ಉತ್ತರ ಕರ್ನಾಟಕ,ಕರಾವಳಿ ಭಾಗಗಳಲ್ಲಿ ಮಳೆ ಅಬ್ಬರ : ಜನಜೀವನ ಅಸ್ತವ್ಯಸ್ತ

ಬೆಂಗಳೂರು :  ಕಳೆದ ಒಂದು ವಾರದಿಂದ ಮಳೆಯ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಉತ್ತರ ಕನ್ನಡ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ,  ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ, ಜನಜೀವನ ಅಸ್ತವ್ಯಸ್ತಗೊಂಡಿದ್ದು ಕೆಲವೆಡೆ ಪ್ರವಾಹದ ಭೀತಿ ಎದುರಾಗಿದೆ.

ದಾವಣಗೆರೆ : ಜಿಲ್ಲೆಯ ಹಲವು ಪ್ರದೇಶಗಳಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಸೇತುವೆಗಳ ಮೇಲೆಯೂ ನೀರು ಬರುತ್ತಿದೆ. ಸಾವಿರಾರು ಎಕರೆ ಜಮೀನು ಜಲಾವೃತಗೊಂಡಿದೆ. ಮಳೆಯ ಅಬ್ಬರದಿಂದಾಗಿ ರೈತರು ಸಹ ಅಪಾರ ನಷ್ಟವನ್ನು ಅನುಭವಿಸಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ನೂರಾರು ಮನೆಗಳು ಕುಸಿದಿವೆ. ಬೆಳೆದು ನಿಂತಿದ್ದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ನಾಟಿ ಮಾಡಲು ಸಂಗ್ರಹಿಸಿಟ್ಟಿದ್ದ ಸಸಿಗಳು ನೀರುಪಾಲಾಗಿವೆ. ಹರಿಹರ ತಾಲೂಕಿನ ದೊಡ್ಡಹಳ್ಳದ ಕೊಂಡಜ್ಜಿ ಹಾಗೂ ಗಂಗನರಸಿ ಸಂಪರ್ಕ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ಸಂಪರ್ಕ ಕಡಿತಗೊಂಡಿದೆ.

ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದ ಜನರು ಭಾರೀ ಮಳೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ‌.‌ ಸುಮಾರು ಮೂರು ಸಾವಿರಕ್ಕೂ ಅಧಿಕ ಜನಸಂಖ್ಯೆಯುಳ್ಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಚಿಕ್ಕಬಿದರೆ – ಸಾರಥಿ ನಡುವಿನ ರಸ್ತೆ ಜಲಾವೃತಗೊಂಡಿದೆ. ವಾರದಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ವರುಣನ ಆರ್ಭಟ ಜಿಲ್ಲೆಯಲ್ಲಿ ತೀವ್ರಗೊಂಡಿದೆ. ಚಿಕ್ಕಬಿದರಿ ಗ್ರಾಮ‌ ಹಾಗೂ ಸಾರಥಿ ಮಧ್ಯದ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಚಿಕ್ಕಬಿದರಿ ಗ್ರಾಮ ಸಂಪೂರ್ಣವಾಗಿ ದ್ವೀಪವಾದಂತಾಗಿದೆ. ಯಾವುದೇ ವಾಹನ ಬರೋಕೆ ಸಣ್ಣ ರಸ್ತೆಯೂ ಇಲ್ಲದಂತಾಗಿದೆ. ಸದ್ಯ ಚಿಕ್ಕಬಿದರಿ ಸಾರಥಿ ಗ್ರಾಮಗಳ ಮಧ್ಯೆ 7 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಸೇತುವೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತಿದ್ದು, ಇದರಿಂದ ಸೇತುವೆ ಕಾಮಾಗಾರಿಗೆ ನಿರ್ಮಿಸಿದ್ದು ಕಾಲಂಗಳು ಕೂಡ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿವೆ.

ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವ ವೇಳೆ ದೋಣಿ ಪಲ್ಟಿಯಾಗಿ ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಶಿರ್ಲೆ ಫಾಲ್ಸ್‍ಗೆ ಪ್ರವಾಸಕ್ಕೆ ತೆರಳಿದ್ದ ಹುಬ್ಬಳ್ಳಿಯ ಆರು ಮಂದಿ ಯುವಕರು ನಾಪತ್ತೆಯಾಗಿದ್ದು, ಅರಣ್ಯ ಇಲಾಖೆ ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಭಾರೀ ಮಳೆ ಹಿನ್ನೆಲೆಯಲ್ಲಿ ಫಾಲ್ಸ್ ಬಳಿ ಯಾರನ್ನೂ ಬಿಡುವುದಿಲ್ಲ ಎಂದು ಸಿಬ್ಬಂದಿ ಹೇಳಿದ್ದರೂ ಕೂಡ ಯುವಕರು ಗಲಾಟೆ ಮಾಡಿ ಫಾಲ್ಸ್ ಬಳಿ ಹೋಗಿದ್ದರು. ಆದರೆ, ಅಲ್ಲಿ ಅವರು ತೆರಳಿದ್ದ ಬೈಕ್‍ಗಳು ಮಾತ್ರ ಇದ್ದು, ಅವರು ಪತ್ತೆಯಾಗಿಲ್ಲ. ಯುವಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಶಿರಸಿ, ಸಿದ್ದಾಪುರದಲ್ಲೂ ಭಾರೀ ಮಳೆಯಾಗುತ್ತಿದ್ದು, ಸಣ್ಣ-ಪುಟ್ಟ ನದಿಗಳು ಉಕ್ಕಿ ಹರಿಯುತ್ತಿವೆ. ತಗ್ಗು ಪ್ರದೇಶ ಜಲಾವೃತವಾಗಿದ್ದು, ಜನರು ಕಂಗಾಲಾಗಿದ್ದಾರೆ. ಇನ್ನು, ಕದ್ರಾ ಜಲಾಶಯ ತುಂಬಿದ್ದು, ನಿರಂತರವಾಗಿ ಕಾಳಿ ನದಿಗೆ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗೊ ಕಾಳಿ ನದಿ ಪಾತ್ರದ ಗ್ರಾಮಗಳು ಜಲಾವೃತವಾಗುವ ಭಯ ಕಾಡುತ್ತಿದೆ. ಈಗಾಗಲೆ ಸಣ್ಣ ಪುಟ್ಟ ಬಡಾವಣೆಗಳಿಗೆ ನೀರು ನುಗ್ಗಿದೆ.

ಬೆಳಗಾವಿ : ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಯಮಗರಣಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದೆ. ಹೆದ್ದಾರಿ ಮೇಲೆ ಮೂರ್ನಾಲ್ಕು ಅಡಿ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಬೆಂಗಳೂರು-ಮುಂಬೈ ಮಧ್ಯದ ರಾಷ್ಟ್ರೀಯ ಹೆದ್ದಾರಿ-4ರ ಸಂಚಾರ ಸ್ಥಗಿತವಾಗಿದೆ. ಜಲಾವೃತ ಪ್ರದೇಶದಿಂದ 2 ಕಿಮೀ ಮೊದಲೇ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ 6 ಕೆಳಮಟ್ಟದ ಕಿರು ಸೇತುವೆಗಳು ಜಲಾವೃತ ಸ್ಥಿತಿಯಲ್ಲಿಯೇ ಇವೆ. ಗುರುವಾರ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಕ್ಕೋಳ-ಸಿದ್ನಾಳ ಕಿರು ಸೇತುವೆ ಮುಳುಗಡೆಯಾಗಿದೆ. ಜನರ ಸಂಚಾರಕ್ಕೆ ಪರ್ಯಾಯ ಮಾರ್ಗಗಳಿವೆ. ಚಿಕ್ಕೋಡಿ ತಾಲ್ಲೂಕಿನ ನದಿ ಜಲಾನಯನ ಪ್ರದೇಶಗಳಲ್ಲಿ 24 ಗಂಟೆಗಳಲ್ಲಿ ಮಳೆಯ ಆರ್ಭಟ ಹೆಚ್ಚಿದೆ. ಕೃಷ್ಣಾ ಮತ್ತು ಉಪನದಿಗಳ ಹರಿವಿನಲ್ಲಿ ನಿರಂತರ ಏರಿಕೆ ದಾಖಲಾಗುತ್ತಿದೆ. ರಾಜಾ‍ಪುರ ಬ್ಯಾರೇಜ್‌ನಿಂದ 58ಸಾವಿರ ಕ್ಯುಸೆಕ್ ಮತ್ತು ದೂಧ್‌ಗಂಗಾ ನದಿಯಿಂದ 19,768 ಕ್ಯುಸೆಕ್ ಸೇರಿ 77,768 ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿರುವುದರಿಂದ, ಕೃಷ್ಣಾ ನದಿಗೆ ಬಂದು ಸೇರುವ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿ ತೀರದಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

ಬೆಳಗಾವಿ ಜಿಲ್ಲೆಯ 11 ಸೇತುವೆಗಳು ಮುಳುಗಡೆಯಾಗಿದ್ದು, ನಡುಗಡ್ಡೆಯಲ್ಲಿ ಸಿಲುಕಿದ್ದ 11 ಜನರನ್ನು ರಕ್ಷಣೆ ಮಾಡಲಾಗಿದೆ. ಬೆಳಗಾವಿ ನಗರದಲ್ಲಿ ಮಳೆಯ ಆರ್ಭಟದಿಂದ ಶಿವಾಜಿನಗರದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ರಾತ್ರಿಯೆಲ್ಲಾ ಜನ ಆತಂಕದಲ್ಲಿ ಕಾಲ ಹಾಕುವಂತಾಗಿದ್ದು, ಹಲವರು ಮನೆ ಖಾಲಿ ಮಾಡಿದ್ದಾರೆ. ರಾಮಚಂದ್ರ ಚೌಗಾಲಾ ಎಂಬುವವರ ಮನೆ ಕುಸಿದು ಬಿದ್ದಿದೆ.

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲೂ ವರ್ಷಧಾರೆ ಮುಂದುವರಿದಿದ್ದು, ಕಳಸಾ ತಾಲ್ಲೂಕಿನ ಹೆಬ್ಬಾಳ ಸೇತುವೆ ಜಲಾವೃತಗೊಂಡಿದೆ. ಕಳಸಾ-ಹೊರನಾಡಿನ ಸಂಪರ್ಕ ಕಡಿತಗೊಂಡಿದೆ.  ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಕಲ್ಲತ್ತಿಗಿರಿ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದೆ. ಮಡಿಕೇರಿಯಲ್ಲಿ ಮಳೆಯ ರೌದ್ರ ನರ್ತನ ಮುಂದುವರಿದಿದೆ. ವರುಣನ ಪ್ರತಾಪಕ್ಕೆ ಕೊಡಗು ನಲುಗಿ ಹೋಗುತ್ತಿದೆ. ಪ್ರತಿದಿನವೂ ಮಳೆಯ ಆರ್ಭಟ ಹೆಚ್ಚಾಗುತ್ತಿದೆ. ಶುಂಠಿಕೊಪ್ಪ ಸೇರಿದಂತೆ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಹಾಸನ : ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ
ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು, ಹಾಸನದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಯ ರಭಸ ಎಷ್ಟಿದೆ ಎಂದರೆ ಮಳೆಯ ನೀರು ಮನೆಗಳಿಗೂ ನುಗ್ಗಿದೆ. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ಸಂಪೂರ್ಣ ಜಲಾವೃತಗೊಂಡಿದ್ದು. ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ರಸ್ತೆ ಕುಸಿದ ಪರಿಣಾಮ ಸಂಚಾರಕ್ಕೆ ಬಾರಿ ಅಡೆತಡೆಯಾಗಿದೆ.

ಸಕಲೇಶಪುರ ಪಟ್ಟಣದ ಹೊಳೆಮಲ್ಲೇಶ್ವರ ದೇಗುಲ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ನೀರು ದೇವಾಲಯದ ಮೆಟ್ಟಿಲುಗಳನ್ನ ವ್ಯಾಪಿಸಿ ಹರಿಯುತ್ತಿದೆ. ಚಿಕ್ಕಮಗಳೂರು ಭಾಗದಲ್ಲು ಮಳೆ ಹೆಚ್ಚಾಗಿರೋದ್ರಿಂದ ನದಿ ನೀರು ಹರಿವಿನಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದ್ದು ನದಿಪಾತ್ರದ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಆತಂಕ ಜನರನ್ನು ಕಾಡುತ್ತಿದೆ. ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಈ ಪ್ರದೇಶಗಳಿಗೆ ಹೆಚ್ಚಿನ ರಕ್ಷಣೆ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೊಡಗು : ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಇದ್ರಿಂದಾಗಿ ಬಾಗಮಂಡಲ ಜಲಾವೃತಗೊಂಡಿದೆ. ಬಾಗಮಂಡಲ-ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ರಸ್ತೆ ಮೇಲೆ 5 ಅಡಿಯಷ್ಟು ನೀರು ಹರಿಯುತ್ತಿದೆ. ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಯಾವುದೇ ವಾಹನಗಳು ತೆರಳದಂತೆ ಬ್ಯಾರಿಕೇಡ್ ಹಾಕಲಾಗಿದೆ. ತ್ರಿವೇಣಿ ಸಂಗಮ ಬಹುತೇಕ ಮುಳುಗಡೆ ಆಗ್ತಿದೆ.

ಜುಲೈ 23 ರಂದು ಅತ್ಯಧಿಕ ಮಳೆ ದಾಖಲಾದ ಜಿಲ್ಲೆಗಳ ವಿವರ

ಉತ್ತರ ಕನ್ನಡ – 224 (ಮಿ.ಮೀ)

ಶಿವಮೊಗ್ಗ- 136 

ಕೊಡಗು- 92

ಬೆಳಗಾವಿ – 66

ಹಾವೇರಿ- 60

ಚಿಕ್ಕಮಗಳೂರು – 57

ಧಾರವಾಡ – 50

ದಾವಣಗೆರೆ – 43

ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಅನೇಕ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತವರು ಜಾಗದಲ್ಲೆ ಇರುವಂತೆ ಸರಕಾರ ಸೂಚನೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *