಲ.

ಮೋದಿಯವರ 3000 ಕೋಟಿ ರೂ.ಗಳ ಸರ್ದಾರ್ ಪಟೇಲ್‍
ಪ್ರತಿಮೆಯ ಗುಜರಾತ್‍ ಮಾದರಿ !

ಕಾರ್ಟೂನಿಸ್ಟ್ ಬಾಲ, ಲೈನ್ಸ್‌ ಮೀಡಿಯ.ಇನ್.

***

ಮರುದಿನವೇ  ಕಳೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿರುವವರೊಬ್ಬರು ಹೊಸ ಮುಖ್ಯಮಂತ್ರಿಗಳಾಗಿ ‘ಆಯ್ಕೆ’ಯಾಗಿದ್ದಾರೆ.

ಮಂಜುಲ್‍, ವೈಬ್ಸ್ ಆಫ್ ಇಂಡಿಯ.ಕಾಂ

***

ಕಾಂಗ್ರೆಸ್‍ ಮುಕ್ತ ಭಾರತದ ಘೋಷಣೆ ಹಾಕಿದವರು ಆರು ತಿಂಗಳಲ್ಲಿ ಐವರು ಮುಖ್ಯಮಂತ್ರಿಗಳ ಬದಲಾವಣೆ ಮಾಡಿರುವುದು ಭಾರತದ ರಾಜಕಾರಣಕ್ಕೆ ಕಾಂಗ್ರೆಸಿನ ಈ ‘ ಹೈಕಮಾಂಡ್ ಕೊಡುಗೆ’ಯನ್ನು ಮನಸಾ ಸ್ವೀಕರಿಸಿದಂತಿದೆಯೇ? 20 ವರ್ಷಗಳ ಹಿಂದೆ ನ್ಯೂಯಾರ್ಕಿನ ಅವಳಿ ಟವರ್‌ಗಳನ್ನು ಭಯೋತ್ಪಾದಕರು ನಾಶಪಡಿಸಿದ ದಿನದಂದೇ ಇದು ನಡೆದಿರುವುದು ಕೇವಲ ಕಾಕತಾಳೀಯ. ಏಕೆಂದರೆ ಇವು ಅಂತಹ ಟವರ್‌ಗಳಲ್ಲ….

“ದಿಲ್ಲಿಯ ಅವಳಿ ಟವರ್‌ಗಳು
ದಿನ ಕಳೆದಂತೆ ಹೊಸ ಎತ್ತರಕ್ಕೆ ಏರುತ್ತಿವೆ!

ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

***

ಸರಿ, ಮುಂದಿನ ಸರದಿ ಯಾರದು?

ಸುಭಾನಿ, ಡೆಕ್ಕನ್‍ ಕ್ರಾನಿಕಲ್

ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯಬೇಕಾದ ತ್ರಿಪುರಾ ಎಂಬುದು ಕೆಲವರ ಊಹೆ.

***

ದಿಲ್ಲಿಯ ಅವಳಿ ಟವರ್‌ಗಳಲ್ಲಿ ಒಬ್ಬರು ಕರ್ನಾಟಕದಲ್ಲಿ ಮುಂದಿನ ಚುನಾವಣಾ ಪ್ರಚಾರ ಹೊಸ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಂದು ಹೇಳಿರುವುದು ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿರುವಾಗಲೇ, ಇವರು ಗುಜರಾತಿನ ಹೊಸ ಮುಖ್ಯಮಂತ್ರಿಗಳ ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಹೋಗಿ ಬಂದಿದ್ದಾರೆ.

ಪಿ.ಮಹಮ್ಮದ್, ವಾರ್ತಾಭಾರತಿ

***

ಅದು ಹಾಗಿರಲಿ, ಒಟ್ಟಾರೆಯಾಗಿ ವಿಜಯ ರೂಪಾನಿಯ ನಿರ್ಗಮನ ಗುಜರಾತ್‍ ಮಾದರಿಯ ಬೊಗಳೆ ಸ್ವರೂಪಕ್ಕೆ ಒಂದು ಜಾಹೀರಾತು ಎನ್ನುತ್ತಾರೆ ಹಿರಿಯ ಪತ್ರಕರ್ತ ಹರೀಶ್‍ ಖರೆ (ದಿ ವೈರ್, ಸೆ.12). ಕಾಂಗ್ರೆಸ್‍ ಅಥವ ಇತರ ಯಾವುದೇ ರಾಜಕೀಯ ಶಕ್ತಿಯ ಸವಾಲೇ ಇಲ್ಲದೆ ಸಂಪೂರ್ಣ ಪ್ರಾಬಲ್ಯ ಹೊಂದಿರುವ ಈ ರಾಜ್ಯದಲ್ಲಿಯೂ ಚುನಾವಣೆ ಗೆಲ್ಲಲು ಮುಖ್ಯಮಂತ್ರಿಗಳ ಬದಲಾವಣೆ ಮಾಡಿರುವುದು ಈ ಗುಜರಾತ್‍ ಮಾದರಿಯ ಟೊಳ್ಳುತನದ ಅರಿವು ಈ ಮಾದರಿ ನಿರ್ಮಿಸಿದವರಿಗೇ ಇದೆ  ಎಂಬುದನ್ನು ಬಹುಶಃ  ತೋರಿಸುತ್ತದೆ ಎಂದು ಅವರು ಹೇಳುತ್ತಾರೆ.

***

‘ಥ್ಯಾಂಕ್ಯು ಮೋದೀಜಿ’ ಮಹಾಭಿಯಾನ!

ಮುಝಫ್ಫರ್ ನಗರ ಮಹಾಪಂಚಾಯ್ತ್ ನಂತರ, ಗುಜರಾತ್‍ ಮುಖ್ಯಮಂತ್ರಿಯ ‘ರಾಜೀನಾಮೆ’ಯ ಹಿಂದಿನ ದಿನ ಕೇಂದ್ರದ ಆಳುವ ಪಕ್ಷದ ಅಧ್ಯಕ್ಷರು, ಪ್ರಧಾನ ಮಂತ್ರಿಗಳ ಜನ್ಮದಿನದ ಸಂದರ್ಭದಲ್ಲಿ ಮೂರು ವಾರಗಳ ಮಹಾಭಿಯಾನವನ್ನು ರೂಪಿಸಲಾಗಿದೆ ಎಂದು ಪ್ರಕಟಿಸಿದ್ದಾರೆ. ಮೇಲ್ನೋಟಕ್ಕೆ ಇದು ಕೋವಿಡ್‍-19ರ ವಿರುದ್ಧ ಲಸಿಕೆ ಅಭಿಯಾನಕ್ಕೆ ಉತ್ತೇಜನೆ ನೀಡಲು ಎನ್ನಲಾಗಿದೆ.

ಕೋವಿಡ್‍ ನಿರ್ವಹಣೆಯ ಕುರಿತಂತೆ ಎದ್ದಿರುವ ಪ್ರಶ್ನೆಗಳು ಮತ್ತು ಈಗ ಮುಝಫ್ಫರ್ ನಗರ ಮಹಾಪಂಚಾಯ್ತಿನಿಂದ ಪ್ರಧಾನಿಗಳ ಪ್ರತಿಷ್ಠೆಗೆ ಉಂಟಾಗಿರುವ ಇನ್ನಷ್ಟು ಧಕ್ಕೆಯ ರಿಪೇರಿಗೆ ಈ ಮಹಾಭಿಯಾನ ಎಂದು  ವಿಶ್ಲೇಷಕರು ಹೇಳುತ್ತಿದ್ದಾರೆ.

ಪ್ರಧಾನಿ ಜನ್ಮದಿನ ಉತ್ತೇಜನೆ
ಸೆಪ್ಟೆಂಬರ್ 17- ಅಕ್ಟೋಬರ್ 7
3 ವಾರಗಳ ಅಭಿಯಾನ

ನಡುವೆ ಅಕ್ಟೋಬರ್ 2ನ್ನು ಎಂದಿನಂತೆ ಆಚರಿಸಲಾಗುವುದು

ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್ ಪ್ರೆಸ್

***

ಸೆಪ್ಟೆಂಬರ್ 17 ಪ್ರಧಾನಿಗಳ ಜನ್ಮದಿನ, ಅಕ್ಟೋಬರ್ 7 ಅವರು ಗುಜರಾತಿನ ಮುಖ್ಯಮಂತ್ರಿಗಳಾಗಿ 20 ವರ್ಷಗಳು ಪೂರ್ಣಗೊಳ್ಳುವ ದಿನ. ಈ ಎರಡು ದಿನಗಳ ನಡುವೆ  ಪ್ರಧಾನಿಗಳು ಇದುವರೆಗೆ ದೇಶದ ಬಡಜನರಿಗಾಗಿ ಕೈಗೊಂಡಿರುವ ಕ್ರಮಗಳಿಗೆ ಕೃತಜ್ಞತೆ ಸಲ್ಲಿಸುತ್ತ 5 ಕೋಟಿ  ‘ಥ‍್ಯಾಂಕ್ಯು’ ಕಾರ್ಡುಗಳನ್ನು ಕಳಿಸಲಾಗುವುದಂತೆ. ಯಾವುದು ಆ ಕ್ರಮಗಳು ?

ಒಂದು ಉದಾಹರಣೆ ಇಲ್ಲಿದೆ:

ಜನ್ಮದಿನಾಚರಣೆಗೆ ನಿಮಗೆ ಆಹ್ವಾನ!
ಸತೀಶ ಆಚಾರ್ಯ, ಟ್ವಿಟರ್

***

ಕೋವಿಡ್‌ನ ಎರಡು ಅಲೆಗಳ ನಂತರ (ಸಂಭವನೀಯ ಮೂರನೇ ಅಲೆಯ ಮೊದಲು?) ಬರಬಹುದಾದ ಈ ಅಭಿಯಾನದ ಅಲೆಗೂ ಸಿದ್ಧತೆ ಬೇಕಾಗಿದೆ….

“ಮುಂಬರುವ ‘ಥ್ಯಾಂಕ್ಯು ಮೋದೀಜೀ’ ಅಲೆಗೆ ಇಂತದ್ದೊಂದು ಬೇಕಾಗಬಹುದು”

ಸಜಿತ್‍ ಕುಮಾರ್, ಡೆಕ್ಕನ್‍ ಕ್ರಾನಿಕಲ್

ಇದು ಆಳುವ ಪಕ್ಷದ ಅಧ್ಯಕ್ಷರು ಪ್ರಕಟಿಸಿದ ಅಭಿಯಾನವಾದ್ದರಿಂದ ಆ ಪಕ್ಷದ ಕಾರ್ಯಕ್ರಮವೋ, ಅಥವ ಪ್ರಧಾನಿಗಳ ಬಡಜನ ಕಲ್ಯಾಣ ಕ್ರಮಗಳಿಗೆ ಧನ್ಯವಾದದ ಕಾರ್ಯಕ್ರಮವಾದ್ದರಿಂದ ಸರಕಾರೀ ಕಾರ್ಯಕ್ರಮವೋ? ಇದಕ್ಕೆ ಹಣ ಖರ್ಚು ಮಾಡುವವರು ಯಾರು? ಇದು ಪಾರದರ್ಶಕವಾಗಿರುತ್ತದೆಯೇ? ಅಥವ ಚುನಾವಣಾ ಬಾಂಡ್‍ ಮತ್ತು ಪಿಎಂಕೇರ್ ನಂತೆ ಸಂಪೂರ್ಣ ಅಪಾರದರ್ಶಕವಾಗಿರುತ್ತದೆಯೇ?  ಎಂಬಿತ್ಯಾದಿ ಪ್ರಶ್ನೆಗಳಂತೂ ಏಳಲಿವೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

