ಬಿಜೆಪಿ ತಂತ್ರದಿಂದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿ ಸುನಂದಾ ಪಾಲನೇತ್ರ ಆಯ್ಕೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಬಿಜೆಪಿ ಪಕ್ಷದ ಸುನಂದಾ ಪಾಲನೇತ್ರ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಪಾಲಿಕೆಯ ಮೇಯರ್‌ ಸ್ಥಾನ ಬಿಜೆಪಿ ಪಾಲಾಗಿದೆ.

ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ ಪರವಾಗಿ 26 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ ಪರವಾಗಿ 22 ಮತ ಚಲಾವಣೆಯಾಗಿವೆ. ಮೇಯರ್ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಅಶ್ವಿನಿ ಅನಂತು, ಬಿಜೆಪಿ ಅಭ್ಯರ್ಥಿಯಾಗಿ ಸುನಂದಾ ಪಾಲನೇತ್ರಾ, ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಂತಕುಮಾರಿ ಸ್ಪರ್ಧೆ ಮಾಡಿದ್ದರು.

ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ರಾಜಕೀಯ ಕಿತ್ತಾಟದಿಂದಾಗಿ ಮೇಯರ್ ಸ್ಥಾನ ಪಡೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

25 ವರ್ಷಗಳಿಂದ ಪಾಲಿಕೆಯ ಚುನಾವಣೆಗಳಲ್ಲಿ 5 ಬಾರಿ ಸ್ಪರ್ಧೆಸಿದ್ದೇನೆ. ಇದು ನನ್ನ ಕೊನೆಯ ಚುನಾವಣೆ ಎಂದು ಮತದಾನದ ವೇಳೆ ಬಿಜೆಪಿ ಅಭ್ಯರ್ಥಿ ಹೇಳಿದ್ದರು. ಕಳೆದ ಬಾರಿ ಮೇಯರ್ ಚುನಾವಣೆ ಸಂದರ್ಭದಲ್ಲಿ ಸುನಂದಾ ಪಾಲನೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಪಾಲಿಕೆಯಲ್ಲಿ ಇದುವರೆಗೆ ಮೇಯರ್‌ ಸ್ಥಾನವನ್ನು ಪಡೆದುಕೊಂಡಿರಲಿಲ್ಲ.

ಸಚಿವ ಎಸ್‌.ಟಿ.ಸೋಮಶೇಖರ್ ಕಳೆದ ವಾರ ಜೆಡಿಎಸ್ ಮುಖಂಡ ಹಾಗೂ ಶಾಸಕ ಸಾ.ರಾ. ಮಹೇಶ್ ಅವರೊಂದಿಗೆ ಸಂಸದರು, ಶಾಸಕರು, ಬಿಜೆಪಿ ನಗರಾಧ್ಯಕ್ಷರು, ಮುಡಾ ಅಧ್ಯಕ್ಷರ ಜೊತೆಗೂಡಿ ಭೇಟಿಯಾಗಿ ಮೇಯರ್ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದರು ಎನ್ನಾಗಿದೆ.

ಈ ಹಿಂದೆ ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಲ್ಲಿ ಅಧಿಕಾರದ ಹಂಚಿಕೆ ಇದ್ದವು.  ಮೈತ್ರಿ ಮುರಿದು ಬಿದ್ದ ಹಿನ್ನೆಲೆಯಲ್ಲಿ ಸುನಂದಾ ಪಾಲನೇತ್ರ ಆಯ್ಕೆಯಾದರು. ಈ ಬಾರಿಯೂ ತಮಗೆ ಮೇಯರ್‌ ಸ್ಥಾನ ಸಿಗಬೇಕೆಂದು ಕಾಂಗ್ರೆಸ್‌ ಬಿಗಿಪಟ್ಟು ಹಿಡಿದಿದ್ದೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದುಬೀಳಲು ಕಾರಣವಾಯಿತು.

