ಕೋವಿಡ್‌ ಹೆಚ್ಚಳ ಇರೋ ಕಡೆ ಸೀಲ್‌ಡೌನ್‌- ಹೊರ ರಾಜ್ಯದಿಂದ ಆಗಮಿಸುವವರಿಗೆ ಕ್ವಾರಂಟೈನ್‌ ಕಡ್ಡಾಯ

ಬೆಂಗಳೂರು: ಸಿಲಿಕಾನ್‌ ನಗರದಲ್ಲಿ ಕೊರೊನಾ ದೃಢೀಕೃತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ನಿಯಂತ್ರಣಕ್ಕೆ ಮುಂದಾಗಿರುವ ಬಿಬಿಎಂಪಿಯು ಈಗಾಗಲೇ ಪ್ರಕರಣಗಳು ಹೆಚ್ಚಾಗುತ್ತಿರುವ ಬಿಟಿಎಂ ಲೇಔಟ್‌, ಬೊಮ್ಮನಹಳ್ಳಿ, ಮಹದೇವಪುರದಲ್ಲಿ ಪ್ರದೇಶಗಳಲ್ಲಿ ಸೀಲ್‌ಡೌನ್‌ ಮಾಡಲು ಮುಂದಾಗಿವೆ.

ಕೋವಿಡ್‌ ಪ್ರಕರಣಗಳು ದೃಢೀಕೃತಗೊಂಡವರ ಮನೆ ಅಥವಾ ಫ್ಲ್ಯಾಟ್‌ಗಳನ್ನು ಸೀಲ್‌ಡೌನ್‌ ಮಾಡಲಾಗುತ್ತಿದೆ. ಬಿಟಿಎಂ ಲೇಔಟ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗೇಟ್‌ಗಳಿಗೆ ಕೆಂಪು ಪಟ್ಟಿಗಳನ್ನು ಅಳವಡಿಸಲಾಗುತ್ತಿದೆ.

ಕೋವಿಡ್‌ ಪ್ರಕರಣಗಳು ಹೆಚ್ಚಾಗಿರುವ ರಾಜ್ಯಗಳಿಂದ ಆಗಮಿಸುವವರು ಕಡ್ಡಾಯವಾಗಿ ಕ್ವಾರಂಟೈನ್‌ ಆಗಬೇಕೆಂದು ಸೂಚಿಸಲಾಗಿದ್ದು, ಬಿಬಿಎಂಪಿ ನಿರ್ಮಾಣ ಮಾಡಿರುವ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಕ್ವಾರಂಟೈನ್‌ ಆಗಬೇಕು ಎಂದಿದೆ. ಈ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತಾ ಅವರು ಬಿಬಿಎಂಪಿ ಎಂಟು ವಲಯಗಳಲ್ಲೂ ಕ್ವಾರಂಟೈನ್‌ ಕೇಂದ್ರಗಳನ್ನು ನಿರ್ಮಾಣ ಮಾಡಿದೆ. ಉಚಿತವಾಗಿ ಕ್ವಾರಂಟೈನ್‌ ಆಗಬಹುದು. ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ ಆದಲ್ಲಿ ಹಣ ಪಾವತಿಸಬೇಕಾಗಿದೆ ಎಂದು ತಿಳಿಸಿದರು.

ಇದನ್ನು ಓದಿ: ಕೋವಿಡ್‌ ಸೋಂಕು: ವೈದ್ಯಕೀಯ ಸೌಲಭ್ಯ ಹೆಚ್ಚಳ ಹಾಗೂ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಬೊಮ್ಮಾಯಿ ಸೂಚನೆ

ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಾರಾಂತ್ಯದ ಲಾಕ್‌ಡೌನ್‌ ಮಾಡುವ ಬಗ್ಗೆಯೂ ಚಿಂತನೆ ನಡೆಸಿರುವ ಬಿಬಿಎಂಪಿಯು ಸರಕಾರದ ಹಂತದಲ್ಲಿ ಅಂತಿಮ ತೀರ್ಮಾನ ಆಗಬೇಕಾಗಿದೆ. ಇದರೊಂದಿಗೆ ಜನರ ಜೀವನ ನಿರ್ವಹಣೆಯನ್ನು ಗಮನಿಸಬೇಕಾಗಿದೆ. ಕೊರೊನಾ ಸೋಂಕು ಹರಡದಂತೆ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.

