ತುಮಕೂರು: 8 ರಿಂದ 9 ವರ್ಷಗಳ ಕಾಲ ಸಾವಿರಾರು ಕಾರ್ಮಿಕರಿಂದ ದುಡಿಸಿಕೊಂಡು ಇದ್ದಕಿದ್ದ ಹಾಗೆ ಕಂಪನಿ ದಿವಾಳಿಯಾಗಿದೆ ಎಂದು ಕಾರ್ಮಿಕರಿಗೆ ವೇತನ ನೀಡುತ್ತಿಲ್ಲ. ಇದರಿಂದ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಕಾರ್ಮಿಕರ ಸಂಬಳದಿಂದ ಕಡಿತ ಮಾಡಿದ ಭವಿಷ್ಯ ನಿಧಿ ಹಣವನ್ನು ಸಹ ಇಲಾಖೆಗೆ ಜಮಾ ಮಾಡದ ಕಾರ್ಖಾನೆ ಆಡಳಿತ ಮಂಡಳಿ ವಂಚಿಸಿದೆ ಎಂದು ಆರೋಪಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ನೇತೃತ್ವದಲ್ಲಿ ಸತ್ಯಮಂಗಲ ಕೈಗಾರಿಕಾ ಪ್ರದೇಶದ ಸ್ಕಾಟ್ ಗಾರ್ಮೆಂಟ್ಸ್ ಕಾರ್ಮಿಕರು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದರು.
ಕಳೆದ ಒಂದೂವರೇ ವರ್ಷದಿಂದಲೂ ಭವಿಷ್ಯ ನಿಧಿ ಹಣ ಜಮೆ ಮಾಡದ ಕಾರ್ಖಾನೆ ಕಾರ್ಮಿಕರನ್ನು ವಂಚಿಸಿದೆ. ಭವಿಷ್ಯ ನಿಧಿ ಆಯುಕ್ತರ ಕಚೇರಿಗೆ ಅಲೆದು ಸಾಕಾಗಿದೆ. ಪಿಎಫ್ ಖಾತೆಯಲ್ಲಿ ಇರುವ ಹಣದಲ್ಲಿ ಶೇಕಡ 50ರಷ್ಟು ಪಡೆದುಕೊಳ್ಳಲು ಸಾಧ್ಯ ಎಂದು ಆಯುಕ್ತರು ಹೇಳುತ್ತಿದ್ದಾರೆ. ಒಂದು ಸುತ್ತಿನ ಹಣ ಮಾತ್ರ ನೀಡಿದ್ದಾರೆ. ಉಳಿದ ಹಣ ನೀಡುತ್ತಿಲ್ಲ ಎಂದು ಕಾರ್ಮಿಕರು ಸಂಕಷ್ಟವನ್ನು ತೋಡಿಕೊಂಡರು.
ಕೋವಿಡ್ ಲಾಕ್ಡೌನ್ನಿಂದಾಗಿ ಕೆಲಸ ಕಳೆದುಕೊಂಡ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಭವಿಷ್ಯ ನಿಧಿ ಆಯುಕ್ತರನ್ನು ಕರೆಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಕಾರ್ಮಿಕ ಭವಿಷ್ಯ ನಿಧಿ ಸಂಘಟನೆ ಲೆಕ್ಕಾಧಿಕಾರಿ ಮುಕುಂದಪ್ಪ, ಭವಿಷ್ಯ ನಿಧಿ ನಿರೀಕ್ಷಕ ಹರಿ ಭರವಸೆ ನೀಡಿದರು. ಉಪ ವಿಭಾಗಾಧಿಕಾರಿ ಅಜಯ್ ಕಾರ್ಮಿಕರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಪಿಂಚಣಿ ಪಾಲು ಹೊರತುಪಡಿಸಿ ಉಳಿದ ಹಣವನ್ನು ಒಂದು ವಾರದಲ್ಲಿ ನೀಡುವುದಾಗಿ ಭರವಸೆ ನೀಡಿದರು.
ಕಾರ್ಮಿಕರ ಹೋರಾಟ ಸಮಿತಿ ಸಂಚಾಲಕರಾದ ಕಾಂತಮ್ಮ, ಕಾನೂನು ಸಲಹೆಗಾರ ಸೈಯದ್ ಮುಜೀಬ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮಖಪ್ಪ, ಗಾರ್ಮೆಂಟ್ಸ್ ಕಾರ್ಮಿಕರ ಹೋರಾಟ ಸಮಿತಿಯ ಮಂಜುಳ, ನಾಗು, ಉಮಾ, ಭಾಗ್ಯ, ಕುಮಾರಿ ಇತರರು ಇದ್ದರು.