ಕೊಡಗು: 2018ರಲ್ಲಿ ಆರಂಭದಿಂದಲೂ ಭೂಕುಸಿತದಿಂದ ಜಿಲ್ಲೆಯ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಮಳೆಗಾಲ ಆರಂಭವಾದರಂತೂ ಅಲ್ಲಲ್ಲಿ ಭೂಮಿ ಭಾಯ್ದೆರೆಯುತ್ತವೆ. ಪದೇ ಪದೇ ಭೂ ಕುಸಿತದಿಂದಾಗಿ ಯಾವ ಪ್ರದೇಶದಲ್ಲಿ ಎಷ್ಟು ಜನರ ಜೀವನ ಹಾನಿ ಉಂಟಾಗುದವೋ ಎಂದು ಎದುರು ನೋಡುವ ಪರಿಸ್ಥಿತಿ ಇರುತ್ತದೆ.
ಇಂತಹ ಸಾಕಷ್ಟು ಆತಂಕಗಳ ನಡುವೆ ಕೊಡಗಿನ ರಾಜರ ಹುಟ್ಟೂರು ಹಾಲೇರಿಯಲ್ಲಿ ಮತ್ತೆ ಮತ್ತೆ ಭೂಮಿ ಬಾಯ್ತೆರೆಯುತ್ತವೆ. 2018ರಲ್ಲಿ ಹಾಲೇರಿಯ ತಾತಿಮನೆ ಪೈಸಾರಿಯ ಒಂದು ಭಾಗದಲ್ಲಿ ಭಾರೀ ಎತ್ತರದ ಬೆಟ್ಟ ಐವತ್ತು ಅಡಿ ಆಳದಿಂದ ಕರಗಿ ನೀರಾಗಿ ಹರಿದಿತ್ತು. ಅದು ಮಾಸುವ ಮುನ್ನವೇ ಕುಸಿದ ಜಾಗದಿಂದ ಆರಂಭವಾಗಿ ಬಾಲಾಜಿ ಎಸ್ಟೇಟ್ ನ ಸುಮಾರು 60 ಎಕರೆ ಪ್ರದೇಶದಲ್ಲಿ ಬೃಹತ್ ಘಾತ್ರದ ಬಿರುಕು ಮೂಡಿ ಇಡೀ ಬೆಟ್ಟವೇ ಬಾಯ್ದೆರೆದಿದೆ. ಇದು ಬೆಟ್ಟದ ಕೆಳಭಾಗದಲ್ಲಿ ಇರುವ ತಾತಿಮನೆ ಪೈಸಾರಿಯ 23 ಕುಟುಂಬಗಳಿಗೆ ಕಂಟಕ ತಂದೊಡ್ಡಿದೆ.
ಮಳೆಯ ಆರ್ಭಟ ಜೋರಾಗಿರುವುದರಿಂದ ಗ್ರಾಮದ ದೇವಪ್ಪ ಎಂಬುವರ ಮನೆಯ ಹಿಂಭಾಗದಲ್ಲಿ ಭೂಕುಸಿತ ಉಂಟಾಗಿದೆ. ಮಳೆ ಸುರಿದಂತೆಲ್ಲಾ ಮನೆಯ ಹಿಂಭಾಗದಲ್ಲಿ ಅಂತರ್ಜಲ ಉಕ್ಕುತ್ತಿದೆ. ಗ್ರಾಮದ ರುಕ್ಮಿಣಿ ಎಂಬುವರ ಮನೆಯ ಹಿಂಬದಿಯಲ್ಲೂ ಭೂಕುಸಿತವಾಗಿದ್ದು ಮನೆಯ ಅಡಿಪಾಯವೇ ಕುಸಿದು ಹೋಗಿದೆ.
ಅದೇ ರೀತಿಯಲ್ಲಿ ಸುರೇಶ್ ಮತ್ತು ಗಣೇಶ್ ಎಂಬುವರ ಮನೆಯ ಮುಂಭಾಗದಲ್ಲೇ ಚಿಕ್ಕ ಪುಟ್ಟ ಭೂಕುಸಿತವಾಗಿವೆ. ರಾತ್ರಿ ವೇಳೆಯಲ್ಲಿ ಭೂಮಿಯೊಳಗೆ ನೀರು ಹರಿದಂತಹ ಶಬ್ಧವಾಗುತ್ತಿದೆಯಂತೆ. ಹೀಗಾಗಿ ರಾತ್ರಿ ನಿದ್ದೆ ಬರುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
2018ರಲ್ಲಿ ಭಾರೀ ಭೂಕುಸಿತವಾದಾಗ ಪಕ್ಕದಲ್ಲೇ ಇರುವ ನಮ್ಮ ಮನೆಗಳೆಲ್ಲ ಬಿರುಕು ಬಿಟ್ಟಿದ್ದವು. ಇದೆಲ್ಲವನ್ನೂ ಗಮನಿಸಿದ್ದ ಜಿಲ್ಲಾಡಳಿತ, ಕಂದಾಯ ಇಲಾಖೆಯು ಜಂಬೂರಿನಲ್ಲಿ ನಮಗೆ ಮನೆಗಳನ್ನು ಮಂಜೂರು ಮಾಡಿದವು. ಮನೆಗಳನ್ನು ಹಂಚಿಕೆ ಮಾಡಲು ಮನೆ ನಂಬರ್ ಗಳನ್ನು ವಿತರಣೆ ಮಾಡಲಾಗಿತ್ತು. ಆದಾದ ಕೆಲವೇ ದಿನಗಳಲ್ಲಿ ನಿಮ್ಮ ಮನೆಗಳು ಚೆನ್ನಾಗಿರುವುದರಿಂದ ಬೇರೆ ಮನೆಗಳನ್ನು ಕೊಡಲು ಬರುವುದಿಲ್ಲ ಎಂದು ಕಡೆಗಣಿಸಿದರು.
ಇದೀಗ ಮತ್ತೆ ಬೆಟ್ಟದಲ್ಲಿ ಭಾರೀ ಬಿರುಕು ಮೂಡಿರುವುದರಿಂದ ಅಧಿಕಾರಿಗಳು ಬಂದು ಮನೆ ಖಾಲಿ ಮಾಡಿ ಎಂದು ನೋಟಿಸ್ ನೀಡಿ ಹೋಗಿದ್ದಾರೆ. ಅತ್ತ ಕಾಳಜಿ ಕೇಂದ್ರವೂ ಇಲ್ಲ, ಇತ್ತ ನೆಮ್ಮದಿ ಸೂರು ಇಲ್ಲ. ಕೊರೊನಾದಿಂದ ಹೊರಗೆ ಹೋಗಲಾರದ ಸ್ಥಿತಿ ಇರುವಾಗ ಎಲ್ಲಿಗೆ ಹೋಗಿ ಇರುವುದು ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ವರದಿ: ಆರ್ವಿ ಹಾಸನ