ಏನಿದು ಪೆಗಾಸಸ್ ತಂತ್ರಾಂಶ? ಫೋನ್ ಹೇಗೆ ಹ್ಯಾಕ್ ಆಗಬಹುದು?

ಗುರುರಾಜ ದೇಸಾಯಿ

ಭಾರತದಲ್ಲಿ ಫೋನ್‌ ಟ್ಯಾಪಿಂಗ್‌ ಸುದ್ದಿ ಬಾರಿ ಸದ್ದು ಮಾಡುತ್ತಿದೆ. ಈ ಭಾರಿ ಇಸ್ರೇಲಿ ಸ್ಪೈವೇರ್‌ ಪೆಗಾಸಸ್‌ ತಂತ್ರಾಂಶ ಬಳಸಿ ಭಾರತದ ಪ್ರಮುಖ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಒಂದು ಸಂವಿಧಾನಿಕ ಪ್ರಾಧಿಕಾರದ ಮೊಬೈಲ್‌ ಸಂಖ್ಯೆ ಹ್ಯಾಕ್‌ ಮಾಡಿ ಫೋನ್‌ ಟ್ಯಾಪಿಂಗ್‌ ಮಾಡಲಾಗಿದೆ ಎಂದು ದಿ ವೈರ್‌ ವರದಿ ಮಾಡಿದೆ.

ದಿ ವೈರ್‌ ಜೊತೆಗೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ನಡೆಸಿದ ಕಾರ್ಯಾಚರಣೆಯಲ್ಲಿ ಈ ಮಾಹಿತಿಯು ಬಹಿರಂಗವಾಗಿದ್ದು, ಪೆಗಾಸಸ್‌ ಸ್ಪೈ ವೇರ್‌ ಬಳಸಿಕೊಂಡು ಅಪರಿಚಿತ ಏಜೆನ್ಸಿಯೊಂದು ಯಶಸ್ವಿಯಾಗಿ ಹ್ಯಾಕ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಹಿರಂಗಗೊಂಡ ಫೋನ್‌ ಸಂಖ್ಯೆಗಳಲ್ಲಿ ಕೆಲವು ಫೋನ್‌ ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಪೆಗಾಸಸ್‌ ಸ್ಪೈ ವೇರ್‌ ಅಳವಡಿಕೆಗೊಂಡಿರುವುದಾಗಿ ತಿಳಿದು ಬಂದಿದೆ.

ಪರೀಕ್ಷೆಗೆ ಬಳಸಿದ 37 ಫೋನ್‌ ಗಳಲ್ಲಿ 10 ಫೋನ್‌ ಗಳು ಭಾರತದ್ದಾಗಿದ್ದವು ಎಂದು ವರದಿ ತಿಳಿಸಿದೆ. ಪೆಗಾಸಸ್‌ ಅನ್ನು ಮಾರಾಟ ಮಾಡುವ ಇಸ್ರೇಲ್‌ ಮೂಲದ ಎನ್‌ಎಸ್‌ಒ ಗ್ರೂಪ್‌ ತನ್ನ ಗ್ರಾಹಕರ ಕುರಿತು ಮಾಹಿತಿ ನೀಡಲು ನಿರಾಕರಿಸಿದೆ.

ಸೋರಿಕೆಯಾಗಿರುವ ಈ ಮಾಹಿತಿಗಳನ್ನು ದಿ ವೈರ್‌ ನೊಂದಿಗೆ ಅಮ್ನೆಸ್ಟಿ ಇಂಟರ್‌ ನ್ಯಾಷನಲ್‌, ಪಾರ್ಬಿಡನ್‌ ಸ್ಟೋರೀಸ್‌, ಲಿ ಮೊಂಡೆ, ದಿ ಗಾರ್ಡಿಯನ್‌, ವಾಷಿಂಗ್ಟನ್‌ ಪೋಸ್ಟ್‌, ದಿ ಝೀಟ್‌ ಸೇರಿದಂತೆ ಇತರ ಹತ್ತು ಮೆಕ್ಸಿಕನ್‌ ಮತ್ತು ಅರಬ್‌, ಯುರೋಪಿಯನ್‌ ಮಾಧ್ಯಮಗಳು ಜಂಟಿಯಾಗಿ ಬಹಿರಂಗಪಡಿಸಿದೆ.
ಅಷ್ಟಕ್ಕೂ ಈ ಪೆಗಾಸಸ್ ಯಾರು? ಪೆಗಾಸಸ್ ಎಂದರೇನು? ಅದು ಹೇಗೆ ಕಾರ್ಯನಿರ್ವಹಿಸುತ್ತದೆ? ಪೆಗಾಸಸ್ ಸಾಫ್ಟ್‌ವೇರ್ ಅನ್ನು ಯಾರು ಬಳಸುತ್ತಾರೆ? ಎಂಬುದನ್ನು ತಿಳಿಯುತ್ತಾ ಹೋಗೋಣ.

