ಬೇಲೂರು: ತಾಲ್ಲೂಕಿನ ಚೌಡನಹಳ್ಳಿ ಬಳಿ 38 ಮಂಗಗಳ ಮಾರಣಹೋಮ ಘಟನೆ ಬಗ್ಗೆ ಸ್ಚಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಹೈಕೋರ್ಟ್ ಅಗಸ್ಟ್ ನಾಲ್ಕರೊಳಗೆ ವರದಿ ನೀಡಲು ಸೂಚಿಸಿತ್ತು. ಇದರಿಂದ ಚುರುಕುಗೊಂಡ ತನಿಖಾ ತಂಡವು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್ ಗಿರೀಶ್, ಎಸ್ಪಿ ಶ್ರೀನಿವಾಸಗೌಡ, ಡಿಸಿಎಫ್ ಬಸವರಾಜ್ ಬೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿದ್ದ ಜಿಲ್ಲಾಧಿಕಾರಿ ಆರ್ ಗಿರೀಶ್ ಇದೊಂದು ಅಮಾನವೀಯ ಘಟನೆ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ತನಿಖಾಧಿಕಾರಿಗೆ ತಾಕೀತು ಮಾಡಿದ್ದಾರೆ.
ಇದನ್ನು ಓದಿ: ಚೌಡನಹಳ್ಳಿಯಲ್ಲಿ 38 ಮೂಕ ಪ್ರಾಣಿಗಳ ಮಾರಣ ಹೋಮ…
ತನಿಖೆ ಕೈಗೊಂಡಿರುವ ಎಸ್.ಐ. ಅವರಿಗೆ ಘಟನೆಯಲ್ಲಿ ಎಂತಹ ಪ್ರಭಾವಿಗಳಿದ್ದರೂ ಬಿಡಬೇಡಿ, ಶೀಘ್ರವಾಗಿ ಸಮಗ್ರ ತನಿಖೆ ಮಾಡಬೇಕು. ಎಲ್ಲಿ ಹೇಗೆ ಹತ್ಯೆ ಮಾಡಿರಬಹುದು ಎನ್ನೋದು ಬೇಗನೆ ಪತ್ತೆ ಮಾಡಬೇಕು. ಸ್ಥಳೀಯರಿಂದ ಮಾಹಿತಿ ಪಡೆಯಬೇಕು, ಕೋತಿಗಳ ಹಾವಳಿ ಇದ್ದ ಕಡೆಯೂ ಖುದ್ದು ಭೇಟಿ ನೀಡಿ ಮಾಹಿತಿ ಪಡೆಯಬೇಕು ಎಂದು ಸೂಚನೆ ನೀಡಿದ್ದಾರೆ.
ಜುಲೈ 28 ರ ರಾತ್ರಿ ವಿಷ ಪ್ರಾಷಾನ ಹಾಗು ಹಲ್ಲೆ ಮಾಡಿ 38 ಮಂಗಗಳನ್ನು ಕೊಂದು ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಚೌಡನಹಳ್ಳಿ ಗ್ರಾಮದ ಬಳಿ ಬಿಸಾಡಿ ಹೋಗಿದ್ದರು. ಘಟನೆ ಸಂಬಂದ ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಂಗಗಳನ್ನು ಬೇರೆಡೆ ಕೊಂದು ಚೀಲಗಳಿಗೆ ತುಂಬಿ ಅವುಗಳನ್ನು ಚೌಡನಹಳ್ಳಿ ಪ್ರದೇಶದಲ್ಲಿ ಬಿಸಾಡಿ ಹೋಗಿದ್ದರು. ಈ ಬಗ್ಗೆ ಸ್ವಯಂ ದೂರು ದಾಖಲಿಸಿಕೊಂಡಿದ್ದ ಹೈಕೋರ್ಟ್ ಪ್ರಾಣಿಗಳ ಬದುಕುವ ಹಕ್ಕು ಮಾತ್ರವೇ ಅಲ್ಲದೆ ಪ್ರಾಣಿಗಳ ಮೇಲಿನ ಹಿಂಸೆಯ ತಡೆ ಕಾಯಿದೆ 1960ರ ನಿಬಂಧನೆ ಅದರಲ್ಲೂ ಸೆಕ್ಷನ್ 3 ಮತ್ತು 11 ಅನ್ನು ಪ್ರಕರಣದಲ್ಲಿ ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರಿದ್ದ ವಿಭಾಗೀಯ ಪೀಠವು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಹಾಸನ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸಾರ್ವಜನಿಕ ಹಿತಾಸಕ್ತಿ ಮನವಿಯಲ್ಲಿ ಪ್ರತಿವಾದಿಗಳನ್ನಾಗಿಸುವಂತೆ ರಿಜಿಸ್ಟ್ರಾರ್ ಜನರಲ್ಗೆ ಆದೇಶಿಸಿದೆ.