ಲಿಂಗಾಯತರ ವಿರೋಧ ಕಟ್ಟಿಕೊಳ್ಳದೆ ತಂತ್ರ ಹೆಣೆದ ಬಿಜೆಪಿ, ಹಿಂದುತ್ವದ ಅಜೆಂಡ ಸಿಎಂ ಆಯ್ಕೆಗೆ ಮುಖ್ಯವಾಯಿತೆ?!

ಗುರುರಾಜ ದೇಸಾಯಿ

ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಿಗ್ಗೆ 11 ಗಂಟೆ ಸರಿಯಾಗಿ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅವರಿಂದ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಯಡಿಯೂರಪ್ಪ ರಾಜೀನಾಮೆ ನೀಡುವ ಮೂಲಕ ನಾಯಕತ್ವ ಬದಲಾವಣೆಗೆ ಅಂತಿಮ ತೆರೆ ಎಳೆದ ಬಳಿಕ ಹೈಕಮಾಂಡ್‌ ರಾಜ್ಯಕ್ಕೆ ಹೊಸ ಸಿಎಂ ಆಯ್ಕೆ ಮಾಡಿದೆ. ಮತ್ತೆ ಲಿಂಗಾಯತರಿಗೆ ಮಣೆಹಾಕುವ ಮೂಲಕ ಬಿಜೆಪಿ ಜಾಣ ನಡೆಯನ್ನು ಅನುಸರಿಸಿದೆ.  ಬೇರೆ ಸಮುದಾಯಕ್ಕೆ ಸೇರಿದ ಶಾಸಕರನ್ನು ಸಿಎಂ ಮಾಡಿದರೆ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಎಂಬುದನ್ನು ಹೈಕಮಾಂಡ್ ಅರಿತಂತಿದೆ. ಹಾಗಾಗಿ ಲಿಂಗಾಯತ ಸಮುದಾಯಕ್ಕೆ ಮತ್ತೊಮ್ಮೆ ‘ಸಿಎಂ’ ಪಟ್ಟ ಕಟ್ಟಲಾಗಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಗಟ್ಟಿ ರಾಜ್ಯ ಕರ್ನಾಟಕ. ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಪತಾಕೆ ಹಾರಿಸಿದ್ದು ಕರ್ನಾಟಕದಲ್ಲಿಯೇ. ಬದಲಾದ ರಾಜಕೀಯ ಗುದ್ದಾಟದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿತ್ತು. ಈ ಅಧಿಕಾರದ ಗದ್ದುಗೆಯನ್ನ ಬಿಟ್ಟುಕೊಡಬಾರದೆಂಬುದು ಬಿಜೆಪಿಯ ಮಹಾದಾಸೆ. ಅದಕ್ಕಾಗಿಯೇ ಯಡಿಯೂರಪ್ಪ ನಂತರದ ನಾಯಕತ್ವಕ್ಕೆ ಹುಡುಕಾಟ  ನಡೆಸಿ 2023 ಚುನಾವಣೆಗೆ ತಂತ್ರವನ್ನೂ ಹೂಡಿದೆ. ಯಡಿಯೂರಪ್ಪ ನಂತರವೂ ಬಿಜೆಪಿ ಮತ್ತಷ್ಟು ಗಟ್ಟಿ ಮಾಡಬೇಕು ಅನ್ನೋ ದೂರದೃಷ್ಟಿ. ಯಡಿಯೂರಪ್ಪ ಜಾಗಕ್ಕೆ ತಕ್ಕನಾದ ಮಾಸ್ ಇಲ್ಲದಿದ್ದರೂ ಕ್ಯಾಸ್ಟ್ ಬೇಸ್ ಇರಬೇಕು ಅನ್ನೋದು ಹೈಕಮಾಂಡ್ ಲೆಕ್ಕಾಚಾರ. ಹಾಗಾಗಿಯೇ ಯಡಿಯೂರಪ್ಪ ನಂತರದ ಉತ್ತರಾಧಿಕಾರಿ ತಲಾಶ್ ಗೆ ಒಳಗೊಳಗೆ ತಂತ್ರ ನಡೆಸುತ್ತಾ ಬಂದಿತ್ತು.  ಆ ತಂತ್ರದ ಪ್ರಯೋಗವೇ ಬಸವರಾಜ ಬೊಮ್ಮಾಯಿ ಆಯ್ಕೆ. ಇತ್ತ ಯಡಿಯೂರಪ್ಪ ತಮ್ಮ ರಾಜೀನಾಮೆಗೆ ಕಾರಣವನ್ನು ಬಿಚ್ಚಿಡದೆ ಮೌನವಹಿಸಿದ್ದಾರೆ. ನಾನು ಸೂಚಿಸಿದವರು ಸಿಎಂ ಆಗಿದ್ದಾರೆ, ಕಿಂಗ್‌ ಮೇಕರ್‌ಆಗಿ ಕಾರ್ಯನಿರ್ವಹಿಸಬಹುದಲ್ಲಾ ಎಂದು ಯಡಿಯೂರಪ್ಪ ಲೆಕ್ಕಾಚಾರ ಹಾಕಿದಂತೆ ಕಾಣುತ್ತದೆ.

