ರೈತರ ಇನ್ನೊಂದು ಭಾರತ್ ಬಂದ್ ಕರೆ, ಉತ್ತರ ಪ್ರದೇಶದ ಮುಝಫ್ಫರ್‌ನಗರದಲ್ಲಿ ಬೃಹತ್ ರೈತ ರ‍್ಯಾಲಿ ಮತ್ತು ಹರಿಯಾಣದ ಕರ್ನಾಲ್‌ನ ಮಿನಿ ಸಚಿವಾಲಯಕ್ಕೆ ರೈತರ ಬೃಹತ್ ಮುತ್ತಿಗೆಯ ನಡುವೆ ಕೇಂದ್ರ ಸರಕಾರ “ಹಿಂದೆಂದಿಗಿಂತಲೂ ಹೆಚ್ಚಿನ” ಬೆಂಬಲ ಬೆಲೆಯನ್ನು ಪ್ರಕಟಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸ್ವತಃ ಪ್ರಧಾನ ಮಂತ್ರಿಗಳೇ ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ)ಯ ಈ ಏರಿಕೆ ರೈತರಿಗೆ ಗರಿಷ್ಟ ಫಲದಾಯಕ ಬೆಲೆಗಳನ್ನು ಒದಗಿಸುತ್ತದೆ ಎಂದು ಟಿಪ್ಪಣಿ ಮಾಡಿರುವುದಾಗಿಯೂ ವರದಿಯಾಗಿದೆ.
ಆದರೆ ಇದೊಂದು ಹಸಿ ಸುಳ್ಳು, ನಿಜಮೌಲ್ಯದಲ್ಲಿ ಎಂಎಸ್ಪಿಯಲ್ಲಿ ಇಳಿಕೆಯಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಬಲವಾಗಿ ಟೀಕಿಸಿದೆ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಸಿ2+50% ಸೂತ್ರವನ್ನು ಅನುಸರಿಸದೆ ಮತ್ತು ಲಾಗುವಾಡುಗಳ ಬೆಲೆಯೇರಿಕೆಗಳು ಮತ್ತು ಹಣದುಬ್ಬರವನ್ನು ಗಣನೆಗೆ ತಗೊಳ್ಳದೆ ನಿರ್ಲಕ್ಷ್ಯದಿಂದ ಈ ಪ್ರಕಟಣೆಯನ್ನು ಮಾಡಿದೆ ಎಂದು ಎಐಕೆಎಸ್ ಖಂಡಿಸಿದೆ.
ಇದನ್ನು ಓದಿ: ಎಂಎಸ್‌ಪಿ ಕುರಿತು ಬಿಜೆಪಿ ಸರಕಾರ ರೈತರ ದಾರಿ ತಪ್ಪಿಸುತ್ತಿದೆ : ಹನ್ನನ್ ಮೊಲ್ಲಾ
ಎಂದಿನಂತೆ ಸರಕಾರ ಮತ್ತು ಅದರ ಪ್ರಚಾರ ಯಂತ್ರ ಇದು “ಹಿಂದೆಂದಿಗಿಂತಲೂ ಹೆಚ್ಚಿನ” ಏರಿಕೆಯೆಂದು ಹೇಳಿಕೊಳ್ಳುತ್ತಿವೆ. ಆದರೆ ವಾಸ್ತವವಾಗಿ ಇದು ಕಳೆದ 12 ವರ್ಷಗಳಲ್ಲೇ ಅತ್ಯಂತ ಕಡಿಮೆ ಏರಿಕೆ, ಗೋದಿಗೆ ಬೆಂಬಲ ಬೆಲೆಗಳಲ್ಲಿ ಹೆಚ್ಚಳ ಕ್ವಿಂಟಾಲಿಗೆ 1975ರೂ.ನಿಂದ ರೂ.2015ಕ್ಕೆ, ಅಂದರೆ ಕೇವಲ 2.03ಶೇ. ಏರಿಕೆಯಾಗಿದೆಯಷ್ಟೇ ಎಂದು ಎಐಕೆಎಸ್ ಹೇಳಿದೆ. ಇತರ ಹಿಂಗಾರು ಬೆಳೆಗಳ ಎಂಎಸ್ಪಿ ಬೆಲೆಗಳಲ್ಲೂ 2.14ಶೇ.