ಪೆಗಾಸಸ್ ಯಾರು? : ಪೆಗಾಸಸ್ ಅನ್ನು ಇಸ್ರೇಲಿ ಸಂಸ್ಥೆ ಎನ್ಎಸ್ಒ ಗ್ರೂಪ್ ಅಭಿವೃದ್ಧಿಪಡಿಸಿದೆ, ಇದನ್ನು 25 ಜನವರಿ 2010 ರಂದು ಸ್ಥಾಪಿಸಲಾಯಿತು. ಅಮ್ನೆಸ್ಟಿ ಇಂಟರ್ನ್ಯಾಷನಲ್ ವರದಿಯ ಪ್ರಕಾರ, ಸಂಸ್ಥಾಪಕರ ಮೊದಲ ಹೆಸರಿನ ಮೊದಲಕ್ಷರಗಳು ‘ಎನ್‌ಎಸ್‌ಒ’ ಎಂಬ ಸಂಕ್ಷಿಪ್ತ ರೂಪವನ್ನು ರೂಪಿಸುತ್ತವೆ. ಸ್ಥಾಪಕರು ನಿವ್ ಕಾರ್ಮಿ, ಶಲೆವ್ ಹುಲಿಯೊ ಮತ್ತು ಓಮ್ರಿ ಲಾವಿ. “ಕಾನೂನು ಪರಿಸರ ಮತ್ತು ಗುಪ್ತಚರ ಸಂಸ್ಥೆಗಳಿಗೆ ಮೊಬೈಲ್ ಫೋನ್‌ಗಳು ಮತ್ತು ಅವುಗಳ ವಿಷಯಗಳಿಗೆ ನೇರ ದೂರಸ್ಥ ಪ್ರವೇಶವನ್ನು ಒದಗಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು. ಎನ್‌ಕ್ರಿಪ್ಶನ್ ಇನ್ ದಿ ಡಿಜಿಟಲ್ ಎನ್ವರ್ನ್‌ಮೆಂಟ್” ಹೆಚ್ಚು ವ್ಯಾಪಕವಾಗಿ ಬಳಸುವುದಕ್ಕೆ ಒಂದು ಪರಿಹಾರವಾಗಿದೆ” ಎಂದು ಹುಲಿಯೊನನ್ನು ಉಲ್ಲೇಖಿಸಿ ವರದಿಯಲ್ಲಿ ಹೇಳಲಾಗಿದೆ.

ಪೆಗಾಸಸ್ ಎಂದರೇನು?: ಪೆಗಾಸಸ್ ಒಂದು ರೀತಿಯ ದುರುದ್ದೇಶಪೂರಿತ ಸಾಫ್ಟ್‌ವೇರ್ ಅಥವಾ ಮಾಲ್‌ವೇರ್ ಸ್ಪೈವೇರ್ ಎಂದು ಹೇಳಲಾಗುತ್ತದೆ. ಪೆಗಾಸಸ್‌ನಂತಹ ಸ್ಪೈವೇರ್ ಅನ್ನು ನಿಮ್ಮ ಅರಿವಿಲ್ಲದೆ ನಿಮ್ಮ ಡಿವೈಸ್‌ನೊಳಗೆ ಪ್ರವೇಶ ಪಡೆಯುವ ಮಟ್ಟಿಗೆ ವಿನ್ಯಾಸಗೊಳಿಸಲಾಗಿದೆ. ಇದು ಒಮ್ಮೆ ನಿಮ್ಮ ಡಿವೈಸ್‌ನೊಳಗೆ ಎಂಟ್ರಿಯಾದರೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ನಿಮ್ಮ ಮೇಲೆ ಕಣ್ಣಿಡಲು ಪೆಗಾಸಸ್‌ ಸಾಫ್ಟ್‌ವೇರ್ ಅನ್ನು ಬಳಸುತ್ತಿರುವವರಿಗೆ ಸಪ್ಲೇ ಮಾಡುತ್ತದೆ. ಪೆಗಾಸಸ್ “ಐಒಎಸ್ ಮತ್ತು ಆಂಡ್ರಾಯ್ಡ್‌ನ ಅಂತಿಮ ಸ್ಪೈವೇರ್” ಆಗಿದೆ. ಆದರೆ ಆಪಲ್ ಉತ್ಪನ್ನಗಳು ಈ ದಾಳಿಯಿಂದ ಪ್ರತಿರಕ್ಷಿತವಾಗಿದೆಯೇ? ಸರಳವಾಗಿ ಹೇಳುವುದಾದರೆ, ಇಲ್ಲ ಎಂದೇ ಹೇಳಬಹುದಾಗಿದೆ. ಏಕೆಂದರೆ ಆಪಲ್ ಉತ್ಪನ್ನಗಳು ಸುರಕ್ಷಿತ ಮತ್ತು ದತ್ತಾಂಶ ಗೌಪ್ಯತೆಗೆ ಉತ್ತಮವೆಂದು ಹೇಳಲಾಗಿದ್ದರೂ ಐಪ್ಯಾಡ್‌ಗಳು ಮತ್ತು ಐಫೋನ್‌ಗಳಿಗೆ ಹ್ಯಾಕ್ ಮಾಡಬಹುದು.

ಇದಲ್ಲದೆ ಪೆಗಾಸಸ್‌ ಸ್ಪೈವೇರ್‌ ಬಳಸಿ ನಿಮ್ಮ ಮೇಲೆ ಕಣ್ಣಿಟ್ಟಿರುವ ಹ್ಯಾಕರ್‌ ನಿಮ್ಮ ಸುತ್ತಮುತ್ತಲಿನ ಚಟುವಟಿಕೆಯನ್ನು ಸೆರೆಹಿಡಿಯಲು ಫೋನ್‌ನ ಕ್ಯಾಮೆರಾ ಮತ್ತು ಮೈಕ್ರೊಫೋನ್ ಅನ್ನು ಸಹ ಆನ್ ಮಾಡಬಹುದು. ಸದ್ಯದ ಮಾಹಿತಿ ಪ್ರಕಾರ , ಪೆಗಾಸಸ್ “ಒಂದು ವರ್ಷದಲ್ಲಿ 500 ಫೋನ್‌ಗಳನ್ನು ಮೇಲ್ವಿಚಾರಣೆ ಮಾಡಬಹುದು, ಆದರೆ ಒಂದೇ ಸಮಯದಲ್ಲಿ ಗರಿಷ್ಠ 50 ಅನ್ನು ಮಾತ್ರ ಟ್ರ್ಯಾಕ್ ಮಾಡಬಹುದು” ಎಂದು ಅಂದಾಜಿಸಲಾಗಿದೆ. ಅಲ್ಲದೆ ಪೆಗಾಸಸ್‌ಗೆ ಪರವಾನಗಿ ನೀಡಲು ವರ್ಷಕ್ಕೆ ಸುಮಾರು 7-8 ಮಿಲಿಯನ್ ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತದೆ.

ಪೆಗಾಸಸ್‌ ಹೇಗೆ ಕೆಲಸ ಮಾಡುತ್ತದೆ?: ಫಿಶಿಂಗ್ ಲಿಂಕ್ ಬಳಸಿ ಪೆಗಾಸಸ್‌ನೊಂದಿಗೆ ಹ್ಯಾಕ್‌ ಮಾಡಬೇಕಾದ ಡಿವೈಸ್‌ ಅನ್ನು ಸೋಂಕಿಗೆ ಹ್ಯಾಕರ್ ಸಾಮಾನ್ಯವಾಗಿ ಪ್ರಯತ್ನಿಸುತ್ತಾನೆ. ಇದನ್ನು ಹೆಚ್ಚಾಗಿ ಪಠ್ಯ ಸಂದೇಶದ ಮೂಲಕ ಕಳುಹಿಸಲಾಗುತ್ತದೆ. ಅಂದರೆ ಟೆಕ್ಸ್ಟ್‌ ಮೆಸೇಜ್‌ ರೂಪದಲ್ಲಿ ಇದರ ಲಿಂಕ್‌ ಕಳಹಿಸಲಾಗುತ್ತದೆ. ಲಿಂಕ್‌ ಒಪನ್‌ ಮಾಡಿದ ತಕ್ಷಣವೇ ಪೆಗಾಸಸ್‌ ನಿಮ್ಮ ಡಿವೈಸ್‌ ಮೇಲೆ ದಾಳಿ ಮಾಡಿಬಿಡುತ್ತದೆ. ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ಹ್ಯಾಕರ್‌ನ ಕಮಾಂಡ್ ಕಂಪ್ಯೂಟರ್‌ನೊಂದಿಗೆ ಸಂಪರ್ಕವನ್ನು ಸೆಟ್‌ ಮಾಡುತ್ತದೆ. ನಂತರ ಹ್ಯಾಕರ್ ರಿಮೋಟ್ ಕಮಾಂಡ್ ಸೆಂಟರ್ ಮೂಲಕ ಪೆಗಾಸಸ್ ಸ್ಪೈವೇರ್‌ನೊಂದಿಗೆ ಸಂವಹನ ನಡೆಸಬಹುದು ಮತ್ತು ಸ್ಪೈವೇರ್ ಹ್ಯಾಕರ್‌ನ ಸರ್ವರ್‌ಗೆ ಯಾವ ಮಾಹಿತಿಯನ್ನು ಕಳುಹಿಸಬೇಕು ಎಂದು ನಿರ್ದೇಶನಗಳನ್ನು ನೀಡಬಹುದು.

ದಿ ಸಿಟಿಜನ್ ಲ್ಯಾಬ್ ಪ್ರಕಾರ, ಈ ರೀತಿಯಾಗಿ ಪೆಗಾಸಸ್ ಅನ್ನು ಹೆಚ್ಚಿನ ಪ್ರಮಾಣದ ಹ್ಯಾಕ್‌ ಮಾಡಲು ಬಯಸುವ ವ್ಯಕ್ತಿಯ ಮಾಹಿತಿಯನ್ನು ಸಂಗ್ರಹಿಸಲು ಬಳಸಬಹುದು. “ಪಾಸ್‌ವರ್ಡ್‌ಗಳು, ಸಂಪರ್ಕ ಪಟ್ಟಿಗಳು, ಕ್ಯಾಲೆಂಡರ್ ಈವೆಂಟ್‌ಗಳು, ಪಠ್ಯ ಸಂದೇಶಗಳು ಮತ್ತು ಜನಪ್ರಿಯ ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಂದ ಲೈವ್ ಧ್ವನಿ ಕರೆಗಳ ಮೂಲಕ ಹ್ಯಾಕ್‌ ಮಾಡಬಹುದು. ಅಷ್ಟೇ ಅಲ್ಲ “ಪೆಗಾಸಸ್ ಎನ್‌ಕ್ರಿಪ್ಟ್ ಮಾಡಿದ ಆಡಿಯೊ ಸ್ಟ್ರೀಮ್‌ಗಳನ್ನು ಸಹ ಕೇಳಬಹುದು ಮತ್ತು ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳನ್ನು ಓದಬಹುದು”.
ಫೋನಿನ ಕ್ಯಾಮೆರಾ ಮತ್ತು ಮೈಕ್ರೋಫೋನ್‌ ಬಳಸಿ ಮಾಹಿತಿ ಪಡೆದುಕೊಳ್ಳಬಹುದು. ಜೊತೆಗೆ ನಿಮ್ಮ ಲೈವ್ ಲೊಕೆಷನ್ ಪತ್ತೆ ಮಾಡಲು ಜಿಪಿಎಸ್‌ ಅನ್ನು ಕೂಡ ಅದು ಬಳಸಿಕೊಳ್ಳುತ್ತದೆ! ಇದೊಂದು ಖತರ್ನಾಕ್ ಸ್ಪೈವೇರ್ ಆಗಿದೆ ಎಂದು ತಂತ್ರಜ್ಞರು ಹೇಳುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *