ನವದೆಹಲಿ: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಿಂದ ಭಾರತೀಯರನ್ನು ಸ್ವದೇಶಕ್ಕೆ ಸ್ಥಳಾಂತರಿಸುವ ಪ್ರಯತ್ನದಲ್ಲಿರುವ ಇಂದು 85 ಭಾರತೀಯರನ್ನು ಹೊತ್ತ ವಾಯುಪಡೆಯ ಸಿ-130 ಜೆ ವಿಮಾನವು ಬೆಳಗ್ಗೆ ಪ್ರಯಾಣ ಆರಂಭಿಸಿದೆ.
ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಎಎನ್ಐ ಸುದ್ದಿಸಂಸ್ಥೆಯು ಕಾಬೂಲ್ ನಿಂದ ಹೊರ ವಿಮಾನವು ಇಂಧನ ತುಂಬಿಸಿಕೊಳ್ಳುವ ಸಲುವಾಗಿ ತಜಕಿಸ್ತಾನ್ ನಲ್ಲಿ ಇಳಿದಿದೆ. ಕಾಬೂಲ್ ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತೀಯ ಅಧಿಕಾರಿಗಳು ನೆರವಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ವರದಿ ಮಾಡಿದೆ.
ಇದನ್ನು ಓದಿ: ಅಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್-ಅಮೆರಿಕಕ್ಕೆ ಅವಮಾನಕಾರೀ ಸೋಲು: ಸಿಪಿಐ(ಎಂ) ಮತ್ತು ಸಿಪಿಐ
ಸರ್ಕಾರ ಸಂಘಟಿತ ಪ್ರಯತ್ನದೊಂದಿಗೆ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕರೆತರುತ್ತಿದೆ. ಕಳೆದ ಸೋಮವಾರ ಕಾಬೂಲ್ ತಾಲಿಬಾನ್ ಉಗ್ರರ ವಶವಾದ ನಂತರ ಭಾರತೀಯ ವಾಯುಪಡೆಯ ಎರಡು ವಿಮಾನಗಳು ಅಮೆರಿಕ ಭದ್ರತಾ ಪಡೆಗಳಿಂದ ಕ್ಲಿಯರೆನ್ಸ್ ಪಡೆದು ಕೆಲ ಪತ್ರಕರ್ತರು, ಐಟಿಬಿಪಿ ಸಿಬ್ಬಂದಿ ಸೇರಿದಂತೆ 180 ಅಧಿಕಾರಿಗಳನ್ನು ಭಾರತಕ್ಕೆ ಕರೆತಂದಿದ್ದವು.
ಈಗಾಗಲೇ ಭಾರತದ ರಾಜತಾಂತ್ರಿಕ ಸಿಬ್ಬಂದಿಯನ್ನು ಸ್ಥಳಾಂತರಿಸಿದೆ. ಆದರೂ ಸಹ ಸುಮಾರು 1,000 ನಾಗರಿಕರು ಯುದ್ಧ ಪೀಡಿತ ದೇಶದ ಹಲವಾರು ನಗರಗಳಲ್ಲಿ ಉಳಿದಿದ್ದಾರೆ. ಅವರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ. ಅಲ್ಲದೆ ಅವರಲ್ಲಿನ ಕೆಲವರು ದೂತಾವಾಸದಲ್ಲಿ ನೋಂದಾಯಿಸಿಕೊಂಡಿಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ತಾಲಿಬಾನ್ ಉಗ್ರರೊಂದಿಗೆ ಮಾತುಕತೆಗೆ ಸಿದ್ಧವಿರುವ ಭಾರತ ಸರ್ಕಾರವು ಈಗಾಗಲೇ ಸೂಚನೆ ನೀಡಿದೆ. ಆದರೂ ತಾಲಿಬಾನ್ ಒಂದು ಅಧಿಕೃತ ಸಂಘಟನೆಯಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದೆ. ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ವೃತ್ತಿಪರರನ್ನು ಭಾರತ ಇತ್ತೀಚೆಗೆ ಹಿಂದಕ್ಕೆ ಕರೆಸಿಕೊಂಡಿತ್ತು.
ತಾಲಿಬಾನಿಗಳು ಕಾಬೂಲ್ ವಶಪಡಿಸಿಕೊಂಡ ನಂತರದ ದಿನಗಳಲ್ಲಿ ಭಾರತದೊಂದಿಗಿನ ಎಲ್ಲಾ ಆಮದು ಮತ್ತು ರಫ್ತುಗಳು ನಿಂತಿವೆ. ಪಾಕಿಸ್ತಾನದ ಸಾಗಾಣಿಕಾ ಮಾರ್ಗಗಳ ಮೂಲಕವೇ ಸರಕುಗಳು ಸಾಗಬೇಕಿದೆ. ತಾಲಿಬಾನ್ ಸಾಗಣೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಇದೇ ಕಾರಣದಿಂದಲೇ ಅಫ್ಘಾನಿಸ್ತಾನದಿಂದ ರಫ್ತು ಮತ್ತು ಆಮದು ನಿಂತಿವೆ ಎಂದು ಭಾರತೀಯ ರಫ್ತು ಸಂಸ್ಥೆಯ ಒಕ್ಕೂಟದ ಮಹಾನಿರ್ದೇಶಕ(ಎಫ್ಐಇಒ) ಡಾ.ಅಜಯ್ ಸಹಾಯ್ ಹೇಳಿದ್ದಾರೆ.