ಬರೀ ಹೆಸರು ಬದಲಾವಣೆ ಕೆಲಸ ಅಲ್ಲ- ಧ್ಯಾನ್​ಚಂದ್​ ವಿವಿ ಆರಂಭಿಸಿ: ಡಿಕೆ ಶಿವಕುಮಾರ್ ಆಗ್ರಹ

ಬೆಂಗಳೂರು: ಕೇಂದ್ರ ಸರಕಾರದಿಂದ ಕೊಡಲಾಗುವ ಖೇಲ್​ರತ್ನ ಪ್ರಶಸ್ತಿ ಹೆಸರು ಬದಲಾವಣೆ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ದ್ವೇಷದ ರಾಜಕಾರಣ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ. ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಹಾಗಾಗಿ ಖೇಲ್​ರತ್ನ ಪ್ರಶಸ್ತಿಗಾಗಿ ಅವರ ಹೆಸರನ್ನು ಒಟ್ಟು ಕೊಡಲಾಗುತ್ತಿದೆ. ನಿಮ್ಮ ಅವಧಿಯಲ್ಲಿ ಧ್ಯಾನ್​ಚಂದ್​ ವಿಶ್ವವಿದ್ಯಾಲಯ ಆರಂಭಿಸಿ. ಅದರಿಂದ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಮುಂದಾಗಿ, ಕೇವಲ ಗಾಂಧಿ ಕುಟುಂಬದ ಹೆಸರು ಬದಲಿಸುವ ಕೆಲಸ ಮಾಡಬೇಡಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್​ ಹೆಸರು ಬದಲಿಸುವಂತೆ ಸಿ.ಟಿ. ರವಿ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ್ದು, ಇಂದಿರಾ ಕ್ಯಾಂಟೀನ್​ ಹೆಸರು ಬದಲಿಸಲು ಕೈಹಾಕಿದ್ರೆ ಸುಮ್ಮನಿರಲ್ಲ. ನಾವೇನು ಸುಮ್ಮನೆ ಕೂರುವವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ: ವಿವಿಧ ಕಂಪನಿಗಳ ಜತೆಗಿನ ತೆರಿಗೆ ವ್ಯಾಜ್ಯ ಕುರಿತ ತಿದ್ದುಪಡಿ ಮಸೂದೆಗೆ ಲೋಕಸಭೆ ಅನುಮೋದನೆ

ಜನಾಭಿಪ್ರಾಯದಂತೆ ಹೆಸರು ಬದಲಾವಣೆ ಎನ್ನುವವರು, ಪೆಟ್ರೋಲ್, ಡೀಸೆಲ್, ಗ್ಯಾಸ್​ ದರ ಇಳಿಸುವಂತೆಯೂ ಜನರ ಆಕ್ರೋಶವಾಗಿದೆ. ತೈಲ ದರಗಳನ್ನು ಇಳಿಸುವಂತೆ ಜನಾಭಿಪ್ರಾಯ ವ್ಯಕ್ತವಾಗುತ್ತಿದೆ. ಹಾಗಾದರೆ ನೀವ್ಯಾಕೆ ತೈಲ ದರ ಇಳಿಕೆ ಮಾಡಲು ಮುಂದಾಗುತ್ತಿಲ್ಲ. ಗಿಮಿಕ್ ರಾಜಕಾರಣ ಬಿಟ್ಟು, ಜನಸೇವೆ ಮಾಡಲು ಪ್ರಯತ್ನಿಸಿ. ಕೇಂದ್ರ ಸರ್ಕಾರದ ನಡೆಯಿಂದ ದ್ವೇಷದ ಮನೋಭಾವ ಹೆಚ್ಚುತ್ತಿದೆ ಎಂದು ಶಿವಕುಮಾರ್ ಕಿಡಿಕಾರಿದ್ದಾರೆ.

ಬಿಜೆಪಿ ಅವಧಿಯಲ್ಲಿ ಅಟಲ್ ಸಾರಿಗೆ ಎಂದು ಯೋಜನೆ ಜಾರಿ ಮಾಡಿತ್ತು. ನಮ್ಮ ಅವಧಿಯಲ್ಲಿ ಅಟಲ್ ಸಾರಿಗೆ ಯೋಜನೆ ಮುಂದುವರಿಸಿದ್ವಿ. ಸಾಧಕರು, ಮಹನೀಯರ ಹೆಸರಿನ ಯೋಜನೆಗೆ ತಡೆ ನೀಡಬೇಡಿ. ಕೇವಲ ಹೆಸರು ಬದಲಾವಣೆಯೇ ಸರ್ಕಾರದ ಸಾಧನೆಯಲ್ಲ ಎಂದು ಡಿ.ಕೆ. ಶಿವಕುಮಾರ್​ ತಿರುಗೇಟು ನೀಡಿದರು.

ಧ್ಯಾನ್ ಚಂದ್ ನಮ್ಮ ದೇಶದ ಆಸ್ತಿ. ಆ ಬಗ್ಗೆ ತಕರಾರು ಇಲ್ಲ. ಆದರೆ, ಅವರ ಹೆಸರಲ್ಲಿ ಇನ್ನೇನಾದರೂ ಪ್ರಶಸ್ತಿ ಅಥವಾ ಸಂಸ್ಥೆ ಮಾಡಲಿ. ಗಾಂಧಿ ಪರಿವಾರದ ಹೆಸರಿದೆ ಅನ್ನೋ ಕಾರಣಕ್ಕೆ ಈ ರೀತಿ ಮಾಡಿದರೆ ನಾವು ಸುಮ್ನೆ ಕೂರುವವರಲ್ಲ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *