ಟೋಕಿಯೋ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಟೇಬಲ್ ಟೆನಿಸ್ ಆಟದಲ್ಲಿ ಭಾರತದ ಸ್ಪರ್ಧಿ ಗುಜರಾತ್ ಮೂಲಕ ಭಾವಿನಾ ಪಟೇಲ್ ಫೈನಲ್ ತಲುಪಿದ್ದಾರೆ. ವಿಶೇಷ ಚೇತನದ ವ್ಯಕ್ತಿಗಳಿಗಾಗಿ ಆಯೋಜಿಸಲಾಗುವ ಪ್ಯಾರಾಲಿಂಪಿಕ್ಸ್ನಲ್ಲಿ ಆಡಲಾಗುತ್ತಿರುವ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಇದೇ ಮೊದಲ ಬಾರಿಗೆ ಪದಕ ಗೆಲ್ಲುವುದು ನಿಶ್ಚಿಯವಾಗಿದೆ.
ಇಂದಿನ ಮಹಿಳಾ ಸಿಂಗಲ್ಸ್ ಸೆಮಿಫೈನಲ್ನಲ್ಲಿ 7-11, 11-7, 11-4, 9-11, 11-8 (3-2) ಸೆಟ್ಗಳಿಂದ ಚೀನಾದ ಝಾಂಗ್ ಮಿಯಾವೋ ಅವರನ್ನು ಭಾವಿನಾ ಪಟೇಲ್ ಮಣಿಸಿದರು. ಟೇಬಲ್ ಟೆನಿಸ್ ಆಟಗಾರ್ತಿಯೊಬ್ಬರು ಚೀನಾದ ಆತಗಾರ್ತಿಯನ್ನು ಸೋಲಿಸಿದ ಕೀರ್ತಿ ಭಾವಿನಾ ಅವರಿಗೆ ಲಭಿಸಿದೆ.
ಝಾಂಗ್ ಮಿಯಾವೋ ಅವರು 2016ರ ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಹಾಲಿ ವಿಶ್ವದ ನಂಬರ್ 3ರ ಶ್ರೇಯಾಂಕದ ಆಟಗಾರ್ತಿ ಇವರು. ಭಾವಿನಾ ಫೈನಲ್ ಪ್ರವೇಶಿಸುವುದು ಕಷ್ಟವಾಗಿದ್ದರೂ ಸಹ ಅತ್ಯಂತ ದೃಢತೆಯಿಂದ ಆಟ ಆಡಿದ ಭಾವಿನಾ ಫೈನಲ್ ಪ್ರವೇಶಿಸಿ ವಿಶ್ವಾಸ ಮೂಡಿಸಿದ್ದಾರೆ.
“ಚೀನೀ ಆಟಗಾರ್ತಿಯನ್ನು ಸೋಲಿಸುವುದು ಅಸಾಧ್ಯವೆಂದೆ ಎಲ್ಲರೂ ಹೇಳಿತ್ತಿದ್ದರು, ಆದರೆ ಈ ವಿಶ್ವದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದನ್ನು ನಾನು ಸಾಬೀತುಪಡಿಸಿದೆ. ನೀವು ಸಂಕಲ್ಪ ತೊಟ್ಟರೆ ಎಲ್ಲವೂ ಸಾಧ್ಯ” ಎಂದು ಪಂದ್ಯದ ಗೆಲುವಿನ ಬಳಿಕ ಭಾವಿನಾ ಪಟೇಲ್ ಹೇಳಿದ್ದಾರೆ. ಗುಜರಾತ್ನ ಅಹ್ಮದಾಬಾದ್ನಲ್ಲಿ ಇಎಸ್ಐಸಿಯಲ್ಲಿ ಸರ್ಕಾರಿ ಉದ್ಯೋಗಿಯಾಗಿರುವ ಭಾವಿನಾ ಪಟೇಲ್ ಅವರು ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
“ನಾನು ಇದೇ ಮಟ್ಟದ ಆಟವನ್ನು ಆಡಿದರೆ ಚಿನ್ನದ ಪದಕ ಗೆಲ್ಲಬಲ್ಲೆ… ಫೈನಲ್ ಪಂದ್ಯಕ್ಕೆ ನಾನು ಮಾನಸಿಕವಾಗಿ ಸಿದ್ಧನಾಗಿದ್ಧೇನೆ” ಎಂದು ಅವರು ತಿಳಿಸಿದ್ದಾರೆ. ಭಾವಿನಾ ಪಟೇಲ್ ಅವರು ಫೈನಲ್ನಲ್ಲಿ ಚೀನಾದ ಮತ್ತೊಬ್ಬ ಅಟಗಾರ್ತಿ ಝೋ ಯಿಂಗ್ ಅವರನ್ನ ಎದುರಿಸಲಿದ್ದಾರೆ. ಫೈನಲ್ ಪಂದ್ಯವು ನಾಳೆ ಭಾನುವಾರ ನಡೆಯಲಿದೆ.
