ಎನ್.ಶಂಕರಯ್ಯ : ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ

ಭಗತ್ ಸಿಂಗ್‌ರನ್ನು ನೇಣುಗಂಬಕ್ಕೆ ಏರಿಸಿದ ದಿನ- ತಮಿಳುನಾಡಿನ ಹಲವಾರು ಕಡೆಗಳಲ್ಲಿ ಜನರು ಭಾವಾವೇಶದಿಂದ ಕಣ್ಣೀರಿಟ್ಟಿದ್ದರು. ಆಕ್ರೋಶದಿಂದ ಪ್ರತಿಭಟನೆಗೆ ಇಳಿದಿದ್ದರು. ತೂತುಕ್ಕುಡಿ ಪಟ್ಟಣದಲ್ಲಿ ಬೀದಿ ಬೀದಿಗಳಲ್ಲಿ ಜನಜಂಗುಳಿ ನೆರೆದಿತ್ತು. ಆಗ ಆ ಪ್ರತಿಭಟನೆಗೊಬ್ಬ ಪುಟ್ಟ ಹುಡುಗ ಓಡಿ ಬಂದು ಸೇರಿಕೊಂಡ. ಆಗ ಅವನಿಗೆ ಕೇವಲ ಒಂಭತ್ತು ವರ್ಷ. ಆ ಬಾಲಕ, ಎನ್.ಶಂಕರಯ್ಯ ಈ ಜುಲೈ 15ರಂದು ತಮ್ಮ ಕ್ರಾಂತಿಕಾರಿ, ಹೋರಾಟಮಯ ಬದುಕಿನ ನೂರನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಈ ಇಳಿವಯಸ್ಸಿನಲ್ಲಿಯೂ ಅವರ ಕೆಚ್ಚೆದೆಯ ಕಿಡಿ ಹಾಗೂ ಚೇತನ ಅವರಲ್ಲಿ ತುಂಬಿ ತುಳುಕುತ್ತಿದೆ. ಆ ಧೈರ್ಯ ಶೌರ್ಯಗಳೇ ಅವರನ್ನು ಸ್ವಾತಂತ್ರ್ಯ ಹೋರಾಟಗಾರನನ್ನಾಗಿಸಿತು; ಭೂಗತ ಕ್ರಾಂತಿಕಾರಿಯನ್ನಾಗಿಸಿತು; ಒಬ್ಬ ಬರಹಗಾರ, ಉತ್ತಮ ವಾಗ್ಮಿ ಹಾಗೂ ಪ್ರಖರ ಮೇಧಾವಿಯನ್ನಾಗಿಸಿತ್ತು ಕೂಡ. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಕಾರಣ ತಮ್ಮ ಪದವೀಧರ(ಬಿ.ಎ.) ಪರಿಕ್ಷೇಯಲ್ಲಿ ಭಾಗವಹಿಸಲಾಗದಿದ್ದಾಗ್ಯೂ, ಅವರು ಅನೇಕ ರೀತಿಯ ವಿಶ್ಲೇಷಣೆಗಳನ್ನು, ಹೊತ್ತಿಗೆಗಳನ್ನು, ಕರಪತ್ರಗಳನ್ನು ಹಾಗೂ ಪತ್ರಿಕಾ ಲೇಖನಗಳನ್ನು ಬರೆದಿದ್ದಾರೆ.

1941 ರಲ್ಲಿ ಪರೀಕ್ಷೆಗೆ ಕೇವಲ ಎರಡು ವಾರಗಳಿದ್ದಾಗ ಮಧುರೈನ ಅಮೆರಿಕನ್ ಕಾಲೇಜಿನಲ್ಲಿ ಬಿ.ಎ. (ಇತಿಹಾಸ) ಅಧ್ಯಯನ ಮಾಡುತ್ತಿದ್ದ ಕಾಂ. ಶಂಕರಯ್ಯ ಬ್ರಿಟಿಷ್ ಪ್ರಭುಗಳ ವಿರುದ್ಧದ ಚಳುವಳಿಯಲ್ಲಿ ಕ್ರಿಯಾಶೀಲರಾಗಿದ್ದರು. ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯಾಗುವುದರ ಜತೆಯಲ್ಲೇ ಕ್ಯಾಂಪಸ್‌ನಲ್ಲಿ ಕವಿಗಳ ಸಂಘ ರಚಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದಲ್ಲಿ ಸಹ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದರು. ಅದೇ ಸಮಯದಲ್ಲಿ ಎಡಪಂಥಿಯ ಸಿದ್ಧಾಂತದ ಅನೇಕರ ಜತೆ ಸ್ನೇಹ ಸಂಪಾದನೆ ಮಾಡಿದ್ದರು. ಭಾರತಕ್ಕೆ ವಿಮೋಚನೆ ದೊರಕದೇ ಸಾಮಾಜಿಕ ಸುಧಾರಣೆ ಸಂಪೂರ್ಣವಾಗದು ಎಂದು ಸ್ವಷ್ಟ ತಿಳುವಳಿಕೆ ಅವರದ್ದಾಗಿತ್ತು.

1941 ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮೀನಾಕ್ಷಿಯನ್ನು ಬ್ರಿಟಿಷ್ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರಣ ಬಂಧಿಸಲಾಗಿತ್ತು. ಅದನ್ನು ಖಂಡಿಸಲು ಮಧುರೈನಲ್ಲಿ ಒಂದು ಸಭೆ ನಡೆಸಲಾಯಿತು. “ಒಂದು ಕರಪತ್ರ ಹೊರತಂದೆವು. ನಮ್ಮ ಹಾಸ್ಟೆಲ್ ಕೊಠಡಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ನಮ್ಮ ಗೆಳೆಯ ನಾರಾಯಣಸ್ವಾಮಿಯನ್ನು ಕರಪತ್ರ ಹೊಂದಿದ್ದ ಕಾರಣಕ್ಕಾಗಿ ಬಂಧಿಸಲಾಯಿತು. ಆ ನಂತರ ಆ ಬಂಧನವನ್ನು ಖಂಡಿಸಲು ಕೂಡ ನಾವು ಸಭೆ ನಡೆಸಿದೆವು. ಆದಾದ ಸ್ವಲ್ಪ ದಿನಗಳಲ್ಲೇ, ಫೆಬ್ರವರಿ 28, 1941 ರಂದು ನನ್ನನ್ನೂ ಬಂಧಿಸಿದರು. ನನ್ನ ಪದವಿಯ ಅಂತಿಮ ಪರೀಕ್ಷೆ ಕೇವಲ 15 ದಿನಗಳಲ್ಲಿ ನಡೆಯುವುದಿತ್ತು. ಎಂದಿಗೂ ನಾನು ಹಿಂತಿರುಗಲಿಲ್ಲ, ಮತ್ತೆಂದಿಗೂ ನನ್ನ ಪದವಿ ಪೂರ್ಣಗೊಳಿಸಲಾಗಲಿಲ್ಲ” ಎನ್ನುತ್ತಾರೆ ದಶಕಗಳ ನಂತರ ಆ ಕುರಿತು ನೆನಪು ಮಾಡಿಕೊಂಡ ಶಂಕರಯ್ಯ, “ಭಾರತದ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದರ ಬಗ್ಗೆ, ಸ್ವಾತಂತ್ರ್ಯ ಚಳುವಳಿಯ ಭಾಗವಾಗಿದ್ದರ ಬಗ್ಗೆ ಹೆಮ್ಮೆಯಾಗುತ್ತದೆ. ನಮ್ಮ ತಲೆ ತುಂಬಾ ಅದೇ ತುಂಬಿಕೊಡಿತ್ತು…. ನಾವು ಉದ್ಯೋಗ ಅರಸುವವರಲ್ಲ, ಸ್ವಾತಂತ್ರ್ಯವನ್ನು ಅರಸುವವರು ಎಂಬ ಯುವಜನರ ಘೋಷಣೆಗೆ ಅನುಗುಣವಾಗಿ ನಮ್ಮ ವಿದ್ಯಾರ್ಥಿ ಜೀವನ ಹಾಳಾಗಿದ್ದರ ಬಗ್ಗೆ ನಮಗೆ ಬೇಸರವೆನಿಸಲಿಲ್ಲ”.

ಮಧುರೆಯ ಜೈಲಿನಲ್ಲಿ 15 ದಿನಗಳು ಕಳೆದ ಮೇಲೆ, ಬಂಧಿತ ವಿದ್ಯಾರ್ಥಿಗಳನ್ನು ವೆಲ್ಲೂರು ಜೈಲಿಗೆ ಕಳುಹಿಸಿದರು. ಅಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳ ಹಲವಾರು ಹೋರಾಟಗಾರರ ಪರಿಚಯವಾಯಿತು. ಕೇರಳದ ಖ್ಯಾತ ಕಮ್ಯುನಿಸ್ಟ್ ಹೋರಾಟಗಾರ ಏ.ಕೆ. ಗೋಪಾಲನ್, ಇಂಬಿಜ್ಜಿ ಭಾವ, ವಿ. ಸುಬ್ಬಯ್ಯ, ಜೀವನಾನಂದಂ ಅವರನ್ನು ಕೂಡ ಬಂಧಿಸಲಾಗಿತ್ತು. ಮದರಾಸು ಸರ್ಕಾರವು ಕೈದಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಲು ಬಯಸಿತ್ತು. ಅದರಲ್ಲಿ ಒಂದು ಗುಂಪಿಗೆ `ಸಿ’ ದರ್ಜೆಯ ರೇಷನ್ ಕೊಡುವುದ್ದಾಗಿತ್ತು, ಆ ರೀತಿಯಲ್ಲಿ ಸಾಮಾನ್ಯವಾಗಿ ಅಪರಾಧಿಗಳಿಗೆ ಮಾತ್ರ ಕೊಡಲಾಗುತ್ತಿತ್ತು. ಇದರ ವಿರುದ್ಧ ಜೈಲಿನಲ್ಲೇ 19 ದಿನಗಳ ಉಪವಾಸ ಮುಷ್ಕರ ನಡೆಯಿತು. ಉಪವಾಸ ಮುಷ್ಕರದ 10ನೇ ದಿನ ಜೈಲಿನ ಇನ್ಸ್‌ಪೆಕ್ಟರ್ ಜನರಲ್ ಈ ವಿದ್ಯಾರ್ಥಿ ಇದ್ದ ಸೆಲ್ ಬಳಿ ಬಂದಾಗ ಆತ ಮ್ಯಾಕ್ಸಿಂ ಗಾರ್ಕಿಯವರ “ತಾಯಿ” ಕಾದಂಬರಿಯನ್ನು ಓದುತ್ತಿರುವುದನ್ನು ನೋಡಿ 10ದಿನಗಳ ಉಪವಾಸದ ನಂತರವೂ ಉಳಿಸಿಕೊಂಡಿದ್ದ ಮಾನಸಿಕ ಶಕ್ತಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರಂತೆ.

ಆಗ ಅವರ ಜತೆ ಜೈಲಿನಲ್ಲಿ ಇದ್ದ ಗಣ್ಯ ವ್ಯಕ್ತಿಗಳಲ್ಲಿ ಮುಂದೆ ಹತ್ತು ವರ್ಷಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕೆ. ಕಾಮರಾಜ್, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪಟ್ಟಾಭಿ ಸೀತಾರಾಮಯ್ಯ ಮತ್ತು ಇನ್ನೂ ಕೆಲವರಿದ್ದರು.

ಜೈಲುವಾಸಗಳೂ ರಾಜಕೀಯ ಸಮರದ ಭಾಗ

ಅವರ ಅನೇಕ ಜೈಲುಗಳ ಪಯಣದಲ್ಲಿ ಒಂದು ಕಡೆ, ಕಾಂ. ಶಂಕರಯ್ಯ, ಮುಂದೆ ಭಾರತದ ರಾಷ್ಟ್ರಪತಿಗಳಾದ ಆರ್. ವೆಂಕಟರಾಮನ್ ಅವರನ್ನು ಭೇಟಿ ಮಾಡುತ್ತಾರೆ, “ಅವರು ಜೈಲಿನಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ಕಡೆ ಇದ್ದರು, 1943 ರಲ್ಲಿ ಸದಸ್ಯರಾಗಿದ್ದರು. ತದನಂತರ, ಸಹಜವಾಗಿ ಅವರು ಕಾಂಗ್ರೇಸ್ ಪಕ್ಷ ಸೇರಿದರು. ಆದಾಗ್ಯೂ, ಹಲವಾರು ವರ್ಷಗಳ ಕಾಲ ನಾವು ಒಟ್ಟಿಗೇ ಕೆಲಸ ಮಾಡಿದೆವು” ಎನ್ನುತ್ತಾರೆ ಶಂಕರಯ್ಯ.

ಮಧುರೈನ ಅಮೇರಿಕನ್ ಕಾಲೇಜಿನಲ್ಲಿದ್ದ ಅವರ ಅನೇಕ ಸಹಪಾಠಿಗಳು ಮತ್ತು ವಿಶಾಲ ವಿದ್ಯಾರ್ಥಿ ಚಳುವಳಿಯಲ್ಲಿನ ಸಮಕಾಲೀನರು ಪದವಿ ಪಡೆದ ನಂತರ ಪ್ರಮುಖ ಹುದ್ದೆಗಳಿಗೇರಿದರು. ಒಬ್ಬರು ತಮಿಳುನಾಡಿನ ಮುಖ್ಯ ಕಾರ್ಯದರ್ಶಿಯಾದರೆ, ಮತ್ತೊಬ್ಬರು ನ್ಯಾಯಾಧೀಶರಾದರು, ಮಗದೊಬ್ಬರು ಐಎಎಸ್ ಅಧಿಕಾರಿಯಾಗಿ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯಾದರು.

ಶಂಕರಯ್ಯ ವಸಾಹತುಶಾಹಿ ಆಳ್ವಿಕೆಯಲ್ಲಿ ನಾಲ್ಕು ವರ್ಷಗಳ ಕಾಲ ಜೈಲುವಾಸ ಅನುಭವಿಸಿದರೆ, ಸ್ವಾತಂತ್ರ್ಯದ ನಂತರವೂ ಒಟ್ಟು ನಾಲ್ಕು ವರ್ಷಗಳ ಕಾಲ ಜೈಲುವಾಸ ಅನುಭವಿಸಬೇಕಾಯಿತು. ಮೂರು ವರ್ಷಗಳು ಭೂಗತರಾಗಿರಬೇಕಾಯಿತು. ಆದರೆ ಅವರಿಗೆ ಈ ಬಗ್ಗೆ ಬೇಸರವಿಲ್ಲ, ವಿಶೇಷವಾಗಿ ಸ್ವಾತಂತ್ರ್ಯದ ನಂತರ, ಸಂಬಂಧಪಟ್ಟವರ ಮೇಲೆ ದ್ವೇಷವೂ ಇಲ್ಲ. ಅವರ ಮಟ್ಟಿಗೆ, ಎಲ್ಲಾ ಹೋರಾಟಗಳೂ ರಾಜಕೀಯ ಸಮರಗಳಾಗಿದ್ದವು, ಸ್ವಂತಕ್ಕೆಂದು ಹೇಳುವ ಯಾವುದೂ ಇರಲಿಲ್ಲ. ಎಲ್ಲವೂ ದಟ್ಟದರಿದ್ರರ ಪರವಾಗಿ ಮಾಡಿದ ಆಂದೋಲನಗಳಾಗಿದ್ದವು.

ಹದಿನೇಳನೆಯ ವಯಸ್ಸಿಗಾಗಲೇ ಅವರು ಭಾರತ ಕಮ್ಯೂನಿಸ್ಟ್ ಪಕ್ಷದ ಸದಸ್ಯರಾದಾಗ ಕಮ್ಯೂನಿಸ್ಟ್ ಪಕ್ಷ ನಿಷೇಧಕ್ಕೆ ಒಳಪಟ್ಟು ಭೂಗತವಾಗಿ ಕೆಲಸದಲ್ಲಿ ತೊಡಗಿತ್ತು. 1948 ರಲ್ಲಿ ಕಮ್ಯೂನಿಸ್ಟ್ ಪಕ್ಷ ನಿಷೇಧಕ್ಕೊಳಪಟ್ಟಾಗ, ಅವರು ಮತ್ತೊಮ್ಮೆ ಭೂಗತರಾದರು.

1947 ಕ್ಕೆ ಮುಂಚೆ ಕಂಡಿದ್ದ ಜೈಲುಗಳಲ್ಲದೆ ಮಧುರೈ, ವೆಲ್ಲೂರು, ರಾಜಮಂಡ್ರಿ, ಕಣ್ಣೂರು, ಸೇಲಂ, ತಂಜಾವೂರು ಇತ್ಯಾದಿ ಜೈಲುಗಳನ್ನು ನೋಡಿದರು. 1950 ರಲ್ಲಿ ಬಂಧಿಸಲ್ಪಟ್ಟು ಒಂದು ವರ್ಷದ ನಂತರ ಬಿಡುಗಡೆಯಾದರು. ನಂತರ 1962 ರಲ್ಲಿ ಭಾರತ-ಚೈನಾ ಯುದ್ಧವಾದಾಗ ಅನೇಕ ಕಮ್ಯೂನಿಸ್ಟರ ಜತೆ ಕಾಂ. ಶಂಕರಯ್ಯ ಕೂಡ ಜೈಲು ಸೇರಿದರು, ಏಳು ತಿಂಗಳು ಅಲ್ಲಿದ್ದರು. ಕಮ್ಯುನಿಸ್ಟ್ ಚಳುವಳಿಗಾರರ ಮೇಲೆ 1965 ರಲ್ಲಿ ಮತ್ತೊಮ್ಮೆ ದಾಳಿ ನಡೆದಾಗ ಅವರು 17 ತಿಂಗಳ ಕಾಲ ಜೈಲಿನಲ್ಲಿ ಕಳೆದರು.

ದಶಕಗಳ ಕಾಲ ನಡೆಸಿದ ಹೋರಾಟಗಳು ಮತ್ತು ಎಡ ರಾಜಕೀಯಕ್ಕೆ ಅವರ ಬದ್ಧತೆಯು ಅಂತಿಮವಾಗಿ ಅವರನ್ನು ಕಮ್ಯುನಿಸ್ಟ್ ಪಕ್ಷದ ಪೂರ್ಣಾವಧಿ ಕಾರ್ಯಕರ್ತನನ್ನಾಗಿ ಪರಿವರ್ತಿಸಿತು.

1944 ರಲ್ಲಿ ತಂಜಾವೂರು ಜೈಲಿನಿಂದ ಬಿಡುಗಡೆಯಾದ ಮೇಲೆ ಅವರು ಭಾರತ ಕಮ್ಯುನಿಸ್ಟ್ ಪಕ್ಷದ ಮಧುರೈ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಭಾರಿ ಸಂಖ್ಯೆಯಲ್ಲಿ ಜನರನ್ನು ಅಣಿನೆರೆಸುವಲ್ಲಿ ಕಾಂ. ಶಂಕರಯ್ಯ ಅವರ ಪಾತ್ರ ಗಮನಾರ್ಹವಾದುದು. 1940 ಹೊತ್ತಿಗೆಲ್ಲ ಮಧುರೈ ಎಡ ಚಳುವಳಿಯ ಪ್ರಮುಖ ನೆಲೆಯಾಗಿತ್ತು. ಅಂದಿನ ಪಕ್ಷದ ಪ್ರಧಾನ ಕಾರ್ಯದರ್ಶಿ ಕಾ. ಪಿ.ಸಿ. ಜೋಶಿ ಯವರು 1946 ರಲ್ಲಿ ಮಧುರೈಗೆ ಭೇಟಿ ನೀಡಿದ ಸಮಯದಲ್ಲಿ ಬಹಿರಂಗ ಸಭೆಯಲ್ಲಿ ಒಂದು ಲಕ್ಷ ಜನರು ಭಾಗವಹಿಸಿದ್ದರು.

“ಮಧುರೈ ಪಿತೂರಿ ಮೊಕದ್ದಮೆ”

ಕಮ್ಯುನಿಸ್ಟರ ಜನಪ್ರಿಯತೆ ಹೆಚ್ಚಾದಾಗ ಅವರ ಮೇಲೆ “ಮಧುರೈ ಪಿತೂರಿ ಮೊಕದ್ದಮೆ” ಹಾಕಿ ಕಾಂ. ಪಿ. ರಾಮಮೂರ್ತಿಯವರನ್ನು ಮೊದಲ ಆರೋಪಿಯನ್ನಾಗಿ ಮಾಡಿತು ಬ್ರಿಟಿಷ್ ಸರ್ಕಾರ. ಎರಡನೇ ಆರೋಪಿಯನ್ನಾಗಿ ಶಂಕರಯ್ಯ ಅವರ ಹೆಸರನ್ನು ನಮೂದಿಸಲಾಗಿತ್ತು. ಆ ಮೊಕದ್ದಮೆಯಲ್ಲಿ ಪಕ್ಷದ ಅನೇಕ ನಾಯಕರು ಮತ್ತು ಕಾರ್ಯಕರ್ತರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಇತರ ಕಾರ್ಮಿಕ ಸಂಘಗಳ ಮುಖಂಡರನ್ನು ಹತ್ಯೆ ಮಾಡಲು ಕಮ್ಯೂನಿಸ್ಟ್ ಪಕ್ಷದ ಕಛೇರಿಯನ್ನು ಬಳಸಲಾಗಿತ್ತು ಎಂಬ ಆರೋಪ ಹೊರಿಸಲಾಗಿತ್ತು.

ವಿಚಾರಣೆಯ ಸಂದರ್ಭದಲ್ಲಿ ಪಿ. ರಾಮಮೂರ್ತಿಯವರು (ತಮ್ಮ ಪ್ರಕರಣದಲ್ಲಿ ತಾನೇ ವಾದ ಮಂಡಿಸಿದರು) ಮಧುರೈ ಪಿತೂರಿ ಮೊಕ್ಕದಮೆಯ ಪ್ರಮುಖ ಸಾಕ್ಷಿ ಒಬ್ಬ ವಂಚಕ ಹಾಗೂ ಸಾಮಾನ್ಯ ಕಳ್ಳನಾಗಿದ್ದು ಹಲವಾರು ಮೊಕದ್ದಮೆಗಳಲ್ಲಿ ಜೈಲುಶಿಕ್ಷೆಯನ್ನು ಪಡೆದಿದ್ದಾನೆ ಎನ್ನುವ ಸತ್ಯವನ್ನು ಸಾಬೀತು ಮಾಡುತ್ತಾರೆ! ಈ ಪ್ರಕರಣವನ್ನು ಆಲಿಸಿದ ನ್ಯಾಯಾಧೀಶರು ಆಗಸ್ಟ್ 14, 1947 ರಂದು ಜೈಲು ಪ್ರಾಂಗಣಕ್ಕೆ ಬರುತ್ತಾರೆ… ಮತ್ತು ಆ ಪ್ರಕರಣದಲ್ಲಿ ಆರೋಪಕ್ಕೆ ಒಳಗಾದ ಎಲ್ಲಾ ಖೈದಿಗಳನ್ನು ಬಿಡುಗಡೆ ಮಾಡುತ್ತಾರೆ ಹಾಗು ಕಾರ್ಮಿಕರ ಗೌರವಾನ್ವಿತ ಮುಖಂಡರುಗಳ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕಾಗಿ ಸರ್ಕಾರವನ್ನು ತೀವ್ರವಾಗಿ ಖಂಡಿಸುತ್ತಾರೆ.

1948 ರಲ್ಲಿ ಸಿಪಿಐ ನಿಷೇಧಕ್ಕೊಳಗಾದ ನಂತರ, ರಾಮಮೂರ್ತಿ ಮತ್ತು ಇತರರನ್ನು ಮತ್ತೆ ಜೈಲಿಗೆ ಕಳಿಸುತ್ತಾರೆ. ಈ ಬಾರಿ ಸ್ವತಂತ್ರ ಭಾರತದಲ್ಲಿ. ಏಕೆಂದರೆ ಚುನಾವಣೆಗಳು ನಡೆಯಲ್ಲಿದ್ದವು ಮತ್ತು ಮದ್ರಾಸ್ ರಾಜ್ಯದಲ್ಲಿ ಎಡಪಂಥೀಯರ ಜನಪ್ರಿಯತೆಯು ಆಳುವ ಕಾಂಗ್ರೆಸ್ ಪಕ್ಷಕ್ಕೆ ಬೆದರಿಕೆ ಒಡ್ಡಿತ್ತು.

ಜಾತಿವಾದ-ಕೋಮುವಾದದ ವಿರುದ್ಧ

1964 ರಲ್ಲಿ ಸಿಪಿಐ(ಎಂ) ಸ್ಥಾಪನೆಯ ಮೊದಲು ಆಗಿನ ಸಿಪಿಐ ರಾಷ್ಟ್ರೀಯ ಮಂಡಳಿಯಿಂದ ಹೊರಬಂದ 32 ಸದಸ್ಯರಲ್ಲಿ ಶಂಕರಯ್ಯ ಒಬ್ಬರು. ಆ 32 ಮುಖಂಡರಲ್ಲಿ ಈಗ “ನಾನು ಮತ್ತು ವಿ.ಎಸ್. ಅಚ್ಯುತಾನಂದನ್ ಮಾತ್ರ ಬದುಕಿ ಉಳಿದಿದ್ದೇವೆ” ಎಂದು ಶಂಕರಯ್ಯ ನೆನಪಿಸಿಕೊಂಡಿದ್ದಾರೆ.

90ರ ದಶಕದಲ್ಲಿ

ಶಂಕರಯ್ಯ 1995ರಲ್ಲಿ ಸಿಪಿಐ(ಎಂ)ನ ತಮಿಳುನಾಡು ರಾಜ್ಯ ಕಾರ್ಯದರ್ಶಿಯಾಗಿ ಚುನಾಯಿತರಾದರು. 2002ರ ವರೆಗೂ ಅವರು ಈ ಸ್ಥಾನದಲ್ಲಿ ಮುಂದುವರೆದರು. ಪಕ್ಷದ ಕೇಂದ್ರ ಸಮಿತಿಯ ಸದಸ್ಯರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಅವರು ರಾಜ್ಯದಲ್ಲಿನ ಬೆಳವಣಿಗೆಗಳಲ್ಲಿ ತ್ವರಿತವಾಗಿ ಮಧ್ಯಪ್ರವೇಶಿಸುತ್ತಿದ್ದರು.
1998ರಲ್ಲಿ ಕೊಯವತ್ತೂರಿನಲ್ಲಿ ಬಾಂಬ್ ಸ್ಫೋಟಗಳು, ಅದರ ಬೆನ್ನಲ್ಲಿ ಕೋಮು ಗಲಭೆಗಳು ನಡೆದವು. ಶಂಕರಯ್ಯ ಪ್ರಖ್ಯಾತ ಕಾರ್ಮಿಕ ಮುಂದಾಳು ಉಮಾಮಾಥ್ ಅವರನ್ನು ಈ ಪರಿಸ್ಥಿತಿಯನ್ನು ನಿಭಾಯಿಸಲು ಅಲ್ಲಿಗೆ ಕಳಿಸಿದರು. ಕೊಯಮತ್ತೂರು ಕಾರ್ಮಿಕ ವರ್ಗದ ಆಂದೋಲನ ಬಲಿಷ್ಟವಾಗಿದ್ದ ನಗರ. ಅಲ್ಲಿ ಕೋಮುವಾದ ತಲೆ ಎತ್ತಿದ್ದು ಅವರಿಗೆ ಆತಂಕ ಉಂಟು ಮಾಡಿತ್ತು. ದುಡಿಯುವ ಜನಗಳ ಐಕ್ಯತೆಯನ್ನು ಛಿದ್ರಗೊಳಿಸುವ ಕೋಮುವಾದಿ ಶಕ್ತಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಅವರು ರಾಜ್ಯದ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿದರು.

1990ರ ದಶಕದ ಉತ್ತರಾರ್ಧದಲ್ಲಿ ತಮಿಳುನಾಡಿನ ದಕ್ಷಿಣದ ಜಿಲ್ಲೆಗಳಲ್ಲಿ ಜಾತಿವಾದಿ ಗಲಭೆಗಳು ಹಲವು ಜೀವಗಳ ಬಲಿ ತಗೊಂಡವು, ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಯಿತು. ಆಗ ಶಂಕರಯ್ಯನವರ ಆಗ್ರಹದ ಮೇರೆಗೆ ಮುಖ್ಯಮಂತ್ರಿ ಕರುಣಾನಿಧಿ ಒಂದು ಸರ್ವಪಕ್ಷ ಸಭೆ ಕರೆದರು. ಅದರಲ್ಲಿ ಮಾತಾಡುತ್ತ ಶಂಕರಯ್ಯ “ನಮ್ಮ ಪಕ್ಷ ಸ್ಮಶಾನ ಶಾಂತಿಯ ಪರವಾಗಿಲ್ಲ. ಈ ಸಭೆಯಲ್ಲಿ ನಾವು ಮಂಡಿಸುವ ಪ್ರಮುಖ ಘೋಷಣೆಗಳ ಮೇಲೆ ರಾಜ್ಯ ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳು ಪ್ರಮುಖ ಪಾತ್ರ ವಹಿಸಬೇಕಾಗಿದೆ. ಅಸ್ಪೃಶ್ಯತೆಯ ಪೀಡೆ ತೊಲಗಬೇಕು; ಜಾತಿಗಲಭೆಗಳು ಕೊನೆಗೊಳ್ಳಬೇಕು; ಜನತೆಯ ಐಕ್ಯತೆಯನ್ನು ಕಾಪಾಡಬೇಕು- ಇವು ನಮ್ಮ ಘೋಷಣೆಗಳಾಗಬೇಕು” ಎಂದರು. ಮುಖ್ಯಮಂತ್ರಿಗಳು ಶಂಕರಯ್ಯನವರ ಸೂಚನೆಯನ್ನು ಸ್ವೀಕರಿಸಿದರು. ಇದರ ಆಧಾರದಲ್ಲಿ ಹಲವು ಜಿಲ್ಲೆಗಳಲ್ಲಿ ಸ್ವತಃ ರಾಜ್ಯ ಸರಕಾರದ ಮುತುವರ್ಜಿಯಿಂದಲೇ ಅಸ್ಪೃಶ್ಯತಾ-ವಿರೋಧಿ ಸಮ್ಮೇಳನಗಳು ನಡೆದವು. ಶಂಕರಯ್ಯ ಈ ಸಮ್ಮೇಳನಗಳಲ್ಲಿ ಭಾಗವಹಿಸಿ ಈ ಸಂದೇಶಗಳನ್ನು ಜನರ ನಡುವೆ ಒಯ್ದರು. ರಾಜ್ಯದಲ್ಲಿ ಸಾಮಾನ್ಯ ಸ್ಥಿತಿ ಏರ್ಪಡಲು ಇದು ಬಹಳಷ್ಟು ಸಹಾಯಕವಾಯಿತು.

ಶಾಸಕರಾಗಿ

ಶಂಕರಯ್ಯ ಮೂರು ಬಾರಿ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾದರು. ಮೊದಲ ಅವಧಿಯಲ್ಲಿ ಅವರು ಪಕ್ಷದ ಶಾಸಕಾಂಗ ವಿಭಾಗದ ಉಪಮುಖ್ಯಸ್ಥರಾಗಿ, ನಂತರದ ಎರಡು ಅವಧಿಗಳಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡಿದರು. ಶಾಸಕರಾಗಿ ಅವರು ವ್ಯಾಪಕ ಗೌರವ ಗಳಿಸಿದರು. ತಮಿಳುನಾಡು ವಿಧಾನಸಭೆಯಲ್ಲಿ ತಮಿಳು ಭಾಷೆಯನ್ನು ಮೊದಲು ಬಳಸಿದ್ದು ಕಮ್ಯುನಿಸ್ಟರೇ. 1952 ರಲ್ಲಿ, ತಮಿಳುನಾಡು ವಿಧಾನಸಭೆಯಲ್ಲಿ ತಮಿಳು ಭಾಷೆ ಬಳಸಲು ಅವಕಾಶವೇ ಇರಲಿಲ್ಲ. ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸಬೇಕೆಂಬ ನಿಯಮವಿದ್ದಾಗ, ಶಂಕರಯ್ಯ, ಜೀವನಂದಮ್ ಮತ್ತು ರಾಮಮೂರ್ತಿ ತಮಿಳು ಭಾಷೆಯಲ್ಲಿ ಮಾತನಾಡಿದರು. 6-7 ವರ್ಷಗಳ ನಂತರ ತಮಿಳು ಭಾಷೆ ಬಳಸಬೇಕೆಂಬ ನಿಯಮ ಜಾರಿಗೆ ಬಂತು.

ಶಂಕರಯ್ಯ ತಮಿಳುನಾಡಿನಲ್ಲಿ ರೈತ ಆಂದೋಲನವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1.5 ಕೋಟಿ ಸದಸ್ಯರನ್ನು ಹೊಂದಿರುವ ಭಾರತದ ಅತ್ಯಂತ ದೊಡ್ಡ ರೈತ ಸಂಘಟನೆ ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಅಧ್ಯಕ್ಷರಾದ ಅವರು ನಂತರ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ನಂತರದಲ್ಲಿ ಅಧ್ಯಕ್ಷರಾಗಿ ನೇತೃತ್ವ ನೀಡಿದ್ದಾರೆ.

ಶಂಕರಯ್ಯ ಅವಿಭಜಿತ ಕಮ್ಯುನಿಸ್ಟ್ ಪಕ್ಷದ ಪತ್ರಿಕೆ ‘ಜನಶಕ್ತಿ’ಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಿಪಿಐ(ಎಂ) ಸ್ಥಾಪನೆಯ ನಂತರ ಅವರು “ಥೀಕ್ಕಥಿರ್” ದೈನಿಕದ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಕಲೆ ಮತ್ತು ಸಾಹಿತ್ಯದಲ್ಲಿನ ಪ್ರವೃತ್ತಿಗಳು, ಧಾರೆಗಳ ಬಗ್ಗೆ ಆಳವಾದ ಒಳನೋಟಗಳನ್ನು ಹೊಂದಿರುವ ಅವರು ತಮಿಳುನಾಡು ಪ್ರಗತಿಶೀಲ ಲೇಖಕರ ಸಂಘದ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಪತ್ನಿ ನವಮಣಿ ಅಮ್ಮಾಳ್ ಜೊತೆಗೆ

ತಮ್ಮ ವೈಯಕ್ತಿಕ ಬದುಕಿನಲ್ಲೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಅನೂಚಾನವಾಗಿ ಪಾಲಿಸುತ್ತಿರುವವರು ಶಂಕರಯ್ಯ. ಸ್ವತಃ ತಾವು ಹುಟ್ಟಿದ ಜಾತಿ-ಧರ್ಮದ ಹೊರಗೆ ಮದುವೆಯಾದ ಅವರ ವಿಸ್ತೃತ ಕುಟುಂಬದಲ್ಲಿ ಹೆಚ್ಚಿನವು ಅಂತರ್ಜಾತೀಯ ಮದುವೆಗಳು. ಇವೆಲ್ಲದರಲ್ಲೂ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

ದುಡಿಯುವ ವರ್ಗ ಮತ್ತು ರೈತಾಪಿಗಳ ಬಗೆಗಿನ ಶಂಕರಯ್ಯ ಅವರ ಬದ್ಧತೆ ಇಳಿವಯಸ್ಸಿನಲ್ಲೂ ಕಡಿಮೆಯಾಗಿಲ್ಲ. “ಕಮ್ಯುನಿಸ್ಟರು ಚುನಾವಣಾ ರಾಜಕೀಯಕ್ಕೆ ಸರಿಯಾದ ಉತ್ತರವನ್ನು ಹುಡುಕುತ್ತಾರೆ” ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಚಳುವಳಿಯನ್ನು ಕಟ್ಟುತ್ತಾರೆ ಎಂದು ಕಾಂ. ಶಂಕರಯ್ಯ ಬಲವಾಗಿ ನಂಬುತ್ತಾರೆ.

ಭಗತ್‌ಸಿಂಗ್‌ರ ತ್ಯಾಗದಿಂದ ಪ್ರೇರಣೆ ಪಡೆದು ಬೀದಿಗಿಳಿದ 9 ವರ್ಷದ ಬಾಲಕನ ಆ ಚೇತನವನ್ನು ಈಗಲೂ ಕಾಂ. ಶಂಕರಯ್ಯ ತಮ್ಮ ನೂರನೇ ವಯಸ್ಸಿನಲ್ಲೂ ಉಳಿಸಿಕೊಂಡಿದ್ದಾರೆ.

ಜುಲೈ 15, 2021 ರಂದು-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ.ಸ್ಟಾಲಿನ್ ರೊಂದಿಗೆ

(ಜುಲೈ 15, 2020ರಂದು ‘ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯ’ದಲ್ಲಿ ಪ್ರಕಟವಾದ ಪಿ.ಸಾಯಿನಾಥ್ ಅವರ ಲೇಖನ ಮತ್ತು ಜುಲೈ 18, 2021ರ ‘ಪೀಪಲ್ಸ್ ಡೆಮಾಕ್ರಸಿ’ಯಲ್ಲಿ ಪ್ರಕಟವಾಗಿರುವ ಜಿ.ರಾಮಕೃಷ್ಣನ್ ಅವರ ಲೇಖನದ ಸಂಗ್ರಹಾನುವಾದ. ಅನುವಾದಕರು: ಟಿ.ಸುರೇಂದ್ರ ರಾವ್)

Donate Janashakthi Media

Leave a Reply

Your email address will not be published. Required fields are marked *