ಯಡಿಯೂರಪ್ಪ ರಾಜೀನಾಮೆಗೆ ಕಾರಣವೇನು? : ಯಡಿಯೂರಪ್ಪ ಪದಚ್ಯುತಿಗೆ ಕಾರಣವೇನು ಎಂಬುದು ಇಲ್ಲಿವರಿಗೆ ಉತ್ತರಕ್ಕೆ ಸಿಗದ ಪ್ರಶ್ನೆಯಾಗಿದೆ. ಆದರೆ ಅವರು ಮೌನವಾಗಿದ್ದರು ಅವರ ರಾಜೀನಾಮೆಗೆ ಕಾರಣವೇನು ಎಂಬುದನ್ನು ಜನ ಆಗಲೇ ಲೆಕ್ಕ ಹಾಕಿದ್ದಾರೆ.  ಆಡಳಿತ ನಿರ್ವಹಣೆಯಲ್ಲಿ ಯಡಿಯೂರಪ್ಪ ಸೋಲುತ್ತಿರುವುದು, ಅವರ ಮಗ ಬಿ.ವೈ. ವಿಜಯೇಂದ್ರ ಪರೋಕ್ಷವಾಗಿ ಆಡಳಿತ ನಡೆಸುತ್ತಿರುವುದು ಬದಲಾವಣೆಯತ್ತ ಚಿತ್ತ ಹರಿಸಲು ಪ್ರಮುಖ ಕಾರಣ. ಆಡಳಿತ ಹಸ್ತಕ್ಷೇಪ ಹಾಗೂ ಸಾರ್ವಜನಿಕ ಲಜ್ಜೆಯೂ ಇಲ್ಲದಂತೆ ಭ್ರಷ್ಟಾಚಾರವನ್ನು ಬಿಡುಬೀಸಾಗಿ ನಡೆಸಲಾಗುತ್ತಿದೆ.  ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗುತ್ತದೆ. ಕನಿಷ್ಠ ಪ್ರಾಮಾಣಿಕತೆ ಉಳಿಸಿಕೊಂಡಿರುವ ಕೆಲವು ಶಾಸಕರು ‘ಇಂತಹ ಸರ್ಕಾರದಲ್ಲಿ ತಾವು ಏಕೆ ಭಾಗಿಯಾಗಿರಬೇಕು’ ಎಂದು ಪ್ರಶ್ನಿಸಿರುವುದರಿಂದ ನಾಯಕತ್ವ ಬದಲಾವಣೆಗೆ ಪಕ್ಷದ ವರಿಷ್ಠರು ಮನಸ್ಸು ಮಾಡಿದ್ದರು ಎಂಬುದನ್ನು ಗುಟ್ಟಾಗಿ ಇಡಬೇಕಾಗಿಲ್ಲ.  ರಾಜೀನಾಮೆ ನೀಡಲು ವರಿಷ್ಟರು ಯಡಿಯೂರಪ್ಪಗೆ ಒತ್ತಡ ಹೇರಿದ್ದು ನಿಜ ಎಂಬುದು ಅವರ ಗದ್ಗದಿತ ಭಾಷಣ ಕೇಳಿದವರು ಸುಲಭವಾಗಿ ಪತ್ತೆಹಚ್ಚಿಬಿಡಬಹುದು.

ಕರ್ನಾಟಕದಲ್ಲಿ ಪಕ್ಷ ಕಟ್ಟಿ, ಅಧಿಕಾರಕ್ಕೆ ತಂದ ಹೆಗ್ಗಳಿಕೆ ಹೊಂದಿರುವ ಯಡಿಯೂರಪ್ಪ ಮೇಲೆ ಗೌರವ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೇ ‘ಶುಭ ವಿದಾಯ’ದ ರೀತಿಯಲ್ಲಿ ಮುಖ್ಯಮಂತ್ರಿಯೇ ಕುರ್ಚಿ ತ್ಯಾಗ ಮಾಡಲಿ ಎಂಬ ಅಪೇಕ್ಷೆ ಹೊಂದಿದ್ದರು. ಅದಕ್ಕಾಗಿಯೇ ಕಳೆದವಾರ ಯಡಿಯೂರಪ್ಪನವರನ್ನು ದೆಹಲಿಗೆ ಕರೆಯಿಸಿಕೊಂಡು ಸಾಕಷ್ಟು ವಿಚಾರಗಳನ್ನು ಚರ್ಚಿಸಿ ಅಂತಿಮವಾಗಿ ರಾಜೀನಾಮೆ ನೀಡುವಂತೆ ಮೋದಿ ಮತ್ತು ಅಮಿತ್‌ ಶಾ ಸೂಚನೆ ನೀಡಿದ್ದಾರೆ. ನಿಮ್ಮ ರಾಜೀನಾಮೆ ನಿಮಗೂ ಮತ್ತು ನಿಮ್ಮ ಮಕ್ಕಳ ಭವಿಷ್ಯಕ್ಕೂ ದಾರಿಯಾಗುತ್ತದೆ ಎಂಬ ದಾಳವನ್ನು ಕೇಂದ್ರದ ವರಿಷ್ಟರು ಉರುಳಿಸುತ್ತಿದ್ದಂತೆ, ಯಡಿಯೂರಪ್ಪ ಒಂದು ಬೇಡಿಕೆಯನ್ನು ಇಡುತ್ತಾರೆ. ಆ ಬೇಡಿಕೆ ಏನೆಂದರೆ   ನಾನು ಹೇಳಿದವರನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುವಲ್ಲಿ ಪಕ್ಷ ಸಿದ್ಧವಿದೆ ಎನ್ನುವುದಾದರೆ ನಾನು ರಾಜೀನಾಮೆ ನೀಡಲು ಸಿದ್ದ ಎಂದಿದ್ದಾರೆ. ಇದಕ್ಕೆ ಮೋದಿ ಮತ್ತು ಶಾ ತಲೆ ಅಲ್ಲಾಡಿಸಿದ್ದಾರೆ. ಹಾಗಾಗಿ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು ಯಡಿಯೂರಪ್ಪ ಉರುಳಿಸಿದ ದಾಳದಿಂದ. ಮುಂದಿನ ಚುನಾವಣೆಯಲ್ಲಿ ಗೆಲುವಿನ ಲೆಕ್ಕಾಚಾರದಲ್ಲಿರುವ ಕೇಂದ್ರದ ಹೈಕಮಾಂಡ್‌ ತುಟಿಪಿಟಕ್ಕೆನ್ನದೆ ಬೊಮ್ಮಾಯಿ ಆಯ್ಕೆಗೆ ಅಂಕಿತ ಹಾಕಿದೆ.

ಇದನ್ನೂ ಓದಿಬಿಜೆಪಿಯಲ್ಲೀಗ ಹೊಸ ಸಿಎಂ ಚರ್ಚೆ ?! ದಾಳ ಉರುಳಿಸಬಹುದಾ ವಲಸಿಗರು?!!

ಬೊಮ್ಮಾಯಿಯನ್ನು ಸಂಘ ಒಪ್ಪಿಕೊಂಡಿದ್ದು ಹೇಗೆ? :  ಬಸವರಾಜ ಬೊಮ್ಮಾಯಿ ಜೆಡಿಎಸ್ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. 2008ರಲ್ಲಿ ಕಮಲ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅದೇ ವರ್ಷ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶ ಪಡೆದಿದ್ದರು.  ಆಯ್ಕೆಯಾದ ಮೊದಲ ಅವಧಿಯಲ್ಲೆ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದರು, 2019 ರಿಂದ ಗೃಹಸಚಿವರಾಗಿ ಕಾರ್ಯವನ್ನು ನಿರ್ವಹಿಸಿದವರು.  ಮೂಲ ಬಿಜೆಪಿಗ ಅಲ್ಲದಿದ್ದರೂ  ಕೇವಲ 13 ವರ್ಷಗಳಲ್ಲಿ ನೀರಾವರಿ ಸಚಿವರಾಗಿ, ಗೃಹಸಚಿವರಾಗಿ ಕಾರ್ಯನಿರ್ವಹಿಸಿದರು.  ಪ್ರಭಾವಿ ಲಿಂಗಾಯತ ಮುಖಂಡರಾಗಿರುವ ಬೊಮ್ಮಾಯಿಯವರನ್ನು  ಸಿಎಂ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಸರಳವಾಗಿ ಗೆಲ್ಲಬಹುದು ಆ ಕಾರಣಕ್ಕಾಗಿ ಇವರನ್ನು ಆಯ್ಕೆ ಮಾಡಲಾಗಿದೆ ಅಂಬ ಅಂಶ ನಿಜವೇ ಆಗಿದ್ದರೂ ಅವರ ಆಯ್ಕೆಗೆ ವಾಸ್ತವಿಕ ಕಾರಣ ಬೇರೆಯೇ ಇದೆ. ಏನೂ ಆ ಕಾರಣ ಎನ್ನುವದನ್ನು ನೋಡೋಣ.

ಬಸವರಾಜ ಬೊಮ್ಮಾಯಿಯವರು ಮೂಲ ಬಿಜೆಪಿಗರಲ್ಲ 2008 ರಲ್ಲಿ ಅವರು ಆರ್‌.ಎಸ್‌.ಎಸ್‌ ಜೊತೆ ಅಷ್ಟಾಗಿ ಸಖ್ಯವನ್ನು ಬಯಸಿರಲಿಲ್ಲ. ಆದರೆ 2019 ರಲ್ಲಿ ಯಾವಾಗ ಅವರು ಗೃಹಸಚಿವರಾದರೋ ಥೇಟ್‌ ಅಮಿತ್‌ ಶಾನಂತೆ ಸಂಘದ ಅಜೆಂಡಗಳನ್ನು ರಾಜ್ಯದಲ್ಲಿ ಜಾರಿಮಾಡಲು ಯೋಜನೆಗಳನ್ನು ಹಾಕುತ್ತಾ ಹೋದರು.  ಬಸವರಾಜ ಬೊಮ್ಮಾಯಿ, ತಮ್ಮ ಹಿಂದಿನ ಉದಾರವಾದಿ ಧೋರಣೆ ಬದಿಗಿಟ್ಟು, ಸಂಘ ಪ್ರಣೀತ ‘ಹಿಂದೂ ರಾಷ್ಟ್ರವಾದ’ದತ್ತ ತಮ್ಮ ನಿಲುವು ಬದಲಿಸಿಕೊಂಡರು. ಅದನ್ನು ಸಾಕ್ಷಿಕರಿಸುವಂತೆ ಒಂದೆರೆಡು ಉದಾಹರಣೆಗಳನ್ನು ನೋಡಬಹುದು. ಪೌರತ್ವ ತಿದ್ದುಪಡಿ ಕಾಯ್ದೆ 2019 ಪ್ರತಿಭಟನೆಯ ವೇಳೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ಘಟನೆಯನ್ನು  ಬಸವರಾಜ್ ಬೊಮ್ಮಾಯಿ ನಿರ್ವಹಿಸಿದ ರೀತಿ ಆರ್‌ಎಸ್‌ಎಸ್‌ಗೆ ಮೆಚ್ಚುಗೆಯಾಗಿತ್ತು. ಲವ್‌ ಜಿಹಾದ್‌ ಲವ್‌ ಜಿಹಾದ್‌ ಎಂದು ಸಂಘಪರಿವಾರ ಆಗಾಗ ವಿಷಕಾರುತ್ತಿರುವುದನ್ನು ನಾವೆಲ್ಲ ನೋಡಿದ್ದೇವೆ. ಇಲ್ಲದೆ ಇರುವ ಘಟನೆಗಳನ್ನು ಲವ್‌ ಜಿಹಾದ್‌ ಎಂದು ಪರಿಗಣಿಸಿ ಹಿಂದುಮತಗಳನ್ನು ಬ್ಯಾಂಕ್‌ ಆಗಿ ಪರಿವರ್ತಿಸುವುದು ಬಿಜೆಪಿಯ ಲೆಕ್ಕಾಚಾರ. ಈ ವಿಚಾರದಲ್ಲಿ ಮತಾಂತರ ನಿಷೇಧ ಮತ್ತು ಲವ್ ಜಿಹಾದ್ ವಿರುದ್ಧ ಕಾನೂನು ಜಾರಿ ಮಾಡುಲು ಮುಂದಾಗಿದ್ದ ಘಟನೆ, ಡ್ರಗ್ಸ್ ಪ್ರಕರಣದಲ್ಲಿ ಬೊಮ್ಮಾಯಿ ತೆಗೆದುಕೊಂಡಿರುವ ಕ್ರಮಗಳು, ಇತ್ತೀಚೆಗೆ ಯುಪಿ ಮಾದರಿಯಲ್ಲಿ ಜನಸಂಖ್ಯಾ ನೀತಿಯನ್ನು ಜಾರಿ ಮಾಡುವ ಪ್ರಸ್ಥಾಪ ಇಟ್ಟಿದ್ದು ‘ಸಂಘ’ದವರನ್ನು ಮೆಚ್ಚಿಸಲು ಕಾರಣವಾಯಿತು. ಬಸವರಾಜ ಬೊಮ್ಮಾಯಿ ಸಿಎಂ ಆಗಲು ಮುಖ್ಯ ಕಾರಣ ಇದೇ ಅಂಶಗಳು ಎಂಬುದನ್ನು ಬಹುತೇಕರು ಮುಚ್ಚಿಡುತ್ತಿದ್ದಾರೆ.

ಇತ್ತ ಯಡಿಯೂರಪ್ಪ ಸೂಚಿಸಿದ ಹೆಸರು ಹಾಗೂ ಕರ್ನಾಟಕದಲ್ಲಿ ಹಿಂದುತ್ವ ಅಜೆಂಡ್‌ ಜಾರಿ ಮಾಡಲು ಸೂಕ್ತವ್ಯಕ್ತಿಯ ಹುಡುಕಾಟದಲ್ಲಿದ್ದ ಬಿಜೆಪಿ ಮತ್ತು ಸಂಘಪರಿವಾರದವರಿಗೆ ಬಸವರಾಜ ಬೊಮ್ಮಾಯಿ ಈಗ ಬಂಗಾರದ ಮೊಟ್ಟೆ ಇಡುವ ಕೋಳಿಯಾಗಿದ್ದಾರೆ. ಇತ್ತ ಲಿಂಗಾಯತರ ಮತ ಬ್ಯಾಂಕ್‌ ಭದ್ರ ಆಯ್ತು, ಯಡಿಯೂರಪ್ಪರವರನ್ನು ಸಮಾಧಾನಪಡಿಸಿದ ಹಾಗಾಯಿತು, ಇತ್ತ ಹಿಂದುತ್ವ ಅಜೆಂಡ ಜಾರಿಗೆ ಸುಲಭ ದಾರಿಯಾಯಿತು ಎಂಬ ಸಂಭ್ರಮ ಸಂಘದೊಳಗೆ ನಡೆಯುತ್ತಿದೆ. ಹಿಂದುತ್ವ ಎಂಬ ಬಂದೂಕನ್ನು ಬಸವರಾಜ ಬೊಮ್ಮಾಯಿಯವರ ಹೆಗೆಲಮೇಲೆ ಇಟ್ಟು ಅಲ್ಪಸಂಖ್ಯಾತ ಸಮುದಾಯಗಳ ಕಡೆ ಹೊಡೆಯುವ ಬಿಜೆಪಿ ದಾರಿ ಈಗ ಸುಲಭವಾಗಿದೆ. ಸಚಿವರಾಗಿದ್ದುಕೊಂಡೆ ಹಿಂದುತ್ವದ ಅಜೆಂಡಗಳನ್ನು ಜಾರಿ ಮಾಡಲು ಮುಂದಾಗಿದ್ದ ಸಿಎಂ ಸಾಹೇಬರು ಸಿಎಂ ಆದಮೇಲೆ ಹೇಗಿರುತ್ತದೆ ಎಂಬುದನ್ನು ಒಂದುಬಾರಿ ಉಹಿಸಿಕೊಂಡರೆ ಕಣ್ಮುಂದೆ ಬರುವ ಚಿತ್ರಣ ಬೇರೆಯದ್ದೆ ಆಗಿದೆ.

ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಎಂಬ ಖುಷಿ ಬಿಜೆಪಿಯೊಳಗಡೆ ಇದ್ದರೆ, ರಾಜ್ಯದಲ್ಲಿ ದಿನೆ ದಿನೆ ಹತ್ತಾರು ಸಂಕಷ್ಟುಗಳು ಹೆಚ್ಚಾಗುತ್ತಲೆ ಇವೆ. ಇವನ್ನೆಲ್ಲ ಬಸವರಾಜ ಬೊಮ್ಮಾಯಿ ಸಮರ್ಥವಾಗಿ ನಿಭಾಯಿಸುತ್ತಾರಾ? ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಬಸವರಾಜ ಬೊಮ್ಮಾಯಿ ಸಂಘದ ನಿಷ್ಟೆಯಾಗಿ ಕಾರ್ಯನಿರ್ವಹಿಸುತ್ತಾರಾ? ಅಥವಾ ಜನಪರ ಯೋಜನೆಗಳ ಮೂಲಕ ಕರ್ನಾಟಕದ ಜನರ ನಿಷ್ಟೆಯಾಗಿ ಕೆಲಸ ಮಾಡುತ್ತಾರಾ? ಕಾಲವೇ ಉತ್ತರವನ್ನು ಹೇಳಲಿದೆ. ಸರ್ವಜನಾಂಗದ ಶಾಂತಿಯ ತೋಟಕ್ಕೆ  ಬಸವರಾಜ ಬೊಮ್ಮಾಯಿಯವರು ಕಲ್ಲೆಸೆಯದೆ ಇದ್ದರೆ ಅವರ ತಂದಗೆ ಗೌರವ ನೀಡಿದಂತಾಗುತ್ತದೆ.  ಉತ್ತಮ ಹಿನ್ನೆಲೆ ಅವರು ತಂದೆಯಂತೆ ರಾಜ್ಯದಲ್ಲಿ ಒಂದಿಷ್ಟು ಉತ್ತಮಕೆಲಸವನ್ನು ಮಾಡುತ್ತಾರಾ? ಅಥವಾ ಸಂಘನಿಷ್ಟೆಯಾಗಿ ಆರ್‌ಎಸ್‌ಎಸ್‌ ಅಣತಿಯಂತೆ ನಡೆದುಕೊಳ್ಳುತ್ತಾರಾ ಕಾದು ನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *