ಮಡಿಕೇರಿ: ಹಲವು ವರ್ಷಗಳಿಂದ ನನ್ನ ಬೆನ್ನಿಗೆ ಬೇತಾಳದಂತೆ ಕಾಡುತ್ತಿರುವುದರಿಂದಲೇ ನನಗೆ ಸಚಿವ ಸ್ಥಾನ ತಪ್ಪಿತು ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅದು ನಾನೇ ಬೆಳೆಸಿದ ಬೇತಾಳ, ಆತನನ್ನು ಬೆಳೆಸಬಾರದಿತ್ತು ಎನ್ನೋದು ನನಗೆ ಗೊತ್ತಿರಲಿಲ್ಲ. ಈಗ ನನ್ನ ತಲೆಗೆ ಬಂದಿದೆ ಎಂದು ಹೊರ ಹಾಕಿದ್ದಾರೆ.
ಸಂಭಾವ್ಯ ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿತ್ತು, ಕೊನೇ ಕ್ಷಣದಲ್ಲಿ ಕೈಬಿಟ್ಟಿದ್ದಾರೆ. ಅವರಿಗೆ ದೇವರು ಒಳ್ಳೇದು ಮಾಡಲಿ ಎಂದರು. 1983ರಿಂದ ಬೇತಾಳವನ್ನು ಹಿಂದೆ ಕಟ್ಕೊಂಡು ಬಂದೆ. ಆ ಬೇತಾಳ ಚೆನ್ನಾಗಿ ಬೆಳೀತು, ಈಗ ನನಗೇ ತಲೆಗೆ ಹೊಡೀತಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಅವರು, ನಾನೇ ಬೆಳೆಸಿದ ಬೇತಾಳದಿಂದ ನನಗೆ ಸಚಿವ ಸ್ಥಾನ ಕೈತಪ್ಪಿಹೋಯಿತು. ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೊಡಗಿನ ಜನ ಪ್ರತಿನಿಧಿಯೊಬ್ಬರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ನಡೆದಿರುವ 8 ಚುನಾವಣೆಗಳಲ್ಲಿ ಬಿಜೆಪಿ 7 ಬಾರಿ ಸೋತಿದೆ. ಆದರೆ ಮಡಿಕೇರಿಯಲ್ಲಿ ಅತ್ಯಧಿಕ ಬಹುಮತ ಮೂಲಕ ಬಿಜೆಪಿಯನ್ನು ಗೆಲ್ಲಿಸಿದೆವು. ಇದೇ ತಪ್ಪಾಗಿ ಪರಿಣಮಿಸಿದೆ ಎನ್ನಿಸುತ್ತಿದೆ ಎಂದು ಬಿಜಿಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಸಚಿವ ಸಂಪುಟದಲ್ಲಿ ಜಿಲ್ಲೆಯನ್ನು ಕಡೆಗಣಿಸಿರುವುದಕ್ಕೆ ನನಗೂ ಜಿಲ್ಲೆಯ ಜನರಿಗೂ ಸಾಕಷ್ಟು ಬೇಸರವಾಗಿದೆ.
ಇದನ್ನೂ ಓದಿ : ಸಂಪುಟ ಸಂಕಟ : ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ
ನನಗೆ ಸಚಿವಸ್ಥಾನ ಸಿಗೋದು ಖಚಿತ ಅಂತ ಹೈಕಮಾಂಡ್ ವರಿಷ್ಠರಾದ ಮೂವರಿಂದ ಕರೆ ಬಂದಿತ್ತು. ಆದರೆ ಸಚಿವ ಸ್ಥಾನ ಪಡೆಯುವವರ ಪಟ್ಟಿ ಬೆಂಗಳೂರಿಗೆ ಬಂದು ತಲುಪುವಷ್ಟರಲ್ಲಿ ಸಾಕಷ್ಟು ಬದಲಾಗಿದೆ. ಹೈಕಮಾಂಡ್ ಕೂಡ ಈ ಬಾರಿ ಸಚಿವ ಸಂಪುಟ ಪುನರ್ ರಚನೆ ಸಂದರ್ಭ ಪ್ರತೀ ಜಿಲ್ಲಾವಾರು ಮತ್ತು ಜಾತಿವಾರು ಸಾಮಾಜಿಕ ನ್ಯಾಯ ಒದಗಿಸುವುದಾಗಿ ಹೇಳಿತ್ತು. ಆದರೆ ಅದನ್ನು ಸಂಪೂರ್ಣ ಉಲ್ಲಂಘನೆ ಮಾಡಿದ್ದಾರೆ. ಕೊಡಗು ಸೇರಿ 13 ಜಿಲ್ಲೆಗೆ ಸಚಿವ ಸ್ಥಾನ ಇಲ್ಲ. ಮುಂದೆಯಾದರೂ ಸಚಿವ ಸ್ಥಾನ ನೀಡಲಿ. ಮೊದಲ ಸುತ್ತಿನಲ್ಲಿ ಸಚಿವನಾಗಿ ಮಾಡದಿರಲು ನನ್ನಲ್ಲಿ ಲೋಪವೇನಿತ್ತು? ಎಂದು ಪಕ್ಷದ ವರಿಷ್ಠರಿಗೆ ಅಪ್ಪಚ್ಚು ರಂಜನ್ ಪ್ರಶ್ನೆ ಮಾಡಿದರು.
ಬೆಂಗಳೂರಿಗೆ 8 ಮಂದಿ, ಮಂಗಳೂರಿಗೆ ಮೂರು ಮಂದಿ ಹಾಗೂ ಬೆಳಗಾವಿಯ ಐದು ಮಂದಿ ಸಚಿವರಾಗಿದ್ದಾರೆ. ಆದರೆ ಕೊಡಗನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಶಾಸಕ ಅಪ್ಪಚ್ಚು ರಂಜನ್ ತೀವ್ರ ಅಸಮಾಧಾನ ಹೊರಹಾಕಿದರು,
ಸಂಸದರು ಕೂಡ ಈ ಕುರಿತು ಹೈಕಮಾಂಡ್ ಜೊತೆಗೆ ಮಾತನಾಡಬಹುದಿತ್ತು. ಜಿಲ್ಲೆಯಲ್ಲಿ ನಾಲ್ಕೈದು ಬಾರಿ ಶಾಸಕ ಶಾಸಕರಾಗಿರುವವರು ಇದ್ದಾರೆ. ಯಾರಿಗಾದರೂ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವಂತೆ ಹೇಳಬಹುದಿತ್ತು. ಆದರೆ ಅವರು ಕೂಡ ಸುಮ್ಮನಾಗಿಬಿಟ್ಟರು. ನಾವು ಜಿಲ್ಲೆಯಲ್ಲಿ ಸಂಸದರಿಗೆ 80 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿಕೊಟ್ಟಿದ್ದೇವೆ.
ಹದಿನೈದು ದಿನಗಳವರೆಗೂ ಕಾಯಿರಿ ಎಂದು ರಾಜ್ಯ ನಾಯಕರೂ ಹೇಳುತ್ತಿದ್ದಾರೆ. ಕಾದು ನೋಡುವೆ, ಇನ್ನೂ ಮಿಂಚಿಲ್ಲ. ಸಚಿವ ಸ್ಥಾನ ಸಿಗದಿದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಗೆ ಸಾಕಷ್ಟು ನಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವರದಿ: ಆರ್ವಿ ಹಸನ್