ಗ್ರೂಪ್ ಹಂತದಲ್ಲಿ ಇದೇ ಝೋ ಯಿಂಗ್ ವಿರುದ್ಧ ಭಾವಿನಾ ನೇರ ಸೆಟ್ಗಳಿಂದ ಸೋಲುಂಡಿದ್ದರು. ಈಗ ಫೈನಲ್ನಲ್ಲಿ ಅವರನ್ನೇ ಎದುರಿಸುತ್ತಿರುವುದು ವಿಶೇಷವಾಗಿದೆ. ಅವರನ್ನು ಸೋಲಿಸಬೇಕೆಂಬ ಗುರಿಯೊಂದಿಗೆ ಭಾವಿನಾ ಮಾನಸಿಕವಾಗಿ ಸಜ್ಜಾಗಿದ್ದಾರೆ. ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ಭಾವಿನಾ ಪಟೇಲ್ ಅವರಿಂದ ಸಿಗಲಿದೆ. ನಾಳೆ ಪ್ರಶಸ್ತಿ ಸುತ್ತು ಆಟವಿದೆ. ಫೈನಲ್ನಲ್ಲಿ ಗೆದ್ದರೆ ಚಿನ್ನದ ಪದಕ, ಸೋತರೆ ಬೆಳ್ಳಿ ಪದಕ ಖಚಿತವಾಗಿದೆ.
ವ್ಹೀಲ್ ಚೇರ್ನಲ್ಲೇ ಕೂತು ಟೇಬಲ್ ಟೆನಿಸ್ ಆಡುವ ಭಾವಿನಾ ಪಟೇಲ್ ಡಿಗ್ರೀ ಓದಬೇಕಾದರೆ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಟೇಬಲ್ ಟೆನಿಸ್ ಕ್ರೀಡೆಗೆ ತೊಡಗಿಸಿಕೊಂಡವರು. ಕಳೆದ 20 ವರ್ಷಗಳಿಂದ ಆಕೆ ಟೇಬಲ್ ಟೆನಿಸ್ ಆಡುತ್ತಿದ್ದಾರೆ.
ಮತ್ತೊಬ್ಬ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಸೋನಾಲ್ ಪಟೇಲ್ ಗ್ರೂಪ್ ಹಂತದ ಎರಡೂ ಪಂದ್ಯಗಳಲ್ಲಿ ಸೋತು ನಿರ್ಗಮಿಸಿದ್ದರು.
ಪುರುಷರ ಬಿಲ್ಲುಗಾರಿಕೆ ಕ್ರೀಡೆಯಲ್ಲಿ ಭಾರತದ ರಾಕೇಶ್ ಕುಮಾರ್ ಅವರು ಮೊದಲ ಸುತ್ತಿನಲ್ಲಿ ಹಾಂಕಾಂಗ್ ದೇಶದ ಸ್ಪರ್ಧಿಯನ್ನು ಸೋಲಿಸಿ ಪ್ರೀಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಮತ್ತೊಬ್ಬ ಭಾರತೀಯ ಸ್ಪರ್ಧಿ ಶ್ಯಾಮ್ ಸುಂದರ್ ಸ್ವಾಮಿ ಅವರು ಮೊದಲ ಸುತ್ತಿನಲ್ಲಿ ಅಮೆರಿಕದ ಆಟಗಾರನ ವಿರುದ್ಧ ಸೋತು ನಿರ್ಗಮಿಸಿದ್ದಾರೆ.
ಪಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಈವರೆಗೆ ಒಟ್ಟಾರೆ 4 ಚಿನ್ನ ಸೇರಿ 12 ಪದಕಗಳನ್ನ ಮಾತ್ರ ಗೆದ್ದದಿದೆ. ಈ ಬಾರಿ 54 ಕ್ರೀಡಾಪಟುಗಳನ್ನು ಟೋಕಿಯೋಗೆ ಕಳುಹಿಸಲಾಗಿದ್ದು ಭಾರತಕ್ಕೆ ಕನಿಷ್ಠ ಐದು ಪದಕ ಗೆಲ್ಲುವ ಅವಕಾಶವಿದೆ.