ಜರ್ಮನ್ ತತ್ವಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಶಾಸ್ತ್ರಜ್ಞ, ಪತ್ರಕರ್ತ ಮತ್ತು ಕ್ರಾಂತಿಕಾರಿ ಸಮಾಜವಾದಿ – ಈ ಎಲ್ಲವೂ ಆಗಿದ್ದ ಫ್ರೆಡೆರಿಕ್ ಏಂಗೆಲ್ಸ್ ಹುಟ್ಟಿದ್ದು, ನವೆಂಬರ್ 28, 1820ರಂದು. 2020ರ ನವೆಂಬರ್ 28ಕ್ಕೆ ಅವರಿಗೆ 200 ವರ್ಷ. ನವೆಂಬರ್ 2020 ರಿಂದ ನವೆಂಬರ್ 2021ರ ಅವಧಿಯನ್ನು ಏಂಗೆಲ್ಸ್ ಜನ್ಮ ದ್ವಿಶತಮಾನೋತ್ಸವವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಮಾರ್ಕ್ಸ್ವಾದ ಎಂದು ಕರೆಯಲಾಗುತ್ತಿರುವ ವಿಶಿಷ್ಟ ಲೋಕದೃಷ್ಟಿಯನ್ನು ಬೆಳೆಸುವಲ್ಲಿ ಮಾರ್ಕ್ಸ್ರ ಜತೆ ಏಂಗೆಲ್ಸ್ ಅವರ ಪಾತ್ರ ಹೆಚ್ಚು ಕಡಿಮೆ ಸಮಾನವಾಗಿತ್ತು.
ಏಂಗೆಲ್ಸ್ ಅವರ ಜನ್ಮ ದ್ವಿಶತಮಾನೋತ್ಸವವನ್ನು ಮಾರ್ಕ್ಸ್ವಾದದ ಲೋಕದೃಷ್ಟಿಯ ಆಧಾರಸ್ತಂಭಗಳು ಎನಿಸಿಕೊಂಡಿರುವ ಅವರ ಪ್ರಮುಖ ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ನಾಡಿನ ಪ್ರಗತಿಪರ ಪುಸ್ತಕಗಳ ಪ್ರಕಾಶನ ಸಂಸ್ಥೆಗಳಾದ (ಈ ಹಿಂದೆ ಮಾರ್ಕ್ಸ್200–ಕ್ಯಾಪಿಟಲ್ 150 ಯೋಜನೆಯನ್ನು ಸಫಲವಾಗಿ ಪೂರ್ಣಗೊಳಿಸಿದ) ನವಕರ್ನಾಟಕ ಮತ್ತು ಕ್ರಿಯಾ ಮಾಧ್ಯಮಗಳು ಜಂಟಿಯಾಗಿ ಯೋಜಿಸಿವೆ.
ಇದನ್ನು ಓದಿ: ಏಂಗೆಲ್ಸ್ 200 ಮಾಲಿಕೆಯ ಅನಾವರಣ – ಎರಡು ಪುಸ್ತಕಗಳ ಬಿಡುಗಡೆ
ಈ ಮಾಲಿಕೆಯಲ್ಲಿ ಮೊದಲ ಎರಡು ಪುಸ್ತಕಗಳು ಸಿದ್ಧವಾಗಿದ್ದು ಜುಲೈ 20 ಮತ್ತು 21ರಂದು ಆನ್-ಲೈನ್ (ಝೂಮ್ ) ನಲ್ಲಿ ಬಿಡುಗಡೆಯಾಗುತ್ತಿವೆ. ಈ ಎರಡು ಪುಸ್ತಕಗಳ ಕಿರುಪರಿಚಯ ಮತ್ತು ಮುಖಪುಟದ ಚಿತ್ರಗಳು ಇಲ್ಲಿವೆ.
ಫ್ರೆಡೆರಿಕ್ ಏಂಗೆಲ್ಸ್ – ಜೀವನ ಚಿತ್ರಣ (ಪುಸ್ತಕದ ಕುರಿತು ಅಭಿಪ್ರಾಯಗಳು)
ಮಾರ್ಕ್ಸ್, ಏಂಗೆಲ್ಸ್ ಮತ್ತು ಲೆನಿನ್ ಮುಂತಾದ ಅಸಾಧಾರಣ ವ್ಯಕ್ತಿಗಳ ಬದುಕಿನಲ್ಲಿ ಮೂರು ಅಂಶಗಳು ಬಹಳ ಮುಖ್ಯವಾಗುತ್ತವೆ. ಒಂದು, ಚಿಂತನೆಯ ಕ್ಷೇತ್ರಕ್ಕೆ ಅವರ ಕೊಡುಗೆಗಳು. ಎರಡನೆಯದು, ಅವರು ಎಂತಹ ಸವಾಲುಗಳನ್ನು ಎದುರಿಸಿ ಹೋರಾಟಗಳನ್ನು ಸಂಘಟನೆಗಳನ್ನು ಕಟ್ಟಿದರು ಎಂಬುದು. ಮೂರನೆಯದು, ಖಂಡಿತವಾಗಿ ದೈವಾಂಶ ಸಂಭೂತರಲ್ಲದ ಅವರು ನಮ್ಮಂತೆಯೇ ನೋವು-ನಲಿವು, ಸೋಲು-ಗೆಲುವು, ರೋಗ-ರುಜಿನ, ಆಪ್ತೇಷ್ಟರ ಮರಣ-ಜನನ ಎಲ್ಲವನ್ನೂ ಅನುಭವಿಸಿದರು; ಆದರೆ ಸಂಕಲ್ಪ, ಪರಿಶ್ರಮ, ವಿಶಾಲ ಹೃದಯ, ಸಂವೇದನಾಶೀಲತೆಗಳನ್ನು ಬೆಳೆಸಿಕೊಂಡು, ನಮಗೆ ಮಾದರಿಯಾದರು ಎಂಬುದು. ಒಂದು ಜೀವನ ಚರಿತ್ರೆ ಇದೆಲ್ಲವನ್ನೂ ನಮಗೆ ಕಟ್ಟಿಕೊಡಬೇಕು.
ಡಾ. ಜಿ. ರಾಮಕೃಷ್ಣ ಅವರ ಫ್ರೆಡೆರಿಕ್ ಏಂಗೆಲ್ಸ್ ಪುಸ್ತಕವು ಇದೆಲ್ಲವನ್ನೂ ಪೂರೈಸುತ್ತದೆ ಮಾತ್ರವಲ್ಲ, ಅತ್ಯಂತ ಸರಳ ಹಾಗೂ ಹೃದಯಂಗಮ ಶೈಲಿಯಲ್ಲಿ ಕೈಗೆತ್ತಿಕೊಂಡ ಕಾರ್ಯವನ್ನು ನಿರ್ವಹಿಸಿದೆ ಎಂಬ ಕಾರಣದಿಂದ ಬಹಳ ಮಹತ್ವದ್ದಾಗಿದೆ. ಏಂಗೆಲ್ಸ್ ಅವರ ಅತ್ಯಂತ ಮುಂದುವರೆದ ಚಿಂತನೆಗಳನ್ನು ಪರಿಕಲ್ಪನೆಗಳನ್ನು ಒಳಗೊಂಡ ಅಭಿಜಾತ ಕೃತಿಗಳನ್ನು ಹೊಸಬರಿಗೂ ಗ್ರಹಿಸಲಾಗುವಂತೆ ಚಿಕ್ಕದಾಗಿ ಪರಿಚಯಿಸಿರುವುದು ಇದರ ಇನ್ನೊಂದು ಹೆಗ್ಗಳಿಕೆ.
ಏಂಗೆಲ್ಸ್ ಮಾತ್ರವಲ್ಲ, ಮಾರ್ಕ್ಸ್ವಾದದ ಜೀವನ ಚರಿತ್ರೆ ಕೂಡಾ
ಏಂಗೆಲ್ಸ್ ಕುರಿತು ಹಲವಾರು ಜೀವನ ಚರಿತ್ರೆಗಳು ಬಂದಿವೆ. ಆದರೆ ಜಿ.ಆರ್. ಅವರ ‘ಏಂಗೆಲ್ಸ್’ ಬರೀ ಜೀವನ ಚರಿತ್ರೆಯಾಗುವುದರ ಬದಲು ಅದು ಮಾರ್ಕ್ಸ್ವಾದದ ಚರಿತ್ರೆಯೂ ಆಗಿದೆ. ಮಾರ್ಕ್ಸ್ವಾದ ಎತ್ತುವ ಹಲವು ತಕರಾರುಗಳನ್ನೂ ಎದುರಿಸುತ್ತದೆ. ಅಷ್ಟೇ ಅಲ್ಲ, ಭಾರತದ ಪರಿಸ್ಥಿತಿಗೂ ಪ್ರಸ್ತುತವಾಗುತ್ತದೆ. ಏಂಗೆಲ್ಸ್ ಬಾಲ್ಯ, ತಂದೆಯೊಂದಿಗಿನ ವಿರಸ, ಅಧ್ಯಯನ, ಮಾರ್ಕ್ಸ್ನೊಂದಿಗಿನ ಒಡನಾಟ, ಕಾವ್ಯ ರಚನೆಯ ಪ್ರಯತ್ನ, ಸ್ವ-ಇಚ್ಛೆಯಿಂದ ಮಿಲಿಟರಿ ಸೇವೆ – ಹೀಗೆ ಏಂಗೆಲ್ಸ್ ಬದುಕಿನ ಒಂದೊಂದೇ ಆಯಾಮ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಏಂಗೆಲ್ಸ್ ಸ್ವಯಂ ಅನುಭವಿ, ವಿದ್ವಾಂಸ, ವೈಜ್ಞಾನಿಕ ವಿಶ್ಲೇಷಕ, ತನ್ನ ಪ್ರತಿಭೆಯನ್ನು ಸ್ವತಂತ್ರ ಅಧ್ಯಯನ-ಬರವಣಿಗೆಗಳಿಗೆ ಇನ್ನೂ ಹೆಚ್ಚಾಗಿ ಮೀಸಲಿಡಬಹುದಿತ್ತು. ತನ್ನ ವಿದ್ವತ್ತನ್ನು ಮಾರ್ಕ್ಸ್ರ ಅಧ್ಯಯನ, ಸಂಶೋಧನೆ ಮತ್ತು ಪ್ರಕಟಣೆಗಳಿಗೆ ಪೂರಕವಾಗಿ ಮಾತ್ರ ಮಾಡದೆ, ಯಥೇಚ್ಛವಾಗಿ ತನ್ನದೇ ಆದ ಪ್ರಣಾಲಿಕೆಯನ್ನು ಬೆಳೆಸಬಹುದಿತ್ತು. ಆದರೆ ಅವರ ಹೆಚ್ಚಿನ ಉದ್ಗ್ರಂಥಗಳು, ಒಂದರ್ಥದಲ್ಲಿ ಮಾರ್ಕ್ಸ್ ಕೃತಿಗೆ ಪೂರಕವಾಗಿ ಬಂದಿವೆ. ಅವರು ಮಾರ್ಕ್ಸ್ ನೊಡಗೂಡಿ ರಚಿಸಿದ ‘ಪವಿತ್ರ ಕುಟುಂಬ’, ‘ಜರ್ಮನಿಯ ಸೈದ್ಧಾಂತಿಕ ತತ್ವ’, ‘ಕಮ್ಯುನಿಸ್ಟ್ ಪ್ರಣಾಲಿಕೆ’, ‘ಪ್ರಕೃತಿಯಲ್ಲಿ ಗತಿತಾರ್ಕಿಕತೆ’, ಮುಂತಾದವುಗಳು ಏಂಗೆಲ್ಸ್ ನ ಬದುಕಿನ ಮುಖ್ಯ ಘಟನೆಯಾದ ಮಾರ್ಕ್ಸ್ ನ ಸಖ್ಯದಿಂದ ರಚಿತವಾದವು. ಇಂತಹ ಮೇರು ವ್ಯಕ್ತಿಯನ್ನು ಕನ್ನಡಕ್ಕೆ ಪರಿಚಯ ಮಾಡಿಕೊಟ್ಟಿರುವ ಜಿ.ಆರ್. ಅಭಿನಂದನಾರ್ಹರು.
– ಟಿ.ಎಸ್.ವೇಣುಗೋಪಾಲ್
***********
ಜರ್ಮನ್ ಸಿದ್ಧಾಂತ: ಭಾವನಾವಾದದ ಖಂಡನೆ, ಭೌತವಾದದ ಮಂಡನೆ
ಈ ಗ್ರಂಥ ಪ್ರಮುಖವಾಗಿ ಆಗ ಜರ್ಮನ್ ತತ್ವಶಾಸ್ತ್ರದಲ್ಲಿ ಪ್ರಬಲವಾಗಿದ್ದ ಹೆಗೆಲ್ ಅವರ ಮತ್ತು ಯುವ-ಹೆಗೆಲಿಯನ್ನರು ಎಂದು ಕರೆಯಲಾಗುವ ಅವರ ಪ್ರಮುಖ ಶಿಷ್ಯರ ಭಾವನಾವಾದಿ ಲೋಕದೃಷ್ಟಿಯನ್ನೂ ಮತ್ತು ಅದಕ್ಕೆ ಪ್ರತಿಯಾಗಿ ಫಾರ್ಬಾಖ್ ಎಂಬ ಇನ್ನೊಬ್ಬ ಯುವ-ಹೆಗೆಲಿಯನ್ ಮಂಡಿಸುವ ಜಡಭೌತವಾದಿ ಲೋಕದೃಷ್ಟಿಯನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವ ಕಟು ವಿಮರ್ಶೆ. ಈ ಖಂಡನೆಯ ಜೊತೆಗೆ ಮತ್ತು ಅದಕ್ಕೆ ಪ್ರತಿಯಾಗಿ ಮಾರ್ಕ್ಸ್-ಏಂಗೆಲ್ಸ್ ದುಡಿಯುವ ಜನರ ಲೋಕದೃಷ್ಟಿಯಾಗಬೇಕಾದ ಚಾರಿತ್ರಿಕ ಮತ್ತು ಗತಿತಾರ್ಕಿಕ ಭೌತವಾದವನ್ನು ಸಹ ಪ್ರಬಲವಾಗಿ ಮಂಡಿಸುತ್ತಾರೆ.
19ನೆಯ ಶತಮಾನದ ಮಧ್ಯಭಾಗದಲ್ಲಿ ಜರ್ಮನ್ ತತ್ವಶಾಸ್ತ್ರದಲ್ಲಿ ಪ್ರಬಲವಾಗಿದ್ದ ಲೋಕದೃಷ್ಟಿಯನ್ನು ಖಂಡಿಸುವ ಈ ಕೃತಿಯನ್ನು, ಅದರ ಪರಿಚಯವೂ ಇಲ್ಲದ ಇಂದಿನ ಕನ್ನಡದ ಓದುಗರು ಯಾಕೆ ಓದಬೇಕು ಎಂಬ ಸಾಮಾನ್ಯ ಪ್ರಶ್ನೆ ಏಳುತ್ತದೆ. ಜಗತ್ತಿನ ಇತರ ನಾಗರಿಕತೆಗಳಂತೆ ಭಾರತದಲ್ಲೂ ಭಾವನಾವಾದಿ ತತ್ವಶಾಸ್ತ್ರ ಪ್ರಧಾನವಾಗಿ ಜನಮಾನಸವನ್ನು ಆವರಿಸಿದೆ. ಇಲ್ಲಿ ವಿಮರ್ಶೆಗೆ ಒಳಗಾಗಿರುವ ಭಾವನಾವಾದಿ ಜರ್ಮನ್ ತತ್ವಶಾಸ್ತ್ರದ ಹಲವು ತರ್ಕ-ವಾದಗಳು, ಅಂಶಗಳು, ಭಾರತದ ಮತ್ತು ಕರ್ನಾಟಕದಲ್ಲಿ ಈಗಲೂ ಪ್ರಬಲವಾಗಿರುವ ಭಾವನಾವಾದಿ ತತ್ವಶಾಸ್ತ್ರಗಳಲ್ಲೂ, ಹಲವು ವೇಷ-ಮುಖವಾಡಗಳಲ್ಲಿ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅದಲ್ಲದೆ ದುಡಿಯುವ ಜನರ ಲೋಕದೃಷ್ಟಿಯಾಗಿರುವವು ಅಥವಾ ತೀರಾ ಹತ್ತಿರವಾದವು ಎಂದು ಹೇಳಲಾಗುವ (ಬೌದ್ಧ, ಜೈನ, ಬಸವತತ್ವ ಮೊದಲಾದ) ತತ್ವಶಾಸ್ತ್ರೀಯ ಸೆಲೆಗಳಲ್ಲೂ ಇವು ಕಾಣಿಸಿಕೊಳ್ಳುತ್ತವೆ. ಅದೇ ರೀತಿ ದುಡಿಯುವ ಜನರಿಗೆ ತಮ್ಮ ಲೋಕದೃಷ್ಟಿಯಾದ ಚಾರಿತ್ರಿಕ ಮತ್ತು ಗತಿತಾರ್ಕಿಕ ಭೌತವಾದವು ವಿಕಾಸವಾದ ರೀತಿಯ ಮತ್ತು ಕಾಲಘಟ್ಟದ ಪರಿಚಯವೂ ಅಗತ್ಯ. ಅವುಗಳನ್ನು ‘ಜರ್ಮನ್ ಸಿದ್ಧಾಂತ’ದ ಬೆಳಕಿನಲ್ಲಿ (ಮತ್ತು ಕತ್ತಲೆಯಲ್ಲಿ!?) ಅರಿತುಕೊಳ್ಳುವುದು ಕರ್ನಾಟಕದ ದುಡಿಯುವ ಜನರಿಗೆ ಅಗತ್ಯ.
ಭಾರತದ ಮತ್ತು ಕರ್ನಾಟಕದ ಇಂದಿನ ಸಂದರ್ಭದಲ್ಲಿ ‘ಜರ್ಮನ್ ಸಿದ್ಧಾಂತ’ದ ಪ್ರಸ್ತುತತೆಯನ್ನು ಅನುವಾದಕ ವಿ.ಎನ್.ಲಕ್ಷ್ಮಿನಾರಾಯಣ ಅವರು ತಮ್ಮ ಪ್ರಸ್ತಾವನೆಯಲ್ಲಿ ವಿವರವಾಗಿ ಒತ್ತಿ ಹೇಳಿದ್ದಾರೆ. ಜೊತೆಗೆ ನಾಡಿನ ಪ್ರಮುಖ ವಿದ್ವಾಂಸರೂ ಚಿಂತಕರೂ ಆದ ಕೆ.ವಿ.ನಾರಾಯಣ, ಎಚ್.ಎಸ್.ರಾಘವೇಂದ್ರ ರಾವ್, ರಾಜೇಂದ್ರ ಚೆನ್ನಿ ಮತ್ತು ಓ.ಎಲ್.ನಾಗಭೂಷಣಸ್ವಾಮಿ ಅವರು ‘ಜರ್ಮನ್ ಸಿದ್ಧಾಂತ’ವನ್ನು ಇಂದು ಹೇಗೆ ಮತ್ತು ಏಕೆ ಓದಬೇಕು ಎಂಬುದನ್ನು ಹಲವು ಆಯಾಮಗಳಿಂದ ತಮ್ಮ ಬರಹಗಳಲ್ಲಿ ವಿಶದಪಡಿಸಿದ್ದಾರೆ.
ಮಾರ್ಕ್ಸ್-ಏಂಗೆಲ್ಸ್ ಅವರ ಮೂಲಕೃತಿ ‘ಜರ್ಮನ್ ಸಿದ್ಧಾಂತ’ 700ಕ್ಕೂ ಹೆಚ್ಚು ಪುಟಗಳ ಬೃಹತ್ ಗ್ರಂಥವಾಗಿದ್ದು, ಭಾರತ ಮತ್ತು ಕರ್ನಾಟಕದ ಸಂದರ್ಭದಲ್ಲಿ ಇಂದು ಪ್ರಸ್ತುತವಾಗುವ ಅಂಶಗಳನ್ನು ಮಾತ್ರ ಇಲ್ಲಿ ತೆಗೆದು ಆಯ್ದುಕೊಳ್ಳಲಾಗಿದೆ. ಜರ್ಮನ್ ಮತ್ತು ಯಾವುದೇ ಭಾವನಾವಾದೀ ಮತ್ತು ಜಡಭೌತವಾದೀ ತತ್ವಶಾಸ್ತ್ರದ ಸಾಮಾನ್ಯ ಅಂಶಗಳ ವಿಮರ್ಶೆ ಹಾಗೂ ಚಾರಿತ್ರಿಕ ಮತ್ತು ಗತಿತಾರ್ಕಿಕ ಭೌತವಾದದ ಮಂಡನೆ ಮಾಡುವ ಅಂಶಗಳನ್ನು ಮಾತ್ರ ಇಲ್ಲಿ ಅನುವಾದಿಸಲಾಗಿದೆ. ಈಗ ಅಪ್ರಸ್ತುತವಾಗಿರುವ ಕೆಲವು ಜರ್ಮನ್ ತತ್ವಶಾಸ್ತ್ರಜ್ಞರ. ಸಮಾಜವಾದಿಗಳ ವಿಮರ್ಶೆಗಳನ್ನು ಕೈಬಿಡಲಾಗಿದೆ.
ಪ್ರಮುಖ ಜಾಗತಿಕ ಮೂಲಕೃತಿಗಳ ಅನುವಾದವನ್ನು ಕನ್ನಡದಲ್ಲಿ ಪ್ರಸ್ತುತ ಪಡಿಸುವಾಗ ಆ ಕೃತಿಯ ಸಮಕಾಲೀನ ಓದನ್ನು ಓದಿನ ಪ್ರವೇಶವನ್ನು ವಿವಿಧ ಕ್ಷೇತ್ರಗಳ ನಾಡಿನ ಪರಿಣತರು ಮತ್ತು ಚಿಂತಕರ ಮೂಲಕ ಮಾಡಿಸುವುದು ಅತ್ಯಂತ ಅಪೇಕ್ಷಣೀಯ. ಇಂತಹ ಪ್ರಯತ್ನವನ್ನು ಈ ಮಾಲಿಕೆಯಲ್ಲಿ ಮಾಡಲಾಗುತ್ತಿದೆ. ಇಂದಿನ, ಭಾರತದ, ಕರ್ನಾಟಕದ ಸಂದರ್ಭದಲ್ಲಿ ಈ ಕೃತಿಯ ಪ್ರಸ್ತುತತೆಯನ್ನು ಗುರುತಿಸುವುದು ಅ ಮಾತ್ರವಲ್ಲದೆ, ಕೃತಿಗೆ ಸಂಬಂಧಿಸಿದ ಜ್ಞಾನಶಾಖೆಗಳಲ್ಲಿ ಆದ ಬೆಳವಣಿಗೆಗಳ ಬೆಳಕಿನಲ್ಲಿ ಅದರ ಮರುಓದು ಮತ್ತು ಅದನ್ನು ಭಾರತ ಮತ್ತು ಕರ್ನಾಟಕದ ನೆಲದಲ್ಲಿ ಬೆಳೆದ ತತ್ವಶಾಸ್ತ್ರೀಯ ಸಿದ್ಧಾಂತಗಳಿಗೆ ಅನ್ವಯಿಸುವ ಪ್ರಯತ್ನವನ್ನೂ ಇಲ್ಲಿ ಮಾಡಲಾಗಿದೆ. ಅನುವಾದಕರಾದ ವಿ.ಎನ್.ಲಕ್ಷ್ಮಿನಾರಾಯಣ ಅವರಲ್ಲದೆ, ಕೆ.ವಿ.ನಾರಾಯಣ, ಎಚ್.ಎಸ್.ರಾಘವೇಂದ್ರ ರಾವ್, ರಾಜೇಂದ್ರ ಚೆನ್ನಿ ಮತ್ತು ಓ.ಎಲ್. ನಾಗಭೂಷಣಸ್ವಾಮಿ ಅವರು ಈ ಸಂಬಂಧ ಬರೆದ ತಮ್ಮ ಬರಹಗಳಲ್ಲಿ ಈ ಗ್ರಂಥದ ಹಲವು ಆಯಾಮಗಳನ್ನು ಗುರುತಿಸಿ ಪರಿಚಯಿಸಿದ್ದಾರೆ.
ಭಾರತದ ಮತ್ತು ಕರ್ನಾಟಕದಲ್ಲಿ ಪ್ರಭಾವಶಾಲಿಯಾಗಿರುವ ವಿವಿಧ ಭಾವನಾವಾದಿ ಮತ್ತು ಭೌತವಾದಿ ತತ್ವಶಾಸ್ತ್ರಗಳ ವಿವರವಾದ ನಿರ್ದಿಷ್ಟ ಅಧ್ಯಯನಗಳು ನಡೆದಿಲ್ಲವೆಂದಲ್ಲ. ಆದರೆ ದುಡಿಯುವ ಜನರ ಚಾರಿತ್ರಿಕ ಮತ್ತು ಗತಿತಾರ್ಕಿಕ ಭೌತವಾದದ ಲೋಕದೃಷ್ಟಿಯಿಂದ ನಡೆದಿಲ್ಲ. ಅದೇ ರೀತಿ ಪ್ರಭಾವಶಾಲಿಯಾಗಿರುವ ಪ್ರಗತಿಪರ ಎನ್ನಲಾಗುವ ಸಿದ್ಧಾಂತಗಳ ವಿವರವಾದ ನಿರ್ದಿಷ್ಟ ಅಧ್ಯಯನ ಮತ್ತು ವಿಮರ್ಶೆ ಸಹ ನಡೆದಿಲ್ಲ. ಈ ಕೃತಿಯ ಅಧ್ಯಯನ, ಪ್ರಸಾರ ಈ ಎಲ್ಲ ತತ್ವಶಾಸ್ತ್ರಗಳ, ಸಿದ್ಧಾಂತಗಳ ಅಧ್ಯಯನ. ವಿಮರ್ಶೆಗಳಿಗೆ ಹಾದಿ ಮಾಡಿಕೊಟ್ಟರೆ ಈ ಶ್ರಮ ಸಾರ್ಥಕವಾದೀತು.
ಜರ್ಮನ್ ಸಿದ್ಧಾಂತ: ಅಭಿಪ್ರಾಯಗಳು
“ಭೌತವಾದ ಮತ್ತು ಭಾವನಾವಾದಗಳ ನಡುವೆ ಇರುವ ವ್ಯತ್ಯಾಸಗಳನ್ನು ಅರಿಯಲು ಸೋಲುತ್ತಿರುವುದು ಎಂದಿಗಿಂತ ಈಗ ಹೆಚ್ಚಾದಂತೆ ತೋರುತ್ತಿದೆ. ದುಡಿಮೆಯ ವಿಭಜನೆ ಎನ್ನುವುದು ಈ ಶತಮಾನದಲ್ಲಿ ತಲುಪಿರುವ ಅವಸ್ಥೆಯನ್ನು ಸರಿಯಾಗಿ ಅರಿಯಲು ನಾವು ಸೋಲುತ್ತಿದ್ದೇವೆ. ಈಗ ನಾಡಿನಲ್ಲಿ ನಡೆಯುತ್ತಿರುವ ‘ಆಂದೋಲನ’ ದ ಸ್ವರೂಪವನ್ನು ಅರಿಯಲು ಈಗ ನಾವು ಬಳಸುತ್ತಿರುವ ಪರಿಕಲ್ಪನೆಗಳು ಸಾಲದಾಗಿವೆ. ನಮ್ಮ ಕಾಲದ ಬಿಕ್ಕಟ್ಟುಗಳನ್ನು ಅರಿತುಕೊಳ್ಳಲು ಈ ಕೃತಿಯ ಪರಿಕಲ್ಪನೆಗಳು ನೆರವಾಗಬಲ್ಲವು.”
– ಪ್ರೊ. ಕೆ.ವಿ.ನಾರಾಯಣ
“ಒಟ್ಟಾರೆ ಕೃತಿಯು ಇಂದಿನ ಸಂದರ್ಭದಲ್ಲಿ ಪ್ರಸ್ತುತವಾಗಲು ಬಹುಮುಖ್ಯ ಕಾರಣವೆಂದರೆ ಸಾಹಿತ್ಯ, ಸಾಹಿತ್ಯ ವಿಮರ್ಶೆ ಮತ್ತು ಅನೇಕ ಸಮಾಜವಿಜ್ಞಾನಗಳ ವ್ಯಾಖ್ಯಾನಗಳಲ್ಲಿ ಹೆಗೆಲ್ ಮಾದರಿಯ ಅಮೂರ್ತ ಪರಿಕಲ್ಪನೆಗಳ ಯಾಜಮಾನ್ಯವೂ ಈಗಲೂ ಪ್ರಬಲವಾಗಿದೆ. ಇದನ್ನು ಪ್ರತಿರೋಧಿಸಲು ಅವಶ್ಯಕವಾದ ವಾದಗಳು ಈ ಕೃತಿಯಲ್ಲಿವೆ.”
– ಪ್ರೊ. ರಾಜೇಂದ್ರ ಚೆನ್ನಿ
ಕನ್ನಡ ಸಂಸ್ಕೃತಿಯಲ್ಲಿ ನಡೆದ ಪಲ್ಲಟವನ್ನು ವಚನಗಳ ಮೂಲಕ ಅರಿಯುವ ಪ್ರಯತ್ನ ಇನ್ನು ಮುಂದಾದರೂ ನಡೆಯಬೇಕಾಗಿದೆ. ಇದಕ್ಕೆ ಗ್ರಂಥಸಂಪಾದನೆಯಿಂದ ಮೊದಲುಗೊಂಡು ಭೌತವಾದೀ ನಿಲುವಿನ ಚಿಂತನೆಯ ತಿಳಿವಳಿಕೆಯವರೆಗೆ ಹಲವು ಶಿಸ್ತುಗಳ ತಿಳಿವಳಿಕೆ ಅಗತ್ಯವಾಗಿ ಬೇಕಾಗುತ್ತದೆ. ವಚನಗಳು ರೂಪಿಸಿದ ಸುಮಾರು ಒಂದು ನೂರು ಪರಿಕಲ್ಪನೆಗಳನ್ನು, ಪರಿಭಾಷೆಗಳನ್ನು ಭೌತವಾದದ ನಿಲುವಿನಿಂದ ಅರ್ಥಮಾಡಿಕೊಂಡು ಕನ್ನಡದ ವಿಚಾರಗಳ ಬೆಳವಣಿಗೆಯ ಚರಿತ್ರೆಯ ನಕ್ಷೆಯೊಂದನ್ನು ರೂಪಿಸಿಕೊಳ್ಳಲು ಸಾಧ್ಯವಿದೆ. ಇಂಥ ಒಂದು ಸಾಧ್ಯತೆಯನ್ನು ಲಕ್ಷ್ಮೀನಾರಾಯಣ ಅವರ ಪ್ರಸ್ತಾವನೆ ಹೊಳೆಯಿಸುತ್ತದೆ.
– ಪ್ರೊ. ಓ.ಎಲ್.ನಾಗಭೂಷಣಸ್ವಾಮಿ
ಅಕಡೆಮಿಕ್ ಆಗಿಯೂ ಜನಮುಖಿಯಾದ ಬರವಣಿಗೆಯ ಶೈಲಿಯನ್ನು ಕನ್ನಡವು ಇನ್ನೂ ಬೆಳೆಸಿ ಕೊಳ್ಳಬೇಕಾಗುತ್ತದೆ. ಈ ಪುಸ್ತಕವು ಎದುರಿಸಿರುವ ಅನುವಾದದ ಬಿಕ್ಕಟ್ಟುಗಳು ಎಲ್ಲ ಅನುವಾದಗಳಿಗೂ ಅನ್ವಯಿಸುತ್ತದೆ. ಮೂಲಕ್ಕೆ ನಿಷ್ಠವಾಗಿರುವಾಗಲೂ ಅದನ್ನು ಮುರಿದು ಮತ್ತೆ ಕನ್ನಡದಲ್ಲಿ ಕಟ್ಟಿಕೊಡುವ ಕೆಲಸವನ್ನು ಅನುವಾದಕನು ಮಾಡಬೇಕಾಗುತ್ತದೆ. ಈ ಎಲ್ಲ ಕೆಲಸಗಳನ್ನೂ ಪ್ರೊ. ವಿ.ಎನ್.ಎಲ್. ಅಪಾರವಾದ ಶ್ರಮ ವಹಿಸಿ ಮಾಡಿದ್ದಾರೆ.
– ಪ್ರೊ. ಎಚ್.ಎಸ್.ರಾಘವೇಂದ್ರ ರಾವ್