ಮಡಿಕೇರಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಬಿ ಎಸ್ ಯಡಿಯೂರಪ್ಪ ರಾಜೀನಾಮೆಯಿಂದ ಸಚಿವ ಸಂಪುಟ ರಚನೆಯಾಗಬೇಕಾಗಿದೆ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ದಂಡು ಬಿಜೆಪಿ ರಾಷ್ಟ್ರೀಯ ನಾಯಕರ ಮುಂದೆ ಲಾಭಿಯಲ್ಲಿ ತೊಡಗಿದ್ದಾರೆ. ಆದರೆ ಸಚಿವ ಸ್ಥಾನ ಲಭಿಸಲಿ ಎಂದು ಎಂಬ ದೃಢ ವಿಶ್ವಸದಿಂದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕ್ಷೇತ್ರದಲ್ಲೇ ಉಳಿದುಕೊಂಡಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಚಿವ ಸ್ಥಾನ ಹಂಚಿಕೆಗೆ ಕಸರತ್ತು ನಡೆಸುತ್ತಿದ್ದಾರೆ. ಸಿಎಂ ದೆಹಲಿ ತಲುಪುವ ಮೊದಲೇ ಸಾಕಷ್ಟು ಸಚಿವಾಕಾಂಕ್ಷಿಗಳು ರಾಷ್ಟ್ರ ರಾಜ್ಯಧಾನಿ ತಲುಪಿದ್ದಾರೆ.
ಇದನ್ನು ಓದಿ: ಸಂಪುಟ ರಚನೆ : ಸಿಎಂಗೆ ಟೆನ್ಷನ್, ಹಳಬರಿಗೆ ಕೋಕ್?!
ಹಿಂದಿನಿಂದಲೂ ಸಚಿವ ಸ್ಥಾನಕ್ಕಾಗಿ ಸಾಕಷ್ಟು ಬಾರಿ ಬೇಡಿಕೆ ಇಡುತ್ತಿದ್ದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರನ್ನು ಸುದ್ದಿಗಾರರು ʻನೀವು ದೆಹಲಿಗೆ ಹೋಗಿಲ್ಲವೇʼ ಎಂಬ ಪ್ರಶ್ನೆಗೆ ‘ನಾನು ಸಚಿವ ಸ್ಥಾನಕ್ಕಾಗಿ ಎಲ್ಲೂ ಹೋಗಲ್ಲ. ಹೈಕಮಾಂಡ್ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಕೇಂದ್ರದ ನಾಯಕರು ಜಿಲ್ಲಾವಾರು ಮತ್ತು ಸಾಮಾಜಿಕ ನ್ಯಾಯ ಪರಿಗಣಿಸಿ ಈ ಬಾರೀ ಸಚಿವ ಸ್ಥಾನ ನೀಡುವ ವಿಶ್ವಾಸ ನನಗಿದೆ. ನಾನು ಎಲ್ಲಿಯೂ ಹೋಗುವುದಿಲ್ಲ ಎಂದಿದ್ದಾರೆ. ಕೇಂದ್ರ ನಾಯಕರು ಮೂಲ ಬಿಜೆಪಿಗರನ್ನು ಈ ಬಾರಿ ಗುರುತಿಸಲಿದ್ದಾರೆ. ಹೀಗಿರುವಾಗ ನಾನ್ಯಾಕೆ ದೆಹಲಿಗೆ ಹೋಗಲಿ, ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು, ಪ್ರವಾಹದ ಮತ್ತು ಭೂಕುಸಿತದ ಆತಂಕ ಇದೆ. ಜೊತೆಗೆ ಕೋವಿಡ್ ಸೋಂಕು ಹೆಚ್ಚುತ್ತಿರುವುದರಿಂದ ಅದನ್ನು ನಿಯಂತ್ರಿಸಬೇಕಾದ ಜವಾಬ್ದಾರಿ ಇದೆ. ಮೊದಲು ಜನಪ್ರತಿನಿಧಿಗಳಾಗಿ ಜನರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ನಾನು ಜಿಲ್ಲೆಯಲ್ಲೇ ಇದ್ದು ಕೆಲಸ ಮಾಡುತ್ತಿದ್ದೇನೆʼʼ ಎಂದರು.
ಅಲ್ಲದೆ ನಾನು ಹಿಂದೆ ಯುವಜನ ಮತ್ತು ಕ್ರೀಡಾ ಸಚಿವನಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ದೇನೆ. ಕ್ರೀಡಾ ಇಲಾಖೆಗೆ 49 ಸಾವಿರ ಕೋಟಿಯ ಆಸ್ತಿ ಉಳಿಸುವ ಕೆಲಸ ಮಾಡಿರುವೆ. ಇಂದಿಗೂ ರಾಜ್ಯಕ್ಕೆ ಒಂದು ಕ್ರೀಡಾ ನೀತಿ ಅಗತ್ಯವಿದೆ. ಕ್ರೀಡಾ ವಿಶ್ವವಿದ್ಯಾನಿಲಯವೂ ಬೇಕಾಗಿದೆ ಎಂದು ಹೇಳುವ ಶಾಸಕ ಅಪ್ಪಚ್ಚು ರಂಜನ್ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವರದಿ: ಆರ್ವಿ ಹಾಸನ್