***

ಇದೇ ದಿನವೇ ದೇಶದ ಜನತೆಯ ಪರಿಸ್ಥಿತಿಯ ಸತ್ಯಗಳನ್ನು ಅಧಿಕಾರಸ್ಥರ ಮುಖದೆದುರು ಹಿಡಿಯುವ ಮಾಧ್ಯಮ ಕೆಲಸವನ್ನು ಮಾಡುತ್ತಿರುವ ಎರಡು ಸ್ವತಂತ್ರ ವೆಬ್‍ ಪತ್ರಿಕೆಗಳ ಕಚೇರಿಗಳಿಗೆ ಆದಾಯ ತೆರಿಗೆ ಅಧಿಕಾರಿಗಳು ‘ಭೇಟಿ’ ನೀಡಿ, ಅವರ ಕೆಲಸಗಳನ್ನು ‘ತನಿಖೆ’ಗಾಗಿ ನಿಲ್ಲಿಸಿದರು ಎಂದು ವರದಿಯಾಗಿದೆ, ಅವರು ಇದನ್ನು ‘ತೆರಿಗೆ ಸರ್ವೆ’ ಎಂದು ಹೇಳುತ್ತಾರೆ. ಅದು ಆದಾಯ ತೆರಿಗೆ ದಾಳಿ ಎಂಬುದಕ್ಕೆ ಸೌಮ್ಯತೆಯ ಸೋಗು ಎನ್ನುತ್ತಾರೆ ಈ ವ್ಯಂಗ್ಯಚಿತ್ರಕಾರರು. ಇತ್ತಿಚಿನ ದಿನಗಳಲ್ಲಿ ಇಂತಹ ಸೌಮ್ಯತೆಯ ಸೋಗಿನ ಪದಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದಕ್ಕೆ ಕೆಲವು ಉದಾರಣೆಗಳನ್ನು ಅವರು ಕೊಡುತ್ತಾರೆ”

ಆದಾಯ ತೆರಿಗೆ ದಾಳಿ? ಅಲ್ಲ,… ಆದಾಯ ತೆರಿಗೆ ಸರ್ವೆ ಅಷ್ಟೇ
ಖಾಸಗೀಕರಣ?  ಅಲ್ಲ…. ನಗದೀಕರಣ ಅಷ್ಟೇ
ನಿರುದ್ಯೋಗಿ?  ಅಲ್ಲ…. ನಡುನಡುವೆ ಕೆಲಸ
ನಿಮ್ಮ ಕೈಖಾಲಿಯಾಗಿದೆಯೇ? ಇಲ್ಲ…. ತಾತ್ಕಾಲಿಕವಾಗಿ ಋಣಾತ್ಮಕ ನಗದು ಹರಿವು

ಹುಸಿ ಸೌಮ್ಯೋಕ್ತಿ? ಅಲ್ಲ ಅಲ್ಲ…. ಪಾಸಿಟಿವ್‍ ಚಿಂತನೆ ಅಷ್ಟೇ

ಸಂದೀಪ ಅಧ್ವರ್ಯು, ಟೈಮ್ಸ್‌ ಆಫ್‍ ಇಂಡಿಯಾ

ಇದಕ್ಕೆ ಕೆಲವರು ಇನ್ನೂ ಕೆಲ ಪದಗಳನ್ನು ಸೇರಿಸಿದ್ದಾರೆ:

ಉದ್ಯೋಗವಿಲ್ಲ – ಆತ್ಮನಿರ್ಭರ್!  ; ಸರಕಾರದ ವಿಮರ್ಶಕರು – ರಾಷ್ಟ್ರ-ವಿರೋಧಿಗಳು!;  ಬೂಟು ನೆಕ್ಕುವುದು – ಪಾಸಿಟಿವ್ ಪತ್ರಕಾರಿತೆ!

***

 

Donate Janashakthi Media

Leave a Reply

Your email address will not be published. Required fields are marked *