ಸೌರಫಲಕ ಹಗರಣದ ಆರೋಪಿ ಉಮ್ಮನ್‌ ಚಾಂಡಿ ಸೇರಿ ವಿವಿಧ ಮುಖಂಡರ ಮೇಲೆ ತನಿಖೆ ಆರಂಭಿಸಿದ ಸಿಬಿಐ

ನವದೆಹಲಿ: ಕೇರಳದಲ್ಲಿ ಸೌರಶಕ್ತಿ(ಸೋಲಾರ್‌) ಹಗರಣಕ್ಕೆ ಸಂಬಂಧಿಸಿದಂತೆ ಬಹುಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಸಿಬಿಐ ಸಂಸ್ಥೆ ತನಿಖೆ ಪ್ರಾರಂಭಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ಕುರುಕುಳ ಆರೋಪದ ಹಿನ್ನೆಲೆಯಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಸೇರಿ ಕಾಂಗ್ರೆಸ್‌ ಪಕ್ಷದ ನಾಯಕರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಕೇರಳ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಅಡೂರ್ ಪ್ರಕಾಶ್, ಹಿಬಿ ಈಡನ್, ಎಪಿ ಅಬ್ದುಲ್ ಕುಟ್ಟಿ, ಎಪಿ ಅನಿಲ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳ, ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಪಟ್ಟಂತೆ ಎಫ್ಐಆರ್ ದಾಖಲಿಸಲಾಗಿತ್ತು. ಸಿಬಿಐನಿಂದ ತನಿಖೆ ಮುಂದುವರೆದಿದೆ.

ಇದನ್ನು ಓದಿ: ವಿಶ್ವಾಸಾರ್ಹತೆಯನ್ನು ಕಳಕೊಂಡ ಕೇರಳದ ಯುಡಿಎಫ್ ಸರಕಾರ ಮತ್ತು ಮುಖ್ಯಮಂತ್ರಿ

ಸೌರಫಲಕ ಯೋಜನೆಗಾಗಿ ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿ ಸರಿತಾ ನಾಯರ್‌ಗೆ ಶಿಕ್ಷೆಯಾಗಿದೆ. ನಾಲ್ಕು ವರ್ಷಗಳಿಂದ ಪ್ರಮುಖ ರಾಜಕೀಯ ಮುಖಂಡರ ವಿರುದ್ಧ ಸಾಕ್ಷಿ ಸಿಗದ ಕಾರಣ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಪ್ರಕರಣದಲ್ಲಿ ಬಿಜು ರಾಧಾಕೃಷ್ಣನ್ ಮೊದಲ ಆರೋಪಿಯಾಗಿದ್ದು, ವಿವಿಧ ಪ್ರಕರಣಗಳಲ್ಲಿ ಅಪರಾಧಿ ಎನಿಸಿ ಜೈಲಿನಲ್ಲಿದ್ದಾರೆ.

ಉದ್ಯಮಿ ಅಬ್ದುಲ್‌ ಮಜೀದ್‌ ಎಂಬವರು ಕೋಝಿಕ್ಕೋಡ್‌ ಕಸಬಾ ಪೊಲೀಸರಿಗೆ ಬಿಜು ರಾಧಾಕೃಷ್ಣನ್, ಸರಿತಾ ಹಾಗೂ ಮಣಿಮೊನ್ ಎಂಬುವರ ವಿರುದ್ಧ ವಂಚನೆ ಪ್ರಕರಣ ಸಂಬಂಧಿಸಿದಂತೆ ದೂರು ದಾಖಲಿಸಿದ್ದರು. ಕೋಳಿಕ್ಕೋಡ್, ಕಣ್ಣೂರ್, ಮಲಪ್ಪುರಂ, ವಯನಾಡು ಸೇರಿದಂತೆ ಹಲವೆಡೆ ಬಿಜು- ಸರಿತಾ ಸೌರಶಕ್ತಿ ಫಲಕ ಕಚೇರಿ ಹೊಂದಿದ್ದರು ಹಾಗೂ ಉದ್ಯಮಿ, ರಾಜಕಾರಣಿಗಳನ್ನು ವಂಚಿಸಿದ್ದಾರೆ.