ದಿಂದ 8.6ಶೇ.ದಷ್ಟು ಏರಿಕೆ ಮಾಡಲಾಗಿದೆಯಷ್ಟೇ, ನಿಜಮೌಲ್ಯದಲ್ಲಿ, ಅಂದರೆ ಲಾಗುವಾಡುಗಳ ಬೆಲೆಯೇರಿಕೆ ಮತ್ತು ಹಣದುಬ್ಬರವನ್ನು ಪರಿಗಣಿಸಿದರೆ, ವಾಸ್ತವವಾಗಿ ರೈತರಿಗೆ ಅಪಾರ ನಷ್ಟಗಳೇ ಆಗುತ್ತವೆ ಎಂದು ಎಐಕೆಎಸ್ ಹೇಳಿದೆ.
2021-22ರ ವೆಚ್ಚಗಳಲ್ಲಿ ಸಿ2+50% ಸೂತ್ರದ ಪ್ರಕಾರ ಲೆಕ್ಕ ಹಾಕಿದ್ದರೆ ಗೋಧಿಗೆ ಕನಿಷ್ಟ ಬೆಂಬಲ ಬೆಲೆ ಕ್ವಿಂಟಾಲ್‌ಗೆ ರೂ.2195.50 ಆಗಬೇಕಿತ್ತು. ಅಂದರೆ ಲಾಗುವಾಡುಗಳಿಗೆ ಹೆಚ್ಚಿನ ವೆಚ್ಚ ತೆತ್ತು ಗೋದಿ ಬೆಳೆದ ರೈತರು 2022-23ರ ಮಾರಾಟ ಸೀಝನ್ನಿನಲ್ಲಿ ಕ್ವಿಂಟಾಲ್‌ಗೆ 180ರೂ.ಕಡಿಮೆ ಪಡೆಯುತ್ತಾರೆ.
ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ಸೂತ್ರದಂತೆ 2021-21ರ ವೆಚ್ಚಗಳಲ್ಲಿ ಘೋಷಿಸಬೇಕಾಗಿದ್ದ ಎಂಎಸ್‌ಪಿ ಮತ್ತು ಈಗ ಘೋಷಿತ ಎಂಎಸ್‌ಪಿ ಹಾಗೂ ರೈತರಿಗೆ ಆಗಿರುವ ನಷ್ಟದ ಲೆಕ್ಕ ಹೀಗಿದೆ:(ಪ್ರತಿಕ್ವಿಂಟಾಲ್‌ಗೆ ರೂ.ಗಳಲ್ಲಿ)
ಬೆಳೆ | ಘೋಷಿತ | ಸೂತ್ರದ ಪ್ರಕಾರ | ವ್ಯತ್ಯಾಸ |
ಗೋದಿ | 2015 | 2195.50 | -180.50 |
ಬಾರ್ಲಿ | 1635 | 2106 | -471 |
ಕಡಲೆ | 5230 | 6018 | -788 |
ತೊಗರಿ | 5500 | 6306 | -806 |
ಸಾಸಿವೆ | 5050 | 5205 | -155 |
ಸೂರ್ಯಕಾಂತಿ | 5441 | 7362 | -1921 |
ಇಲ್ಲಿ ಹಿಂದಿನ ವೆಚ್ಚಗಳನ್ನಷ್ಠೆ ಲೆಕ್ಕಕ್ಕೆ ತಗೊಳ್ಳಲಾಗಿದೆ. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ(ಸಿ.ಎ.ಸಿ.ಪಿ.) ಇನ್ನೂ ಈ ವರ್ಷದ ಬೆಲೆಧೋರಣೆ ವರದಿಯನ್ನು ತನ್ನ ವೆಬ್‌ಸೈಟಿನಲ್ಲಿ ಹಾಕಿಲ್ಲ. ಅಂದರೆ ರೈತರಿಗೆ ನಿಜವಾದ ನಷ್ಟ ಮೇಲಿನ ಕೋಷ್ಟಕ ತೋರಿಸಿವುದಕ್ಕಿಂತಲೂ ಹೆಚ್ಚು.
