ನವದೆಹಲಿ: ‘ಪೆಗಾಸಸ್’ ಗೂಢಚರ್ಯೆ ತಂತ್ರಾಂಶ ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ, ಸಂಪುಟ ದರ್ಜೆಯ ಇಬ್ಬರು ಸಚಿವರು, ಮೂವರು ವಿಪಕ್ಷ ನಾಯಕರು, ಓರ್ವ ನ್ಯಾಯಾಧೀಶ, ಉದ್ಯಮಿಗಳು, ಚಳವಳಿಗಾರರು ಮತ್ತು ಪತ್ರಕರ್ತರು ಸೇರಿದಂತೆ 300ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು ಹ್ಯಾಕ್ ಆಗಿರುವ ಮಾಹಿತಿ ಬಯಲಾಗಿದೆ.
40 ಮಂದಿ ಪತ್ರಕರ್ತರು ಹಾಗೂ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳು ಸೇರಿದಂತೆ 12 ಕಾರ್ಯಕರ್ತರ ಫೋನ್‌ಗಳು ಸಹ ಹ್ಯಾಕ್ ಮಾಡಲಾಗಿದೆ. ಫೋನ್‌ಗಲನ್ನು ಹ್ಯಾಕ್ ಮಾಡುವ ಮೂಲಕ ಅವರ ಮೇಲೆ ಕಣ್ಗಾವಲು ಇಡಲಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ ಎಂದು ‘ದಿ ವೈರ್’ ಭಾನುವಾರ ರಾತ್ರಿ ವರದಿ ಮಾಡಿದೆ.
ಇದನ್ನು ಓದಿ: ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸಶೋಧ ನೀತಿ (STIP 2020) ಕೈಗಾರಿಕಾ ಕ್ರಾಂತಿಯ ನಾಲ್ಕನೇ ಅಲೆಯಲ್ಲಿ ಸಹ ಭಾರತ ಹಿಂದೆ ಬೀಳುತ್ತಾ?
ನಿರ್ದಿಷ್ಟವಾಗಿ ಕೆಲವರ ಮೇಲೆ ಕಣ್ಗಾವಲು ಇಡುತ್ತಿರುವುದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಸರಕಾರ ‘ಇದರಲ್ಲಿ ಸತ್ಯಾಂಶವಿಲ್ಲ, ನಿರಾಧಾರ’ ಎಂದು ಹೇಳುತ್ತಿದೆ. 2019ರ ಅಕ್ಟೋಬರ್‌ನಲ್ಲಿ ಇದೇ ರೀತಿಯ ಸುದ್ದಿ ಬಿತ್ತರವಾಗಿತ್ತು. ಈಗಿನದ್ದು ಅದರ ಮುಂದುವರಿದ ಭಾಗದಂತೆ ಕಾಣುತ್ತಿದೆ. ಇದು ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳಿಗೆ ಕೆಡಕು ತರುವ ಯತ್ನವಾಗಿದೆ ಎಂದು ಸರ್ಕಾರ ಆರೋಪಿಸಿದೆ.
ಸೋರಿಕೆಯಾದ ದತ್ತಾಂಶವನ್ನು ಪ್ಯಾರಿಸ್ ಮೂಲದ ಲಾಭೋದ್ಧೇಶವಿಲ್ಲದ ಮಾಧ್ಯಮ ಸಂಸ್ಥೆ ‘ಫಾರ್ಬಿಡೆನ್ ಸ್ಟೋರಿಸ್’, ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್’ ಸಂಸ್ಥೆಗಳು ದಿ ವೈರ್, ಲೆ ಮಾಂಡೆ, ದಿ ಗಾರ್ಡಿಯನ್, ವಾಷಿಂಗ್ಟನ್ ಪೋಸ್ಟ್, ಡೈ ಜೈಟ್, ಸೇರಿದಂತೆ 10 ಇತರ ಮೆಕ್ಸಿನ್, ಅರಬ್ ಮತ್ತು ಯುರೋಪಿನ ಸುದ್ದಿ ಸಂಸ್ಥೆಗಳೊಂದಿಗೆ ಹಂಚಿಕೊಂಡಿವೆ. ಈ ಸಂಸ್ಥೆಗಳು ಜಂಟಿಯಾಗಿ ಕೈಗೊಂಡಿರುವ ಈ ತನಿಖೆಗೆ ‘ಪೆಗಾಸಸ್ ಪ್ರಾಜೆಕ್ಟ್’ ಎಂದು ಕರೆಯಲಾಗಿದೆ.
ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್ ಸೇರಿದಂತೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಭಾರತದ ‘ದಿ ವೈರ್’ ವೆಬ್‌ಸೈಟ್ ವಿಶ್ವಾದ್ಯಂತ 50 ಸಾವಿರ ಮೊಬೈಲ್ ಸಂಖ್ಯೆಗಳನ್ನು ಇಸ್ರೇಲ್‌ನ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಸಾಫ್ಟ್‌ವೇರ್‌ನಿಂದ ಹ್ಯಾಕ್ ಮಾಡಲಾಗಿದೆ ಎಂದು ವರದಿ ಮಾಡಿವೆ.
ದಿ ವೈರ್ ವರದಿಯ ಪ್ರಕಾರ, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾದ ಎಂಟು ಕಾರ್ಯಕರ್ತರು, ವಕೀಲರು ಮತ್ತು ಶಿಕ್ಷಣ ತಜ್ಞರ ಮೊಬೈಲ್‌ಗಳು ಹ್ಯಾಕ್ ಆಗಿವೆ.
ಪತ್ರಕರ್ತರ ಪೈಕಿ ಸುಶಾಂತ್ ಸಿಂಗ್, ಜೆ. ಗೋಪಿಕೃಷ್ಣನ್, ಶಿಶಿರ್ ಗುಪ್ತಾ, ರಿತಿಕಾ ಚೋಪ್ರಾ, ಪ್ರಶಾಂತ್ ಝಾ, ಪ್ರೇಮ್ ಶಂಕರ್ ಝಾಂ, ಸ್ವಾತಿ ಚತುರ್ವೇದಿ, ರಾಹುಲ್ ಸಿಂಗ್, ಮುಜಮ್ಮಿಲ್ ಜಲೀಲ್, ಇಫ್ತಿಕಾರ್ ಗೀಲಾನಿ ಮತ್ತು ಸಂದೀಪ್ ಉನ್ನಿತಾನ್, ದಿ ವೈರ್‌ನ ಸಂಸ್ಥಾಪಕ–ಸಂಪಾದಕರಾದ ಸಿದ್ಧಾರ್ಥ್ ವರದರಾಜನ್ ಮತ್ತು ಎಂ.ಕೆ.ವೇಣು ಅವರ ಹೆಸರುಗಳೂ ಈ ಪಟ್ಟಿಯಲ್ಲಿವೆ.
ಪೆಗಾಸಸ್ ಸ್ಪೈವೇರ್ ಬಗ್ಗೆ ಕೆಲವು ಪ್ರಮುಖ ಮಾಹಿತಿ:
ಪೆಗಾಸಸ್ ಸಾಫ್ಟ್‌ವೇರ್ ಬಳಸಿಕೊಂಡು ವ್ಯಕ್ತಿಗಳ ಮೊಬೈಲ್ ಹ್ಯಾಕ್ ಮಾಡಿ ಮಾಹಿತಿಯನ್ನು ಕದಿಯಲಾಗುತ್ತದೆ. ಇದರ ಮೂಲಕ ಯಾವುದೇ ವ್ಯಕ್ತಿಯ ಮೇಲೆ ಎಲ್ಲಾ ರೀತಿಯಲ್ಲೂ ಕಣ್ಗಾವಲು ವಹಿಸುವುದಕ್ಕೆ ಅವಕಾಶ ನೀಡುತ್ತದೆ.
ಮಾಹಿತಿ ಪಡೆಯುವ ಬಗೆ
ಸೈಬರ್ ಧಾಳಿ ಸಂಬಂಧ ವಾಟ್ಸಾಪ್‌ಗೆ ನೆರವು ನೀಡಿದ್ದ ಯುನಿವರ್ಸಿಟಿ ಆಫ್ ಟೊರೊಂಟೊದಲ್ಲಿರುವ ದಿ ಸಿಟಿಜನ್ ಲ್ಯಾಬ್ ಪ್ರಕಾರ, ಪೆಗಾಸಸ್ ಎಂಬುದು ಇಸ್ರೇಲ್ ಮೂಲದ ಎನ್ಎಸ್ಒ ಗ್ರೂಪ್‌ನ ಸ್ಪೈವೇರ್(ಗೂಢಚರ ತಂತ್ರಾಂಶ) ಆಗಿದೆ. ಈ ಪೆಗಾಸಸ್‌ಗೆ ಕ್ಯೂ ಸೂಟ್ ಮತ್ತು ಟ್ರಿಡಿಯೆಂಟ್ ಎಂಬ ಹೆಸರುಗಳಿವೆ ಎಂದು ನಂಬಲಾಗಿದೆ. ಈ ಸ್ಪೈವೇರ್ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳನ್ನು ಯಾವ ತೊಂದರೆಗಳು ಇಲ್ಲದೆ ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ. ನಾನಾ ರೀತಿಯ ಮೂಲಕ ಮೊಬೈಲ್ ಫೋನ್‌ಗಳಿಂದ ಮಾಹಿತಿಗಳನ್ನು ಕದಿಯಲು ಅವಕಾಶವಿದೆ.
ವಾಟ್ಸಾಪ್ ಮೇಲಿನ ಸೈಬರ್ ಅಟ್ಯಾಕ್ ವೇಳೆ, ವಾಟ್ಸಾಪ್‌ನ VoIP ಸ್ಟಾಕ್‌ನಲ್ಲಿನ ಸುರಕ್ಷಿತೆಯ ದುರ್ಬಲತೆಯನ್ನು ಬಳಸಿಕೊಂಡು ಈ ಸ್ಪೈವೇರ್ ಕನ್ನ ಹಾಕಿತ್ತು. ಸ್ಪೈವೇರ್ ಕೇವಲ ವಾಟ್ಸಾಪ್‌ಗೆ ವಿಡಿಯೋ ಮತ್ತು ಆಡಿಯೋ, ಕರೆ ಮಾಡಿದಾಗಲೂ ಪೆಗಾಸಸ್ ಟಾರ್ಗೆಟೆಡ್ ಸಾಧನದೊಳಗೆ ಪ್ರವೇಶ ಪಡೆಯಲು ಸಾಧ್ಯವಾಗಿತ್ತು.
ಏನೇನು ಮಾಡುತ್ತದೆ ಪೆಗಾಸಸ್?
ಗೂಢಚರ್ಯೆಗೆ ಒಳಪಡುವವರ ಸಾಧನಗಳಿಗೆ ಪೆಗಾಸಸ್ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡುತ್ತದೆ. ಅದು ಸರ್ವರ್ ನಿಯಂತ್ರಣ ಮಾಡಿ ಇನ್ಫೆಕ್ಟೆಡ್ ಡಿವೈಸ್‌ನಿಂದ ಡೇಟಾ ಪಡೆಯಲು ಆಜ್ಞೆಗಳನ್ನು ನೀಡುತ್ತದೆ. ಪಾಸ್‌ವರ್ಡ್‌ಗಳು, ಸಂಪರ್ಕ ಸಂಖ್ಯೆಗಳು, ಸಂದೇಶಗಳು, ಕ್ಯಾಲೆಂಡರ್ ವಿವರಗಳನ್ನು ಕದಿಯುತ್ತದೆ. ಇಷ್ಟು ಮಾತ್ರವಲ್ಲದೇ, ಆಪ್ ಬಳಸಿ ಧ್ವನಿಗಳನ್ನು ಸಹ ಸುಲಭವಾಗಿ ಸಂಗ್ರಹಿಸಿಕೊಳ್ಳುತ್ತದೆ. ಫೋನಿನ ಕ್ಯಾಮೆರಾ ಮತ್ತು ಮೈಕ್ರೋಫೋನ್ ಬಳಸಿ ಮಾಹಿತಿ ಪಡೆದುಕೊಳ್ಳಬಹುದು. ಜೊತೆಗೆ ನಿಮ್ಮ ಚಲನವಲನಗಳ ಬಗ್ಗೆ ಪತ್ತೆ ಹಚ್ಚಲು ಜಿಪಿಎಸ್ ಅನ್ನು ಬಳಸಿಕೊಳ್ಳಲಿದೆ.
ಈಗ ಮತ್ತೆ ಪೆಗಾಸಸ್ ಮೂಲಕ ಭಾರತದ ಪ್ರಮುಖ ಗಣ್ಯರ ಫೋನ್‌ಗಳನ್ನು ಹ್ಯಾಕ್ ಮಾಡಿರುವ ವಿಷಯವು ಭಾರೀ ಚರ್ಚೆಗೆ ಕಾರಣವಾಗಿದೆ. 2018 ಮತ್ತು 2019ರ ಅವಧಿಯಲ್ಲಿ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿತ್ತು ಎಂಬ ಮಾಹಿತಿಯು ಬಹಿರಂಗಗೊಂಡಿದ್ದವು. ಆದರೆ, ಭಾರತ ಸರ್ಕಾವು ಇಂಥ ಯಾವುದೇ ಕೃತ್ಯಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದೆ.