ಚಂಡಿಗಡ: ಸುಖ್‌ಬೀರ್ ಸಿಂಗ್ ಬಾದಲ್ ನೇತೃತ್ವದ ಶಿರೋಮಣಿ ಅಕಾಲಿದಳ (ಎಸ್‌ಎಡಿ) ರ‍್ಯಾಲಿಗೆ ಅಡ್ಡಿಪಡಿಸಲು ಯತ್ನಿಸಿದ ಪ್ರತಿಭಟನಾ ನಿರತ ರೈತರ ಗುಂಪನ್ನು ಚದುರಿಸಲು ಮೊಗಾ ಪೊಲೀಸರು ಗುರುವಾರ ಲಾಠಿ ಹಾಗೂ ಜಲ ಫಿರಂಗಿಯನ್ನು ಬಳಸಿದ್ದಾರೆ.
ಮೋಗಾ-ಫಿರೋಝ್ ಪುರ ರಸ್ತೆಯ ಧಾನ್ಯ ಮಾರುಕಟ್ಟೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರತಿಭಟನಾಕಾರರು ರ‍್ಯಾಲಿ ನಡೆಯುವ ಸ್ಥಳವನ್ನು ಪ್ರವೇಶಿಸಲು ಬ್ಯಾರಿಕೇಡ್‌ಗಳನ್ನು ಮುರಿದ ಒಳಹೋಗಲು ಪ್ರಯತ್ನಿಸಿದರು. ನಂತರ ಉಂಟಾದ ಘರ್ಷಣೆಯಲ್ಲಿ ಸುಮಾರು 50 ರೈತರು ಹಾಗೂ ಕನಿಷ್ಠ ಏಳು ಪೊಲೀಸರು ಗಾಯಗೊಂಡಿದ್ದಾರೆ ಎಂದು ಡಿಎಸ್‌ಪಿ (ನಗರ) ಜಶನ್‌ದೀಪ್ ಸಿಂಗ್ ಗಿಲ್ ಹೇಳಿದ್ದಾರೆ.
ಇತ್ತೀಚೆಗೆ ಎಸ್‌ಎಡಿ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಇತ್ತೀಚೆಗೆ ಪಂಜಾಬ್‌ನ ನೂರು ವಿಧಾನಸಭಾ ಕ್ಷೇತ್ರಗಳಲ್ಲಿ 100 ದಿನಗಳ ಯಾತ್ರೆಯನ್ನು ಆರಂಭಿಸಿದ್ದರು. ಇದು ರಾಜಕೀಯ ಲಾಭಕ್ಕಾಗಿ ನಡೆಸುತ್ತಿರುವ ಕಾರ್ಯಕ್ರಮ ಎಂದು ರೈತರು ಆರೋಪಿಸುತ್ತಿದ್ದರು. ‘ರೈತರು ಒಂಬತ್ತು ತಿಂಗಳಿನಿಂದ ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರಾಜಕೀಯ ಪಕ್ಷಗಳು “ಅಧಿಕಾರದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದು, ರೈತರಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿವೆ” ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ.
200 ರೈತರ ಮೇಲೆ ದೂರು ದಾಖಲು : ರೈತರು ಭದ್ರತೆಯನ್ನು ಉಲ್ಲಂಘಿಸಿದ್ದಾರೆ. ಹಾಗೂ ಕಾರ್ಯಕ್ರಮದ ಮೇಲೆ ಕಲ್ಲು ತೂರಿದ್ದಾರೆ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ 17 ರೈತ ನಾಯಕರು ಹಾಗೂ 200 ಕ್ಕೂ ಹೆಚ್ಚು ರೈತರ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ನಾವು ಕಲ್ಲು ತೂರಾಟ ನಡೆಸಿಲ್ಲ, ಪೊಲೀಸರ ಮೇಲೆ ಹಲ್ಲೆ ಮಾಡಿಲ್ಲ, ಸಾರ್ವಜನಿಕ ಆಸ್ತಿ ಹಾನಿಯನ್ನು ಮಾಡಿಲ್ಲ. ಪೊಲೀಸರು ಸುಳ್ಳು ದೂರು ದಾಖಲಿಸಿಕೊಂಡಿದ್ದಾರೆ. ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.