ಇನ್ನೊಂದು ಸಂಗತಿಯೆಂದರೆ, ಸರಕಾರ ಈಗಲೂ ಬೆಂಬಲ ಬೆಲೆಗಳಲ್ಲಿ ಖರೀದಿಯ ಖಾತ್ರಿಯನ್ನು ಕೊಡಲು ನಿರಾಕರಿಸುತ್ತಿದೆ. ಈ ಹಿಂದೆ ರೈತರು ಬಹಳಷ್ಟು ಬಾರಿ ದೂರಿರುವಂತೆ, ಈ ಕಾರಣದಿಂದಾಗಿ ಸರಕಾರ ಘೋಷಿಸಿದ ಈ ಬೆಂಬಲ ಬೆಲೆಗಳೂ ಸಿಗುವುದು ಒಂದು ಸಣ್ಣ ವಿಭಾಗಕ್ಕೆ ಮಾತ್ರ. ಕಳೆದ ವರ್ಷದ ಬೆಲೆ ಧೋರಣೆಯ ವರದಿಯ ಪ್ರಕಾರವೇ ಸರಕಾರದ ಘೋಷಿತ ಬೆಂಬಲ ಬೆಲೆಯ ಫಲಾನುಭವಿಗಳ ಸಂಖ್ಯೆಯಲ್ಲೂ ತೀವ್ರ ಇಳಿಕೆಯಾಗಿದೆ., ಮುಖ್ಯವಾಗಿ ಬೇಳೆಕಾಳುಗಳು ಮತ್ತು ತೈಲಬೀಜಗಳಲ್ಲಿ. ಅಂದರೆ ಒಂದು ಖಾತ್ರಿ ಖರೀದಿಯಿಲ್ಲದೆ ಈ ಬೆಂಬಲ ಬೆಲೆಗಳೂ ರೈತರಿಗೆ ಸಿಗುವುದಿಲ್ಲ.
ಆದ್ದರಿಂದಲೇ ಸಿ2+50% ಸೂತ್ರದಂತೆ ಎಂ.ಎಸ್.ಪಿ. ಒಂದು ಕಾನೂನಾತ್ಮಕ ಹಕ್ಕು ಆಗಬೇಕು ಎಂದು ರೈತರು ಆಗ್ರಹಿಸುತ್ತಿರುವುದು ಎಂದು ಮತ್ತೊಮ್ಮೆ ನೆನಪಿಸಿರುವ ಎಐಕೆಎಸ್, ಇದಕ್ಕೆ ಅನುಗುಣವಾಗಿ ಬಿಜೆಪಿ ಸರಕಾರ ಒಂದು ಪರಿಷ್ಕೃತ ಪ್ರಕಟಣೆಯನ್ನು ಕೊಡಬೇಕು ಎಂದು ಒತ್ತಾಯಿಸಿದೆ.
ಬಿಜೆಪಿಯ ಈ ಧೋರಣೆಯನ್ನು ಪ್ರತಿಭಟಿಸಲು ಎದ್ದು ನಿಲ್ಲಬೇಕು, ಅದರ ಈ ಕಪಟನಾಟಕವನ್ನು ಬಯಲಿಗೆಳೆಯಬೇಕು ಎಂದು ಎಐಕೆಎಸ್ ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ.