ಪ್ರೊ. ಟಿ.ಎಂ. ಥಾಮಸ್ ಐಸಾಕ್
ಕೇರಳದ ಹಿಂದಿನ ಹಣಕಾಸು ಮಂತ್ರಿಗಳು
ಸಹಕಾರಿ ಎಂಬುದು ರಾಜ್ಯಪಟ್ಟಿಯಲ್ಲಿರುವ ವಿಷಯವಾಗಿರುವಾಗ ಕೇಂದ್ರದಲ್ಲಿ ಒಂದು ಸಹಕಾರದ ಸಚಿವಾಲಯ ಎಂಬುದು ನಿಜವಾಗಿಯೂ ಬೇಕಿತ್ತೇ? ಬೇಕಿದ್ದರೆ ಕೃಷಿಯಂತಹ ಮಂತ್ರಾಲಯದ ಜತೆಗಿರುವ ಬದಲು ಗೃಹ ಮಂತ್ರಾಲಯದ ಜೊತೆಗೇ ಏಕೆ? ನೂತನ ಸಹಕಾರಿ ಸಚಿವಾಲಯದ ಸ್ಥಾಪನೆಯು ಸಹಕಾರಿ ರಂಗವನ್ನು ಬಿಜೆಪಿ ತೆಕ್ಕೆಗೆ ತರುವ ಕುತಂತ್ರದ ಭಾಗವಾಗಿರಬಹುದು ಎಂಬ ಶಂಕೆ ಸಹಜವಾಗಿ ಬರುತ್ತದೆ. ದೇಶದ ಉನ್ನತ ಸಹಕಾರಿ ಸಂಸ್ಥೆಯಾಗಿ ಗುಜರಾತಿನಲ್ಲಿ ಅಮುಲ್ ಸಹಕಾರಿ ಸಂಸ್ಥೆಯನ್ನು ಕಟ್ಟಿ, ಬೆಳೆಸಿದ್ದರೂ, ನಂತರ ಅಲ್ಲಿಂದಲೇ ಹೊರ ದೂಡಲ್ಪಟ್ಟಿದ್ದ ವರ್ಗಿಸ್ ಕುರಿಯನ್ 2000 ದ ಪ್ರಾರಂಭದಲ್ಲಿ ವ್ಯಕ್ತಪಡಿಸಿದ್ದ ಆತಂಕಗಳು ನಿಜವಾಗುತ್ತಿವೆಯೇ?
ಕೇಂದ್ರದಲ್ಲಿ ಸಹಕಾರಕ್ಕೆ ಒಂದು ಪ್ರತ್ಯೇಕ ಸಚಿವಾಲಯದ ಸ್ಥಾಪನೆ ಮತ್ತು ಅಮಿತ್ ಶಾ ರವರನ್ನು ಭಾರತದ ಪ್ರಥಮ ಸಹಕಾರ ಮಂತ್ರಿಯಾಗಿ ನೇಮಿಸಿರುವುದು ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಸಹಕಾರಿಗಳ ಬೆಳವಣಿಗೆಗೆ ಸಂಬಂಧಪಟ್ಟಂತೆ ಹಲವು ಅಹಿತಕರ ಪ್ರಶ್ನೆಗಳನ್ನು ಎತ್ತುತ್ತಿದೆ. ನಮ್ಮ ಸಂವಿಧಾನದ ಶೆಡ್ಯೂಲ್ 7 ರ ಅನುಸಾರ ಸಹಕಾರಿಗಳು ಒಂದು ರಾಜ್ಯದ ವಿಚಾರ. ಇಲ್ಲಿಯವರೆಗೂ ಆಯಾ ರಾಜ್ಯಗಳ ಸಹಕಾರಿ ರಿಜಿಸ್ಟ್ರಾರ್ಗಳ ನಿಯಂತ್ರಣದಲ್ಲಿ ಸಹಕಾರಿಗಳು ಕಾರ್ಯ ನಿರ್ವಹಿಸುತ್ತಿವೆ. ಸುಮಾರು ನೂರರಷ್ಟು ಬಹು ರಾಜ್ಯ ಸಹಕಾರಿಗಳು (ಎಂ.ಎಸ್.ಸಿ.ಗಳು) ಅಸ್ತಿತ್ವದಲ್ಲಿವೆ. ಆದರೆ ಇದು ಕೇಂದ್ರದಲ್ಲಿ ಒಂದು ಪ್ರತ್ಯೇಕ ಸಚಿವಾಲಯದ ಅಗತ್ಯವಿರುವಷ್ಟು ಗಣನೀಯ ಸಂಖ್ಯೆಯಲ್ಲ. ಪ್ರತ್ಯೇಕ ಸಚಿವಾಲಯವನ್ನು ರಚಿಸುವ ಮೊದಲು ರಾಜ್ಯಗಳನ್ನು ಸಂಪರ್ಕಿಸಿಲ್ಲ. ಕೇಂದ್ರ ಸರ್ಕಾರದ ಆದೇಶವನ್ನು ನೋಡಿದಾಗ ಇದು ಎಷ್ಟು ಅಸ್ಪಷ್ಟವಾಗಿದೆ ಎಂಬುದು ತಿಳಿಯುತ್ತದೆ. ಮೇಲಾಗಿ ಸಹಯೋಗವನ್ನು ಸ್ಥಾಪಿಸಲು ಬೇಕಾದಲ್ಲಿ ಈ ಸಚಿವಾಲಯವನ್ನು ಕೃಷಿಯಂತಂಹ ಬಲವಾದ ಕ್ಷೇತ್ರವನ್ನು ನೋಡಿಕೊಳ್ಳುತ್ತಿರುವ ಮಂತ್ರಿಗಳಿಗೆ ನೀಡಬಹುದಿತ್ತು. ಸಹಕಾರಿ ಬೆಳೆಸುವಲ್ಲಿ ಗೃಹ ಸಚಿವಾಲಯಕ್ಕೆ ಏನು ಪಾತ್ರವಿದೆ? ಇದು ಅಮಿತ್ ಶಾ ರಿಗೆ ವಿಶೇಷವಾಗಿ ವಹಿಸಿರುವ ಕಾರ್ಯವಾಗಿದೆ.
ಗುಜರಾತಿನಲ್ಲಿ ಅಮಿತ್ ಶಾ
ಗುಜರಾತಿನಲ್ಲಿ ಕಾಂಗ್ರೆಸ್ ಸಹಕಾರಿಗಳನ್ನು ಓಡಿಸಿ ಬಿಜೆಪಿಗೆ ಇವುಗಳ ನಿಯಂತ್ರಣವನ್ನು ತರುವಲ್ಲಿ ಅಮಿತ್ ಶಾ ಕಾರಣಕರ್ತರಾಗಿದ್ದರು. ದೇಶದ ಉನ್ನತ ಸಹಕಾರಿ ಸಂಸ್ಥೆಯಾಗಿ ಅಮುಲ್ ಸಹಕಾರಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ಮತ್ತು ಅದೇ ಅಮುಲ್ ನಿಂದ ಹೊರ ದೂಡಲ್ಪಟ್ಟಿದ್ದ ವರ್ಗಿಸ್ ಕುರಿಯನ್ ರವರು 2000 ದ ಪ್ರಾರಂಭದಲ್ಲಿ ವ್ಯಕ್ತಪಡಿಸಿದ್ದ ಆತಂಕಗಳು ಮತ್ತೆ ನನ್ನ ನೆನಪಿಗೆ ಬರುತ್ತಿವೆ.
ಕುರಿಯೆನ್ ಬಗ್ಗೆ ಎಷ್ಟು ದ್ವೇಷ ಇತ್ತೆಂದರೆ ಜೀವನಪೂರ್ತಿ ನಾಸ್ತಿಕರಾಗಿದ್ದ ಇವರ ಮೇಲೆ ಮತಾಂತರ ಮಾಡುತ್ತಾರೆ ಎಂಬ ಅಪಪ್ರಚಾರ ನಡೆದಿತ್ತು. ಭಾರತದ ಕ್ಷೀರ ಕ್ರಾಂತಿಯ ಈ ಹರಿಕಾರ ನಿಧನರಾದಾಗ, ಹತ್ತಿರದ ಪಟ್ಟಣದಲ್ಲಿಯೇ ಇದ್ದ ಮೋದಿ ಅಂತಿಮ ನಮನಗಳನ್ನು ಸಲ್ಲಿಸಲು ಬರಲಿಲ್ಲ. ಗುಜರಾತ್ ಸಹಕಾರಿ ರಂಗವು ಬಿಜೆಪಿಯ ಬಿಗಿ ಹಿಡಿತದಲ್ಲಿದೆ ಮತ್ತು ಇದರ ರಾಜಕೀಯ ಪ್ರಭಾವದ ಪ್ರಮುಖ ಬುನಾದಿಯಾಗಿದೆ.
ನೂತನ ಸಹಕಾರಿ ಸಚಿವಾಲಯದ ಸ್ಥಾಪನೆಯು ಸಹಕಾರಿ ರಂಗವನ್ನು ಬಿಜೆಪಿ ತೆಕ್ಕೆಗೆ ತರುವ ಕುತಂತ್ರದ ಭಾಗವಾಗಿರಬಹುದು ಎಂಬ ಶಂಕೆ ನನಗಿದೆ. ಮಹಾರಾಷ್ಟ್ರ ಸಹಕಾರಿಯಲ್ಲಿ ಎನ್.ಸಿ.ಪಿ. ಮತ್ತು ಶರದ್ ಪವಾರ್ ರವರ ಹಿತ್ತಾಸಕ್ತಿ ಇರುವುದು ಎಲ್ಲರಿಗೂ ತಿಳಿದಿದೆ. ಕೇವಲ ಮಹಾರಾಷ್ಟ್ರ ಮಾತ್ರವಲ್ಲ, ಬಿಜೆಪಿಯೇತರ ರಾಜ್ಯಗಳ ಸಹಕಾರಿ ರಂಗದಲ್ಲಿ ಒಂದು ಕೇಂದ್ರ ಸಚಿವಾಲಯದ ಮೂಲಕ ಮಧ್ಯ ಪ್ರವೇಶಿಸಲು ಬಿಜೆಪಿ ತರಾತುರಿಯಲ್ಲಿದೆ. ಕೇಂದ್ರದಲ್ಲಿ ಅಧಿಕಾರದ ರುಚಿ ಹಿಡಿದ ದಿನದಿಂದಲೇ ಬಿಜೆಪಿಯು ಸಹಕಾರಿ ವಿಷಯದಲ್ಲಿ ಅತೀವ ಆಸಕ್ತಿ ತೋರಿಸುತ್ತಿದೆ.
ವಾಜಪೇಯಿ ಯವರು ಪ್ರಧಾನಿಗಳಾಗಿದ್ದಾಗ 2002 ರಲ್ಲಿ ಸಂಸತ್ತು ಬಹು ರಾಜ್ಯ ಸಹಕಾರಿ ಸಂಸ್ಥೆಗಳ ಕಾಯಿದೆ 2002 ಅನ್ನು ಜಾರಿ ಮಾಡಿತು ಮತ್ತು ಹಲವು ರಾಜ್ಯಗಳಲ್ಲಿ ಸಹಕಾರಿಗಳ ರಚನೆ ಮತ್ತು ಸದಸ್ಯತ್ವವನ್ನು ಇದು ಅನುವು ಮಾಡಿತು. 2014 ರಲ್ಲಿ ಕಂಪೆನಿ ಕಾಯಿದೆ 2013 ರ ವಿಧಿ 406 ರ ಮೂಲಕ ಮಾನ್ಯತೆ ಪಡೆದಿರುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ (ಎನ್.ಬಿ.ಎಫ್.ಸಿ.)ಗಳನ್ನು ಸ್ಥಾಪಿಸಲು ‘ನಿಧಿ ನಿಯಮಾವಳಿ’ ರೂಪಿಸಲಾಯಿತು. 2020 ರಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ನಗರ ಸಹಕಾರಿ ಬ್ಯಾಂಕುಗಳು ಮತ್ತು ರಾಜ್ಯ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಣದಡಿ ತರಲಾಯಿತು. ಈ ತಿದ್ದುಪಡಿಯು ಪ್ರಾಥಮಿಕ ಕೃಷಿ ಸಹಕಾರಿ(ಪಿ.ಎ.ಸಿ.)ಗಳಿಗೆ ನೇರ ದುಷ್ಟರಿಣಾಮ ಬೀರದ್ದಿದರೂ, ಈ ಪಿ.ಎ.ಸಿ. ಗಳು ‘ಬ್ಯಾಂಕ್’ ಪದವನ್ನು ಬಳಕೆ ಮಾಡುವಂತಿಲ್ಲ ಎಂಬ ನಿಷೇಧದ ಭಯ ಅವುಗಳ ತಲೆ ಮೇಲೆ ತೂಗುವ ಕತ್ತಿಯಾಗಿ ನಿಂತಿದೆ.
ಇದನ್ನು ಓದಿ: ಸಹಕಾರಿ ಸಚಿವಾಲಯ ರಚನೆ ಫೆಡರಲ್ ಹಕ್ಕುಗಳನ್ನು ಉಲ್ಲಂಘಿಸುವ ಪ್ರಯತ್ನವಾಗಿದೆ – ಸೀತಾರಾಮ್ ಯೆಚೂರಿ
ಈಗ ರಾಜ್ಯ ಕಾನೂನುಗಳು ಮತ್ತು ರಾಜ್ಯ ಸಹಕಾರಿಗಳ ರಿಜಿಸ್ಟ್ರಾರ ರವರ ಅವಗಾಹನೆಯಲ್ಲಿರುವ ರಾಜ್ಯ ಸಹಕಾರಿ ಸಂರಚನೆಯ ಮೇಲೆ ಸದ್ಯಕ್ಕೆ ನೂತನ ಕೇಂದ್ರ ಸಚಿವಾಲಯಕ್ಕೆ ಯಾವುದೇ ನಿಯಂತ್ರಣಾಧಿಕಾರ ಇಲ್ಲ. ನೂತನ ಸಚಿವಾಲಯದ ಅಧಿಕಾರವು ಕೇವಲ ಬಹು ರಾಜ್ಯ ಸಹಕಾರಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಮತ್ತು ಇಂತಹ ಸೊಸೈಟಿಗಳಿಗೆ ವಿಶೇಷ ಬೆಂಬಲ ನೀಡುವುದಾಗಿರುತ್ತದೆ.
ಹಿಂದೂ ಬ್ಯಾಂಕ್ಗಳ ಪ್ರಸಂಗ:
ಹಿಂದೂಗಳ ದುಡ್ಡು ಹಿಂದೂಗಳಿಗೆ ಎಂಬ ಘೋಷಣೆಯೊಂದಿಗೆ ಬಿಜೆಪಿಯು ತಾನು “ಹಿಂದೂ ಬ್ಯಾಂಕುಗಳು” ಎಂದು ಕರೆಯುತ್ತಿರುವ ಬ್ಯಾಂಕುಗಳನ್ನು ಇತ್ತೀಚೆಗೆ ಸ್ಥಾಪಿಸುತ್ತಿದೆ. ವಾಸ್ತವವಾಗಿ ಇವುಗಳು ಬ್ಯಾಂಕ್ಗಳಲ್ಲ, ನಿಧಿ ನಿಯಮಗಳು, 2014 ರ ಅಡಿ ಬರುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ(ಎನ್.ಬಿ.ಎಫ್.ಸಿ.)ಗಳು. ಕೇರಳದಲ್ಲಿ ಇಂತಹ 870 ಸಂಸ್ಥೆಗಳನ್ನು ನೋಂದಾಯಿಸಿರುವುದಾಗಿ ಹೇಳಿಕೊಳ್ಳಲಾಗುತ್ತಿದೆ. ಒಂದು ತೀವ್ರವಾದ ಕೋಮು ಪ್ರಚಾರದಿಂದಾಗಿ ಇವು ಗಮನ ಸೆಳೆದವು. ಆನ್ಲೈನ್ ಸುದ್ದಿ ಜಾಲತಾಣ ಆದ ‘ಫೆಡರಲ್’ ಗೆ ನೀಡಿರುವ ಸಂದರ್ಶನದಲ್ಲಿ ಹಿಂದೂ ಬ್ಯಾಂಕ್ ಆಂದೋಲನದ ಹಿರಿಯ ಆಯೋಜಕರಲ್ಲಿ ಒಬ್ಬರಾಗಿರುವವರು ಈ ಆಂದೋಲನದ ತರ್ಕವನ್ನು ಹೀಗೆ ವಿವರಿಸಿದ್ದಾರೆ: “ಕೋವಿಡ್-19 ಸಾಂಕ್ರಾಮಿಕದಿಂದ ಹೊಮ್ಮಿರುವ ಆರ್ಥಿಕ ಹೊರೆಯಿಂದಾಗಿ ಬಹಳಷ್ಟು ಹಿಂದೂಗಳು ನರಳುತ್ತಿದ್ದಾರೆ. ಕೇರಳದಲ್ಲಿ ಸಹಕಾರಿ ರಂಗದಲ್ಲಿ ಸಿಪಿಐ(ಎಂ) ನ ಏಕಸ್ವಾಮ್ಯವಿದೆ. ಇವು ಸಿಪಿಐ(ಎಂ) ನ ರಾಜಕೀಯ ವಿರೋಧಿಗಳಿಗೆ ಸಾಲ ನಿರಾಕರಿಸುತ್ತಿವೆ. ಹೀಗಾಗಿ ಇಂತಹ ಸಂಸ್ಥೆಗಳನ್ನು ತಮ್ಮದೇ ಕಲ್ಯಾಣಕ್ಕಾಗಿ ಸ್ಥಾಪಿಸುವಂತೆ ನಾವು ಹಿಂದೂಗಳನ್ನು ಅಣಿನೆರೆಸುತ್ತಿದ್ದೇವೆ”. ಕೇರಳದ ಸಹಕಾರಿ ರಂಗದಲ್ಲಿ ಏನೇ ಇತಿಮಿತಿಗಳಿದ್ದರೂ, ಇವುಗಳು “ಸಾಲ ನೀಡುವ ಸಂದರ್ಭದಲ್ಲಿ ಈ ತರಹದ ಭೇದ ಮಾಡುವುದಿಲ್ಲ” ಎಂದು ವಿರೋಧ ಪಕ್ಷದ ನಾಯಕರೇ ಹೇಳಿದ್ದಾರೆ.
ಕೇರಳ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸಹಕಾರಿಗಳಲ್ಲಿ (ಸಾಲ ಮತ್ತು ಸಾಲವಿಲ್ಲದ) ಬಿಜೆಪಿ ಗೆ ಯಾವುದೇ ಪ್ರಭಾವವಿಲ್ಲ ಎಂದೇ ಹೇಳಬಹುದು. ಆದ್ದರಿಂದಲೇ, ಸಹಕಾರಿಗಳು ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ವಾಹಕಗಳು, ಪ್ರಮುಖ ರಾಜಕೀಯ ಪಕ್ಷಗಳಿಗೆ ಹಣಕಾಸು ನೀಡುವಂಥವು ಮುಂತಾದ ಆಧಾರರಹಿತ ಆಪಾದನೆಗಳನ್ನು ಬಿಜೆಪಿ ಮಾಡುತ್ತಿದೆ. ನೋಟುರದ್ಧತಿ ಸಮಯದಲ್ಲಂತೂ ಇವರುಗಳು ಸಹಕಾರಿಗಳ ದೈನಂದಿನ ಚಟುವಟಿಕೆಗಳನ್ನು ನಿರ್ಬಂಧಿಸುವ ಮೂಲಕ ಸಹಕಾರಿಗಳಿಗೆ ತಡೆಗೋಡೆ ನಿರ್ಮಿಸಲು ಮುಂದಾಗಿದ್ದರು. ಇವರ ಹಿಂದೂ ಬ್ಯಾಂಕುಗಳು ಸಹಕಾರಿಗಳಿಗೆ ಪರ್ಯಾಯ ಎನ್ನುವಂತೆ ಬಿಂಬಿಸಲಾಗುತ್ತಿದೆ. ಇಷ್ಟೆಲ್ಲಾ ಮಾಡಿದರೂ, ಠೇವಣಿದಾರರ ದುಡ್ಡನ್ನು ದುರುಪಯೋಗ ಪಡಿಸಿಕೊಂಡ ಕಾರಣಕ್ಕೆ ಮುಚ್ಚಿ ಹೋದ ಹಿಂದೂ ಬ್ಯಾಂಕ್ ಕುರಿತಂತೆ ವಿವಾದ ಎಬ್ಬಿಸಿದ್ದು ಬಿಟ್ಟರೆ, ಇವರಿಗೆ ಬೇರೆ ಯಾವುದೇ ಪರಿಣಾಮ ಬೀರಲು ಸಾಧ್ಯವಾಗಿಲ್ಲ.