ಚುನಾವಣೆ ಮತ ಪ್ರಕ್ರಿಯೆಗಳು ಆರಂಭಗೊಳ್ಳುತ್ತಿದ್ದಂತೆ ಜೆಡಿಎಸ್ ಸದಸ್ಯರು ತಟಸ್ಥ ನಿಲುವು ತೋರಿದರು. ಆಗ ಕಾಂಗ್ರೆಸ್ ಸದಸ್ಯರು ಛೀಮಾರಿ ಹಾಕಿ ಹೊರನಡೆದರು.  ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸದಸ್ಯರ ನಡವಳಿಕೆಯಿಂದಾಗಿ ಗೆಲುವಿನ ದಿಕ್ಕು ಬದಲಾಯಿತು. ಜೆಡಿಎಸ್ ಸದಸ್ಯರ ವಿರುದ್ಧ ಧಿಕ್ಕಾರ, ಆಕ್ರೋಶ ಕೂಗಿದ ಕಾಂಗ್ರೆಸ್ ಸದಸ್ಯರು ಹೊರ ನಡೆದರು.

2021ರ ಫೆಬ್ರವರಿ ನಡೆದ ಮೇಯರ್‌ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆಮಾಡಿದ್ದ ಸುನಂದರ ಪಾಲನೇತ್ರ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷಕ್ಕೆ ರಾಜೀನಾಮೆಯನ್ನು ಸಲ್ಲಿಸಲು ಮುಂದಾಗಿದ್ದರು.

ಆಗಲೂ ಸುನಂದ ಪಾಲನೇತ್ರರನ್ನು ಮೇಯರ್ ಮಾಡಲು ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ತೀವ್ರರೀತಿಯ ಪ್ರಯತ್ನಕ್ಕೆ ಮುಂದಾಗಿದ್ದರು. ಆದರೆ ಕೊನೆಕ್ಷಣದಲ್ಲಿ ನಡೆದ ರಾಜಕೀಯ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸುನಂದ ಅವರಿಗೆ ಮೇಯರ್ ಸ್ಥಾನ ಸಿಗದಂತೆ ಮಾಡಲಾಗಿತ್ತು. ಆಗ ಸುನಂದ ಕ್ಷೇತ್ರದಲ್ಲಿನ ರಾಜಕಾರಣಕ್ಕೆ ಮನನೊಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಪತ್ರ ಬರೆಯುವ ಮೂಲಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ತಿಳಿಸಿದ್ದರು.

ಸುಳ್ಳು ಆಸ್ತಿ ಪ್ರಮಾಣ ಪತ್ರ ಸಲ್ಲಿಸಿದ್ದ ಆರೋಪದಡಿ ಹಿಂದಿನ ಮೇಯರ್ ರುಕ್ಮಿಣಿ ಮಾದೇಗೌಡ ಮೇಯರ್‌ ಸ್ಥಾನವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಅಂದಿನಿಂದ ಹಂಗಾಮಿ ಮೇಯರ್ ಆಗಿ ಅನ್ವರ್ ಬೇಗ್ ಕಾರ್ಯನಿರ್ವಹಿಸುತ್ತಿದ್ದರು.

ನಂತರ ರಾಜಕೀಯ ಬೆಳವಣಿಗೆಗಳ ನಡುವೆ ಮೈಸೂರು ಮಹಾನಗರ ಪಾಲಿಕೆಯಲ್ಲಿಯೂ ಸಾಕಷ್ಟು ಬದಲಾವಣೆಗಳು ಸಂಭವಿಸಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮುರಿದು ಬಿದ್ದಿತು.

ಮೈಸೂರು ಮೇಯರ್‌ ಆಗಿ ಸುನಂದಾ ಪಾಲನೇತ್ರ ಆಯ್ಕೆಯಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳಗೊಂಡು ಹಲವು ಬಿಜೆಪಿ ಮುಖಂಡರು ಶುಭಕೋರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *