ಉಡುಪಿ: ಡಾ.ಬಿ.ಆರ್. ಶೆಟ್ಟಿ ವೆಂಚರ್ಸ್ – ಹಾಜಿ ಅಬ್ದುಲ್ಲಾ ಆಸ್ಪತ್ರೆಯ 16 ಮಂದಿ ಸಿಬ್ಬಂದಿಯನ್ನು ಏಕಾಏಕಿ ವಜಾಗೊಳಿಸಿದ ಕ್ರಮವನ್ನು ಖಂಡಿಸಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಉಡುಪಿ ತಾಲೂಕು ಸಮಿತಿ ಸಿಬ್ಬಂದಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದೆ.
ಆಡಳಿತ ಮಂಡಳಿಯು ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡದೆ ಸತಾಯಿಸಿದೆ. ಜಿಲ್ಲಾಡಳಿತದ ಮಧ್ಯಪ್ರವೇಶದ ನಂತರವೂ ವೇತನ ನೀಡದೆ ಪ್ರಮುಖರನ್ನು ಕೆಲಸದಿಂದ ವಜಾ ಮಾಡಿದ ಔಚಿತ್ಯವೇನು ಎಂದು ಸಿಐಟಿಯು ಪ್ರಶ್ನಿಸುತ್ತದೆ. ವೇತನ ಸಿಗದಿದ್ದರೂ ಆಸ್ಪತ್ರೆಗೆ ದಾಖಲಾದವರಿಗೆ ಚಿಕಿತ್ಸೆಯನ್ನು ನೀಡುತ್ತಿರುವುದು ಉದ್ಯೋಗಿಗಳ ಹೃದಯವಂತಿಕೆಯನ್ನು ತೋರಿಸುತ್ತದೆ ಎಂದು ಸಂಘಟನೆಯು ತಿಳಿಸಿದೆ.
ಇದನ್ನು ಓದಿ: ವೇತನ ಕೇಳಿದ 16 ಮಂದಿ ಸಿಬ್ಬಂದಿಗಳ ವಜಾ ಮಾಡಿದ ಬಿ.ಆರ್.ಶೆಟ್ಟಿ ಆಸ್ಪತ್ರೆ
ಖಾಸಗಿ ಒಡೆತನದಲ್ಲಿದ್ದ ಆಸ್ಪತ್ರೆಯು ಈಗ ನಡೆಸಲು ಸಾಧ್ಯವಿಲ್ಲ ಎಂದು ಪತ್ರ ಬರೆದಿರುವುದು ಕಂಡು ಬಂದಿದೆ. ಕೂಡಲೇ ತಡ ಮಾಡದೆ ಸಂಪೂರ್ಣ ಆಸ್ಪತ್ರೆಯನ್ನು ಸರಕಾರವೇ ವಶಕ್ಕೆ ತೆಗೆದುಕೊಂಡು ನಿರ್ವಹಿಸಬೇಕು ಎಂದು ಸಿಐಟಿಯು ಆಗ್ರಹಿಸುತ್ತದೆ.
ಆಸ್ಪತ್ರೆಯ ಸಿಬ್ಬಂದಿಗಳ ಸಂಬಳದ ವಿಚಾರದಲ್ಲಿ ಬಹಳಷ್ಟು ಭಾರೀ ಪ್ರತಿಭಟನೆ ನಡೆದರೂ ಶಾಸಕರು, ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಸರಕಾರದ ವೈಫಲ್ಯಕ್ಕೆ ಜನ ಸಂಕಷ್ಟ ಪಡುವಂತಾಗಿದೆ. ಸಿಬ್ಬಂದಿಗಳ ನ್ಯಾಯಯುತ ಹೋರಾಟಕ್ಕೆ ಉಡುಪಿಯ ಜನತೆ ಬೆಂಬಲ ನೀಡಬೇಕೆಂದು ಸಿಐಟಿಯು ಮನವಿ ಮಾಡಿದೆ.
ವಜಾ ಆಗಿರುವ ಎಲ್ಲಾ 16 ನೌಕರರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಬಾಕಿ ಇರುವ ಎಲ್ಲಾ ವೇತನವನ್ನು ಕೂಡಲೇ ನೀಡಬೇಕೆಂದು ಸಿಐಟಿಯು ಉಡುಪಿ ತಾಲೂಕು ಸಮಿತಿ ಕಾರ್ಯದರ್ಶಿ ಕವಿರಾಜ್ ಆಗ್ರಹಿಸಿದೆ.