ಡಾ.ಸಿ.ಎಸ್. ದ್ವಾರಕಾನಾಥ್ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ವಕೀಲ ಡಾ.ಸಿ.ಎಸ್. ದ್ವಾರಕಾನಾಥ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಬಾವುಟ ನೀಡುವ ಮೂಲಕ ದ್ವಾರಕಾನಾಥ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನ. ಇದರ ಅಂಗವಾಗಿ ಕಾಂಗ್ರೆಸ್‌ ಕಛೇರಿಯಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಇದನ್ನು ಓದಿ: ಯೋಧ ಬದುಕಿದ್ದರೂ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ ಕೇಂದ್ರ ಸಚಿವ ನಾರಾಯಣಸ್ವಾಮಿ!

ಡಾ.ಸಿ.ಎಸ್‌. ದ್ವಾರಕನಾಥ್‌ ಅವರು ದಲಿತ, ಹಿಂದುಳಿದ ವರ್ಗ ಹಾಗೂ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಈ ಹಿಂದೆ ಸಚಿವ ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಲ್ಲಿ ದ್ವಾರಕನಾಥ್‌ ಅವರು ಪಕ್ಷದ ಮಾರ್ಗದರ್ಶಕರಾಗಿ ಹಿಂದುಳಿದ, ಅಲ್ಪಸಂಖ್ಯಾತ ವರ್ಗವನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು. ಕೆಲ ದಿನಗಳ ಬಳಿಕ ಪಕ್ಷದಲ್ಲಿ ಭಿನ್ನಾಭಿಪ್ರಾಯವುಂಟಾಗಿ ಬಿಎಸ್‌ಆರ್‌ ತೊರೆದಿದ್ದರು.

ನಂತರ ಬಿಎಸ್‌ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಬಿಎಸ್‌ಪಿಯಿಂದ 2019ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕೆಲ ಕಾಲ ಎಸ್‌ಡಿಪಿಐ ಪಕ್ಷದ ಹಲವು ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.  ನಂತರದ ದಿನಗಳಲ್ಲಿ ರಾಜಕೀಯದಿಂದ ದೂರ ಉಳಿದಿದ್ದ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.

ದ್ವಾರಕಾನಾಥ್ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸುವುದರೊಂದಿಗೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಕೆ. ರೆಹಮಾನ್ ಖಾನ್, ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ರಾಮಲಿಂಗಾ ರೆಡ್ಡಿ, ಶಾಸಕ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *