ಬೆಂಗಳೂರು : ಎಲ್.ಪಿ.ಜಿ ದರವನ್ನು ಹದಿನೈದು ದಿನಗಳ ಅಂತರದಲ್ಲಿ 50 ರೂ ಏರಿಕೆ ಮಾಡುವುದರ ಮೂಲಕ ಪ್ರತಿ ಸಿಲಿಂಡರ್ಗೆ 950 ರೂ ದರವನ್ನು ನೀಡಿ ಪಡೆಯಬೇಕಾದ ದುಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನಗರದ ಮೌರ್ಯ ವೃತ್ತದಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಉದ್ದೇಶಿಸಿ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ಮಾತನಾಡುತ್ತಾ, ಮೋದಿಯಂಥ ಒಬ್ಬ ಸುಳ್ಳುಗಾರ ನಿಂದ ಇಡೀ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ ಆರ್ಥಿಕತೆಯನ್ನು ಸರಿದಾರಿಗೆ ತರಲು ವಿಫಲವಾಗಿರುವ ಕೇಂದ್ರ ಸರ್ಕಾರ ಜನರ ಜೀವನವನ್ನೇ ಹಾಳು ಮಾಡುತ್ತಿದೆ ಪ್ರತಿನಿತ್ಯ ಡೀಸೆಲ್ ಪೆಟ್ರೋಲ್ ಎಲ್ ಪಿಜಿ ಅಗತ್ಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ದೇಶದ ಜನ ನಿತ್ಯ ಹೈರಾಣರಾಗಿದ್ದಾರೆ,
ಇದನ್ನ ಕಂಡರು ಕಾಣದಂಗೆ ನರೇಂದ್ರ ಮೋದಿಯ ಆಡಳಿತ ದೇಶದಲ್ಲಿ ಸಾಗುತ್ತಿದೆ ಇಂತಹ ದುರಾಡಳಿತ ದೇಶದ ಜನರಿಗೆ ಕೊನೆಗಾಣಬೇಕಾದರೆ ನರೇಂದ್ರ ಮೋದಿ ಕೂಡಲೇ ರಾಜಿನಾಮೆ ಕೊಟ್ಟು ತೊಲಗಬೇಕು ಎಂದು ಆಗ್ರಹಿಸಿದರು.
ಪ್ರತಿ ಬಾರಿ ಮನ್ ಕೀ ಬಾತ್ ಹಾಗೂ ತಮ್ಮ ಭಾಷಣದಲ್ಲಿ ಅಚ್ಛೇ ದಿನವನ್ನು ಪ್ರಸ್ತಾಪಿಸಿ ಜನರಿಗೆ ನಂಬಿಸಿ ಜನರನ್ನು ಇಂದು ನಡುರಸ್ತೆಯಲ್ಲಿ ತಂದು ನಿಲ್ಲಿಸಿರುವ ಅತ್ಯಂತ ಕಠೋರವಾದ ಸರ್ವಾಧಿಕಾರಿ ಆಡಳಿತವನ್ನು ಇಂದು ಕಣ್ಣಾರೆ ಕಾಣುತ್ತಿದ್ದೇವೆ. ಸರ್ಕಾರಿ ಸಂಸ್ಥೆಗಳನ್ನ ಮಾರಾಟ ಮಾಡಿ ಜನರ ತೆರಿಗೆಯನ್ನು ಹೆಚ್ಚಿಸುತ್ತಲೇ ಬಡವರ ಜೀವನವನ್ನು ಹಾಳುಮಾಡುತ್ತಿರುವ ಮೋದಿ ಸರಕಾರ ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿ.ಜನಾರ್ಧನ್, ಎಂ.ಎ.ಸಲೀಮ್, ಎ.ಆನಂದ, ಎಲ್.ಜಯಸಿಂಹ, ಪುಟ್ಟರಾಜು,ಮಹೇಶ್, ನವೀನ್, ಪಿ.ಸಂದೀಪ್, ಪಕ್ಷದ ಮುಖಂಡರು ಭಾಗವಹಿಸಿದ್ದರು.
ಮೈಸೂರು: ಕಳೆದ 15 ದಿನಗಳಲ್ಲಿ 2ನೇ ಬಾರಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಾಗಿರುವುದನ್ನು ವಿರೋಧಿಸಿ ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಿಲಿಂಡರ್ ಬೆಲೆಯನ್ನು 5 ರೂಪಾಯಿ ಹೆಚ್ಚಿಸಿದ್ದಕ್ಕೆ ಪ್ರತಿಭಟನೆ ನಡೆಸಿದ್ದ ಶೋಭಾ ಕರಂದ್ಲಾಜೆ ಎಲ್ಲಿ ಅಡಗಿ ಕುಳಿತಿದ್ದಾರೆ ಎಂದು ಪ್ರಶ್ನಿಸಿದರು. ನಿತ್ಯವೂ ಮಹಿಳೆಯರು ಕಣ್ಣೀರು ಹಾಕುತ್ತಾ ಒಲೆ ಹೊತ್ತಿಸಬೇಕಿದೆ. ಅಡುಗೆ ಅನಿಲ ಖರೀದಿಸಲು ಕಾರ್ಮಿಕರು, ಬಡವರು ಪರದಾಡುತ್ತಿದ್ದಾರೆ ಎಂದು ಹರಿಯಾಯ್ದರು.
ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಒಂದು ಹೊತ್ತು ಊಟಕ್ಕೂ ಪರದಾಡುವಂತಹ ಸ್ಥಿತಿ ಇದೆ. ರಾಷ್ಟ್ರಪತಿಗಳಾದರೂ ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಕೇಂದ್ರ ಸರ್ಕಾರಕ್ಕೆ ಸರ್ಕಾರಕ್ಕೆ ಚಾಟಿ ಬೀಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷೆ ಪುಷ್ಪವಲ್ಲಿ, ಮುಖಂಡರಾದ ರಾಣಿ, ಕಮಲಾ, ನಾಗರತ್ನ, ಕುಮುದಾ, ಮಂಜುಳಾ ಮುಂತಾದವರು ಇದ್ದರು.