ಮಡಿಕೇರಿ: ಜನತೆಯ ಮುಂಜಾಗ್ರತೆಯೊಂದಿಗೆ ಪ್ರಮುಖವಾಗಿ ಕೋವಿಡ್ ವಿರುದ್ಧ ಹೋರಾಟದಲ್ಲಿ ತೊಡಗುವವರನ್ನು ಕೊರೊನಾ ಸೈನಿಕರನ್ನು(ವಾರಿಯರ್ಸ್) ಎಲ್ಲಡೆಗೆ ನೇಮಕ ಮಾಡಿಕೊಳ್ಳಲಾಯಿತು. ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಿಗೆ ನೂರಾರು ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡ ಡಿ ದರ್ಜೆಯ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡಿಲ್ಲ.
ಕೋವಿಡ್ ಸಾಂಕ್ರಾಮಿಕ ರೋಗದಿಂದ ವಿಶ್ವವೇ ತಲ್ಲಣಗೊಂಡಿದೆ. ಇನ್ನೂ ಹಲವೆಡೆ ವಿಶೇಷವಾಗಿ ದೇಶದಲ್ಲಿ ಕೋವಿಡ್ ಅಲೆಯಿಂದ ಇನ್ನೂ ಸಂಪೂರ್ಣವಾಗಿ ಹೊರಬರಲಾಗಿಲ್ಲ. ಸಾವಿರಾರು ಜನರು ಆಸ್ಪತ್ರೆ ಸೇರಿದ್ದರು. ಕೋವಿಡ್ ಮೊದಲನೆ ಹಾಗೂ ಎರಡನೇ ಅಲೆಯು ಸಂದರ್ಭದಲ್ಲಿ ಕೊರೊನಾ ಸೈನಿಕರಿಗೆ ಬಿಗುವಿನ ಕೆಲಸವೇ ಆಗಿದ್ದವು. ಆದರೂ ಕೋವಿಡ್ ಅಂತ್ಯಗೊಂಡಿಲ್ಲ, ಮೂರನೇ ಅಲೆಯ ಸೂಚನೆಗಳು ಇವೆ.
ಇದನ್ನು ಓದಿ: ರಿಯಲ್ ವಾರಿಯರ್ಸ್ಗಳಿಗೆ ಇಲ್ಲ ಭದ್ರೆತೆ : ಮೂರು ತಿಂಗಳಿಂದ ವೇತನವೂ ಇಲ್ಲ
ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಟ ನಡೆಸುವ ಡಿ ದರ್ಜೆಯ ನೌಕರರ ಬಗ್ಗೆಯಂತೂ ಸರಕಾರದ ನಿರ್ಲಕ್ಷ್ಯ ಸಾಕ್ಷಿಯಾಗಿದೆ. ಕೊರೊನಾ ಸೈನಿಕರಿಗೆ ಕಳೆದ ಒಂದುವರೆ ವರ್ಷದಿಂದ ಹಿಡಿದು ಮೂರು ತಿಂಗಳ ಹಿಂದಿನವರೆಗೆ ನೇಮಕ ಮಾಡಿಕೊಂಡ ನೂರಾರು ನೌಕರರಿಗೆ ಸತತ ಮೂರು ತಿಂಗಳಿಂದ ವೇತನ ನೀಡಿಲ್ಲ. ಅಲ್ಲಿಯವರೆಗೂ ಸಹ ಅವರನ್ನು ನೇಮಕ ಮಾಡಿಕೊಳ್ಳುವಾಗ ನಿಗಧಿ ಮಾಡಲಾಗಿದ್ದ ವೇತನಕ್ಕಿಂತ ನಾಲ್ಕೈದು ಸಾವಿರ ರೂಪಾಯಿ ಕಡಿಮೆ ವೇತನ ಪಾವತಿಸಲಾಗಿದೆ. ಈಗ ಸಂಪೂರ್ಣವಾಗಿ ವೇತನವಿಲ್ಲದೆ ದುಡಿಮೆ ಮಾಡುತ್ತಿದ್ದಾರೆ.
ಇದಕ್ಕೆಲ್ಲ ಕಾರಣ ಕೋವಿಡ್ ಕರ್ತವ್ಯಕ್ಕೆ ಖಾಸಗಿ ಕಂಪನಿಗಳ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಡಿ ದರ್ಜೆ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿರುವುದು. ನೇಮಕ ಮಾಡಿಕೊಳ್ಳುವಾಗ ಆರೋಗ್ಯ ಇಲಾಖೆಯ ಅಗತ್ಯತೆ ಆಧಾರದಲ್ಲಿ ಜಿಲ್ಲಾಡಳಿತವೇ ಸಿಬ್ಬಂದಿಗಳ ಆಯ್ಕೆ ಮಾಡುತ್ತದೆ. ಆದರೆ ವೇತನ ಪಾವತಿ ಮಾಡುವಾಗ ಖಾಸಗಿ ಕಂಪನಿಯಿಂದ ವೇತನ ಪಾವತಿಸಲಾಗುತ್ತಿದೆ. ಅದು ಕೂಡ ನಾಲ್ಕೈದು ಸಾವಿರ ರೂಪಾಯಿಯನ್ನು ಕಮಿಷನ್ ಆಗಿ ಹಿಡಿದುಕೊಂಡು ವೇತನ ನೀಡಲಾಗುತ್ತಿದೆ.
ಇದನ್ನು ಓದಿ: ಶಿಕ್ಷಕರನ್ನು ಕೋವಿಡ್ ವಾರಿಯರ್ಸ್ಗಳೆಂದು ಪರಿಗಣಿಸಿ ವಿಮಾ ಸೌಲಭ್ಯ ನೀಡಿ : ರಾಷ್ಟ್ರೀಯ ಮಾನವ ಹಕ್ಕು ಆಯೋಗ
ಇದರಿಂದ ಡಿ ದರ್ಜೆ ನೌಕರರು ಎಷ್ಟೆ ಕಷ್ಟಪಟ್ಟು ಕೆಲಸ ಮಾಡಿದರೂ ಶ್ರಮಕ್ಕೆ ಪ್ರತಿಫಲ ಪಡೆಯಲಾಗುತ್ತಿಲ್ಲ. ತಮ್ಮ ಜೀವವನ್ನೇ ಒತ್ತೆಇಟ್ಟು ನೌಕರರು ಕೆಲಸ ಮಾಡುತ್ತಿದ್ದರೂ ಸರಕಾರ ತನಗೆ ಮುಂದೆ ಎದುರಾಗುವ ಸವಾಲಿನಿಂದ ತಪ್ಪಿಸಿಕೊಳ್ಳಲು ಖಾಸಗಿ ಕಂಪೆನಿಗಳಿಗೆ ಜವಾಬ್ದಾರಿ ನೀಡಿ ಕೈತೊಳೆದುಕೊಳ್ಳುತ್ತಿದೆ. ಇದರಿಂದ ಕಷ್ಟಪಟ್ಟು ದುಡಿಯುತ್ತಿರುವ ಕಾರ್ಮಿಕರು ಮಾತ್ರ ಕಷ್ಟ ಅನುಭವಿಸುವಂತೆ ಆಗಿದೆ.
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಚಾರುಲತಾ ಸೋಮಲ್ ಅವರನ್ನು ಕೇಳಿದರೆ ಕಾಲೇಜು ಡೀನ್ ಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.