ಕೆಲವು ರಾಜ್ಯಗಳಲ್ಲಿ ಬಿಜೆಪಿ ಹುಟ್ಟು ಹಾಕುತ್ತಿರುವ ಈ ಹಣಕಾಸು ಸಮೂಹಗಳಿಗೆ ಹೇಗೆ ನೂತನ ಸಚಿವಾಲಯವನ್ನು ತಳುಕು ಹಾಕಲಾಗುತ್ತದೆ ಎಂಬುದರ ಬಗ್ಗೆ ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಇವುಗಳನ್ನು ಕೇಂದ್ರದ ಅಡಿಯಲ್ಲಿ ಬಹುರಾಜ್ಯ ಬ್ಯಾಂಕ್ಗಳ ಶಾಖೆಗಳನ್ನಾಗಿ ಪರಿವರ್ತಿಸಬಹುದು, ಇಲ್ಲವೇ ಒಂದು ಕೇಂದ್ರ ಸಹಕಾರಿ ಹಣಕಾಸು ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಇವುಗಳಿಗೆ ಹಣಕಾಸು ಒದಗಿಸಬಹುದು. ಅದಕ್ಕೆ ಕಾರ್ಯವಿಧಾನ ಅಸ್ಪಷ್ಟವಾಗಿದೆ.
ತಾಳ ಹಾಕುತ್ತಿರುವ ಆರ್ಬಿಐ
ಈ ನಡುವೆ ಕಳೆದ ವರ್ಷ ಜಾರಿಗೊಂಡ ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿಯಿಂದ ಬಲಗೊಂಡಿರುವ ಆರ್ಬಿಐ, ಪಿ.ಎ.ಸಿ.ಗಳು ‘ಬ್ಯಾಂಕ್’ ಎಂಬ ಶಿರೋನಾಮೆಯನ್ನು ಬಳಸುತ್ತಿರುವುದರ ವಿರುದ್ಧ ಸಹಕಾರಿಗಳ ರಿಜಿಸ್ಟ್ರಾರ್ಗೆ ನೋಟಿಸ್ ನೀಡಿದೆ. ಬ್ಯಾಂಕ್ ಶಿರೋನಾಮೆ ತೆಗೆದುಹಾಕಲ್ಪಟ್ಟರೆ, ಪಿ.ಎ.ಸಿ.ಗಳು ಚೆಕ್ ಹಾಳೆಗಳನ್ನು ನೀಡುವಂತಿಲ್ಲ ಮತ್ತು ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವಂತಿಲ್ಲ. ಕೇವಲ ಎ-ಕ್ಲಾಸ್ ಸದಸ್ಯರು ಮಾತ್ರ ಠೇವಣಿ ಇಡಬಹುದು.
ಇದನ್ನು ಓದಿ: ಆರ್ಬಿಐ ಮೇಲ್ವಿಚಾರಣೆಗೆ ಪಟ್ಟಣ ಸಹಕಾರಿ ಬ್ಯಾಂಕ್
ಎ-ಕ್ಲಾಸ್ ಅಲ್ಲದ ಸದಸ್ಯರು ಈವರೆಗೆ ಇಟ್ಟಿರುವ ಠೇವಣಿಗಳ ಮೊತ್ತ ಸುಮಾರು ರೂ. 60,000 ಕೋಟಿಯಷ್ಟಿದೆ. ಕೇರಳ ಬ್ಯಾಂಕ್ ಪಿ.ಎ.ಸಿ.ಗಳ ಗ್ರಾಹಕರು ದರ್ಪಣ ಖಾತೆಗಳನ್ನು ಹೊಂದದಿರುವಂತೆ ಆರ್ಬಿಐ ನಿರ್ಬಂಧಿಸಬಹುದು. ಕೇರಳದ ಬಲಿಷ್ಟ ಸಹಕಾರಿ ಬ್ಯಾಂಕುಗಳನ್ನು ಹೆದರಿಸಲಾಗುತ್ತಿದೆ. ಬಿಜೆಪಿ ಹೊರತುಪಡಿಸಿ ಕೇರಳದ ಉಳಿದ ಎಲ್ಲಾ ರಾಜಕೀಯ ಪಕ್ಷಗಳು ವೈದ್ಯನಾಥನ್ ಸಮಿತಿಯು ಮೊದಲಿಗೆ ಸೂಚಿಸಿದ್ದ ಈ ಸುಧಾರಣೆಗಳನ್ನು ಒಗ್ಗಟ್ಟಾಗಿ ವಿರೋಧಿಸುತ್ತಿವೆ. ಮುಂದಿನ ದಿನಗಳಲ್ಲಿ ಇದೊಂದು ಬೃಹತ್ ಸಂಘರ್ಷದ ಕಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಸಂಕ್ಷಿಪ್ತವಾಗಿ ಹೇಳುವುದಾದರೆ, ನೂತನ ಸಚಿವಾಲಯಕ್ಕೆ ತಾನಾಗಿಯೇ ಈಗಿರುವ ಸಹಕಾರಿ ಸಂರಚನೆಯನ್ನು ಕಡೆಗಣಿಸಲು ಸಾಧ್ಯವಾಗುವುದಿಲ್ಲ ಆದರೆ ಆರ್.ಬಿ.ಐ. ಇದಕ್ಕೆ ತಾಳ ಹಾಕುವಂತೆ ನಡೆದುಕೊಳ್ಳುತ್ತಿರುವುದರಿಂದ ಶಸ್ತ್ರಾಗಾರ ಮಾರಕವಾಗುತ್ತದೆ. ಇದು ಅಮಿತ್ ಶಾ ರಿಗೆ ಮತ್ತು ಇವರ ನೂತನ ಸಚಿವಾಲಯಕ್ಕೆ ತಮ್ಮ ಪರ್ಯಾಯ ಬಹು ರಾಜ್ಯ ಸಹಕಾರಿಗಳು ಮತ್ತದರ ಶಾಖೆಗಳ ಮೂಲಕ ಕೇರಳದ ಸಹಕಾರಿ ರಂಗಕ್ಕೆ ಪ್ರವೇಶಿಸಲು ಒಂದು ಅವಕಾಶ ಒದಗಿಸುತ್ತದೆ.
ಕೇರಳದ ಪರ್ಯಾಯವನ್ನು ಕಡೆಗಣಿಸುವುದು
ಕೇರಳದಲ್ಲಿ ಪಿ.ಎ.ಸಿ.ಗಳು ಸಾಲ ಚಟುವಟಿಕೆಗಳಷ್ಟೇ ಅಲ್ಲದೆ ಆರ್ಥಿಕತೆಯಲ್ಲಿ ಬಹಳ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಇವು ರೈತರಿಗೆ ಕೃಷಿ ಹೂಡುವಳಿ ಒದಗಿಸುತ್ತವೆ ಮತ್ತು ಕೃಷಿ ಉತ್ಪಾದನೆಗಳನ್ನು ಸಂಗ್ರಹಿಸಲು, ಸಂಸ್ಕರಿಸಲು ಮತ್ತು ಮಾರುವ ಹೆಚ್ಚಿನ ಜವಾಬ್ದಾರಿ ಹೊಂದಿವೆ. ಇವು ಸ್ಥಳೀಯ ಹಣಕಾಸು ಉಳಿತಾಯವನ್ನು ಸ್ಥಳೀಯ ಅಭಿವೃದ್ಧಿಗಾಗಿ ಸರಾಗವಾಗಿ ಒದಗಿಸುವ ಸಂಸ್ಥೆಗಳು. ಗ್ರಾಮದ ಅಭಿವೃದ್ಧಿಗೆ ಇರುವ ಸೂತ್ರವೆಂದರೆ ಪಂಚಾಯತಿ, ಸಾರ್ವಜನಿಕ ಶಾಲೆ ಮತ್ತು ಸ್ಥಳೀಯ ಸಹಕಾರಿ ಬ್ಯಾಂಕು ಎಂಬ ನೆಹರೂ ರವರ ಹೇಳಿಕೆ ಪ್ರಖ್ಯಾತವಾಗಿದೆ. ಕೇರಳ ರಾಜ್ಯವು ಕೃಷಿ ಮತ್ತು ಸಣ್ಣ ಉತ್ಪಾದಕ ಘಟಕಗಳ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಸೇವೆ ಒದಗಿಸಲು ಈ ವಿಕೇಂದ್ರೀಕೃತ ಅಭಿವೃದ್ಧಿ ಪಥ ಹಿಡಿದಿದೆ. ಈ ಯೋಜನೆಯಲ್ಲಿ ಸಹಕಾರಿ ಕ್ಷೇತ್ರವು ಒಂದು ವಿಶೇಷವಾದ ಪ್ರಮುಖ ಪಾತ್ರ ನಿರ್ವಹಿಸಬೇಕಿದೆ.
ದೀರ್ಘಕಾಲೀನ ಪ್ರಯತ್ನಗಳ ನಂತರ ರಾಜ್ಯದಲ್ಲಿರುವ ರಾಜ್ಯ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕುಗಳನ್ನು ವಿಲೀನಗೊಳಿಸಿ ಒಂದು ಕೇರಳ ಬ್ಯಾಂಕ್ ಸ್ಥಾಪಿಸುವಲ್ಲಿ ಕೇರಳ ಯಶಸ್ವಿಯಾಯಿತು. ಸುಮಾರು ರೂ. 61,000 ಕೋಟಿ ಠೇವಣಿ ತಳಪಾಯ ಹೊಂದಿರುವ ಈ ಬ್ಯಾಂಕು ಕೇರಳದ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಿದೆ. ಆರ್ಬಿಐ ನ ಸಂಪೂರ್ಣ ನಿಯಂತ್ರಣ ಅಧಿಕಾರದಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಲೇ, ಒಂದು ಶೆಡ್ಯೂಲ್ಡ್ ಬ್ಯಾಂಕ್ ಆಗಿ ಇದು ಸುಮಾರು 1.6 ಲಕ್ಷ ಕೋಟಿ ಠೇವಣಿ ತಳಪಾಯ ಹೊಂದಿರುವ ಪಿ.ಎ.ಸಿ. ಗಳಿಗೆ ಒಂದು ಮೇರು ಸಂಸ್ಥೆಯಾಗಿಯೇ ಇರುತ್ತದೆ. ಕಾರ್ಯತತ್ವರತೆಯಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಇದು ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ಈಗ ಸ್ಥಾಪಿಸಲಾಗುತ್ತಿರುವ ಕೃಷಿ-ಉತ್ಪಾದಕ ಘಟಕಗಳಿಗೂ ಸಹ ಹಣಕಾಸು ಒದಗಿಸುವ ಪ್ರಮುಖ ಮೂಲವಾಗಿದೆ. ಇಂತಹ ಒಂದು ಪರ್ಯಾಯವನ್ನೇ ಕೇಂದ್ರ ಸರ್ಕಾರವು ಪ್ರತಿಬಂಧಿಸಲು ಹೊರಟಿದೆ.
ಅನು: ಶೃ.ಶಂ.ನಾ.