ಬೆಂಗಳೂರಿನಲ್ಲಿ ಇಳಿಕೆ ಹಂತದಲ್ಲಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಆಗುತ್ತಿದೆ. ಇತ್ತೀಚಿನ ಕೆಲವು ದಿನಗಳು 500ರೊಳಗೆ ಬರುತ್ತಿದ್ದ ದೃಢೀಕೃತ ಪ್ರಕರಣಗಳು ಏರೇಳಿತಕ್ಕೆ ಮುಂದಾಗಿದೆ. ಕೇರಳದಲ್ಲಿ ಹೆಚ್ಚಾಗುತ್ತಿರುವ ಪ್ರಕರಣಗಳಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆಯೂ ಮತ್ತೆ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸುವ ಸಾಧ್ಯತೆಗಳಿವೆ.

ನಗರದಲ್ಲಿ ಸದ್ಯ ರಾತ್ರಿ 10 ಗಂಟೆಯ ನಂತರ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಕೊರೊನಾ ಸಂಖ್ಯೆ ನಿಯಂತ್ರಣಕ್ಕೆ ಬರದಿದಿದ್ದರೆ, ರಾತ್ರಿ 10 ಗಂಟೆಯ ಬದಲು ರಾತ್ರಿ 8 ಗಂಟೆಯಿಂದಲೇ ಕರ್ಫ್ಯೂ ಜಾರಿಗೊಳಿಸುವ ಸಾಧ್ಯತೆಗಳು ಇವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಇದರೊಂದಿಗೆ ವಾರಾಂತ್ಯ ಕರ್ಫ್ಯೂವನ್ನೂ ಜಾರಿ ಮಾಡೋದಕ್ಕೂ ಸಿದ್ದತೆಗೊಂಡಿರುವ ಬಿಬಿಎಂಪಿ ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಿದೆ.

ಕೋವಿಡ್‌ ಪ್ರಕರಣಗಳು ಹೆಚ್ಚಳವಾದಲ್ಲಿ ಪ್ರದೇಶಗಳಲ್ಲಿ ಆ ಪ್ರದೇಶಗಳಲ್ಲಿ ನಡೆಯುವ ಪಾರ್ಟಿಹಾಲ್‌, ಮದುವೆ, ಮಾರುಕಟ್ಟೆ ಸೇರಿದಂತೆ ಜನರು ಸೇರುವ ಸ್ಥಳಗಳನ್ನು ಒಂದು ವಾರದ ಮಟ್ಟಿಗೆ ಲಾಕ್‌ಡೌನ್‌ ಮಾಡುವ ಸಾಧ್ಯತೆಗಳು ಇವೆ. ಮುಂಬರುವ ದಿನಗಳಲ್ಲಿ ಪ್ರಕರಣಗಳು ಹೆಚ್ಚಾದಲ್ಲಿ ನಗರದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಗೊಳ್ಳುವ ಸಾಧ್ಯೆಗಳು ಇವೆ.

ಈಗ ನಗರದಲ್ಲಿ ಪ್ರತಿದಿನದ ಸೋಂಕಿತರ ಸಂಖ್ಯೆ 500ರ ಆಸುಪಾಸಿನಲ್ಲಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯೂ ಕಡಿಮೆಯಿದೆ. ಒಂದೊಮ್ಮೆ ಸೋಂಕಿತರ ಸಂಖ್ಯೆ 1 ಸಾವಿರ ಗಡಿದಾಟಿದರೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಏರಿಕೆಯಾದಲ್ಲಿ ನಗರದಲ್ಲಿ ಒಂದು ವಾರ ಲಾಕ್‌ಡೌನ್‌ ಆಗುವ ಸಾಧ್ಯತೆಗಳು ಇವೆ.

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದು, ಕೇರಳದಿಂದ ಬರೋ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲು ಸೂಚನೆ ನೀಡಿದ್ದಾರೆ. ಹೀಗಾಗಿ ಸಿಟಿ ರೈಲ್ವೆ ನಿಲ್ದಾಣ, ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ಖಾಸಗಿ ವಾಹನಗಳಲ್ಲಿ ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರನ್ನು ತಪಾಸಣೆ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ ಕೊರೊನಾ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದ್ದೂ, ಕೆಲ ದಿನಗಳು ಕ್ವಾರಂಟೈನ್ನಲ್ಲಿರಬೇಕು ಅಂತ ಕಡ್ಡಾಯ ಸೂಚನೆಗಳನ್ನು ನೀಡಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *