ಹೊಸ ಡಿಜಿಟಲ್‌ ಪಾವತಿ ಇ-ರುಪಿ ವ್ಯವಸ್ಥೆಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದಲ್ಲಿ ಡಿಜಿಟಲ್ ಪಾವತಿಗೆ ಸಂಬಂಧಿಸಿದಂತೆ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಹೊಸ ಪಾವತಿ ವ್ಯವಸ್ಥೆ ‘ಇ–ರುಪಿ’ಗೆ ಚಾಲನೆ ನೀಡಿದ್ದಾರೆ.

ಸರ್ಕಾರದ ಹಣಕಾಸು ಪ್ರಯೋಜನಗಳನ್ನು ನೇರವಾಗಿ ನಾಗರಿಕರಿಗೆ ‘ಸೋರಿಕೆ ರಹಿತ’ ವಾಗಿ ತಲುಪಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

‘ದೇಶವು ಡಿಜಿಟಲ್ ಆಡಳಿತಕ್ಕೆ ಹೊಸ ಆಯಾಮವನ್ನು ನೀಡಿದೆ. ದೇಶದಲ್ಲಿನ ವಹಿವಾಟುಗಳನ್ನು ಡಿಜಿಟಲ್‌ ಪಾವತಿ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಮಾಡುವಲ್ಲಿ ಇ–ರುಪಿ ದೊಡ್ಡ ಪಾತ್ರವನ್ನು ವಹಿಸಲಿದೆ. ಈ ಪಾರದರ್ಶಕ ಮತ್ತು ಸೋರಿಕೆ ರಹಿತ ವಿತರಣಾ ವ್ಯವಸ್ಥೆ ಎಲ್ಲರಿಗೂ ಅನುಕೂಲವಾಗಲಿದೆ.’ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದರ ವಿಶೇಷ ಅಂದರೆ ಇ-ರುಪಿ ಪಾವತಿಗೆ ಸ್ಮಾರ್ಟ್‌ಫೋನ್, ಇಂಟರ್ನೆಟ್ ಅವಶ್ಯಕತೆ ಇಲ್ಲ. ಬೇಸಿಕ್ ಮೊಬೈಲ್ ಸೆಟ್ ಬಳಕೆ ಮಾಡುವವರು ಇ-ರುಪಿ ಪಾವತಿ ವ್ಯವಸ್ಥೆ ಬಳಕೆ ಮಾಡಬಹುದು. ಹೊಸ ಪಾವತಿ ವ್ಯವಸ್ಥೆಯ ಅಡಿಯಲ್ಲಿ, ಫಲಾನುಭವಿಗಳು ಎಲೆಕ್ಟ್ರಾನಿಕ್ ವೋಚರ್ ಅಥವಾ ಕೂಪನ್ ಅನ್ನು ಪಡೆಯುತ್ತಾರೆ. ಈ ವ್ಯವಸ್ಥೆಯು ಕ್ಯೂಆರ್‌ ಕೋಡ್‌ ಆಧಾರಿತ ಅಥವಾ ವೋಚರ್ ಆಧಾರಿತ ಪಾವತಿಯಾಗಿದೆ.

ಸೊಡೆಕ್ಸೊ ವೋಚರ್‌ಗಳಂತೆಯೇ ಈ ಡಿಜಿಟಲ್ ಕೂಪನ್‌ಗಳನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು, ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಸರ್ಕಾರ ಮಾತ್ರವಲ್ಲ, ಯಾವುದೇ ಸಾಮಾನ್ಯ ಸಂಸ್ಥೆಯು ಯಾರಿಗಾದರೂ ಅವರ ಚಿಕಿತ್ಸೆಯಲ್ಲಿ, ಶಿಕ್ಷಣದಲ್ಲಿ ಅಥವಾ ಇನ್ನಾವುದೇ ಕೆಲಸಕ್ಕೆ ಸಹಾಯ ಮಾಡಲು ಬಯಸಿದರೆ, ಅವರು ನಗದು ಬದಲಿಗೆ ಇ–ರುಪಿ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಇ-ರುಪಿ ವ್ಯವಸ್ಥೆಯಿಂದಾಗಿ ಸರ್ಕಾರದ ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ತಲುಪಲಿದೆ. ಇಷ್ಟೇ ಅಲ್ಲ ಯಾವ ಕಾರಣಕ್ಕಾಗಿ ಈ ಹಣವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆಯೋ ಅದೇ ಕಾರಣಕ್ಕೆ ಬಳಸಲು ಮಾತ್ರ ಸಾಧ್ಯವಾಗಲಿದೆ. ಪಾವತಿ ವ್ಯವಸ್ಥೆಯಲ್ಲಿನ ಸೋರಿಕೆ, ದುರ್ಬಳಕೆ ತಪ್ಪಿಸಲು ಇದು ಅತ್ಯಂತ ಮಹತ್ವದ್ದಾಗಿದೆ. ಇದೇ ಕಾರಣಕ್ಕೆ ದೇಶದ ಆಡಳಿತ ವ್ಯವಸ್ಥೆಯಲ್ಲೂ ಇ-ರುಪಿ ಮಹತ್ತರ ಬದಲಾವಣೆ ತರಲಿದೆ.

Donate Janashakthi Media

Leave a Reply

Your email address will not be published. Required fields are marked *