ಬೆಂಗಳೂರು: “ನಮ್ಮ ಧ್ವನಿಗೆ ನಮ್ಮ ಸರ್ಕಾರವೇ ಬೆಲೆ ಕೊಡುತ್ತಿಲ್ಲ. ಮೀಸಲು ಕ್ಷೇತ್ರ ಎನ್ನುವ ಕಾರಣಕ್ಕಾಗಿ ಏನೋ ಕಡೆಗಣಿಸುತ್ತಿದ್ದಾರೆ. ನಮ್ಮ ಸರ್ಕಾರವೇ ಈ ತರಹ ತಾರತಮ್ಯ ಮಾಡಬಾರದು” ಎಂದು ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆಕ್ರೋಶಗೊಂಡಿದ್ದಾರೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಇಂದು ತಮ್ಮದೇ ಸರ್ಕಾರದ ವಿರುದ್ಧ ವಿಧಾನಸೌಧದ ಎದುರು ಮೆಟ್ಟಿಲಿನ ಮೇಲೆ ಧರಣಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಆದಷ್ಟು ಬೇಗ ನಮ್ಮ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಲಿ ಎಂದು ಅನಿಸುತ್ತಿದೆ. ಸಚಿವ ಆರ್.ಅಶೋಕ್ ಈ ರೀತಿ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಮೂಡಿಗೆರೆ ತಾಲ್ಲೂಕನ್ನು ಸರಕಾರ ಕಡೆಗಣಿಸುತ್ತಿದೆ. ಮಳೆಯಿಂದ ವಿಪರೀತ ಹಾನಿಗೊಳಗಾದ ಪ್ರದೇಶ ಅದಾಗಿದೆ. ಅತಿವೃಷ್ಟಿ ತಾಲೂಕುಗಳ ಪಟ್ಟಿಯಿಂದ ಮೂಡಿಗೆರೆಯನ್ನು ಕೈಬಿಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿರುದ್ಧ ಶಾಸಕ ಎಂಪಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇದನ್ನು ಓದಿ: ಕೆ.ಎಸ್. ಈಶ್ವರಪ್ಪ ಪ್ರಚೋಧನಕಾರಿ ಭಾಷಣ : ಕಾನೂನುಕ್ರಮ ಜರುಗಿಸುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ ವಕೀಲ
ಅತಿವಷ್ಟಿ ತಾಲೂಕುಗಳ ಪಟ್ಟಿ ಘೋಷಣೆಯಲ್ಲಿ ಅನ್ಯಾಯವಾಗಿದೆ. ರಾಜಕೀಯ ಕಾರಣಕ್ಕೆ ಅತಿವೃಷ್ಟಿ ತಾಲೂಕು ಎಂದು ಘೋಷಣೆ ಮಾಡಿಲ್ಲ. ಕಂದಾಯ ಸಚಿವರ ಧೋರಣೆಗೆ ಎಂಪಿ ಕುಮಾರಸ್ವಾಮಿ ಸಿಟ್ಟಾಗಿದ್ದು, ಮೂಡಿಗೆರೆ ತಾಲೂಕನ್ನು ಅತಿವೃಷ್ಟಿ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ತೀವೃ ವಿರೋಧ ವ್ಯಕ್ತಪಡಿಸಿದ್ದಾರೆ.
ಆರ್. ಅಶೋಕ್ ಈ ರೀತಿಯಾಗಿ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಬರುತ್ತಾರೆ, ಆದರೆ ಏನೂ ಮಾಡುವುದಿಲ್ಲ. ಇವರಿಗೆ ಬರೀ ಮಾತಲ್ಲಿ ಹೇಳಿದರೆ ಅರ್ಥವಾಗಲ್ಲ. ಅದಕ್ಕಾಗಿ ನಾನು ಇಲ್ಲಿಯೇ ಕೂತಿರುತ್ತೇನೆ ಎಂದು ಶಾಸಕ ಎಂಪಿ ಕುಮಾರಸ್ವಾಮಿ ಹೇಳಿದರು.
ಸಚಿವ ಆರ್.ಅಶೋಕ ಆಪ್ತ ಕಾರ್ಯದರ್ಶಿ ಮೂಲಕ ಸಂಧಾನ ಯತ್ನ ವಿಫಲವಾದ ಬಳಿಕ ಖುದ್ದು ಅಶೋಕ್ ಅವರೇ ಶಾಸಕ ಸ್ಥಳಕ್ಕೆ ಆಗಮಿಸಿದರು. ಸಚಿವರ ಮುಂದೆ ಎಂಪಿ ಕುಮಾರಸ್ವಾಮಿ ಕಣ್ಣೀರು ಹಾಕಿದರು. ನಾನು ಹಿರಿಯ ಶಾಸಕ, ನನಗೇ ಹಿಗೆ ಮಾಡೋದು ಸರಿಯಾ? ಎಷ್ಟು ಬೇಜಾರಾಗಲ್ಲ ನಮಗೆ ಹೇಳಿ. ಮಂತ್ರಿ ಸ್ಥಾನ ಕೊಡದೇ ಇದ್ದಾಗಲೂ ನಾನು ನಿಮ್ಮೆಲ್ಲರ ಮಾತು ಕೇಳಿಲ್ವಾ? ನಾನು ಪಕ್ಷಕ್ಕೆ ಲಾಯಲ್ ಆಗಿಲ್ವಾ? ಯಾವತ್ತಾದ್ರೂ ಬ್ಲ್ಯಾಕ್ ಮೇಲ್ ಮಾಡಿದ್ದೀನಾ? ನೀವೆಲ್ಲ ಹೇಳಿದ್ದು ಕೇಳಿಕೊಂಡು ಇಲ್ಲವಾ ನಾನು? ನನ್ನ ಮಾತಿಗೆ ತೂಕ ಇಲ್ಲ ಅಂದ್ರೆ ಹೇಗೆ? ಎಂದು ಅಳುತ್ತಲೇ ಆರ್ ಅಶೋಕ್ ಮುಂದೆ ಎಂಪಿ ಕುಮಾರಸ್ವಾಮಿ ತಮ್ಮ ಅಳಲು ತೋಡಿಕೊಂಡರು.
ಅಲ್ಲದೆ, ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಇರುವುದಕ್ಕೂ ಬೇಸರ ವ್ಯಕ್ತಪಡಿಸಿದ್ದರು. ನಿರೀಕ್ಷೆಯೊಂದಿಗೆ ಬೆಂಗಳೂರಿಗೆ ಬಂದಿದೆ. ಆದರೆ ನಿರಾಸೆಯೊಂದಿಗೆ ಮರಳಿ ಹೋಗುತ್ತಿದ್ದೇನೆ ಎಂದು ಸಂಪುಟ ವಿಸ್ತರಣೆ ಬಳಿಕ ಅವರು ಹೇಳಿಕೊಂಡಿದ್ದರು.