2012ರಲ್ಲಿ ಉದ್ಯಮಿ ಅಬ್ದುಲ್ ದೂರು ನೀಡಿದ್ದರೂ ವಿಚಾರಣೆ ಆರಂಭವಾಗಿದ್ದು, 2018ರಿಂದ. ಮೂರನೇ ಆರೋಪಿ ಮಣಿಯೊನ್ ಖುಲಾಸೆಗೊಂಡಿದ್ದರೆ, ಸರಿತಾಗೆ ಶಿಕ್ಷೆಯಾಗಿದೆ. ಇನ್ನು 30ಕ್ಕೂ ಅಧಿಕ ವಂಚನೆ ಪ್ರಕರಣಗಳು ಸರಿತಾ ಹಾಗೂ ಬಿಜು ಮೇಲಿದೆ.

ನ್ಯಾಯಾಂಗ ಸಮಿತಿಯ ಮುಂದೆ ನಡೆದ ವಿಚಾರಣೆ ಸಂದರ್ಭದಲ್ಲಿ ದೆಹಲಿಯ ಚಾಂದಿನಿ ಚೌಕ್‌ನ ಶಾಪಿಂಗ್ ಮಾಲ್‌ನಲ್ಲಿ ಉದ್ಯಮಿ ಎಂ.ಕೆ ಕುರುವಿಲ್ಲಾಗೆ 1.10 ಕೋಟಿ ರು ನಾನೇ ಖುದ್ದು ಕೊಟ್ಟೆ ಎಂದು ಸರಿತಾ ಹೇಳಿದ್ದರು. ನಂತರ ದೆಹಲಿಯ ವಿಜ್ಞಾನ ಭವನದಲ್ಲಿ ಡಿಸೆಂಬರ್ 27, 2012ರಂದು  ಉಮ್ಮನ್‌ ಚಾಂಡಿರನ್ನು ಭೇಟಿಯ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

ಹಗರಣದ ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಅವರ ಗೆಳತಿ ಸರಿತಾ ನಾಯರ್ ಕಾರ್ಪೊರೇಟ್ ಲಾಬಿಗಾರ್ತಿಯಾಗಿ ಪಾತ್ರವಹಿಸಿದ್ದರು. ಇದರಿಂದ ಉಮ್ಮನ್ ಚಾಂಡಿ ಸರ್ಕಾರದ ಬಹುತೇಕ ಸಚಿವರು, ಶಾಸಕರನ್ನು ಬಲೆಗೆ ಬೀಸಿದ ಆರೋಪ ಹೊತ್ತುಕೊಂಡಿದ್ದರು. ತನಿಖೆಯ ಸಂದರ್ಭದಲ್ಲಿ 60,000 ಕ್ಕೂ ಅಧಿಕ ಫೋನ್ ಕರೆ ದಾಖಲೆಯನ್ನು ಪೊಲೀಸರು ಪರೀಕ್ಷಿಸಿದ್ದರು. ಸರಿತಾ ಬಳಿಯಿದ್ದ 6 ಫೋನ್‌ಗಳಲ್ಲಿನ ಕರೆಗಳನ್ನು ತನಿಖೆಗೊಳಪಡಿಸಲಾಗಿತ್ತು.

ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ರಾಜ್ಯ ಪೊಲೀಸರು ತನಿಖೆ ನಡೆಸಿದ್ದ ಈ ಪ್ರಕರಣ ಇದೀಗ ಸಿಬಿಐ ತನಿಖೆಗೆ ಮುಂದಾಗಿದೆ.

Donate Janashakthi Media

Leave a Reply

Your email address will not be published. Required fields are marked *