ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇನ್ನೂ ಕೆಲವು ದಿನಗಳು ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ಸೂಚನೆ ನೀಡಿದೆ. ಈ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರಾಣ ಮತ್ತು ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ.
ಕೃಷ್ಣ ಮತ್ತು ಕಾವೇರಿ ಜಲಾಶಯದ ಪ್ರದೇಶಗಳಲ್ಲಿ ನದಿಯಲ್ಲಿನ ಒಳಹರಿವು ಗರಿಷ್ಠ ಮಟ್ಟಕ್ಕೆ ತಲುಪಿದ್ದು, ರಾಜ್ಯದ ಇನ್ನಷ್ಟು ಜಲಾನಯನ ಪ್ರದೇಶಗಳಲ್ಲಿಯೂ ಒಳಹರಿವಿನ ಮಟ್ಟ ಗರಿಷ್ಠ ಪ್ರಮಾಣಕ್ಕೆ ತಲುಪುತ್ತಿವೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲ್ಲೂಕಿನ ಕುಮಾರ್ಚಿಂಚೋಲಿಯಲ್ಲಿ ಮನೆಯ ಗೋಡೆಯ ಒಂದು ಭಾಗ ಕುಸಿದು 33 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಪಾರ್ವತಿ ವೈಜನಾಥ್ ಅವರ ಪತಿ ಮತ್ತು ಅವರ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಳಿಯ ಕೊಲ್ಹಾಪುರ ಹೆದ್ದಾರಿಯಲ್ಲಿ ಹಳ್ಳದಲ್ಲಿ ಸಿಲುಕಿಕೊಂಡಿದ್ದ ಕಾರನ್ನು ಜಿಲ್ಲಾ ಪೊಲೀಸರ ಕಾರ್ಯಚಾರಣೆಯಿಂದ ತೆರವುಗೊಳಿಸಲಾಗಿದೆ. ದೀರ್ಘಕಾಲದ ಆರ್ದ್ರ ವಾತಾವರಣದಿಂದಾಗಿ ಜಿಲ್ಲೆಯ ಹಲವಾರು ಮನೆಗಳಿಗೆ ಹಾನಿಯಾಗಿದೆ. ಪ್ರತ್ಯೇಕ ಘಟನೆಗಳಲ್ಲಿ ತುಂಬಿ ತುಳುಕುತ್ತಿರುವ ಕಾಗಿನಾ ನದಿಯಲ್ಲಿ ಮುಳುಗಿರುವ ಮಾಣಿಕಮ್ಮ ಮತ್ತು ಪ್ರಲ್ಹಾದ್ ದೋಡ್ಲಾ ಎಂಬುವವರು ಕೊಚ್ಚಿ ಹೋಗಿದ್ದು, ಮೃತದೇಹಗಳ ಶೋಧ ಕಾರ್ಯ ಕಳೆದ ಮೂರು ದಿನಗಳಿಂದ ಮುಂದುವರೆದಿದೆ.
ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಭಾಗಗಳಲ್ಲಿಯೂ ಉತ್ತಮ ಮಳೆಯಾಗಿದೆ. ಖಾನಾಪುರ ತಾಲ್ಲೂಕು ಮತ್ತು ಮಹಾರಾಷ್ಟ್ರದ ಕೊಂಕಣ ಘಟ್ಟದಲ್ಲಿನ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಕೃಷ್ಣ ನದಿ ಮತ್ತು ಅದರ ಉಪನದಿಗಳು ಸಾಕಷ್ಟು ಒಳಹರಿವು ಪಡೆಯುತ್ತಿವೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ರಾತ್ರಿಯಿಡೀ ಭಾರಿ ಪ್ರಮಾಣದ ಮಳೆ ಸುರಿದ ಪರಿಣಾಮ ಭೂಕುಸಿತ ಉಂಟಾಗಿದೆ.
ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸ್ಥಳೀಯ ಆಡಳಿತ ಭಾರೀ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ಕಳೆದ ವರ್ಷ ಕೂಡ ಭಾರಿ ಮಳೆಯಿಂದ ಈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿತ್ತು. ಏತನ್ಮಧ್ಯೆ, ಕೊಡಗು ಹೊರತುಪಡಿಸಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಗಣನೀಯವಾಗಿ ಕಡಿಮೆಯಾಗಿದೆ.
ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿ ಮತ್ತು ಮುಕ್ಕೋಡ್ಲು ಪ್ರದೇಶಗಳಲ್ಲಿ ಮಧ್ಯಂತರ ಮಳೆಯಾಗಿದೆ. ಹಾರಂಗಿ ಜಲಾಶಯದ ಮಟ್ಟವು 2,855.66 ಅಡಿಗಳನ್ನು ಮುಟ್ಟಿದೆ. ಅದರ ಪೂರ್ಣ ಜಲಾಶಯದ ಮಟ್ಟವನ್ನು ತಲುಪಲು ಕೇವಲ ನಾಲ್ಕು ಅಡಿಗಳಷ್ಟು ಕಡಿಮೆಯಿದೆ. ಮುಂದಿನ ಎರಡು ದಿನಗಳವರೆಗೆ ನಾಲ್ಕು ಮಲೆನಾಡು ಮತ್ತು ಮೂರು ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ.
ಇದನ್ನು ಓದಿ: ರಾಜ್ಯದ ಜಲಾಶಯಗಳು ಬಹುತೇಕ ಭರ್ತಿ: ಇನ್ನೂ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ
ಉಲ್ಲಾಳ ಬಳಿಯ ಸೋಮೇಶ್ವರ, ಉಚಿಲಾ ಮತ್ತು ಬಟ್ಟಂಪ್ಪಾಡಿ ಪ್ರದೇಶಗಳಲ್ಲಿ ಸಮುದ್ರ ಸವೆತ ತೀವ್ರಗೊಂಡಿದೆ ಎಂದು ಮಂಗಳೂರು ವರದಿ ತಿಳಿಸಿದೆ. ಈ ಪ್ರದೇಶಗಳಲ್ಲಿ 30 ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದೆ. ರಸ್ತೆ ಕೂಡ ಹಾನಿಯಾಗಿದೆ ಮತ್ತು ಬೃಹತ್ ಉಬ್ಬರವಿಳಿತದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಗುರುವಾರ ಭೂಕುಸಿತದಿಂದಾಗಿ ಶಿರಡಿ ಘಾಟ್ ರಸ್ತೆಯ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಬೆಂಗಳೂರು ಕಡೆಗೆ ಪ್ರಯಾಣಿಸುವವರು ಪರ್ಯಾಯ ರಸ್ತೆಗಳನ್ನು ಬಳಸಲು ಸೂಚಿಸಲಾಗಿದೆ.
ಮುನ್ನಚ್ಚರಿಕೆ ಕ್ರಮವಾಗಿ ಹವಾಮಾನ ಇಲಾಖೆ ಸೂಚನೆ
ರಾಜ್ಯದಲ್ಲಿ ಮುಂಗಾರು ಆರಂಭವಾಗಿ ಹಲವು ದಿನಗಳು ಕಳೆದಿದ್ದು, ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜುಲೈ 23ರಂದು ವಾಯವ್ಯ ಬಂಗಾಳಕೊಲ್ಲಿಯಲ್ಲಿ ಒತ್ತಡ ರೂಪುಗೊಳ್ಳುವ ಸಾಧ್ಯತೆಯಿದೆ. ಈ ಪ್ರಭಾವದಿಂದ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಜುಲೈ 26 ರವರೆಗೂ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಇದನ್ನು ಓದಿ: ಮುಂಗಾರು ಆರಂಭದ ಮೊದಲ ದಿನವೇ ರಾಜ್ಯದ ವಿವಿದೆಡೆ ಭಾರೀ ಮಳೆ
ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟಕ ಜೋರಾಗಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು,ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಉಡುಪಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವೆಡೆ ಶೀತಗಾಳಿ ಮುಂದುವರೆದಿದೆ.